ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆಳದಿಯ ಗುಂಡಾ ಜೋಯಿಸರು


ಕೆಳದಿಯ ಗುಂಡಾ ಜೋಯಿಸರು


ಗುಂಡಾ ಜೋಯಿಸರು ವಿದ್ವಾಂಸರೂ, ಸಂಶೋಧಕರೂ ಆಗಿ ಮಹತ್ವದ ಸಾಧನೆ ಮಾಡಿ ಹೆಸರಾಗಿದ್ದವರು.  ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ವಿಶ್ವಭೂಪಟದಲ್ಲಿ ಕೆಳದಿ ಹೆಸರು ಮೂಡಿಸಿದ ಕೀರ್ತಿ ಇವರದಾಗಿತ್ತು.

ಗುಂಡಾ ಜೋಯಿಸರು ಸಾಗರ ತಾಲ್ಲೂಕಿನ ಕೆಳದಿಯಲ್ಲಿ 1931ರ ಸೆಪ್ಟೆಂಬರ್ 27ರಂದು ಜನಿಸಿದರು. ತಂದೆ ನಂಜುಂಡ ಜೋಯಿಸರು, ತಾಯಿ ಮೂಕಾಂಬಿಕೆ. ಗುಂಡಾ ಜೋಯಿಸರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು. ಮುಂದೆ ಬೆಂಗಳೂರಿನ ಕೋಟೆ ಹೈಸ್ಕೂಲು ಸೇರಿದರು. ಮೈಸೂರು ವಿಶ್ವವಿದ್ಯಾಲಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಬಿ.ಎ. (ಇತಿಹಾಸ) ಪದವಿ, ಕನ್ನಡ ಪಂಡಿತ, ಸಂಸ್ಕೃತ ಪಂಡಿತ, ಹಿಂದಿ ಪ್ರಬೋಧ, ಕನ್ನಡರತ್ನ, ಆಗಮ ವಿದ್ವಾನ್ ಪದವಿ ಮುಂತಾದವುಗಳನ್ನು ಪಡೆದರು. 

ಗುಂಡಾ ಜೋಯಿಸರು ತಿಗಳಾರಿ, ಸಂಸ್ಕೃತ, ಕನ್ನಡ ಮೋಡಿ ಲಿಪಿಯನ್ನು ಓದುವ ಅತ್ಯಂತ ಪ್ರತಿಭಾನ್ವಿತ ಸಂಶೋಧಕರಾಗಿ ರೂಪುಗೊಂಡರು. ಗುಂಡಾ ಜೋಯಿಸರ ಪೂರ್ವಿಕರು ಆನೆಗೊಂದಿ ನಿವಾಸಿಗಳಾಗಿದ್ದು ವಿಜಯನಗರ ರಾಜ ಪುರೋಹಿತರಾಗಿದ್ದರು. ತಾಯಿ ಕೆಳದಿ ಆಸ್ಥಾನ ಕವಿಗಳ ಮಗಳು. ಹೀಗೆ ಇವರು ಕೆಳದಿವಂಶ ವಾಹಿನಿಯಲ್ಲಿ ಹರಿದುಬಂದ ಪುರಾತನ ಇತಿಹಾಸದ ಕೊಂಡಿಯಾಗಿದ್ದರು. 

ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಗುಂಡಾ ಜೋಯಿಸರಿಗೆ ಕೆಳದಿಯ ಇತಿಹಾಸವೇ ಉಸಿರಾಯಿತು. 1960ರಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ ಪ್ರಾರಂಭಿಸಿದರು. ತಮ್ಮ ಮನೆತನಕ್ಕೆ ಸೇರಿದ ವಿಪುಲವಾದ ಓಲೆಗರಿ, ಶಾಸನಗಳು. ಪ್ರಾಚೀನ ವಸ್ತುಗಳ ಸಂಗ್ರಹ ಮಾಡಿದರು. ಈ ವಸ್ತು ಸಂಗ್ರಹಾಲಯದಲ್ಲಿ ಎರಡು ಸಾವಿರ ಪ್ರಾಚೀನ ಓಲೆಗರಿಗಳಿದ್ದು ಅವು ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ.  120 ವಿವಿಧ ಚಾರಿತ್ರಿಕ ದಾಖಲೆಗಳು,  ಸುಮಾರು ಮೂರು ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಓಲೆಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು, ಬಿಜಾಪುರದ ಆದಿಲ್‌ಷಾನ ಚಾರಿತ್ರಿಕ ದಾಖಲೆಗಳು ಮುಂತಾದುವುಗಳ ಆಗರವಾಗಿದೆ. ಈ ಸಂಶೋಧನಾ ಕೇಂದ್ರವು ಕೇಂದ್ರ ಸರಕಾರ, ರಾಜ್ಯ ಸರಕಾರ, ದೆಹಲಿ ಇಂದಿರಾಗಾಂಧೀ ಕಲಾ ಕೇಂದ್ರ, ಲಕ್ನೋ ಪ್ರಾಚ್ಯ ವಸ್ತು ಸಂರಕ್ಷಣಾ ಕೇಂದ್ರ, ನ್ಯಾಷನಲ್ ಮ್ಯೂಸಿಯಂ, ಯುನೆಸ್ಕೊ ಮುಂತಾದುವುಗಳಿಂದ ಮಾನ್ಯತೆ ಪಡೆದಿದೆ. ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ಕಡೆಗಳಿಂದ ಸಂಶೋಧಕರು ಕೆಳದಿಗೆ ಭೇಟಿ ನೀಡಿದ್ದರು. ಹೀಗೆ ಇದೊಂದು ಏಕವ್ಯಕ್ತಿಯ ಮಹಾನ್ ಸಾಧನೆಯಾಗಿತ್ತು. 

ಗುಂಡಾ ಜೋಯಿಸರು ಹಲವಾರು ಚಾರಿತ್ರಿಕ ಕೃತಿ ಪ್ರಕಟಿಸಿದ್ದಾರೆ. ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು,  ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮುಂತಾದ 35ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. 

ಗುಂಡಾ ಜೋಯಿಸರಿಗೆ ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್‌ಪರ್ಟ್ ಬಿರುದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಾಳಪತ್ರ ಗ್ರಂಥತಜ್ಞ ಪ್ರಶಸ್ತಿ, ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಸನ್ಮಾನ ಮುಂತಾದ ಗೌರವಗಳು ಸಂದಿದ್ದವು. ಇವರಿಗೆ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಕೆಳದಿಶ್ರೀ'.

ಮಹಾನ್ ವಿದ್ವಾಂಸರಾದ ಕೆಳದಿಯ ಗುಂಡಾ ಜೋಯಿಸರು 2024ರ ಜೂನ್ 2ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.  ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.

Great scholar, historian and writer Keladi Gunda Jois 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ