ವಿನಾಯಕ ಉಡುಪ
ವೇ.ಬ್ರಂ.ಶ್ರೀ ವಿನಾಯಕ ಉಡುಪರು
ವೇ.ಬ್ರಂ.ಶ್ರೀ ವಿನಾಯಕ ಉಡುಪರು ನಾಡಿನ ಮಹಾನ್ ಸಂಸ್ಕೃತ ವಿದ್ವಾಂಸರಾಗಿ ಹೆಸರಾಗಿದ್ದವರು. ಅವರು ಸಂಸ್ಕೃತ ಭಾಷೆಯಲ್ಲಿನ ಮಹತ್ವದ ಸಾಹಿತ್ಯ ಕೊಡುಗೆಗಳಿಗಾಗಿ ಭಾರತದ ರಾಷ್ಟ್ರಪತಿಗಳ ಶ್ರೀ ಬಾದರಾಯಣ ಸನ್ಮಾನ ಪ್ರಶಸ್ತಿ ಗಳಿಸಿದವರಾಗಿದ್ದರು. ಇಂದು ಈ ಮಹಾನುಭಾವರ ಪುಣ್ಯತಿಥಿ.
ವಿನಾಯಕ ಉಡುಪರು ವೇ.ಬ್ರಂ.ಶ್ರೀ ವಿಘ್ನೇಶ್ವರ ಉಡುಪರು ಮತ್ತು ಶ್ರೀಮತಿ ಶಿಂಗಾರಮ್ಮನವರ ಸುಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಮಗೋಡು ಗ್ರಾಮದಲ್ಲಿ 1926ರ ಅಕ್ಟೋಬರ್ 26ರಂದು ಜನಿಸಿದರು.
ವಿನಾಯಕ ಉಡುಪರ ಐದನೇ ವಯಸ್ಸಿನಲ್ಲಿ ಅವರ ತಂದೆ ನಿಧನರಾದರು. ಇವರಿಗೆ ಬಂಧುಗಳು ಏಳನೆಯ ವಯಸ್ಸಿನಲ್ಲಿ ಉಪನಯನ ನೆರವೇರಿಸಿದರು. ಆ ಸಮಯದಿಂದಲೇ ವೇದಾಧ್ಯಯನದಲ್ಲಿ ಆಸಕ್ತಿ ಬೆಳಸಿಕೊಂಡ ವಿನಾಯಕ ಉಡುಪರು ವೇ.ಬ್ರಂ.ಶ್ರೀ ಶಂಕರನಾರಾಯಣ ಅಡಿಗರು, ಪಂಡಿತ ಪ್ರವರ ವೇ.ಬ್ರಂ.ಶ್ರೀ ಕೆ. ಕೃಷ್ಣ ಜೋಯಿಸರು ಹಾಗೂ ವೇ.ಬ್ರಂ.ಶ್ರೀ ಸಾಮಕ ಗಣೇಶ ಭಟ್ಟರಲ್ಲಿ ಶಿಷ್ಯವೃತ್ತಿಯನ್ನು ಗೈದು ಋಗ್ವೇದ, ಸಾಹಿತ್ಯ, ಅದ್ವೈತ ವೇದಾಂತಗಳಲ್ಲಿ ವಿದ್ವತ್ ಸಾಧನೆ ಮಾಡಿದರು. ಶ್ರೀಮತಿ ಸೀತಮ್ಮನವರೊಡನೆ ಗೃಹಸ್ಥಾಶ್ರಮ ಪ್ರವೇಶಿಸಿದ ಇವರು ಶೃಂಗೇರಿ ಜಗದ್ಗುರು ಪೀಠದಿಂದ ಸಂಚಾಲಿತವಾದ ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಅಧ್ಯಾಪಕರಾಗಿ, ಅಧ್ಯಕ್ಷರಾಗಿ, ಸಾವಿರಾರು ವಿದ್ಯಾರ್ಥಿಗಳಗೆ
ಮಾರ್ಗದರ್ಶನ ನೀಡಿ ಅನೇಕ ವಿದ್ವಾಂಸರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರು.
ಕರ್ಮಕಾಂಡದಲ್ಲಿ ಪರಿಣಿತಿಯನ್ನು ಪಡೆದ ವಿನಾಯಕ ಉಡುಪರು ಅನೇಕ ಮಹಾಯಾಗ, ದೇವತಾ ಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸುತ್ತಾ, ಧಾರ್ಮಿಕ ಪೌರಾಣಿಕ ಉಪನ್ಯಾಸಗಳನ್ನು ನೀಡುತ್ತಾ ಜನರಲ್ಲಿ
ಧರ್ಮಜಾಗೃತಿ ಬೆಳೆಸುವುದರಲ್ಲಿ ಅಪಾರ ಶ್ರದ್ಧೆ ವಹಿಸಿದ್ದರು. ಶ್ರೀಯುತರ ಮಾರ್ಗದರ್ಶನದಲ್ಲಿ ಮಹಾಯಾಗ - ದೇವತಾ ಪ್ರತಿಷ್ಠೆ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಶ್ರೀಯುತರು ಹೊಸ ನಗರದ ಶ್ರೀಪಾರ್ವತಿ ನೀಲಕಂಠೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ, ಮಾರ್ಗದರ್ಶಕರಾಗಿ ಶ್ರಮಿಸಿದರು. ಶೃಂಗೇರಿ ಜಗದ್ಗುರುಗಳವರ ಪರಮಾನುಗ್ರಹಕ್ಕೆ ಪಾತ್ರರಾಗಿದ್ದು ನಾಲ್ಕು ತಲೆಮಾರಿನ ಜಗದ್ಗುರುಗಳ ಸಾನಿಧ್ಯದಲ್ಲಿ ಸೇವೆ ಸಲ್ಲಿಸಿದರು. ತಮ್ಮ ಸರಳತೆ, ಸಜ್ಜನಿಕೆ ಆದರ್ಶಗಳಿಂದ ಜನಮನವನ್ನೂ ಗೆದ್ದರು. ತಮ್ಮ ಜೀವಿತಾವಧಿಯಲ್ಲಿ ಪುರಾಣ-ಪ್ರವಚನ ನಡೆಸಿ ಶೃಂಗೇರಿ ಶ್ರೀ ಮಠದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾದರು.
ವಿನಾಯಕ ಉಡುಪರ ಮಾರ್ಗದರ್ಶನದಲ್ಲಿ ಹಲವಾರು ವಿದ್ವಾಂಸರುಗಳು ಸಂಶೋಧನಾ ಮಹಾಪ್ರಬಂಧಗಳನ್ನು ಮಂಡಿಸಿ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ. ವಿನಾಯಕ ಉಡುಪರಿಗೆ ಬೆಂಗಳೂರಿನ ಶ್ರೀ ಭಾರತೀಯ ಗೀರ್ವಾಣ ಪ್ರೌಢ ವಿದ್ಯಾವರ್ಧಿನಿ ಪಾಠಶಾಲೆ, ಬೆಂಗಳೂರಿನ ಸನಾತನ ಸಂಸ್ಕೃತಿ ಪ್ರತಿಷ್ಠಾನ, ಶ್ರೀ ಜ್ಯೋತಿ ಸಾಂಸ್ಕೃತಿಕ ಪ್ರತಿಷ್ಠಾನ, ಶೃಂಗೇರಿಯ ರಾಜೀವಗಾಂಧಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ಬೆಂಗಳೂರಿನ ಅಖಿಲ ಕರ್ನಾಟಕ ಸಂಸ್ಕೃತ ಪರಿಷತ್ ಮುಂತಾದ ಮಹಾನ್ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳು ಸಂದವು. ಶೃಂಗೇರಿಯಲ್ಲಿ ನಡೆದ ಕ್ಷೇತ್ರಮಟ್ಟದ ವಿಪ್ರಸಮ್ಮೇಳನದ ಸುಸಂದರ್ಭದಲ್ಲಿ ಸನ್ಮಾನ ಸಂದಿತು. ಮೈಸೂರಿನ ವೇದಶಾಸ್ತ್ರ ಪೋಷಿಣೀ ಸಭಾದವರು "ವೇದ ವಿದ್ಯಾನಿಧಿ" ಎಂಬ ಬಿರುದನ್ನು ನೀಡಿ ಅಭಿನಂದಿಸಿದ್ದರು. ವಿದ್ಯಾವಾರಿಧಿಗಳಾಗಿ 2018ರಲ್ಲಿ ಭಾರತ ಸರ್ಕಾರದ ವತಿಯಿಂದ ರಾಷ್ಟ್ರಪತಿಗಳ "ಬಾದರಾಯಣ-ವ್ಯಾಸ" ಪ್ರಶಸ್ತಿಗೆ ಭಾಜನರಾದರು.
ವಿದ್ಯೆ ವಿನಯ ವಿವೇಕಗಳ ಸಂಗಮರಾಗಿದ್ದ ವೇ.ಬ್ರಂ.ಶ್ರೀ ವಿನಾಯಕ ಉಡುಪರು ಸಾಧಕರಾಗಿ ತಮ್ಮ 94 ವರ್ಷಗಳ ಜೀವಿತಾವಧಿಯಲ್ಲಿನ ಇಹಲೋಕದ ಕರ್ತವ್ಯಗಳನ್ನು ಯಶಸ್ವಿಯಾಗಿ ಪೂರೈಸಿ 2020ರ ಜುಲೈ 3ರಂದು ಈ ಲೋಕವನ್ನಗಲಿದರು.
On Remembrance Day of Great scholar Vinayaka Udupa 🌷🙏🌷
ಕಾಮೆಂಟ್‌ಗಳು