ಸುಷ್ಮ ಸಿಂಧು
ಸುಷ್ಮ ಸಿಂಧು
ಸುಷ್ಮ ಸಿಂಧು ಎಂಬ ಕಾವ್ಯನಾಮವುಳ್ಳವರು ಯುವ ಮನಃಶಾಸ್ತ್ರಜ್ಞೆ ಮತ್ತು ಪ್ರತಿಭಾನ್ವಿತ ಲೇಖಕಿ ಎನ್. ಸುಷ್ಮ. ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆ ಮತ್ತು ಮಾನಸಿಕ ಔನ್ನತ್ಯದೆಡೆಗಿನ ಮಾರ್ಗದರ್ಶನದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇವರು ವೃತ್ತಿಯಿಂದ ಮನಃಶಾಸ್ತ್ರಜ್ಞರಾಗಿದ್ದಾರೆ.
ಜುಲೈ 3, ಸುಷ್ಮ ಅವರ ಜನ್ಮದಿನ. ಇವರು ಜನಿಸಿದ್ದು ಮತ್ತು ಬೆಳೆದದ್ದು ಹಾಸನದಲ್ಲಿ. ತಂದೆ ಎಂ. ಕೆ. ನಾಗರಾಜು. ತಾಯಿ ಪ್ರಸಿದ್ಧ ಬರಹಗಾರ್ತಿ, ನಮ್ಮೆಲ್ಲರ ಆತ್ಮೀಯರಾದ ಹೆಚ್. ಡಿ. ಪ್ರಭಾಮಣಿ. ಸುಷ್ಮ ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದವರು. ಎನ್.ಇ.ಟಿ (ಯು.ಜಿ.ಸಿ), ಎಂ.ಎ. ಸೈಕಾಲಜಿ, ಪಿ.ಜಿ ಡಿಪ್ಲೊಮಾ ಇನ್ ಕೌನ್ಸಿಲಿಂಗ್ ಮತ್ತು ಸೈಕೋಥೆರಪಿ, ಡಿಪ್ಲೊಮಾ ಇನ್ ಜರ್ನಲಿಸಂ ಮುಂತಾದ ಸಾಧನೆಗಳೂ ಇವರೊಂದಿಗಿವೆ.
ಸುಷ್ಮ ಅವರು ಬರಹಗಾರ್ತಿಯಾಗಿ ಅನೇಕ ಸಾಧನೆಗಳನ್ನು ಮಾಡುತ್ತ ಬಂದಿದ್ದಾರೆ. ವೈಟ್ ಸ್ವಾನ್ ಫೌಂಡೇಶನ್ ಅಂತರ್ಜಾಲ ಪತ್ರಿಕೆಯಲ್ಲಿ ವಿಶೇಷ ತಜ್ಞರಾಗಿ 'ಮನೋಲೋಕ ಅಂಕಣ' ಮೂಡಿಸಿದ್ದಾರೆ(2017). ವಿಶ್ವವಾಣಿ ಪತ್ರಿಕೆಯಲ್ಲಿ 'ಪಡಸಾಲೆ' ಎಂಬ ಮಾನಸಿಕ ತುಮಲಗಳು, ಬಂಧಗಳ ಕುರಿತ ಪ್ರಶ್ನೋತ್ತರಗಳ ಅಂಕಣ ಮೂಡಿಸಿದ್ದಾರೆ(2017). ‘ಸಿಹಿ ಗಾಳಿ’ ಮಾಸಿಕದಲ್ಲಿ ‘ಕಂಡೆ ನಾನೊಂದು ಕನಸು’ ಎಂಬ ಅಂಕಣ ಎರಡು ವರ್ಷ ಪ್ರಕಟಗೊಂಡಿದೆ. ಇವರ ಅಂಕಣಗಳು ಸಮಾಜಮುಖಿ ವಿಶೇಷಾಂಕ ಮುಂತಾದ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಇವರ ಪ್ರಸ್ತುತಿಗಳು ಆಕಾಶವಾಣಿ ಹಾಸನ ಕೇಂದ್ರದಿಂದ ಬಿತ್ತರವಾಗಿವೆ. ಇವರ ಲೇಖನ ಹಾಗೂ ಕಥೆಗಳು ಸುಧಾ, ವಿಜಯಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಉದಯವಾಣಿ, ತುಷಾರ, ಸುಧಾ ಯುಗಾದಿ ವಿಶೇಷಾಂಕ, ಬೋಧಿವೃಕ್ಷ, ಮಯೂರ, ಕರ್ಮವೀರ, ವಿಶ್ವವಾಣಿ, ಕನ್ನಡಪ್ರಭ, ವಿಜಯನೆಕ್ಸ್ಟ್, ಜನಮಿತ್ರ, ಪಂಜು ಮತ್ತು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಂದರ್ಶನಗಳು ಸಂಯುಕ್ತ ಕರ್ನಾಟಕ (ನವಿರು ಚಿಗುರು)ದಲ್ಲಿ ಪ್ರಕಟಗೊಂಡಿದೆ(೨೦೧೭). ಆಕಾಶವಾಣಿ, ಹಾಸನ ಕೇಂದ್ರದಿಂದ ಇವರ ಸಂದರ್ಶನಗಳು (2005 ಮತ್ತು 2024) ಬಿತ್ತರವಾಗಿವೆ.
ಸುಷ್ಮ ಅವರ ಬರಹಗಳು Befirst.in ಆಂಗ್ಲ ಭಾಷಾ ನ್ಯೂಸ್ ವೆಬ್ ಪೋರ್ಟಲ್, IHF Wellnes Magazine (London) ಸೇರಿದಂತೆ ಹಲವು ಆಂಗ್ಲ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಇವರದೇ ಆದ ವೆಬ್‌ಸೈಟ್ ಹಾಗೂ
ಕನ್ನಡ ಬ್ಲಾಗುಗಳೂ ಅನೇಕ ಮಹತ್ವದ ವಿಷಯಗಳತ್ತ ಬೆಳಕು ಚೆಲ್ಲಿವೆ.
ಸುಷ್ಮ ಅವರು ಅನೇಕ ಮಾನಸಿಕ ಸ್ವಾಸ್ಥ್ಯ ಕಾರ್ಯಾಗಾರ ಸರಣಿ ಕಾರ್ಯಕ್ರಮಗಳನ್ನು ನಡೆಸಿದ್ದು ಮಕ್ಕಳಲ್ಲಿ ಜೀವನಕಲೆ, ಸ್ತ್ರೀಯರಲ್ಲಿ ಅತಿಯಾದ ಚಿಂತಿಸುವ ಗುಣಕ್ಕಿರುವ ಪರಿಹಾರಗಳು, ಆತ್ಮವಿಶ್ವಾಸದ ಕೊರತೆ ಮತ್ತು ಆತ್ಮಸಂದೇಹಗಳನ್ನು ನೀಗಿಕೊಳ್ಳುವಿಕೆ, ವಿಶೇಷ ಸಾಮರ್ಥ್ಯಗಳ ಗಳಿಸಿಕೊಳ್ಳುವಿಕೆ, ಮಕ್ಕಳಲ್ಲಿ ದೈಹಿಕ ಸಕಾರಾತ್ಮಕತೆ ಮತ್ತು ಆತ್ಮಗೌರವ (self esteem) ಕಲೆ, Building resilience Workshop For Children (April 2023- May 2024) ಮುಂತಾದ ವಿಚಾರಗಳ ಕುರಿತು ವ್ಯಾಪಕವಾದ ಕಾರ್ಯ ನಡೆಸಿದ್ದಾರೆ.
ಸುಷ್ಮ ಅವರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಮನಃಶಾಸ್ತ್ರ ಕುರಿತ ಕಾರ್ಯಾಗಾರಗಳಲ್ಲಿ ಭಾಗಿಯಾಗಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಉಪನ್ಯಾಸ ಮತ್ತು ಶಿಬಿರಗಳ ನಿರ್ವಹಣೆ ಮಾಡಿದ್ದಾರೆ. ಇವರ ಪ್ರಸಿದ್ಧ ಲೇಖನಗಳಲ್ಲಿ 'Why Do We Get So Angry?’- Mental Health Article, Psychologs Magazine (July 2023) ಸೇರಿದೆ. ʼStudy Of Yoga In Indian Psychologyʼ ಕುರಿತ ಸಂಶೋಧನಾ ಪ್ರಬಂಧವನ್ನು ಅಂತರ ರಾಷ್ಟ್ರೀಯ ಸಮಾವೇಶದಲ್ಲಿ ಮಂಡಿಸಿದ್ದಾರೆ. ಇದು International Journal of Public Mental Health and Neurosciences ನಲ್ಲಿ ಪ್ರಕಟಗೊಂಡಿದೆ. ಅಂತರಾಷ್ಟೀಯ ಸಮಾವೇಶ, ಬ್ಯಾಂಕಾಕ್ (ಥೈಲ್ಯಾಂಡ್)ನಲ್ಲಿ ಸ್ಕ್ರಿಜೋಪೀನಿಯಾ ಖಾಯಿಲೆಗೆ ಸಂಬಂಧಿಸಿದಂತೆ ಸಂಶೋಧನಾ ಬರಹ ಮಂಡನೆ ಮಾಡಿದ್ದಾರೆ (ಏಪ್ರಿಲ್-೨೦೧೪).
ಮೇಲೆ ತಿಳಿಸಿರುವ ಹಾಗೆ ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿರುವ ಸುಷ್ಮ ಅವರು ನವದೆಹಲಿಯ ಜವಾಹರ್ ಲಾಲ್ ನೆಹರು ಮೆಮೋರಿಯಲ್ ಫಂಡ್ ಇಂದ 2013 ರಲ್ಲಿ ಜವಾಹರ್ ಲಾಲ್ ನೆಹರು ಮೆರಿಟ್ ಅವಾರ್ಡ್ ಗಳಿಸಿದ್ದಾರೆ. ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿನ ಲೇಖನಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಇಂದ ಪ್ರಥಮ ಮತ್ತು ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಸುಷ್ಮಾ ಅವರು 'ಬದುಕಿಗೊಂದು ಪುಟ್ಟ ಥ್ಯಾಂಕ್ಸ್ ' ಎಂಬ ಮನೋ-ಆಧ್ಯಾತ್ಮಿಕ ಲೇಖನಗಳ ಸಂಗ್ರಹ (2023) ಮತ್ತು 'ಪಯಣ ಸಾಗಿದಂತೆ...’ ಕಥಾ ಸಂಕಲನ (2005) ಪ್ರಕಟಿಸಿದ್ದಾರೆ.
ಸುಷ್ಮ ಅವರ ಪಯಣ ಸಾಗಿದಂತೆ’ಕಥಾ ಸಂಕಲನದ ಹಸ್ತ ಪ್ರತಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಲಭಿಸಿತ್ತು. ಮುಂದೆ ಪ್ರಕಟಗೊಂಡ 'ಪಯಣ ಸಾಗಿದಂತೆ' ಕೃತಿಗೆ ಶ್ರೀಮತಿ ಶಾರದಾ ಆರ್.ರಾವ್ ದತ್ತಿ ನಿಧಿ ಪ್ರಶಸ್ತಿ (೨೦೦೬) ಮತ್ತು ರುಕ್ಮಿಣಿ ಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ(2006)ಗಳು ಸಂದವು. ವೈಫಲ್ಯವೆಂಬ ಟರ್ನಿಂಗ್ ಪಾಯಿಂಟ್ ಎಂಬ ಯುಗಾದಿ ಸ್ಪೂರ್ತಿದಾಯಕ ಲೇಖನ ಸ್ಪರ್ಧೆಯಲ್ಲಿ ವಿಜಯ ಕರ್ನಾಟಕ ಮತ್ತು ಸ್ನೇಹ ಬುಕ್ ಹೌಸ್- 2024 ದ್ವಿತೀಯ ಬಹುಮಾನ ಸಂದಿತು. ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಟಾಪ್ 25 ಪಟ್ಟಿಯಲ್ಲಿ ಇವರು ಬರೆದ ಕಥೆ ʼಮೈ ಲೈಫ್ ಮೈ ಪ್ರಾಬ್ಲಮ್ʼʼ (ಮಾರ್ಚ್-2023) ಸ್ಥಾನ ಗಳಿಸಿತು. ಬದುಕ ಬಂಜರಿಗಷ್ಟು ಪಾಸಿಟಿವಿಟಿಯ ತುಂತುರು ಲೇಖನಕ್ಕೆ ಯುಗಾದಿ ಸ್ಪೂರ್ತಿದಾಯಕ ಲೇಖನ ಸ್ಪರ್ಧೆ- ವಿಜಯ ಕರ್ನಾಟಕ ಮತ್ತು ಸ್ನೇಹ ಬುಕ್ ಹೌಸ್- 2023) ಮೆಚ್ಚುಗೆ ಬಹುಮಾನ ಸಂದಿತು. ಇಂಗ್ಲೀಷ್ ಸಣ್ಣ ಕಥೆ 'A Cup Of Soul' (May- 2022)ಗೆ The Galpa Collective Award- 8 ಸಂದಿದೆ. Her Venture (March 2022) ಪದ್ಯಕ್ಕೆ
Mindfully Sorted’s ಮಹಿಳಾ ದಿನದ ಬಹುಮಾನ ಸಂದಿದೆ. ಪ್ರತಿಲಿಪಿ ಕನ್ನಡ ರಾಷ್ಟ್ರೀಯ ಕನ್ನಡ ಕಥಾ ಮಹೋತ್ಸವ ಸ್ಪರ್ಧೆಯಲ್ಲಿ ʼನೀಲು ಮತ್ತು ಮೌಲ್ಯಗಳುʼ ಲೇಖನಕ್ಕೆ ಮಕ್ಕಳ ಕಥಾ ಪ್ರಶಸ್ತಿ( ಆಗಸ್ಟ್ ೨೦೨೦) ಸಂದಿದೆ. ಇದಲ್ಲದೆ ಹಾಸನದ ಮಾಣಿಕ್ಯ ಪ್ರಕಾಶನದ ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ,(2019); ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ಮಹೋತ್ಸವ 2017 ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಯುವ ಸಮ್ಮೇಳನದ ಅಂತಾರಾಷ್ಟ್ರೀಯ ಆದರ್ಶ ಯುವ ಪ್ರತಿಭಾ ಪುರಸ್ಕಾರಗಳೂ ಇವರಿಗೆ ಸಂದಿವೆ. 'ದೇಹಿ' ಕಥೆಗೆ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ ಬಹುಮಾನ, ಜನಮಿತ್ರ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಪುಟ್ಟಾಣಿ ಮತ್ತು ಗುಲಾಬಿ ಹೂ ಕಥೆಗೆ ಬಹುಮಾನ, ಯಾನ ಕಥೆಗೆ ಹಣತೆ ಕಥಾ ಸ್ಪರ್ಧೆ ಬಹುಮಾನಗಳು ಇವರಿಗೆ ಸಂದಿವೆ. 3k ಕನ್ನಡ ಕವಿತೆ ಕಥನ 2024 ರ ಕನ್ನಡ ರಾಜ್ಯೋತ್ಸವ ಸನ್ಮಾನ ಇವರಿಗೆ ಸಂದಿದೆ. ವಿಕ ಸ್ನೇಹ ಬುಕ್ ಹೌಸ್ ಕಥಾಸ್ಪರ್ಧೆ (2025) ಪ್ರಥಮ ಬಹುಮಾನವೂ ಇವರಿಗೆ ಲಭಿಸಿದೆ.
ಹೀಗೆ ನಿರಂತರ ಜನಮುಖಿಯಾಗೆ ಸೇವೆ ಸಲ್ಲಿಸುವುದರ ಜೊತೆಗೆ ಉತ್ತಮ ಪ್ರವೃತ್ತಿಗಳೊಂದಿಗೆ ಸಾಗುತ್ತಿರುವ ಸುಷ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Sushma Sindhu
ಕಾಮೆಂಟ್‌ಗಳು