ಭಾರತೀ ಕಾಸರಗೋಡು
ಭಾರತೀ ಕಾಸರಗೋಡು
ಕನ್ನಡದ ಮಹಾನ್ ಸಾಹಿತಿಗಳಾದ ಸಮೇತನಹಳ್ಳಿ ರಾಮರಾಯರ ಸುಪುತ್ರಿಯಾದ ಭಾರತೀ ಕಾಸರಗೋಡು ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ನವೆಂಬರ್ 16, ಭಾರತೀ ಕಾಸರಗೋಡು ಅವರ ಜನ್ಮದಿನ. ಇವರು ಮೈಸೂರಿನ ಸುಪ್ರಸಿದ್ಧ ಸಾಹಿತಿಗಳಾಗಿದ್ದ, ಸಮೇತನಹಳ್ಳಿ ರಾಮರಾಯರ ಸುಪುತ್ರಿ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಿ.ಎ. ಪದವಿಯಲ್ಲಿ ಶ್ರೇಷ್ಠ ಸಾಧನೆಗಾಗಿ ಅನ್ನಪೂರ್ಣಮ್ಮ ದತ್ತಿ ಬಹುಮಾನ ಗಳಿಸಿದರು. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತತ್ವಶಾಸ್ತ್ರದಲ್ಲಿ ಉನ್ನತ ಸಾಧನೆಯೊಂದಿಗೆ ಎಂಎ ಪದವಿ ಪಡೆದರು. ಎಂ.ಎ.ವ್ಯಾಸಂಗಕ್ಕಾಗಿ ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ ವೇತನ ಗಳಿಸಿದ್ದರು.
ಭಾರತೀ ಅವರು ಮೊದಲಿಗೆ ದೇಶದ ಸುಪ್ರಸಿದ್ಧ ವೀಣಾ ವಿದ್ವಾಂಸರಾಗಿದ್ದ ಪದ್ಮಭೂಷಣ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ ಅವರ ಆತ್ಮಕಥನವಾದ 'ವೀಣೆಯ ನೆರಳಿನಲ್ಲಿ' ಕೃತಿಯನ್ನು ಮೂಡಿಸಿದರು. ಈ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿ ಲಭಿಸಿವೆ. ಈ ಜೀವನ ಚರಿತ್ರೆಯ ಹಿಂದಿ ಅನುವಾದವನ್ನು 2021ರಲ್ಲಿ ದೆಹಲಿಯ ಸಂಗೀತ ನಾಟಕ ಅಕಾಡೆಮಿ ಪ್ರಕಟಿಸಿದೆ. 2024ರಲ್ಲಿ ಭಾರತೀ ಅವರು ಇದೇ ಕೃತಿಯನ್ನು ' Dr..V. Doreswami Iyengar: Pride of Mysore' ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಭಾರತೀ ಕಾಸರಗೋಡು ಅವರು ಕಳೆದ ಮುವ್ವತ್ತು ವರ್ಷಗಳಿಂದ ಸಣ್ಣ ಕಥೆ, ಕವನ, ಲಲಿತ ಪ್ರಬಂಧ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಅನುವಾದ, ವೈಚಾರಿಕ ಸಾಹಿತ್ಯ, ಸ್ತ್ರೀ ಸಂವೇದನೆ, ಹಾಸ್ಯ ಸಾಹಿತ್ಯ, ಮಕ್ಕಳ ಕಥೆಗಳು ಮುಂತಾದ ಕನ್ನಡ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಮುವ್ವತ್ತೈದಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ ಮಾಡಿದ್ದಾರೆ. ಹೆಸರಾಂತ ರಾಜಕಾರಣಿ ಎಂ. ವೈ. ಘೋರ್ಪಡೆ ಅವರ ನಾಲ್ಕು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಭಾರತೀ ಕಾಸರಗೋಡು ಅವರು 2000ನೇ ಇಸವಿಯಲ್ಲಿ ಚಿತ್ರರಂಗದ ಭೀಷ್ಮ ಜಿ.ವಿ.ಅಯ್ಯರ್ ಅವರ ಧಾರಾವಾಹಿ 'ನಾಟ್ಯರಾಣಿ ಶಾಂತಲಾ'ಗೆ ಸಂಭಾಷಣೆ ಬರೆದರು. ಇವರು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕಲಾವಿದೆಯಾಗಿ ಭಾಗವಹಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದಲ್ಲಿ ಹಲವಾರು ವರ್ಷ ಕಾರ್ಯದರ್ಶಿಯಾಗಿ, ಕಾರ್ಯಕಾರಿ ಸಮಿತಿ ಮತ್ತು ಸಲಹಾ ಸಮಿತಿಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತೀ ಕಾಸರಗೋಡು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bharathi Kasargod 🌷🙏🌷
ಕಾಮೆಂಟ್‌ಗಳು