ಕೋವಿಲಾಡಿ ಅರ್ಚನಾ
ಕೋವಿಲಾಡಿ ಅರ್ಚನಾ
ವಿದುಷಿ ಅರ್ಚನಾ ಎಲ್. ರಾವ್ ಅವರು ಸಂಗೀತಗಾರ್ತಿಯಾಗಿ ಪ್ರಸಿದ್ಧಿ ಪಡೆದಿದ್ದು, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಂಪೆನಿ ಸೆಕ್ರೆಟರಿ ಅಂತಹ ಸೇವೆಯಲ್ಲೂ ದೊಡ್ಡ ಹೆಸರಾಗಿದ್ದಾರೆ.
ಏಪ್ರಿಲ್ 5, ಅರ್ಚನಾ ಅವರ ಜನ್ಮದಿನ. ಮಹಾನ್ ಸಂಗೀತಗಾರರ ಕುಟುಂಬದಿಂದ ಬಂದ ಇವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಅಜ್ಜ ಹರಿದಾಸ ಸಂಗೀತ ಗಣರತ್ನ ದಿವಂಗತ ಕೋವಿಲಾಡಿ ಕೆ. ರಂಗರಾಜನ್ ಅವರಿಂದ ಸಂಗೀತಾಭ್ಯಾಸ ಆರಂಭಿಸಿದರು. ರಂಗರಾಜನ್ ಅವರು ಶ್ರೀರಂಗಂ, ತಿರುಚಿಯಲ್ಲಿನ ಪ್ರಸಿದ್ಧ ಸಂಗೀತಗಾರರಾಗಿದ್ದರು.
ಅರ್ಚನಾ ಅವರು ಮುಂದೆ ತಮ್ಮ ತಾಯಿ 'ಕಲಾ ದೀಪ್ತಿ' ಬಿರುದಾಂಕಿತರಾದ ಮೈಸೂರಿನ ಪ್ರಸಿದ್ಧ ಕಲಾವಿದೆ ಮತ್ತು ಸಂಗೀತ ಗುರು ವಿದುಷಿ ಕೋವಿಲಾಡಿ ಆರ್. ಕಲಾ ಅವರ ನಿರಂತರ ಮಾರ್ಗದರ್ಶನದಲ್ಲಿ ಪ್ರಬುದ್ಧ ಸಂಗೀತ ಕಲಾವಿದೆಯಾಗಿ ಅರಳಿದ್ದಾರೆ. ಬಲವಾದ ಸಂಗೀತ ಹಿನ್ನೆಲೆ, ಗುರುಗಳ ಅಡಿಯಲ್ಲಿ ಕಠಿಣ ಕಲಿಕೆ ಮತ್ತು ಆಶೀರ್ವಾದದೊಂದಿಗೆ, ಅವರು ಕಳೆದ ಎರಡು ದಶಕಗಳಿಗೂ ಮೀರಿದ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿನ ಕಲಾಪ್ರದರ್ಶನಗಳಿಗಾಗಿ ಹೆಸರುವಾಸಿಯಾಗಿದ್ದಾರೆ.
ಸಂಗೀತದಲ್ಲಿನ ಸಾಧನೆ ಮಾತ್ರವಲ್ಲದೆ, ಅರ್ಚನಾ ಅವರು ನುರಿತ ಚಾರ್ಟರ್ಡ್ ಅಕೌಂಟೆಂಟ್, US CPA ಹಾಗೂ ಕಂಪನಿ ಕಾರ್ಯದರ್ಶಿಯಾಗಿದ್ದು, ಅಖಿಲ ಭಾರತ ಶ್ರೇಯಾಂಕಗಳನ್ನು ಗಳಿಸಿದವರಾಗಿದ್ದು, ಬೆಂಗಳೂರಿನಲ್ಲಿ ಸಲಹಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಹೊಸ ಯುಗದ ವ್ಯವಹಾರಗಳಿಗೆ ಕಾರ್ಯತಂತ್ರದ ಸಲಹಾ ಸೇವೆಗಳನ್ನು ಒದಗಿಸುವುದರಲ್ಲಿಯೂ ಇವರು ಪ್ರಖ್ಯಾತಿ ಗಳಿಸಿದ್ದಾರೆ.
ಅರ್ಚನಾ ಅವರು ಅಖಿಲಭಾರತ ಆಕಾಶವಾಣಿ ಸಂಗೀತ ಸ್ಪರ್ಧೆ 2007 ಪ್ರಶಸ್ತಿ ಗೆದ್ದವರು. SPICMACAY ಮತ್ತು ದೂರದರ್ಶನದವರು 2015 ರಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಾದ 'ನಾದ್ ಭೇದ್' ನಲ್ಲಿನ ರಾಷ್ಟ್ರೀಯ ಅಂತಿಮ ಸ್ಪರ್ಧಿಗಳಲ್ಲಿ ಅರ್ಚನಾ ಒಬ್ಬರು. ಇವರು ಕರ್ನಾಟಕ ಸರ್ಕಾರ ನಡೆಸಿದ ಸಂಗೀತ (ಹಿರಿಯ) ಪರೀಕ್ಷೆಯಲ್ಲಿ 99.50% ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದವರು. 2005ರಲ್ಲಿ ಕರ್ನಾಟಕ ಸರ್ಕಾರದ ಕಿಶೋರ ಪ್ರತಿಭೆ ಪ್ರಶಸ್ತಿ ವಿಜೇತೆ. ಇವರು 2008ರಲ್ಲಿ ಮೈಸೂರಿನ ಶ್ರುತಿಮಂಜರಿ ಪ್ರತಿಷ್ಠಾನದವರು ನಡೆಸಿದ ರಾಗಂ ತಾನಂ ಪಲ್ಲವಿ ಸ್ಪರ್ಧೆಯ ವಿಜೇತರು. 2012ರಲ್ಲಿ ಭ್ರಮರ ಟ್ರಸ್ಟ್ ನಡೆಸಿದ ಸ್ಪರ್ಧೆಗಳಲ್ಲಿ ರಾಗಂ ತಾನಂ ಪಲ್ಲವಿ. ಗಾಯನಕ್ಕಾಗಿ ಎಂ ಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿ ವಿಜೇತರು. ಇವರು ಪ್ರತಿಷ್ಠಿತ ಸಾಮಾಜಿಕ ಮಾಧ್ಯಮವಾದ ಚೆನ್ನೈನ ಆಲಾಪ್ ಅವರು 2013ರಲ್ಲಿ ನಡೆಸಿದ ಸ್ಪರ್ಧೆಯ ವಿಜಯಿ. ಇದಲ್ಲದೆ
ಅನೇಕ ಅಂತರಕಾಲೇಜು, ಅಂತರಶಾಲಾ ಸ್ಪರ್ಧೆಗಳಲ್ಲಿ ಹಾಗೂ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಫರ್ಧೆಗಳಲ್ಲಿ ವಿಜಯಿಯಾದವರು.
ಅರ್ಚನಾ ಅವರು ಅಖಿಲ ಭಾರತ ರೇಡಿಯೋದ ಕರ್ನಾಟಕ ಸಂಗೀತ ಗಾಯನ ಮತ್ತು ಭಕ್ತಿಗೀತೆ ವಿಭಾಗಗಳಲ್ಲಿ ಎ-ಗ್ರೇಡ್ ಕಲಾವಿದೆ. ಅರ್ಚನಾ ಅವರು ರಾಜ್ಯದಲ್ಲಷ್ಟೇ ಅಲ್ಲದೆ ದೇಶದ ವಿವಿಧೆಡೆಗಳಲ್ಲಿನ ಪ್ರತಿಷ್ಠಿತ ಸಭೆಗಳಲ್ಲಿ ಕರ್ನಾಟಕ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ದೇಶಾದ್ಯಂತ ಅನೇಕ ಸಂಗೀತ ಕಛೇರಿಗಳಲ್ಲಿ ತಮ್ಮ ಗುರುಗಳೊಂದಿಗೆ ಪಾಲ್ಗೊಂಡಿದ್ದಾರೆ. ಕಟ್ಟುನಿಟ್ಟಾದ ಪಥಾಂತರ, ವಿಶಾಲವಾದ ಸಂಗೀತ ಸಂಗ್ರಹ ಮತ್ತು ಸೌಂದರ್ಯಶಾಸ್ತ್ರದಿಂದ ತುಂಬಿದ ಮನೋಧರ್ಮ ಅರ್ಚನಾ ಅವರ ಕಛೇರಿಗಳಲ್ಲಿನ ಪ್ರಮುಖ ಅಂಶಗಳಾಗಿವೆ. ಈ ಸಂಗೀತ ಕಛೇರಿಗಳನ್ನು ಕಲಾಭಿಜ್ಞರು, ಹಿರಿಯ ಕಲಾವಿದರು ಮತ್ತು ಸಂಗೀತ ವಿಮರ್ಶಕರು ಮೆಚ್ಚುಗೆಯಿಂದ ಸ್ವೀಕರಿಸಿ ಹರಸಿದ್ದಾರೆ. ರಾಗಂ ತಾನಮ್ ಪಲ್ಲವಿಗಳ (RTP) ಬಗ್ಗೆ ವಿಶೇಷ ಒಲವು ಹೊಂದಿರುವ ಅರ್ಚನಾ ಅವರು ಸ್ವತಃ ಸಂಕೀರ್ಣವಾದ RTPಗಳನ್ನು ಸಂಯೋಜಿಸಿದ್ದಾರೆ.
ಅರ್ಚನಾ ಅವರು ಸಾಮಾಜಿಕ ಮಾಧ್ಯಮಕ್ಕಾಗಿ ವಿವಿಧ ಸಂಗೀತ ಯೋಜನೆಗಳಲ್ಲಿ ಮತ್ತು ವಿಷಯಾಧಾರಿತ ಸಂಗೀತ ಕಚೇರಿಗಳಲ್ಲಿ ವಿವಿಧ ಸಂಗೀತಗಾರರೊಂದಿಗೆ ಪಾಲ್ಗೊಳುತ್ತಿದ್ದಾರೆ. ಇವರ ಇತ್ತೀಚಿನ ವಿಷಯಾಧಾರಿತ ಸಂಗೀತ ಕಚೇರಿಗಳಲ್ಲಿ ಶ್ಯಾಮಾ ಶಾಸ್ತ್ರಿಗಳು, ಮೈಸೂರು ಜಯ ಚಾಮರಾಜೇಂದ್ರ ಒಡೆಯರ್, ತಮಿಳು
ಸಂಯೋಜಕರು, ಶ್ರೀ ಶ್ರೀಪಾದರಾಜರು, ಸಂಗೀತ ಕಲಾನಿಧಿ ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ, ಮೈಸೂರು ವಾಸುದೇವಾಚಾರ್ಯ ಅಂತಹವರ ಮಹಾನ್ ಕೃತಿಗಳಲ್ಲದೆ ಹಲವು ರಾಗಂ ತಾನಂ ಪಲ್ಲವಿ ಸಂಯೋಜನೆಗಳು ಸೇರಿವೆ. ಪ್ರಸಿದ್ಧ ಹಿಂದೂಸ್ತಾನಿ ಮತ್ತು ರವೀಂದ್ರ ಸಂಗೀತ ಕಲಾವಿದರೊಂದಿಗೆ ಜುಗಲ್‌ಬಂಧಿ ಸಂಗೀತ ಕಚೇರಿಗಳನ್ನೂ ನೀಡಿದ್ದಾರೆ.
ಅರ್ಚನಾ ಅವರು ಗುರುವಾಗಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದ ತರಬೇತಿ ನೀಡುತ್ತಿದ್ದಾರೆ. ಇವರ ಕೆಲವು ವಿದ್ಯಾರ್ಥಿಗಳು ಅಮೆರಿಕ ಮತ್ತು ಭಾರತದಲ್ಲಿನ ಸಂಗೀತ ಸಂಸ್ಥೆಗಳು ಆಯೋಜಿಸುವ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಬಹುಮುಖಿ ಸಾಧಕಿ, ಸರಳ ಸಹೃದಯಿ, ವಿದುಷಿ ಅರ್ಚನಾ ಎಲ್. ರಾವ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday to Musician Archana L Rao 🌷🌷🌷
ಕಾಮೆಂಟ್‌ಗಳು