ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾವು ಕಾಣುತ್ತಿದ್ದೇವೆಯೆ?


 ನಾವು ಕಾಣುತ್ತಿದ್ದೇವೆಯೆ?

Are we seeing it!!!

ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

- ಅಂಬಿಕಾತನಯದತ್ತ

ಕೆಲವೊಮ್ಮೆ ಕಾಣಲಿಕ್ಕಾದರೂ ಏನಿದೆ ಎನ್ನುತ್ತೇವೆ. ನಾವೂ ಕಾಣಬಲ್ಲೆವು ಎಂದುಕೊಂಡಿರುತ್ತೇವೆ. ನಾವು ಏನನ್ನೊ ಕಂಡೆವು ಎನ್ನುತ್ತೇವೆ. ನಾವು ಕಂಡದ್ದು ನಿಜವೇ? 

ಬದುಕಲ್ಲೇನಿದೆ ಎಂಬ ನಿರಾಶವಾದ ಹೊತ್ತು ಹಲವು ಆತಂಕಗಳಿಂದ ನಿದ್ರೆ ಹೋಗದವರಿದ್ದಾರೆ.  2022 ವರ್ಷ ಬೆಂಗಳೂರಲ್ಲಿ ಹೆಚ್ಚು ಮಳೆ ಇದ್ದಾಗ, ದುಬೈನಲ್ಲಿರುವ ನಾನು ಇಲ್ಲಿನ ಬೆಳಗಿನ ಸೂರ್ಯೋದಯದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದಾಗ "ನೀವೇ ಸೂರ್ಯನನ್ನು ನೋಡಿದ‍ ಭಾಗ್ಯವಂತರು, ನಮಗೆ ನೋಡಲಿಕ್ಕೆ ಏನೂ ಇಲ್ಲ ಎಂದು ಕೆಲವರ ನಿಟ್ಟುಸಿರ ಪ್ರತಿಕ್ರಿಯೆ ಮೂಡುತ್ತಿತ್ತು".  ಮಳೆಗಾಲದಲ್ಲಿ ಮಳೆ ಹನಿ ನೋಡುವುದು; ಸಾಧ್ಯವಾದರೆ ಕೊಡೆ ಹಿಡಿದು ಮಳೆಯ ನಡುವೆ ಖುಷಿಯಿಂದ ಹೊರಗೆ ನಾಲ್ಕು ಹೆಜ್ಜೆ ಹಾಕುವುದು; ಆಗಸದಲ್ಲಿ ಬೆಟ್ಟಗಳೋಪಾದಿಯಲ್ಲಿ ಕಪ್ಪುಮೋಡ ಕಟ್ಟುವುದ ಕಾಣುವುದು; ಆಗಸದಂಚಿನ ಮಿಂಚಿನ ಫಳ ಫಳದಲ್ಲಿ ಪುಳಕಗೊಳ್ಳುವುದು, ಮಳೆ ಸ್ವಲ್ಪ ನಿಂತಾಗ ಅದರಲ್ಲಿ ಮಿಂದ ಎಲೆ, ಹಸುರು, ಹೂಗಳು ತಮ್ಮ ಮೇಲೆ ಇರಿಸಿಕೊಂಡಿರುವ ಮುತ್ತಿನ ಮಳೆ ಹನಿಗಳ ಈಕ್ಷಿಸುವುದು; ನಿಂತ ನೀರಲ್ಲಿ ಗುಬ್ಬಿಗಳು ಜಳಕಿಸುವುದ ಕಾಣುವುದು; ಮಕ್ಕಳು ಕಾಗದದ ದೋಣಿ ತೇಲಿಸುವುದು ಇದೆಲ್ಲ ಸುಂದರವಲ್ಲವೆ?           

"ಮಳೆಯು ಬಂದ ಮಾರನೆ ದಿನ
ಮಿಂಚ ಹಂಚಿದೆ ಹೂಬನ.
ಎಳೆಯ ಚಿಗುರಿಗೆ ಮಣ್ಣ ಹೊಸತನ 
ಕಂಡು ಹಿಗ್ಗಿದೆ ಮೈಮನ"
ಎಂಬುದು ಪ್ರಸಿದ್ಧ ಕವಿವಾಣಿ. 

ಇನ್ನು ಮಳೆಗಾಲವಲ್ಲದ ದಿನಗಳಲ್ಲಿನ ಮುಂಜಾನೆಗಳಂತೂ ಸೌಂದರ್ಯೋಪಾಸನೆಗೆ ಪ್ರಶಸ್ತ ಕ್ಷಣಗಳು ಎಂಬ ಕುರಿತು ಭಿನ್ನಾಭಿಪ್ರಾಯ ಸಾಧ್ಯವೇ ಇಲ್ಲ.  ಮುಂಜಾನೆಯ ವರ್ಣಮಯ ಆಗಸ, ಸೂರ್ಯೋದಯ, ತಂಪು ವಾತಾವರಣ, ಲೋಕವೆಲ್ಲ ಹೂ ಹಸುರುಗಳಿಂದ ಕಂಗೊಳಿಸುವ ಕ್ಷಣಗಳು ಇರುವಾಗ ಬದುಕಿನಲ್ಲಿ ಏನಿದೆ ಎಂದು ಕೇಳುವವರಿಗೆ ಏನೆನ್ನೋಣ! ಯಾರಾದರೂ ಅದನ್ನು ಸವಿಯುತ್ತೇನೆ ಎನ್ನುವವರಿಗೆ "ನೀವು ಸವಿಯಿರಿ, ನಮಗೆ ನಿದ್ರೆ ಮುಖ್ಯ" ಎನ್ನುವವರಿದ್ದಾರೆ. "ನಾವು ನಿಮ್ಮಷ್ಟು ಸುಖ ಪುರುಷರಲ್ಲ, ನಮಗೆ ಹಲವು ಜವಾಬ್ದಾರಿಗಳಿವೆ" ಎನ್ನುವವರಿದ್ದಾರೆ.  ನಿಜ ಇರಬಹುದು. 

ಸುಂದರ ನೋಟವೆಂದರೆ ಪ್ರವಾಸಿ ತಾಣಗಳಲ್ಲಿದೆ, ವಿದೇಶಗಳಲ್ಲಿವೆ ಎಂಬ ಕಲ್ಪನೆಗಳು ಸಾಮಾನ್ಯವಾಗಿವೆ.  ಭೌಗೋಳಿಕ, ಪ್ರಾಕೃತಿಕ ಹಿನ್ನೆಲೆಗಳು ಮತ್ತು ಉತ್ತಮ ವ್ಯವಸ್ಥೆ ನಿರ್ವಹಣೆಗಳುಳ್ಳ ಮಾನವ ನಿರ್ಮಿತ ವಿಸ್ಮಯ ವೈಭೋಗಗಳು ಖಂಡಿತ ವಿಶೇಷ ಅನುಭವ ನೀಡುತ್ತವೆ.  ಆದರೆ, ಇವೆಲ್ಲ ದುಬಾರಿ ಖರ್ಚು ವೆಚ್ಚದ ವಿಚಾರಗಳು. ಪ್ರಯಾಣದ ಶ್ರಮವನ್ನು ಬೇಡುವಂತದ್ದು.  ಹೋದೆಡೆಯಲ್ಲೆಲ್ಲ ವ್ಯವಸ್ಥೆಗಳು ನಿರೀಕ್ಷೆಯ ಮಟ್ಟದಲ್ಲಿ ಇರುತ್ತವೆ ಎಂದೇನಿಲ್ಲ. ಎಲ್ಲವೂ ಸಂತೃಪ್ತವಿದ್ದಾಗ ಅದು ವಿಶ್ರಾಮದ ಪ್ರವಾಸವಾಯ್ತು.  ಶಾಪಿಂಗ್ ನಡೆಯಿತು. ಆದರೆ, ನಾವು ಅಲ್ಲಿಗೆ ಹೋದದ್ದು ಐತಿಹಾಸಿಕವಾದದ್ದನ್ನೊ, ಭೌಗೋಳಿಕ ಅಥವಾ ಪ್ರಾಕೃತಿಕ ಸೌಂದರ್ಯವನ್ನು ಕಾಣುವ ಸಲುವಾಗಿ ಎಂಬುದು ಅರ್ಥ ಕಳೆದುಕೊಂಡಿರುತ್ತವೆ.  ಮಳೆ ಇರುವ ಪ್ರದೇಶಕ್ಕೆ ಹೋಗಿದ್ದಲ್ಲಿ ಹೊರಗೆ ಹೋಗುವುದು ಹೇಗೆ; ಚಳಿ ಮತ್ತು ಹಿಮ ಚೆನ್ನಾಗಿರುತ್ತೆ,  ಸ್ನೋ ಫಾಲ್ ಅಂದರೆ ಆಹಾ ಎಂದು ಹೋದವರಿಗೆ ಅಲ್ಲಿ ಕಾಲಿಡುವುದು ಹೇಗೆ? ನಾ ಹೋಟಲಲ್ಲೇ ಇರುವೆ ಎನ್ನುವ ಕತೆಯಾಗುತ್ತೆ.  ನಾವು ಹೋಗಿದ್ದೆವು ಎಂದು ಲೋಕಕ್ಕೆ ಹೇಳಿಕೊಳ್ಳುವುದು ಬಹುತೇಕರ ಇಚ್ಛೆ.   ಈ ಮಧ್ಯೆ ಹೋದೆಡೆ ಕಂಡದ್ದೇನು? ಇದನ್ನು ಅನುಭವಿಸಲು ಅಷ್ಟು ಶ್ರಮ, ಹಣ, ಪ್ರಯಾಣ ಮತ್ತು ದುಗುಡಗಳ ಅಗತ್ಯವಿತ್ತೆ? 

ನಾವು ಸೌಂದರ್ಯವನ್ನು ತುಂಬಾ ದೂರ ಪಯಣ ಮಾಡದೆ, ಇರುವ ಊರಲ್ಲೆ ಸಮೀಪದ ಉದ್ಯಾನವನದಲ್ಲೋ, ಕೆರೆ ಅಥವಾ ಗುಡ್ಡದ ಬಳಿಯೋ, ಅಕ್ಕ ಪಕ್ಕದವರು ಬೆಳೆಸಿರುವ ಹೂ ಗಿಡಗಳಲ್ಲೊ, ಮನೆಯ ತಾರಸಿಯಲ್ಲೋ, ಖಾಲಿ ಸೈಟ್ ಮುಂದೆಯೋ, ರಸ್ತೆ ಕೊನೆಯಲ್ಲೋ ಕಾಣುವುದು ಸಾಧ್ಯ.  ಹಾಗೆ ಹೋಗುವಾಗಲೂ ಯಾರೊಂದಿಗೋ, ಮೊಬೈಲಲ್ಲೋ ಹರಟುತ್ತಾ, ನಮ್ಮ ಅಹಮಿಕೆಯಲ್ಲಿ ಬಳಲುತ್ತಾ, ಯಾರದೋ ತಿರಸ್ಕಾರದ ಭ್ರಮೆಯಲ್ಲಿ ನರಳುತ್ತಾ, ನಮ್ಮ ಕಣ್ಮುಂದಿನ ಸುಂದರ ಹೂಗಳ, ಸೂರ್ಯಾಸ್ತ, ಸೂರ್ಯೋದಯ, ಆಗಸದ ಬಣ್ಣಗಳ, ಹಕ್ಕಿಗಳುಲಿಗಳ ಸಂಭ್ರಮಗಳ ವೈಭವವನ್ನು ಕಡೆಗಾಣಿಸುತ್ತಾ ಕಾಣಬೇಕಿದ್ದನ್ನು ಕಾಣದೆ ಪುನಃ ಬದುಕಲ್ಲಿ ಏನೂ ಇಲ್ಲ ಎಂದು ಗೊಣಗುಟ್ಟುವ ಗೂಡು ಸೇರುತ್ತೇವೆ. 

ನಾನು ಮೈಸೂರಿನಲ್ಲಿದ್ದಾಗ ಪ್ರತಿದಿನ ಅಲ್ಲಿನ ಕುಕ್ಕರ ಹಳ್ಳಿ ಕೆರೆಯಲ್ಲಿನ ಬೆಳಗಿನ ಸೂರ್ಯೋದಯ ವೈಭವವನ್ನು ಸುಖಿಸುತ್ತಿದ್ದೆ.  ಬೆಂಗಳೂರಿನಲ್ಲಿ ಪ್ರತಿದಿನ ಪ್ರಾತಃಕಾಲಕ್ಕೆ ಮುಂಚೆ ಸೈಕಲ್ ಸವಾರಿಯಲ್ಲಿ ಲಾಲ್‍ಬಾಗ್, ಗಾಂಧಿ ಬಜಾರ್, ಕಬ್ಬನ್ ಪಾರ್ಕ್, ಮಡಿವಾಳ ಕೆರೆ, ಸ್ಯಾಂಕಿ ಟ್ಯಾಂಕ್ ಮುಂತಾದ ಎಲ್ಲೆಡೆ ಸುಂದರ ಸೂರ್ಯೋದಯ ಮತ್ತು ಪುಷ್ಪಗಳರಳುವಿಕೆ ಇತ್ಯಾದಿಗಳ ಅನುಭವವನ್ನು ಸುಖಿಸುತ್ತಿದ್ದೆ.  ದುಬೈನಲ್ಲಿ ಸಹಾ ಅಂತದ್ದೇ ಸೌಂದರ್ಯವನ್ನು ಪ್ರತಿದಿನ ಸವಿಯುತ್ತಿರುವೆ.  ಅದೇ ತರಹ ಕರ್ನಾಟಕದ, ಹೊರರಾಜ್ಯಗಳ, ಇತರ ದೇಶಗಳ ಭೇಟಿಗಳಲ್ಲೂ ಇಂತಹ ಸೌಂದಾರ್ಯಾನುಭವಕ್ಕೆ ನಾನೆಂದೂ ವಿಮುಖನಾಗಿರುವುದಿಲ್ಲ.  ಸೌಂದರ್ಯಕ್ಕೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ರೂಪ ಇರಬಹುದು, ಬೇರೆ ಹೆಸರಿಲ್ಲ.

ನಾನು ಪ್ರತಿ ಊರಿನ, ನಾನು ಅನುಭವಿಸಿದ ಕ್ಷಣಗಳ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದಾಗಲೂ ಬೇರೆ ಊರಿನ, ಬೇರೆ ದೇಶದವರಿರಲಿ ಅದೇ ಊರಿನ ಜನ ಸಹಾ ನಮ್ಮ ಊರಿನಲ್ಲಿ ನಾ ಇದು ನೋಡುವುದೇ ಇಲ್ಲ ಎನ್ನುತ್ತಾರೆ. ಕರ್ನಾಟಕದಲ್ಲಿನ ನನ್ನ ಸ್ನೇಹಿತರು ದುಬೈ, ಸಿಂಗಾಪುರ ಎಷ್ಟು ಚೆನ್ನಾಗಿದೆ ಎನ್ನುತ್ತಾರೆ. 
ದುಬೈ, ಅಮೆರಿಕ, ಸಿಂಗಾಪುರ, ಆಸ್ಟರೇಲಿಯಾ ದೇಶದಲ್ಲಿರುವ ನನ್ನ ಭಾರತೀಯ ಸ್ನೇಹಿತರು "ನಾನು ನನ್ನ ನೆಲದ ಸೌಂದರ್ಯದಿಂದ ವಂಚಿತನಾಗಿದ್ದೇನೆ" ಎನ್ನುತ್ತಾರೆ.  ಒಂದೆಡೆ ಇರುವ ಸೌಂದರ್ಯ ಮತ್ತೊಂದೆಡೆ ಇರುವುದಿಲ್ಲವೇ?

ಒಮ್ಮೆ ನಾನು ಪ್ರತಿ ದಿನ ಹಾಕುತ್ತಿದ್ದ ಲಾಲ್ಬಾಗಿನ ಚಿತ್ರಗಳನ್ನು ಮೆಚ್ಚುತ್ತಿದ್ದ ವಿದೇಶದಲ್ಲಿದ್ದ ಆತ್ಮೀಯರೊಬ್ಬರು, ಬೆಂಗಳೂರಿಗೆ ಬಂದಾಗ ಲಾಲ್ಬಾಗ್ ನೋಡಿ "ನೀವು ಲಾಲ್ಬಾಗ್ ಕುರಿತು ತುಂಬಾ ಸದಭಿಪ್ರಾಯ ಕೊಟ್ಟು ನನಗೆ ಸುಳ್ಳು ಕಲ್ಪನೆ ನೀಡಿದಿರಿ. ಅಲ್ಲಿ ನಾ ಕಂಡದ್ದು, ಗಲೀಜು ಮತ್ತು ಅವ್ಯವಸ್ಥೆ" ಎಂದು ಸಂದೇಶ ಕಳಿಸಿದರು.  ಅವರ ಮಾತು ತಪ್ಪು ಎನ್ನಲಾರೆ. ಆದರೆ, ಲಾಲ್ಬಾಗಿನಲ್ಲಿರುವ ಸಹಜ ಪುಷ್ಷ ಸೌಂದರ್ಯ, ಸಸ್ಯ ವೈಭವ, ಬೆಳಗಿನ ಸೂರ್ಯೋದಯಗಳ ವೈಭವದ ಮುಂದೆ ಗಿನ್ನೆಸ್ ದಾಖಲೆ ಸಾಧಿಸಿರುವ ದುಬೈನ ಮಿರಾಕಲ್ ಗಾರ್ಡನ್  ಎಂಬ ಸುವ್ಯವಸ್ಥಿತ ಕೃತಕ ಪುಷ್ಪ ಜೋಡಣೆ ನನಗೆ ಎಂದೂ ಮಿಗಿಲೆನಿಸಲಾರದು. ಅವು ಹೋಲಿಕೆಯ ವಿಚಾರಗಳೇ ಅಲ್ಲ.  ಅಂತೆಯೇ, ಮರುಭೂಮಿಯುಳ್ಳ ದುಬೈ ಅಂತಹ ಊರಿನಲ್ಲಿ ಹಸಿರು ಮತ್ತು ಹೂಗಳ ರಾಶಿಯನ್ನು ಎಲ್ಲೆಡೆ ಸುರಿಸಿರುವ ಇಲ್ಲಿನ ಭಗೀರಥ ಕ್ರಾಂತಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. 

ಮುಖ್ಯವಾಗಿ ಜನರಿಗೆ ಸೌಂದರ್ಯವನ್ನು ಕಾಣುವ ಮನೋಬಲ ಇದ್ದಾಗ, ಅವರಿರುವ ಊರುಗಳಲ್ಲಿ ಉದ್ಯಾನವನಗಳು, ಕೆರೆಗಳು ಉಳಿಯುತ್ತವೆ.  ಸೌಂದರ್ಯವು ಹೊರಗೂ ಮನಗಳಲ್ಲೂ ಅರಳುತ್ತವೆ.  ಈಗ ನಮ್ಮಲ್ಲಿ ಒಂದಷ್ಟು ಉಳಿದಿರುವ ಸೌಂದರ್ಯವೂ ಇಂತಹ ಪರಿಸರ ಪ್ರೇಮಿಗಳ ಕಾಣ್ಕೆಯಿಂದಲೇ.  ಹೆಚ್ಚು ಹೆಚ್ಚು ಜನ ಸಮುದಾಯದಲ್ಲಿ ಹೀಗೆ ಕಾಣಬಲ್ಲವರಾಗುತ್ತೇವೆಯೇ?

(2023 ಮೇ ಮಾಸದಲ್ಲಿ ವಿಶ್ವವಾಣಿ ಪತ್ರಿಕೆಗಾಗಿ ಈ ಲೇಖನ ಬರೆದಿದ್ದೆ)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ