ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.ಪಿ. ವಿಜಯಲಕ್ಷ್ಮಿ


 ಎಸ್.ಪಿ. ವಿಜಯಲಕ್ಷ್ಮಿ


ಆತ್ಮೀಯ ಹಸನ್ಮುಖಿ ಎಸ್.ಪಿ. ವಿಜಯಲಕ್ಷ್ಮಿ ಅವರು ಪ್ರತಿಭಾನ್ವಿತ ಬಹುಮುಖಿ ಬರಹಗಾರ್ತಿ. 

ವಿಜಯಲಕ್ಷ್ಮಿ ಅವರು ಜನಿಸಿದ್ದು 1952ರ ಮೇ 16ರಂದು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ. ತಂದೆ ಎಸ್.ಫಣಿಯಪ್ಪ ಶ್ಯಾನುಭೋಗರು. ತಾಯಿ ಕಮಲಮ್ಮ. ಸಂಸ್ಕಾರವಂತ ಕುಟುಂಬದಲ್ಲಿ ಆರು ಜನ ಸಹೋದರರೊಂದಿಗೆ ಇವರ ಬಾಲ್ಯ, ಬದುಕು ಸಾಗಿತು. ಸುಸಂಸ್ಕೃತ ಹೆತ್ತವರು, ಒಳ್ಳೆಯ ಸಹೋದರರು, ಪುಟ್ಟ,  ಸುಂದರ ಮಲೆನಾಡಿನ  ಊರು, ಕಾಡುಮೇಡು ಸುತ್ತಿದ ಸ್ವಚ್ಛಂದ ಸರಳ ಬದುಕು ಕೊಟ್ಟ ಬಾಲ್ಯ ಇವರ ಉತ್ತಮ ಬದುಕಿಗೆ ಬುನಾದಿಯಾಯ್ತು.

ವಿಜಯಲಕ್ಷ್ಮಿ ಅವರ ಪಿಯೂಸಿವರೆಗಿನ ವಿದ್ಯಾಭ್ಯಾಸ ನರಸಿಂಹರಾಜಪುರದಲ್ಲೇ ನಡೆಯಿತು.  ಭಾರತ_ ಚೈನಾ  ಯುದ್ಧ ನಡೆದಾಗ ಇವರಿಗೆ 10ನೇ ವಯಸ್ಸು.  ಆಗ, ರೇಡಿಯೋದಲ್ಲೊಮ್ಮೆ ನೆಹರೂ ಅವರ ಭಾಷಣ ಕೇಳಿದಾಗ ಹಿಂದಿ ಭಾಷೆ ಅರ್ಥವಾಗಿರಲಿಲ್ಲ. ಆದರೆ, ಆ ಜೋಶ್ ,   ದೇಶದ ಯುದ್ಧಕಾಲಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಅನಿಸಿಕೆ ಇವರಲ್ಲಿ  ಹುಟ್ಟಿತ್ತು. ಜೊತೆಗೆ, ದೇಶಭಕ್ತ ಕಾರ್ಯಕರ್ತರು ವಾಹನದಲ್ಲಿ, "ದೇಶಕ್ಕಾಗಿ ದೇಣಿಗೆ ನೀಡಿ, ದೇಶದ ಸಂಕಷ್ಟಕ್ಕೆ ಅಳಿಲುಸೇವೆ ಮಾಡಿ..." ಎನ್ನುವ ಘೋಷವಾಕ್ಯಗಳನ್ನು ಡಂಗೂರಿಸುತ್ತಾ ಊರಿನಲ್ಲಿದ್ದ ಒಂದೇ ಮುಖ್ಯರಸ್ತೆಯಲ್ಲಿ ಹೋಗುವಾಗ ಅದನ್ನು ಕೇಳುತ್ತಾ ಮೈತುಂಬಾ ದೇಶಭಕ್ತಿ ಹೊತ್ತಿತು.  ಕೊಡಲು ಏನಿರಲಿಲ್ಲ, ಊರಿನಲ್ಲಿ ಎಲ್ಲರದೂ ಆರ್ಥಿಕವಾಗಿ 'ಇಷ್ಟೇ' ಎನ್ನುವ ತತ್ವಾರದ ಬದುಕು. ಆಗ ಹೊಳೆದದ್ದು ಒಂದು ಕವಿತೆ, ಅದೇ ಮೊದಲ ಕವಿತೆ, "ಬಂದೆ ಶಾಂತಿದೂತ, ಬಂದೇ ಶಾಂತಿದೂತ, ನಿನ್ನ ಕರೆಯ ಕೇಳಿ ನಾ ಬಂದೆ..." ಎಂದು ಮೂರು ಪ್ಯಾರಾಗಳ ಕವಿತೆ ಬರೆದು ವಾಹನದ ದೇಣಿಗೆ ಬಾಕ್ಸಿಗೆ ಹಾಕಿದ್ದರು. ಇವರ ದೃಷ್ಟಿಯಲ್ಲಿ, ' ನೆಹರೂಗೆ ಅದು ತಲುಪತ್ತೆ, ರೇಡಿಯೋದಲ್ಲಿ ಓದುತ್ತಾರೆ. ಅದರಿಂದ ಪ್ರೇರಿತರಾದ ಸಿಪಾಯಿಗಳು ನಾ ಮುಂದೆ, ತಾ ಮುಂದೆ ಎಂದು ಯುದ್ಧಕ್ಕೆ ನುಗ್ಗಿ ಶತೃಗಳ ಸದೆಬಡಿಯುತ್ತಾರೆ. ದೇಶ ವಿಜಯಿಯಾಗುತ್ತೆ  ಅದೇ ನನ್ನ ಕಾಣಿಕೆ ದೇಶಕ್ಕೆ ' ಎಂಬ ಭಾವ ಬಾಲಕಿಯಾಗಿದ್ದ ಇವರಲ್ಲಿತ್ತು.

ವಿಜಯಲಕ್ಷ್ಮಿ ಅವರು ಪ್ರೌಢಶಾಲೆಗೆ ಬಂದ ಮೇಲೆ ಶಾಲೆಯ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲಾರಂಭಿಸಿ ಉತ್ತಮ ಚರ್ಚಾಪಟು ಎಂದು ಗುರುತಿಸಿಕೊಂಡರು.  ಪ್ರತಿವರ್ಷ ಶಾಲೆಯಲ್ಲಿ ವಾರ್ಷಿಕ ಅಂತರಜಿಲ್ಲಾ ಚರ್ಚಾಸ್ಪರ್ಧೆ ಬಹಳ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ಮೂರುವರ್ಷವೂ ಭಾಗವಹಿಸಿ ಶಾಲೆಗೆ ಷೀಲ್ಡ್ ಹಾಗೂ ವೈಯ್ಯಕ್ತಿಕ ಬಹುಮಾನಗಳನ್ನು ಪಡೆದರು. ಒಂದು ವರ್ಷ ಹೆಸರಾಂತ ಸಾಹಿತಿ ಅ.ನ.ಕೃ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವದಿಸಿದ್ದರು. ಹಾಗೇ ಶಿವಮೊಗ್ಗ,  ಭದ್ರಾವತಿ,  ಸಾಗರ,  ಚಿಕ್ಕಮಗಳೂರು ಇತ್ಯಾದಿ ಬೇರೆ ಊರುಗಳಲ್ಲಿ ನಡೆಯುವ ಸ್ಪರ್ಧೆಗಳಿಗೂ ಇವರೇ  ಮೂರುವರ್ಷ ಸತತವಾಗಿ ಶಾಲೆಯಿಂದ ಆಯ್ಕೆಯಾಗಿದ್ದರು. 

ಮುಂದೆ ಕಾಲೇಜು ವಿದ್ಯಾಭ್ಯಾಸ ಬಿ.ಎ. ಪದವಿ ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಮುಂದುವರೆಯಿತು. ಬಿ.ಎ.ಅಂತಿಮ ವರ್ಷದಲ್ಲಿರುವಾಗ (1973) 
 'ಕನ್ನಡ ಸಾಹಿತ್ಯ ಪರಿಷತ್ತು' ಶಿವಮೊಗ್ಗೆಯ ಶಾಖೆ  ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ "ಅಂತರ ಜಿಲ್ಲಾ ಕಾಲೇಜು ಪ್ರಬಂಧ ಸ್ಪರ್ಧೆ"ಯಲ್ಲಿ ಪ್ರಥಮ ಬಹುಮಾನ ಪಡೆದರು. ಅಂದಿನ ಅಧ್ಯಕ್ಷತೆ ವಹಿಸಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಂದ ಮೆಚ್ಚುಗೆ ನುಡಿಯೊಡನೆ ಬಹುಮಾನ ಸ್ವೀಕರಿಸಿದ್ದರು. 

ವಿದ್ಯಾಭ್ಯಾಸದ ನಂತರ ಮುಂದೆ  ಇವರದೇ ಊರಿನ  ಸುಶಿಕ್ಷಿತ  ಆರಗ ಮನೆತನದ ಶ್ರೀಯುತ ಮಹಾಸೇನರಾವ್ ಅವರ ಸೊಸೆಯಾಗಿ, ಮೈಕೋ ಕಂಪೆನಿಯ ಇಂಜಿನಿಯರ್ ಕುಮಾರಸ್ವಾಮಿಯವರ ಪತ್ನಿಯಾಗಿ ಇವರ ವೈವಾಹಿಕ ಜೀವನ ಆರಂಭವಾಯಿತು. ಲಕ್ಷ್ಮಿ - ಸರಸ್ವತಿಯರಂತೆ ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೂವರು ಮೊಮ್ಮಕ್ಕಳ ಸಂತೃಪ್ತ ಗೃಹಿಣಿಯಾಗಿದ್ದಾರೆ. 

ವಿಜಯಲಕ್ಷ್ಮೀ ಅವರು ಸುಮಾರು  17 ವರ್ಷದ ಹಿಂದೆಯಷ್ಟೇ ಬರವಣಿಗೆ ಆರಂಭಿಸಿದರು. ಜನಪ್ರಿಯ ಪತ್ರಿಕೆಗಳಾದ ವಿಜಯ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ತುಷಾರ, ಮಂಗಳ ಪತ್ರಿಕೆಗಳಿಗೆ ಕಥೆ, ಕವನ, ಮಹಿಳಾಲೇಖನ, ಪ್ರವಾಸ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಕನ್ನಡ ರಾಜ್ಯೋತ್ಸವದ ಸುವರ್ಣಮಹೋತ್ಸವ ವರ್ಷದಲ್ಲಿ ಬಹಳಷ್ಟು ವೇದಿಕೆಗಳ ಹತ್ತಿಪ್ಪತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದರು.  ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2 ವರ್ಷ ತಿಂಗಳಿಗೊಂದರಂತೆ ಮಹಿಳಾ ವಿಜಯದ ಮುಖ್ಯ ಲೇಖನ ಬರೆದಿದ್ದು ಇವರ ಬರಹವನ್ನು ಗಟ್ಟಿಗೊಳಿಸಿತು. ಹೀಗೆ ಎಲ್ಲ ಪತ್ರಿಕೆಗಳಿಗೂ ಬರೆದ ಪ್ರವಾಸ ಲೇಖನಗಳ ಸಂಖ್ಯೆ ಸಾವಿರಕ್ಕೂ ಮೀರಿದೆ. ಐವತ್ತರಷ್ಟು‌ ಸಣ್ಣ ಕಥೆಗಳೂ ಪ್ರಕಟವಾಗಿವೆ. “ಮಂಗಳ" ವಾರಪತ್ರಿಕೆಯಲ್ಲಿ ಮೂರು  ವರ್ಷಗಳು  ಬೇರೆ ಬೇರೆ ದೇಶಗಳ "ಪ್ರವಾಸ ಕಥನ" ನಿರಂತರ ಧಾರಾವಾಹಿಯಾಗಿ ಪ್ರಕಟವಾಯಿತು.

ಮುಂದೆ, ಈ ಬರಹಗಳೆಲ್ಲಾ 'ಅಣಕು ರಾಮನಾಥ್' ಮತ್ತು ಮಂಗಳ ವಾರಪತ್ರಿಕೆಯ ಸಂಪಾದಕರಾಗಿದ್ದ 'ಎನ್ನೇಬಿ' ಅವರ ಸಹಕಾರದಲ್ಲಿ ಪುಸ್ತಕಗಳಾಗಿ ಹೊರಬಂದಿವೆ.  'ಚಿತ್ತ ತೂಗಿದಾಗ' ಮತ್ತು `ಹೂಬಿಸಿಲು'  ಕವನ ಸಂಕಲನಗಳು.  'ಪರಂಪರೆಯ ನೆರಳಲ್ಲಿ' ಲೇಖನಮಾಲೆ. 'ಚಿಲಿಪಿಲಿ ಗೂಡು', ಮಕ್ಕಳ ಕವಿತೆ,  'ಪುಟ್ಟ ಪುಟ್ಟಿಗೆ ಪುಟ್ಟ ಹಣತೆ'... ಮಕ್ಕಳ ಕಾದಂಬರಿ, (ದಿನಕ್ಕೊಂದು ಕಥೆಯ ತರಹ....). 'ಹನಿಂತರದು ನೀರಲ್ಲ', `ಕ್ಷಮೆಯಿರಲಿ ತಾಯಿ ತುಂಗೆ' , 'ಸುರಗಿ ತೊರೆ'   ಸಾಮಾಜಿಕ ಕಾದಂಬರಿಗಳು. ‘ಪ್ರೇಮ ತಪಸ್ವಿನಿ ಚಿತ್ರಾಂಗದೆ' ಪೌರಾಣಿಕ ಕಾದಂಬರಿ. ‘ಬಂಡೆ ಬಿರುಕಿನ ಹೂ',  `ಅಂಗಳಕೆ ಬಂದ ಹಕ್ಕಿ', `ಮೌನ ಕಣಿವೆಯಲ್ಲಿ' , 'ಮುಗಿಲು ಮಂಜಿನ ನಡುವೆ' ಕಥಾಸಂಕಲನಗಳು. ‘ಸಾಗರದಾಚೆಯ ನಾಡಿನಲಿ' , 'ತಿರೆಯ ತೀರಗಳಲ್ಲಿ', 'ನಕ್ಷತ್ರಗಳ‌ ನೆಲದಲ್ಲಿ' ಇವು  ಯೂರೋಪ್ , ಚೈನಾ, ಅಲಾಸ್ಕಾ,  ಜಪಾನ್,  ಥಾಯ್ಲೆಂಡ್ ಮತ್ತು ಕಾಂಬೋಡಿಯಾ  ಪ್ರವಾಸ ಕಥನದ 3 ಪುಸ್ತಕಗಳು.  ಹೀಗೆ ಇದುವರೆವಿಗೂ  ಇವರ ಹದಿನಾರು 16   ಪುಸ್ತಕಗಳು ಪ್ರಕಟವಾಗಿವೆ.

ವಿಜಯಲಕ್ಷ್ಮೀ ಅವರಿಗೆ 3 ಬಾರಿ, ಕನ್ನಡ ಸಂಘರ್ಷ ಸಮಿತಿಯ 'ಗೋವಿಂದ ಪೈ' ರಾಜ್ಯಮಟ್ಟದ ಕವನಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ: 2 ಬಾರಿ 'ರಾಜ್ಯಮಟ್ಟದ ಅನುಪಮಾ ನಿರಂಜನ' ಕಥಾಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಪ್ರಥಮ ಬಹುಮಾನಗಳು ಸಂದಿವೆ. 2014 ರಲ್ಲಿ, `'ಬಂಡೆ ಬಿರುಕಿನ ಹೂ' ಕಥಾಸಂಕಲನಕ್ಕೆ `ಕರ್ನಾಟಕ ಲೇಖಕಿಯರ ಸಂಘ'ದ   'ತ್ರಿವೇಣಿ ದತ್ತಿ ಪ್ರಶಸ್ತಿ' ಸಂದಿದೆ.  2015 ರಲ್ಲಿ 'ನಿಂತರದು ನೀರಲ್ಲ' ಕಾದಂಬರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪುಸ್ತಕ ಪ್ರಶಸ್ತಿ ಸಂದಿದೆ. ಕರ್ಮವೀರ ಪತ್ರಿಕೆಯ 2016ರ ದೀಪಾವಳಿ ಕಥಾಸ್ಪರ್ಧೆಯಲ್ಲಿ `ಹಿಮ ಸುರಿದ ಬೆಳಕು' ಕತೆಗೆ ಪ್ರಥಮ ಬಹುಮಾನ ಸಂದಿದೆ. 2015 ರಲ್ಲಿ, `ಪ್ರೇಮ ತಪಸ್ವಿನಿ ಚಿತ್ರಾಂಗದೆ' ಪೌರಾಣಿಕ ಕಾದಂಬರಿಗೆ `ಕನ್ನಡ ಸಾಹಿತ್ಯ ಪರಿಷತ್ತಿನ' `ಗುಬ್ಬಿ ಸೋಲೂರು ಮುರುಗಾರಾಧ್ಯ ಪ್ರಶಸ್ತಿ'  ಸಂದಿದೆ.  2021 ರಲ್ಲಿ `ಕ್ಷಮೆಯಿರಲಿ ತಾಯಿ ತುಂಗೆ' ಕಾದಂಬರಿಗೆ ಧಾರವಾಡ 'ಕರ್ನಾಟಕ ವಿದ್ಯಾವರ್ಧಕ ಸಂಘದ'  `ಮಾತೋಶ್ರೀ ರತ್ನಮ್ಮ ಹೆಗ್ಗಡೆ ಕಾದಂಬರಿ ಪ್ರಶಸ್ತಿ' ಸಂದಿದೆ. 'ಸಾಗರದಾಚೆಯ ನಾಡಿನಲಿ'  ಪ್ರವಾಸ ಕಥನ ಪುಸ್ತಕಕ್ಕೆ  'ಲೇಖಿಕಾ ಸಾಹಿತ್ಯ ವೇದಿಕೆ'ಯ 2020ರ ಪ್ರಶಸ್ತಿ ಸಂದಿದೆ. 'ತಿರೆಯ ತೀರಗಳಲ್ಲಿ' ಪ್ರವಾಸ ಕಥನ ಪುಸ್ತಕಕ್ಕೆ 2022 ನೇ ವರ್ಷದ ಶಿವಮೊಗ್ಗಕ್ಕೆಯ 'ಕರ್ನಾಟಕ ಸಂಘದ ಪುಸ್ತಕ ಪ್ರಶಸ್ತಿ'  ಸಂದಿದೆ. 'ನಕ್ಷತ್ರಗಳ ನೆಲದಲ್ಲಿ' ಚೈನಾ ಅಲಾಸ್ಕಾ ಪ್ರವಾಸ ಕಥನ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ 2022  ನೇ ಸಾಲಿನ ವರ್ಷದ 'ಪುಸ್ತಕ ಪ್ರಶಸ್ತಿ' ಸಂದಿದೆ. 2024 ವರ್ಷ ಬಿ.ಎಂ.ಶ್ರೀ. ಪ್ರತಿಷ್ಠಾನ ಏರ್ಪಡಿಸಿದ್ದ "ಪ್ರವಾಸದ ರೋಚಕ ಅನುಭವಗಳು" ಸ್ಪರ್ಧೆಯಲ್ಲಿ ದತ್ತಿ ಪ್ರಶಸ್ತಿ ಸಂದಿದೆ. 

ಆತ್ಮೀಯರಾದ ಎಸ್.ಪಿ. ವಿಜಯಲಕ್ಷ್ಮಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Vijaya Sp 🌷🙏🌷S p Vijayalakshmi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ