ಎಂ.ವಿ.ನಾಗರಾಜರಾವ್
ಎಂ.ವಿ.ನಾಗರಾಜರಾವ್
ಎಂ.ವಿ.ನಾಗರಾಜರಾವ್ ಹೆಸರಾಂತ ಕತೆಗಾರರು ಮತ್ತು ಅನುವಾದಕರು. ಬಹಳ ಕಾಲದಿಂದ ಅವರ ಕಥೆ, ಕಾದಂಬರಿಗಳನ್ನು ನಾವು ಸುಧಾ, ತರಂಗ, ಪ್ರಜಾಮತ, ಮಲ್ಲಿಗೆ ಮೊದಲಾದ ನಿಯತಕಾಲಿಕಗಳಲ್ಲಿ ಓದಿ ಬೆಳೆದವರು.
ಎಂ.ವಿ. ನಾಗರಾಜ ರಾವ್ 1941ರ ವರ್ಷ
ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ಅವರು ಕನ್ನಡ ಮತ್ತು ಹಿ೦ದಿ ಸ್ನಾತಕೋತ್ತರ ಪದವೀಧರರು. ಇದಲ್ಲದೆ ಬಿ.ಇಡಿ, ಸಾಹಿತ್ಯರತ್ನ ಪದವಿಗಳನ್ನೂ ಗಳಿಸಿದರು.
37 ವರ್ಷಗಳ ಕಾಲ ಶಿಕ್ಷಣಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ, ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದರು.
ಎಂ.ವಿ. ನಾಗರಾಜ ರಾವ್ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರಿಂದ ಹಿಂದಿ ಸೇವಾ ಪ್ರಶಂಸಾ ಪತ್ರ ಸಂದಿತ್ತು. ಆದರೂ ಕನ್ನಡದಲ್ಲಿ ಇವರಿಗೆ ಒಲವು. ನಾಗರಾಜರಾವ್ ಅವರು ಕತೆ, ಕಾದಂಬರಿ, ಹಿಂದಿ ಮತ್ತು ಇಂಗ್ಲಿಷ್‌ನಿಂದ ಭಾಷಾ೦ತರ ಹೀಗೆ 90ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ 100ಕ್ಕೂ ಹೆಚ್ಚು ಮಕ್ಕಳ ಕೃತಿ ಪ್ರಕಟಿಸಿದ್ದಾರೆ. ಜಗತ್‌ಪ್ರಸಿದ್ಧ ಲೇಖಕ ಜೇಮ್ಸ್ ಹ್ಯಾಡ್ಗಿ ಚೇಸ್ ಅವರ 27 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವ್ಯಾಕರಣ, ಪ್ರಬಂಧ ಸೇರಿದಂತೆ ಮಕ್ಕಳಿಗಾಗಿ 100ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಗರಾಜರಾವ್ ಅವರ “ಕಂಪನ" ಕಾದ೦ಬರಿ ಚಲನಚಿತ್ರವಾಗಿ ಪ್ರಸಿದ್ಧವಾಗಿದೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ 350ಕ್ಕೂ ಹೆಚ್ಚು ಲೇಖನಗಳು, 14 ಕಾದಂಬರಿ
ಗಳು ಧಾರಾವಾಹಿಯಾಗಿ ಪ್ರಕಟವಾಗಿವೆ.
ಸುರೇಶ್ ಸೋಮಪುರ ಅವರ 'ಅಘೋರಿಗಳ ನಡುವೆ', 'ಕಂಪನ', 'ನಾಲ್ಕನೆಯ ಆಯಾಮ', 'ಮಹಾಯೋಗಿನಿ' ಕಾದಂಬರಿಗಳನ್ನು
ಅನುವಾದಿಸಿದ್ದಾರೆ. ನಾಟಕ, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪುರಾಣಾಧಾರಿತ ಕೃತಿಗಳು ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದಾರೆ. ನೂಪುರ, ಪುನರ್‌ಮಿಲನ, ಲಕ್ಷ್ಮಣ ರೇಖೆ, ಗಾಡ್ ಫಾದರ್, ಶೃಂಗಾರ ಶಯ್ಯೆ, ಕಪ್ಪು ಗುಲಾಬಿ, ದೀಕ್ಷೆ ಇವರ ಇತರ ಕಾದಂಬರಿ / ಅನುವಾದಗಳಲ್ಲಿ ಸೇರಿವೆ. ಕಾಪಾಲಿಕರ ಕುರಿತಾದ ಅನುವಾದಿತ ಕಥಾ ಸಂಕಲನಗಳು, 2 ನಾಟಕ ಸಂಕಲನಗಳು, 100ಕ್ಕೂ ಹೆಚ್ವು ಮಕ್ಕಳ ಕೃತಿಗಳು, ಡಾ.ನರೇಂದ್ರ ಕೋಹಲಿಯವರ ರಾಮಾಯಣಾಧಾರಿತ 7 ಕಾದಂಬರಿಗಳು; ತೀನಂಶ್ರೀ, ದೇಜಗೌ, ಚದುರಂಗ, ಎಲ್.ಎಸ್.ಶೇಷಗಿರಿ ರಾವ್, ಮಾಸ್ಟರ್ ಹಿರಣ್ಣಯ್ಯ ಮೊದಲಾದ ಅನೇಕ ಹಿರಿಯರ ಕುರಿತು ಇವರು ಪುಸ್ತಕಗಳನ್ನು ಪ್ರಕಟಣೆ ಮಾಡಿದ್ದಾರೆ. "ಶೃಂಗಾರ ಪ್ರಕಾಶನ" ಸಂಸ್ಥೆ ಆರಂಭಿಸಿ. 352 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ ಇವರಿಗೆ ಸಂದಿತ್ತು.
ನಾಗರಾಜರಾವ್ ಅವರು ಐದು ಬಾರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ನಾಲ್ಕು ಬಾರಿ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಮೂರು ಬಾರಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದರು. ಎರಡು ಬಾರಿ ತುಮಕೂರು ಜಿಲ್ಲೆಯ ಪ್ರಾಚಾರ್ಯರ / ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ಎಂ.ವಿ.ನಾಗರಾಜ ರಾವ್ ಅವರ ಸೇವೆಗೆ ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಹಾಸನದಲ್ಲಿ ನಡೆದ 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರಿಗೆ ಸನ್ಮಾನ ಸಂದಿತ್ತು. ತುಮಕೂರು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತ್ತು.
ಹಿರಿಯರಾದ ಎಂ.ವಿ.ನಾಗರಾಜರಾವ್ ಅವರಿಗೆ ನಮನಗಳು.
Our Great writef M. V. Nagaraja Rao 🌷🙏🌷
ಕಾಮೆಂಟ್‌ಗಳು