ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಜಾತಾ ಅಕ್ಕಿ


 ಸುಜಾತಾ ಅಕ್ಕಿ 


ಡಾ. ಸುಜಾತಾ ಅಕ್ಕಿ ಅವರು ಕವಯತ್ರಿ, ನಾಟಕಕಾರ್ತಿ, ರಂಗತಜ್ಞೆ ಮತ್ತು ಜಾನಪದದಲ್ಲಿ ಅಪಾರ ಆಸಕ್ತರು. ಜಾನಪದದೊಂದಿಗೆ ಮಹಿಳಾ ಸಮನ್ವಯತೆಯನ್ನೂ ಸಂಯೋಜನೆಗೊಳಿಸುವ ನಾಟಕಕಾರ್ತಿಯಾಗಿ ಇವರ ಪ್ರಖ್ಯಾತಿಯಿದೆ. 

ಆಗಸ್ಟ್ 15, ಸುಜಾತಾ ಅವರ ಜನ್ಮದಿನ. ಇವರು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿಯ ಕೃಷಿಕ ದಂಪತಿ ಅಕ್ಕಿಕೊಟ್ರಪ್ಪ, ಅಕ್ಕಿಕೊಟ್ಟಮ್ಮ ಅವರ ಸುಪುತ್ರಿ.  ವೈವಾಹಿಕ ಜೀವನದಲ್ಲಿ ಇವರು ಮೈಸೂರಿನಲ್ಲಿ ನೆಲೆಸಿದ್ದಾರೆ. 

ಸುಜಾತಾ ಅಕ್ಕಿ ಅವರು ಚಿಕ್ಕಂದಿನಿಂದಲೂ ಅಮ್ಮ ಹಾಡುವ ಜನಪದ ಗೀತೆಗಳನ್ನು ಕೇಳುತ್ತಾ ಬೆಳೆದವರು. ಕನ್ನಡ, ಜಾನಪದ, ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, 'ಬಳ್ಳಾರಿ ಜಿಲ್ಲೆಯ
ರಂಗನಟಿಯರು' ಎಂಬ ಪ್ರೌಢಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಗಳಿಸಿದ್ದಾರೆ.

ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ಜನಪದ ಸಾಹಿತ್ಯ ಸುಜಾತಾ ಅವರ ಮೆಚ್ಚಿನ ವಿಷಯ. ದೊಡ್ಡಾಟದಲ್ಲಿ ಆಸಕ್ತಿ ಹೊಂದಿದ್ದು ‘ಜಾನಪದ ಜನ್ನೆಯರು' ತಂಡ ಕಟ್ಟಿ ಮಹಿಳೆಯರಿಗೆ ದೊಡ್ಡಾಟದ ರುಚಿ ಹತ್ತಿಸಿ ‘ಮಲೆಯಾಳ ಪೆಣ್‍ಕುಟ್ಟಿ' ಎಂಬ ದೊಡ್ಡಾಟಕ್ಕೂ ಇಳಿದರು. ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳಾ ಬೋಗಿಯ ಉದ್ಯೋಗಸ್ಥ ಮಹಿಳೆಯರೆಲ್ಲಾ ಕೂಡಿ ಇವರ ನೇತೃತ್ವದಲ್ಲಿ 'ಲೇಡೀಸ್ ಕಂಪಾರ್ಟ್‌ಮೆಂಟ್‌' ಎಂಬ ಬೀದಿ ನಾಟಕವನ್ನು ಮಂಡ್ಯ, ಮೈಸೂರಿನಲ್ಲಿ ಪ್ರದರ್ಶಿಸಿದ್ದು ಹೊಸ ಪ್ರಯೋಗವೆನಿಸಿದೆ.  ಮಂಡ್ಯ ರಮೇಶ್ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಚಾಮಚೆಲುವೆ'ಯ ರಚನೆ ಸುಜಾತಾ ಅಕ್ಕಿ ಅವರದ್ದು. ಹಲವು ಜನಪದ ವಿದ್ವಾಂಸರು ಸಂಗ್ರಹಿಸಿರುವ ಚಾಮುಂಡೇಶ್ವರಿ -ನಂಜುಂಡೇಶ್ವರರ ನಡುವಿನ ಪ್ರಣಯ ಪ್ರಸಂಗ, ಚಾಮುಂಡಿಯ ಬದುಕನ್ನು ಕುರಿತ ಮನೋರಂಜನಾತ್ಮಕ ಗೀತೆಗಳಿಂದ ಪ್ರೇರಿತರಾಗಿ ನಾಟಕರೂಪ ಕೊಟ್ಟಿದ್ದಾರೆ. ಸೋಲಿಗರ ಬಾಲೆ, ಇಕ್ಕದ ಮಾರಯ್ಯ ಕೊಡದ ಮಾರಿ, ಕಾಯಕದ ಸತ್ಯಕ್ಕ ಇವರ ಇತರ ಹೆಸರಾಂತ ನಾಟಕಗಳಲ್ಲಿ ಸೇರಿವೆ.  ಮಾದೇವಿ ಮತ್ತು ಇತರೆ ನಾಟಕಗಳು ಇವರ ಮತ್ತೊಂದು ಕೃತಿ. 

ಡಾ. ಸುಜಾತಾ ಅಕ್ಕಿ ನಾಟಕ ರಚನೆಯಲ್ಲಿ ಮಾತ್ರವಲ್ಲದೆ ಕವಯತ್ರಿಯಾಗಿಯೂ ಸಾಧನೆ ಮಾಡಿದ್ದಾರೆ. 'ಪುಟಕ್ಕಿಟ್ಟ ಕವನ' ಇವರ ಕವಿತಾ ಸಂಕಲನ. ಜನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಾರೆ. ಬಳ್ಳಾರಿ ಸುತ್ತಮುತ್ತ ಪ್ರಚಲಿತವಿರುವ ಜನಪದ ಗೀತೆಗಳನ್ನು ಸಂಗ್ರಹಿಸಿ 'ಸುರಿಗಿ ಸುವ್ವಾಲೆ' ಪುಸ್ತಕ ಸಂಪಾದಿಸಿದ್ದಾರೆ. ಬಂಡೆ ರಂಗನಾಥೇಶ್ವರ ಜಾತ್ರೆ (ಜಾನಪದೀಯ ಅಧ್ಯಯನ), ಸಾರಥಿ (ಬಯಲಾಟದ ಸಾರಥಿ), ಆಕೆ ಏನೂ!, ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ. ಆಧುನಿಕ ವೈಚಾರಿಕತೆಯನ್ನು ಪ್ರತಿಪಾದಿಸುವ ಇವರು, ಹಲವು ವಿಚಾರ ಸಂಕಿರಣ, ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಮಹಿಳಾ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಆಕಾಶವಾಣಿ, ಪತ್ರಿಕಾ ಮಾಧ್ಯಮಗಳಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು, ಇವರ 'ಮಾದೇವಿ ಮತ್ತು ಇತರ ನಾಟಕಗಳು' ಕೃತಿಗೆ ರಾಜ್ಯಮಟ್ಟದ ಏಕಾಂಕ ಸ್ಪರ್ಧೆಯಲ್ಲಿ ಪ್ರಶಸ್ತಿ ಸಂದಿದೆ. ‘ಸಾರಥಿ' ಕೃತಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಸಂದಿದೆ. 'ಅಕೆ ಏನೂ!’ ಕೃತಿಗೆ 'ಕಸಾಪ'ದ ಮಲ್ಲಿಕಾ ದತ್ತಿ ಪ್ರಶಸ್ತಿ ಸಂದಿದೆ. 'ಸೋಲಿಗರ ಬಾಲೆ' ಕೃತಿಗೆ ಮತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ ಸಂದಿದೆ.  ಇದಲ್ಲದೆ ಸಮಗ್ರ ಸಾಹಿತ್ಯ ಮತ್ತು ಸೇವೆ ಜಾತ್ಯಾತೀತ ಸಾಹಿತ್ಯ ರತ್ನ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ, ಮತ್ತು ಸುವರ್ಣ ಸಿರಿ ರತ್ನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಹುಮಾನಗಳು ಇವರಿಗೆ ಸಂದಿವೆ.

ಡಾ. ಸುಜಾತಾ ಅಕ್ಕಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Sujatha Akki 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ