ಆಶಾ ರಘು
ಆಶಾ ರಘು ಎಂಬ ನೆನಪು 🥲
ಬೆಳಗಾಗೆದ್ದು ಮೊಬೈಲ್ ಹಿಡಿದ ತಕ್ಷಣ 'ಆಶಾ ರಘು ಯಾಕೆ ಇಷ್ಟು ಆತುರಪಟ್ರಿ' ಎಂಬ ಪೋಸ್ಟ್ ಕಣ್ಣಿಗೆ ಬಿತ್ತು. ಅರ್ಥ ಆಗಲಿಲ್ಲ ಎನ್ನಲಾರೆ. ಅರ್ಥ ಮಾಡಿಕೊಳ್ಳಲಿಕ್ಕೆ ಮನ ಸಿದ್ಧವಾಗಿರಲಿಲ್ಲ. ಅನೇಕರು ಕಾಲ್ ಮಾಡಿದರು. ಮೆಸೇಜ್ ಮಾಡಿದರು. ನಾ ಯಾಕೆ ಇನ್ನೂ ಆ ಸುದ್ದಿ ಬರೆದಿಲ್ಲ ಎಂಬ ಧಾವಂತ ಈ ಕಾಳಜಿಗಳಲ್ಲಿ ಇತ್ತು ಅನಿಸುತ್ತೆ. ನನ್ನನ್ನು ಮೌನವಾಗಿಸಿದ ಸುದ್ದಿ ಇದು. ಆ ಮೌನವೇ ಹೊರಬರುವ ಅಗತ್ಯವಿತ್ತು.
ಆಶಾ ರಘು ನನ್ನ ಏನು ಅಂದುಕೊಂಡಿದ್ರೊ ಗೊತ್ತಿಲ್ಲ. "ನಿಮ್ಮ ವಿಳಾಸ ಕಳಿಸಿ ನನ್ನ ಕಾದಂಬರಿ ಗೌರವ ಪ್ರತಿ ಕಳಿಸಬೇಕು" ಅಂತ ಸೆಪ್ಟೆಂಬರ್ 11, 2022 ಮೆಸೇಜ್ ಮಾಡಿದ್ರು. ನನಗೋ ಸಂಕೋಚ. ನಾ ಏನೂ ಅಲ್ಲ. ನನಗ್ಯಾಕೆ ಗೌರವ ಬೆಂಗಳೂರಿಗೆ ಬಂದಾಗ ಕೊಳ್ತೇನೆ ಅಂದೆ. ಹಾಗೆಲ್ಲ ಹೇಳಬೇಡಿ ಅಂತ ಕಳಿಸಿಕೊಟ್ರು.
ಜೂನ್ 28, 2023ರಂದು ಅವರ ಮೆಸೇಜ್ ಹೀಗಿತ್ತು "ಸರ್, ಕನ್ನಡ ಸಾಹಿತಿಗಳ ವಿವರಗಳನ್ನೂ ಹಾಗೂ ಎಲ್ಲಾ ಕೃತಿಗಳ ವಿವರಗಳನ್ನೂ ಸಂಕ್ಷಿಪ್ತವಾಗಿ ಒಳಗೊಂಡ ಒಂದು ಬೃಹತ್ ಗ್ರಂಥ ಸಂಪಾದನೆಯನ್ನು ತಾವು ಯಾಕೆ ಮಾಡಬಾರದು? ಬಹುಶಃ 'ಕನ್ನಡ ಸಾಹಿತ್ಯ ಕೋಶ' ಎಂಬ ಹೆಸರಿನಲ್ಲಿ! ಈ ಕೆಲಸವನ್ನು ಯಾವುದೇ ಅಕಾಡೆಮಿಯಾಗಲೀ ಅಥವಾ ಪರಿಷತ್ತಾಗಲೀ ಮಾಡಿಲ್ಲ! ಬಹಳ ಹಿಂದೆ ನನಗೆ ಈ ಕನಸಿತ್ತು. ಎಸ್.ದಿವಾಕರ್ ಅವರಲ್ಲಿ ಹಂಚಿಕೊಂಡಿದ್ದೆ. ಅವರು ಒಳ್ಳೆಯ ಕಾರ್ಯವೆಂದು ಪ್ರೋತ್ಸಾಹಿಸಿದ್ದರು. ಆದರೆ ಕಾದಂಬರಿ ರಚನೆ ಬಿಟ್ಟು ಈ ಕೆಲಸಕ್ಕೆ ಒಂದೆರಡು ವರ್ಷ ವ್ಯಯಿಸಬೇಕಾಗಿಬರುತ್ತದೆ ಎಂಬ ಕಾರಣಕ್ಕೆ ನಾನೇ ಹಿಂದೇಟು ಹಾಕಿದೆ. ಆದರೆ, ತಮ್ಮ ದಿನನಿತ್ಯದ ಕಾರ್ಯವನ್ನು ನೋಡುತ್ತಾ ಈ ವಿಚಾರನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ತಾವು ಈಗಾಗಲೇ ಸಾಹಿತಿಗಳ ಬಹಳಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ... ಕೃತಿಗಳ ಕುರಿತೂ ಒಂದಷ್ಟು ಸಂಗ್ರಹ ಮಾಡಬೇಕಾಗುತ್ತದೆ. ಆದರೆ ಇದೇನೂ ನಿಮಗೆ ಸವಾಲಿನ ಕೆಲಸವಾಗಲಾರದು. ನೀವು ಮನಸ್ಸು ಮಾಡಿದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 'ಕನ್ನಡ ಸಾಹಿತ್ಯ ಬೃಹತ್ ಕೋಶ' ವೊಂದನ್ನು ಸಂಪಾದನೆ ಮಾಡಿದ ಕೀರ್ತಿ ನಿಮ್ಮದಾಗುತ್ತದೆ. ಗಂಭೀರವಾಗಿ ವಿಚಾರ ಮಾಡಿ ಸರ್." ಏನೂ ಹೇಳಲಾಗದೆ ಕೃತಜ್ಞತೆಗಳು ಅಂದೆ.
ಒಮ್ಮೆ ನನ್ನ ತಾಯಿಯ ಊರು ಆಂಧ್ರದ ಕುಪ್ಪಂ ಬಳಿಯ ಲಕ್ಷ್ಮೀಪುರಂ ಎಂದು ಬರೆದಾಗ, ತಮ್ಮ ತಾಯಿಯೂ ಅದೇ ಊರು ಎಂದು ಅವರು ಬರೆದಿದ್ದರು. ಆ ವಿಷಯವನ್ನು ಮೆಸೇಜಲ್ಲಿ ಪ್ರಸ್ತಾಪಿಸಿದಾಗ ಅವರು ಅದನ್ನು ಬೆಳೆಸಲಿಚ್ಛಿಸಲಿಲ್ಲ.
2025 ನವೆಂಬರ್ 15ರಂದು ಪುಸ್ತಕ ಸಂತೆಯಲ್ಲಿ ಮೊಟ್ಟ ಮೊದಲು ಎದುರು ಕಂಡಾಗ ತುಂಬ ಗಂಭೀರವದನೆಯಾಗಿದ್ದರು. ನಾನೇ ಮಾತನಾಡಿಸಿದಾಗ ಮಾತಾಡಿದರು. ಮಾರನೆ ದಿನ ಅವರ ಪುಸ್ತಕ ಮಳಿಗೆಗೆ ಹೋಗಿ ಅವರ ಆಂಡಾಳ್ ತಿರುಪ್ಪಾವೈ ಕೃತಿ ಕೊಂಡು ಆ ಕುರಿತು ಉತ್ಸಾಹ ತೋರಿದೆ. ಅದನ್ನು ಹೇಗೆ ಧನುರ್ಮಾಸದ ವೇಳೆ ಹೆಚ್ಚು ಜನರಿಗೆ ತಲುಪಿಸಬಹುದು ಎಂಬ ವಿಚಾರ ವಿನಿಮಯ ನಡೆಸಿದರು.
"ಬರಹ, ಪುಸ್ತಕ ಮಾರಾಟ, ಪ್ರಕಾಶನ ಎಲ್ಲ ಒಬ್ಬರೇ.... " ಎಂದೆ, ಕಾಳಜಿಯಿಂದ. "ಬದುಕು!" ಎಂದರು. ಹೀಗೆ ಹಲವು ಚಿತ್ರಗಳು ಕಣ್ಮುಂದೆ ಹೋದವು. ಅವರೊಡನೆ ಚಿತ್ರದಲ್ಲಿ ನಿಂತಾಗ ಫೋಟೊಗಾಗಿ ನಗುಮುಖ ಇದ್ದರೂ ಅವರಲ್ಲಿ ಏನೋ missing ಅನಿಸುತ್ತಿತ್ತು. ಅರಿವಾಗಲಿಲ್ಲ. ಈಗಲೂ ಅಷ್ಟೇ.
ಅವರು ಹೋಗಿದ್ದು ನನ್ನ ಮೌನಿಯಾಗಿಸಿದೆ. ಅವರ ಕುರಿತ ಹಿಂದಿನ ಬರಹಗಳ ವಿವರ ಮತ್ತೊಮ್ಮೆ ಇಲ್ಲಿದೆ:
ಆಶಾ ರಘು ಕನ್ನಡದ ಪ್ರಸಿದ್ಧ ಕಾದಂಬರಿಗಾರ್ತಿ.
1979ರ ಜೂನ್ 18, ಆಶಾ ರಘು ಅವರ ಜನ್ಮದಿನ. ತಂದೆ ಕೇಶವ ಅಯ್ಯಂಗಾರ್. ತಾಯಿ ಸುಲೋಚನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು.
ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ ಆಶಾ ಅವರು ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಮುಂದೆ ಇವರು ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಲವು ವರ್ಷಗಳಿಂದ ಪುಸ್ತಕ ಪ್ರಕಟಣೆ ಕ್ಷೇತ್ರದಲ್ಲಿದ್ದರು.
ಆಶಾ ರಘು ಅವರು 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು' ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದೆಯ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ.
ಆಶಾ ರಘು ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ, ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 'ಸಾಹಿತ್ಯಾಮೃತ ಸರಸ್ವತಿ' ಬಿರುದು ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಸರಳ ಆತ್ಮೀಯ ಸಹೃದಯರೂ, ಸಾಧಕರೂ ಆದ ಆಶಾ ರಘು 2026ರ ಜನವರಿ 9ರಂದು ಈ ಲೋಕವನ್ನಗಲಿದರು.
Respects to departed soul writer Asha Raghu 🌷🌷🌷

ಕಾಮೆಂಟ್‌ಗಳು