ನಾರಾಯಣ ರಾಯಚೂರ್
ನಾರಾಯಣ ರಾಯಚೂರ್
ನಾರಾಯಣ ರಾಯಚೂರ್ ರಂಗ ವಿಮರ್ಶಕರಾಗಿ, ರಂಗಕರ್ಮಿಯಾಗಿ, ಹವ್ಯಾಸಿ ಪತ್ರಕರ್ತರಾಗಿ ಮತ್ತು ಬಹುಮಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಬಾನುಲಿ, ಕಿರುತೆರೆ ಮತ್ತು ಚಲನಚಿತ್ರಲೋಕದಲ್ಲಿಯೂ ಹಲವು ಬಗೆಯಲ್ಲಿ ವ್ಯಾಪಿಸಿದ್ದಾರೆ.
ನಾರಾಯಣ ರಾಯಚೂರ್ ಅವರು 1957ರ ಜನವರಿ 10ರಂದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಅವರ ಓದು ನವಲಗುಂದದಲ್ಲಿ ಸಾಗಿ ಅರ್ಥಶಾಸ್ತ್ರದಲ್ಲಿ ಪದವಿ ಗಳಿಸಿದರು.
ನಾರಾಯಣ ರಾಯಚೂರ್ ಅವರು ಭಾರತೀಯ ರಿಸರ್ವ್‌ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ನಾರಾಯಣ ರಾಯಚೂರ್ ಅವರು 1980 ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಗಳಿಸಿದರು.. 1980 ರಿಂದ ಕನ್ನಡ ರಂಗಭೂಮಿ ಚಟುವಟಿಕೆ / ಚಳುವಳಿಯಲ್ಲಿ ಸಕ್ರಿಯ ಪಾತ್ರಧಾರಿಯಾದರು. ಅಭಿನಯ, ನಾಟಕ ರಚನೆ, ಅನುವಾದ, ನಿರ್ದೇಶನ, ರಂಗ-ಸಂಗೀತ ನಿರ್ದೇಶನ ಹಾಗೂ ರಂಗ - ವಿಮರ್ಶಾ ಕ್ಷೇತ್ರದಲ್ಲಿ ಕಾರ್ಯನಿರತರಾದರು. ಸೂತ್ರಧಾರ, ರಂಗಸಂಪದ, ಕಲಾಗಂಗೋತ್ರಿ , ಅಂತರಂಗ ಸೇರಿದಂತೆ ಅನೇಕಾನೇಕ ರಂಗ-ತಂಡಗಳ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾದರು. ಆಕಾಶವಾಣಿಗಾಗಿ ಶ್ರೀರಂಗ, ಲಂಕೇಶ, ಕಂಬಾರರ ನಾಟಕಗಳ ನಿರ್ದೇಶನ ಮಾಡಿದರು. ಅನೇಕ ಪ್ರಸಿದ್ಧ ಹಿಂದಿ ನಾಟಕಗಳ
ಅನುವಾದವನ್ನು ಕನ್ನಡಕ್ಕೆ ಮಾಡಿದರು.
ನಾರಾಯಣ ರಾಯಚೂರ್ ಅವರು ದೂರದರ್ಶನಕ್ಕಾಗಿ ಗಿರಡ್ಡಿ ಗೋವಿಂದರಾಜು ಅವರ 'ಹಂಗು' ಕಿರುಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಮಾಡಿದರು. ವೀಣಾ ಶಾಂತೇಶ್ವರ ಅವರ 'ನೆರಳು' ಕತೆಯ ಕಿರುತೆರೆಯ ಚಿತ್ರಕಥೆ ಬರೆದರು. ಅನಂತಮೂರ್ತಿ ಅವರ 'ಅವಸ್ಥೆ' ಕಾದಂಬರಿಯಾಧಾರಿತ ಚಿತ್ರದಲ್ಲಿ ಅಭಿನಯಿಸಿದರು. 'ಸಂತ ಶಿಶುನಾಳ
ಶರೀಫ' ಚಿತ್ರಕ್ಕೆ ಕಂಠದಾನ ಮಾಡಿದರು.
ನಾರಾಯಣ ರಾಯಚೂರ್ ಅವರು ಪ್ರಜಾಮತ, ಕನ್ನಡಪ್ರಭ, ಪ್ರಜಾವಾಣಿ, ವಾರಪತ್ರಿಕೆ, ಮಯೂರ, ಸುಧಾ, ಉದಯವಾಣಿ, ವಿಜಯಕರ್ನಾಟಕ ಮೊದಲಾದ ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ರಂಗಭೂಮಿ ಕುರಿತು ಲೇಖನ, ವ್ಯಕ್ತಿಚಿತ್ರ, ರಂಗ-ವಿಮರ್ಶೆ ಮೂಡಿಸಿದರು. ಸುಮಾರು 1000 ರಂಗಪ್ರಯೋಗಗಳ ದಾಖಲೆ ವಿಮರ್ಶೆ ಮಾಡಿದರು. ಸುಮಾರು 600ಕ್ಕೂ ಹೆಚ್ಚು ವ್ಯಕ್ತಿಚಿತ್ರ, ರಂಗ-ಲೇಖನಗಳನ್ನು ಬರೆದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ 200 ಕ್ಕೂ ಹೆಚ್ಚುರಂಗಪ್ರಯೋಗಗಳ ವಿಮರ್ಶೆ ಬರೆದರು. 'ಬಿಸಿ' ನಾಟಕ ಸಂಪುಟದ (1600 ಪುಟ) ಸಂಪಾದಕತ್ವ ನಿರ್ವಹಿಸಿದರು.
ನಾರಾಯಣ ರಾಯಚೂರ್ ಅವರು ಹಾಸ್ಯ ಹನಿಗವನಗಳನ್ನೂ ಬರೆದಿದ್ದಾರೆ. ವಿಸ್ಮಯನಗರಿ ಹಾಸ್ಯ, ಮೊನಚು, ವಾರ್ತಾವಿಸ್ಮಯದ ಅಂಕಣ ಮೂಡಿಸಿದ್ದಾರೆ. ವಾರಪತ್ರಿಕೆಯಲ್ಲಿ ಉತ್ತರಕಾಂಡ' ಪ್ರಶ್ನೋತ್ತರ ಅಂಕಣ ಮಾಡಿದ್ದಾರೆ. ಇವರಿಗೆ ಕ್ವಿಜ್ ಕಾರ್ಯಕ್ರಮಗಳ ಲೇಖಕ/ನಿರ್ವಾಹಕರಾಗಿ, ಕ್ವಿಜ್ ಮಾಸ್ಟರ್ ಆಗಿ ಅನುಭವವಿದೆ. 18ಕ್ಕೂ ಹೆಚ್ಚುವರ್ಷ ಸತತವಾಗಿ "ಮಯೂರ' ದಲ್ಲಿ ಆಟ-ಪಾಠ (ಕ್ವಿಜ್-ಅಂಕಣ) ಮೂಡಿಸಿದ್ದಾರೆ.10 ವರ್ಷದಿಂದ "ನಮ್ಮ ಬೆಂಗಳೂರು' ರಸಪ್ರಶ್ನೆ ಉದಯವಾಣಿಯಲ್ಲಿ ಮೂಡಿಬಂದಿದೆ. 3 ವರ್ಷದಿಂದ 'ಪುಸ್ತಕ ಪ್ರಶ್ನೆ' ರಸಪ್ರಶ್ನೆ ಉದಯವಾಣಿಯಲ್ಲಿ ಬಂದಿದೆ. 4 ವರ್ಷದಿಂದ ವಿಜಯಕರ್ನಾಟಕದಲ್ಲಿ “ಕರ್ನಾಟಕ ಕ್ವಿಜ್ ಪ್ರತಿದಿನ 5 ಪ್ರಶ್ನೆಯಂತೆ 1000ದಿನ ಬಂದಿದೆ
ನಾರಾಯಣ ರಾಯಚೂರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2011 ರಲ್ಲಿ) ಲಭಿಸಿದೆ. ಹಾಸ್ಯಬ್ರಹ್ಮ ಟ್ರಸ್ಟ್‌ನಿಂದ ವೈಎನ್ಕೆ ಪ್ರಶಸ್ತಿ ಲಭಿಸಿದೆ.
ಕ್ರಿಯಾಶೀಲ ನಾರಾಯಣ ರಾಯಚೂರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Narayan Raichur Sir 🌷🌷🌷

ಕಾಮೆಂಟ್‌ಗಳು