ಅನು ಬೆಳ್ಳೆ
ಅನು ಬೆಳ್ಳೆ
ರಾಘವೇಂದ್ರ ಬಿ. ರಾವ್ ಅವರು 'ಅನು ಬೆಳ್ಳೆ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು.
ಜನವರಿ 16, ರಾಘವೇಂದ್ರ ರಾವ್ ಅವರ ಜನ್ಮದಿನ. ಇವರ ಮೂಲಸ್ಥಳ ಉಡುಪಿ ಜಿಲ್ಲೆಯ ಬೆಳ್ಳೆ (ಪಾಜಕ ಕ್ಷೇತ್ರ ಆಚಾರ್ಯ ಮಧ್ವರ ಜನ್ಮಸ್ಥಳ). ವಾಣಿಜ್ಯ ಶಾಸ್ತ್ರ ಮತ್ತು ಕನ್ನಡ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್‍ನಲ್ಲಿ ವಾಸವಾಗಿದ್ದಾರೆ.
ರಾಘವೇಂದ್ರ ರಾವ್ ವೃತ್ತಿಯಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು. ಸಣ್ಣ ಕಥೆ ಮತ್ತು ಕಾದಂಬರಿಗಳು ಇವರ ಆಸಕ್ತಿಯ ಕ್ಷೇತ್ರ. ಈಗಾಗಲೇ 68 ಕೃತಿಗಳನ್ನು ರಚಿಸಿರುವ ಇವರ ಕಥೆ ಕಾದಂಬರಿಗಳು ಬಹುತೇಕ ಕನ್ನಡದ ಎಲ್ಲಾ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಿದೆ. ಇವರ ಮೊದಲ ಕಾದಂಬರಿ 'ಮುರಳಿಯ ನಾದವ ಕೇಳಿ' ತರಂಗ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಬಳಿಕ ಸುಧಾ, ಕರ್ಮವೀರ, ಮಂಗಳ, ಉದಯವಾಣಿ, ಕನ್ನಡ ಪ್ರಭ, ಕಸ್ತೂರಿ ಪತ್ರಿಕೆಗಳಲ್ಲಿ ಇವರ ಧಾರಾವಾಹಿಗಳು ಪ್ರಕಟಗೊಂಡವು. ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟಗೊಂಡಿವೆ. ಮೊದಲ ಕಥೆ 'ವಿಧಿ' ಯಿಂದ ಹಿಡಿದು ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿದ್ದಾರೆ. 'ಒಲವಿನ ಗೆಳೆಯನೆ ನೀನೇ' ಇವರ ಮೊದಲ ಕಥಾಸಂಕಲನ. ಆ ಬಳಿಕ ಸುಳಿಗಾಳಿ, ನಾಡಕೋವಿ, ಬಿಳಿ ಕಾಗೆ, ಕೊಲೆಗಾರ, ಭೂತದ ಕೋಳಿ, ಕಥೆ ಇದಲ್ಲ!, ತೂಗು ಸೇತುವೆ, ಮನದ ಗೋಡೆ ಬರಹ, ಸದಾ ನಿನ್ನ ಕಣ್ಣಲಿ, ಸುಡುಗಾಡ ಕಾಯ, ಅಂಗಡಿ, ಗುಬ್ಬಚ್ಚಿ ಗೂಡು, ಬೀಗ, ಹಾಗೂ ಸಿಗದವರು ಕಥಾಸಂಕಲನಗಳು ಪ್ರಕಟಗೊಂಡಿವೆ. ಬಣ್ಣದ ಕುಂಚ, ರಾಣಿ ಜೇನು, ನಕ್ಷತ್ರ ಬಳ್ಳಿ, ರಣಹದ್ದು, ವರ್ಣ ಬಿಂದು, ರಾಗದೀಪ, ತೂಗುದೀಪ, ಹಾವಿನ ಮನೆ, ಲಾಂದ್ರದ ಬೆಳಕು, ರಣರಂಗ, ಚಕ್ರವ್ಯೂಹ, ಬ್ಲ್ಯಾಕ್ ಕಾಫಿ, ನಯನ ನಕ್ಷತ್ರ ಮುಂತಾದ ಪತ್ತೇದಾರಿ ಕಾದಂಬರಿಗಳು; ಮನಸ್ವಿತಾ, ಹೂವು ಚೆಲುವೆಲ್ಲಾ, ನೀಲಿ ಬಾನಿನ ನಕ್ಷತ್ರ, ಜಾಡು, ನಗುವ ನಯನ ಮಧುರ ಮೌನ, ಪಾರಿವಾಳ, ಹೇಮಂತದ ರಶ್ಮಿ, ನಗು ಎಂದಿದೆ ಮಂಜಿನ ಬಿಂದು, ಕುಡ್ಪಲ್ ಭೂತ, ಪತ್ಮಂದೆ ಮುಂತಾದ ಸಾಮಾಜಿಕ ಕಾದಂಬರಿಗಳು ಪ್ರಕಟಗೊಂಡಿವೆ. ಸುಧಾ ಪತ್ರಿಕೆಗೆ ಫೋಟೋ ಕಾಮಿಕ್ಸ್ ಮಾಡುವುದರೊಂದಿಗೆ ದೃಶ್ಯ ಮಾಧ್ಯಮದಲ್ಲೂ ಗುರುತಿಸಿಕೊಂಡಿದ್ದಾರೆ.
ರಾಘವೇಂದ್ರ ರಾವ್ ಅವರಿಗೆ ಎರಡು ಟಿವಿ ಧಾರಾವಾಹಿಗಳಿಗೂ ಸಂಭಾಷಣೆ ಬರೆದ ಅನುಭವವಿದೆ. 'ರಾಗದೀಪ' ಕಾದಂಬರಿ 'ಗೌತಮಿ ನಿವಾಸ' ಹೆಸರಿನಲ್ಲಿ ಚಲನಚಿತ್ರವಾಗಿದೆ. ಸದ್ಯ ಕನ್ನಡ ನಾಟಕ ಹಾಗೂ ಪತ್ತೇದಾರಿ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅನು ಬೆಳ್ಳೆ ಕಾವ್ಯನಾಮವುಳ್ಳ ಸಾಧಕರಾದ ರಾಘವೇಂದ್ರ ಬಿ. ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Raghavendra B Rao 🌷🌷🌷

ಕಾಮೆಂಟ್‌ಗಳು