ಬುಧವಾರ, ಆಗಸ್ಟ್ 28, 2013

ಅನಂತದೆಡೆಗೆ

ಅನಂತದೆಡೆಗೆ

ಚಂದನ ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ 2300ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿ ಗಿನ್ನೆಸ್ ದಾಖಲೆಯನ್ನೊಳಗೊಂಡಂತೆ ಹಲವು ದಾಖಲೆಗಳನ್ನು ಸಾಧಿಸಿರುವ ‘ಥಟ್ ಅಂತ ಹೇಳಿ!’ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಡಾ. ನಾ. ಸೋಮೇಶ್ವರ ಅವರ ಪುಸ್ತಕ ‘ಅನಂತದೆಡೆಗೆ’.  ಇದು ಶೀರ್ಷಿಕೆಯಲ್ಲಿ ಹೇಳುವಂತೆ ‘ಕಥೆಗಳ ಮೂಲಕ ಅನಂತ ಚೇತನದೆಡೆಗೆ...’ ಕೈ ಹಿಡಿದು ನಡೆಸುವ ಪ್ರಯತ್ನ.

ಈ ಪುಸ್ತಕದಲ್ಲಿರುವ 50 ಪುಟಾಣಿ ಕಥೆಗಳು ಮನೋಲ್ಲಾಸಕಾರವಾಗಿಯೂ, ಚಿಂತನೆಗೆ ಪ್ರೇರಕವಾಗಿಯೂ ಇರುವುದರ ಜೊತೆಗೆ ನಾ. ಸೋಮೇಶ್ವರರ ಆತ್ಮಾವಲೋಕನದ ಹೊಳಹುಗಳನ್ನೂ ತೋರುತ್ತದೆ.  ಮಕ್ಕಳಿಂದ ಹಿರಿಯರವರೆಗೆ ಎಲ್ಲರನ್ನೂ ಆಕರ್ಷಿಸುವಂತಿದೆ.  ಈ ಪುಸ್ತಕದ ಪ್ರಾರಂಭದಲ್ಲಿ ಸೋಮೇಶ್ವರರು ಪಂಚತಂತ್ರದಲ್ಲಿ ವಿಷ್ಣುಶರ್ಮರು ಬಳಸಿದ ಕಥಾ ತಂತ್ರ ಮಾರ್ಗವನ್ನೇ ಅನುಸರಿಸಬೇಕು ಎನ್ನುವ ಉದ್ದೇಶದಿಂದ ಈ ಕಥಾಮಾಲಿಕೆಯನ್ನು ಬರೆಯಲು ಪ್ರಾರಂಭಿಸಿದ್ದಾಗಿ ಹೇಳಿದ್ದಾರಲ್ಲದೆ ಪಂಚತಂತ್ರದ ಔಚಿತ್ಯಗಳನ್ನೂ ಮನೋಜ್ಞವಾಗಿ ಮತ್ತು ಕಥಾನಕವಾಗಿ ನೆನಪು ಮಾಡಿಕೊಟ್ಟಿದ್ದಾರೆ.

ಈ ಪುಸ್ತಕದ ಬೆನ್ನುಡಿಯಲ್ಲಿರುವ ಒಂದು ಪುಟಾಣಿ ಕಥೆ ಮತ್ತು ಅವಲೋಕನ ಇಂತಿದೆ:

ಒಬ್ಬ ಸೂಫಿ ಸಂತನು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದನು.  ಆಗ ಕಪಿಯು ಒಂದು ತೆಂಗಿನಕಾಯಿಯನ್ನು ಸೂಫಿ ಸಂತನ ಮೇಲೆ ಎಸೆಯಿತು.  ಸಂತನು ತೆಂಗಿನಕಾಯಿಯನ್ನು ತೆಗೆದುಕೊಂಡನು.  ಒಳಗಿದ್ದ ನೀರನ್ನು ಕುಡಿದನು.  ಕೊಬ್ಬರಿಯನ್ನು ತಿಂದನು.  ಕರಟದಿಂದ ಭಿಕ್ಷಾಪಾತ್ರೆಯನ್ನು ರೂಪಿಸಿಕೊಂಡನು.

ಟೀಕೆಯನ್ನು ನಾವು ಮುಕ್ತಮನಸ್ಸಿನಿಂದ ಸ್ವಾಗತಿಸಬೇಕಲ್ಲವೆ!
ನಮ್ಮನ್ನು ಟೀಕಿಸುವವರು ಇದ್ದಾರೆ ಎಂದರೆ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂದರ್ಥವಲ್ಲವೆ!
ನಮ್ಮ ಬುದ್ಧಿ ಹಾಗೂ ಹೃದಯವನ್ನು ಮುಕ್ತವಾಗಿಟ್ಟುಕೊಂಡರೆ ಟೀಕೆಗಳಿಂದ ಅಪಾರ ಲಾಭ ಪಡೆಯಬಹುದಲ್ಲವೆ!
ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ನಮ್ಮನ್ನು ವಿಮರ್ಶಿಸುವ ಜನರನ್ನು ಸ್ವಾಗತಿಸಬೇಕಲ್ಲವೆ!
ಹಂದಿಯು ಊರನ್ನು ಸ್ವಚ್ಚಗೊಳಿಸಿದರೆ, ನಿಂದಕರು ನಮ್ಮನ್ನು ಪರಿಶುದ್ಧರನ್ನಾಗಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಾರೆ...!

ಹೀಗೆ ಈ ಪುಸ್ತಕದಲ್ಲಿರುವ ಎಲ್ಲ ಕಥೆಗಳಿಗೂ ಒಳನೋಟದ ಸಾಧ್ಯತೆಗಳನ್ನು ಸೋಮೇಶ್ವರರು ತೆಗೆದಿಡುವುದಲ್ಲದೆ, ಓದುಗನಿಗೂ ವೈಯಕ್ತಿಕವಾಗಿ ಅಥವಾ ತನ್ನ ಕುಟುಂಬ, ಶಾಲೆ, ಕೂಟ ಇತ್ಯಾದಿ ಗುಂಪುಗಳೊಡನೆ ಇಲ್ಲಿನ ಕಥೆಯಿಂದ ಕಲಿತದ್ದೇನು? ಇಂಥಹ ಅನುಭವವನ್ನು  ನಾವೇನಾದರೂ ಪಡೆದದ್ದಿಯೇ? ಇಲ್ಲಿ ನಾವು ಮಾಡಿಕೊಳ್ಳಬಹುದಾದ ಆತ್ಮ ವಿಶ್ಲೇಷಣೆ ಏನು? ಎಂಬ ಬಗ್ಗೆ ಅವಲೋಕಿಸಿಕೊಳ್ಳುವ ವಿಫುಲ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ.

ಯಾಂತ್ರಿಕವಾಗಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ನಾವು ಅತ್ಯಂತ ಕಿರು ಆತ್ಮೀಯ ಸಂಗತಿಗಳನ್ನು ನಮ್ಮ ಬದುಕಿನಿಂದ ಹೊರಗಿಟ್ಟು ಬದುಕನ್ನು ಗೋಜಲುಗೊಳಿಸುತ್ತಾ ಹೋಗುತ್ತಿರುತ್ತೇವೆ.  ವೃತ್ತಿಯಿಂದ ವೈದ್ಯರಾದ ಡಾ. ನಾ. ಸೋಮೇಶ್ವರರು ಇಲ್ಲಿ ಯಾವುದೇ ಔಷದಗಳ ಸೇವನೆಯಿಲ್ಲದೆ ನಮ್ಮ ಮನಸ್ಸನ್ನು ನಾವೇ ಮುಕ್ತಮಾಡಿಕೊಳ್ಳಬಹುದಾದ ಪ್ರಾಚೀನ ಭಾರತೀಯ ಆಪ್ತ ಚಿಂತನೆಯನ್ನು ಸರಳವಾಗಿ ನಮ್ಮ ಮುಂದೆ ತೆರೆದಿರಿಸಿದ್ದಾರೆ.

ಈ ಪುಸ್ತಕದ ಒಂದು ಕಥೆಯಲ್ಲಿ ನಾ. ಸೋಮೇಶ್ವರರು, ಒಮ್ಮೆ ನಾಟಕದ ಅಭ್ಯಾಸಕ್ಕೆ  ಹೋಗುವಾಗ ತಮಗೊಬ್ಬ ಹಿರಿಯರು ‘ಖಾಲಿ ಸ್ಲೇಟಿನ ಹಾಗೆ’ ಬರಬೇಕು ಎಂದು ಹೇಳಿದ್ದನ್ನು ಬರೆದಿದ್ದಾರೆ.  ನಾವು ಕೂಡಾ ಇಂಥಹ ಪುಸ್ತಕಗಳನ್ನು ಓದುವಾಗ ‘ಖಾಲಿ ಸ್ಲೇಟಿನಂತಿದ್ದರೆ!’ ಅದು ಹೆಚ್ಚು ಆಪ್ತವಾಗುತ್ತದೆ ಎನಿಸಿತು.

Tag: Anantadedege

ಕಾಮೆಂಟ್‌ಗಳಿಲ್ಲ: