ಸೋಮವಾರ, ಆಗಸ್ಟ್ 26, 2013

ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್

 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್

ಕಾನೂನು ಕ್ಷೇತ್ರದಲ್ಲಿ ಅನುಪಮ ಸೇವೆ, ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಟ, ಕನ್ನಡದ ಬಗೆಗಿನ ಪ್ರೀತಿ, ಅಸಾಮಾನ್ಯ ಸಜ್ಜನಿಕೆ  ಇವುಗಳೆಲ್ಲದರ ಜೊತೆಗೆ ಮತ್ತು  ಸಾರ್ವಜನಿಕ ಸೇವೆಯಲ್ಲಿ ಅಗ್ರಗಣ್ಯರಾಗಿದ್ದ ನಿಟ್ಟೂರು ಶ್ರೀನಿವಾಸರಾಯರು ಆಗಸ್ಟ್ 24, 1903ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಿಟ್ಟೂರು ಶಾಮಣ್ಣನವರು ಮತ್ತು  ತಾಯಿ ಸೀತಮ್ಮನವರು. ತಂದೆಯವರು ಮುಖ್ಯೋಪಾಧ್ಯಾಯರಾಗಿ ಸರ್ಕಾರಿ ಸೇವೆಯಲ್ಲಿದ್ದುದರಿಂದ ಪ್ರಾರಂಭಿಕ ಶಿಕ್ಷಣ ಚೆಳ್ಳಕೆರೆ, ಹೊಸದುರ್ಗ, ಚಿತ್ರದುರ್ಗಗಳಲ್ಲಿ ನೆರವೇರಿತು. ಅವರು ಪ್ರೌಢಶಾಲೆಗೆ ಸೇರಿದ್ದು ಶಿವಮೊಗ್ಗದ ಕೊಲಿಜಿಯೇಟ್ ಹೈಸ್ಕೂಲು.  ಹೈಸ್ಕೂಲಿನಲ್ಲಿದ್ದಾಗ ಅವರಿಗೆ  ಉಪಾಧ್ಯಾಯರುಗಳಾಗಿದ್ದ  ಎಂ.ಆರ್. ಶ್ರೀನಿವಾಸಮೂರ್ತಿಗಳುಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು ಮುಂತಾದ ಮಹನೀಯರ  ಪ್ರಭಾವ ಅಪಾರವಾಗಿತ್ತು.  ಮುಂದೆ ಶ್ರೀನಿವಾಸರಾವ್ ಅವರು ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು. ತಮ್ಮ ಓದಿನ ದಿನಗಳಲ್ಲಿ ಅವರು ಸೆಂಟ್ರಲ್ ಕಾಲೇಜು ಕನ್ನಡ ಸಂಘದ ಕಾರ್ಯದರ್ಶಿಗಳಾಗಿದ್ದರು.

ನಿಟ್ಟೂರರು ತಮ್ಮ 18ನೇ ವಯಸ್ಸಿನಲ್ಲೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿ ಚಳವಳಿಗೆ ಧುಮುಕಿದರು. ಅಸಹಕಾರ ಚಳವಳಿಯಲ್ಲಿನ ಅವರ ಪಾತ್ರ ಗಣನೀಯ. ಕೆಲಕಾಲ ಅವರು ಧಾರವಾಡದ ಕಾಂಗ್ರೆಸ್ ಘಟಕವನ್ನು ಮುನ್ನಡೆಸಿದರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ನೇತಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ, ಆರ್ ಆರ್ ದಿವಾಕರ ಮತ್ತು ಯು ಎಸ್ ಮಲ್ಯ ಮುಂತಾದವರಿಗೆ ಆಶ್ರಯ ಕಲ್ಪಿಸಿದರು.  1927ರಲ್ಲಿ  ಗಾಂಧೀಜಿಯವರು ಬೆಂಗಳೂರಿಗೆ ಭೇಟಿಯಿತ್ತಾಗ ನಿಟ್ಟೂರರು ಅವರ ಆತ್ಮಕತೆಯಾದ ನನ್ನ ಸತ್ಯಾನ್ವೇಷಣೆಯನ್ನು ಅನುವಾದಿಸಲು ಅನುಮತಿ ಬೇಡಿದರು. ಅವರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಮಾಡಿದ ಆ ಅನುವಾದವು ಕನ್ನಡ ದೈನಿಕಗಳಾದ ವಿಶ್ವಕರ್ನಾಟಕ ಮತ್ತು ಲೋಕಮತಗಳಲ್ಲಿ ಧಾರಾವಾಹಿಯಾಗಿ ಮೂಡಿಬಂತು. ಬರಹಗಾರರ ಹೆಸರು ಇಬ್ಬರು ಕನ್ನಡಿಗರುಎಂದು ಮೂಡಿಬಂತು.  ಆ ಅನುವಾದಕ್ಕೆ ಅವರು ಸತ್ಯಶೋಧನೆಎಂಬ ಶೀರ್ಷಿಕೆ ನೀಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಅವರು ದುಡಿದರು. ಖಾದಿ ಪ್ರಚಾರಕ್ಕಾಗಿ ಖಾದಿ ಘಟಕವನ್ನೂ ಪ್ರಾರಂಭಿಸಿದರು. 

ನಿಟ್ಟೂರು ಶ್ರೀನಿವಾಸರಾಯರಿಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದರೂ ಅವರು ಸೇರಿದ್ದು ಮದರಾಸಿನ ಕಾನೂನು ಕಾಲೇಜು. ಕಾನೂನು ಪದವಿ ಗಳಿಸಿದ ನಂತರ ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಪ್ರಾರಂಭ ಮಾಡಿದರು. ನಂತರ ಬಾರ್ ಅಸೋಸಿಯೇಷನ್ ಮುಖ್ಯಸ್ಥರಾಗಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಮುಖ್ಯನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ  ಅವರು  1963ರಲ್ಲಿ ನಿವೃತ್ತಿ ಹೊಂದಿದರು. ನಿವೃತ್ತಿಯನಂತರ 1963ರಲ್ಲಿ ಹಂಗಾಮಿ ರಾಜ್ಯಪಾಲರಾಗಿ, ಭಾರತ ಸರ್ಕಾರದ  ಪ್ರಥಮ ವಿಜಿಲೆನ್ಸ್ ಕಮೀಷನರ್ ಆಗಿ, ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚಿಸಲು ಮೂಲಭೂತ ಕಾರಣರಾಗಿ, ಕೇಂದ್ರ ವಿಜಿಲೆನ್ಸ್ ಕಮೀಷನರಾಗಿ 1968ರ ಅವಧಿಯವರೆಗೆ ಶ್ಲಾಘನೀಯ ಸೇವೆ ಸಲ್ಲಿಸಿದರು.

ನಿಟ್ಟೂರು ಶ್ರೀನಿವಾಸರಾವ್ ಅವರು ಹಲವಾರು ವಕೀಲರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ಅಖಿಲ ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರಾಗಿ, ಕಾನೂನು ಸಲಹೆಗಾರರಾಗಿ, ಮೈಸೂರು ವಕೀಲರ ಸಮ್ಮೇಳನದಲ್ಲಿ ಪ್ರಥಮ ಅಧ್ಯಕ್ಷರಾಗಿ, ಮದರಾಸು ರಾಜ್ಯದ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಭಾರತೀಯ ಕಾನೂನು ಸಂಸ್ಥೆ, ಕೇಂದ್ರ ಸಂವಿಧಾನ ಮತ್ತು ಶಾಸಕಾಂಗ ವ್ಯವಹಾರ ಸಂಸ್ಥೆ ಮತ್ತು  ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ ಸದಸ್ಯರಾಗಿ ಸಹಾ  ಅವರು ಅನುಪಮ ಸೇವೆ ಸಲ್ಲಿಸಿದರು.

ಕನ್ನಡ ಸಾಹಿತ್ಯಾರಾಧಕರಾಗಿ, ಕರ್ನಾಟಕ ಏಕೀಕರಣದ ಬಗ್ಗೆ ದುಡಿದವರಲ್ಲಿ ನಿಟ್ಟೂರು ಶ್ರೀನಿವಾಸರಾಯರು ಪ್ರಮುಖರು. ಅವರು ಕನ್ನಡ ಭಾಷೆಯ ಪುನರುಜ್ಜೀವನಕ್ಕೆ ಚೇತನ ನೀಡಿದವರು. ಸತ್ಯಶೋಧನ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದರು.  ಮೇಲೆ ಹೇಳಿದಂತೆ ಗಾಂಧೀಜಿಯವರ ಆತ್ಮಚರಿತ್ರೆಯಾದ ಸತ್ಯಶೋಧನೆಗ್ರಂಥವನ್ನು ಪತ್ನಿ ಪದ್ಮರೊಡನೆ ಇಬ್ಬರು ಕನ್ನಡಿಗರುಎಂಬ ಹೆಸರಿಂದ ಅನುವಾದ ಮಾಡಿದರು. ಸಿ.ಕೆ. ವೆಂಕಟರಾಮಯ್ಯ, ಶಿವರಾಮಕಾರಂತ, ರಾಜರತ್ನಂ, ಎಂ.ಆರ್.ಶ್ರೀ ಕೃತಿಗಳು, ಗೊರೂರರ ಹಳ್ಳಿ ಚಿತ್ರಗಳು ಮುಂತಾದ ಹಲವಾರು ಕೃತಿಗಳನ್ನು ಪ್ರಕಟಣೆ ಮಾಡಿದರು. ಕಾರಂತರ ಬಾಲಪ್ರಪಂಚಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ ಅಂದಿನ ದಿನದಲ್ಲಿ ಮುದ್ರಣಕ್ಕೆ ಒಂದು ಲಕ್ಷ ರೂ. ಖರ್ಚು ಮಾಡಿದ್ದರು. 

ಕನ್ನಡದ ಕಳೆದ ಶತಮಾನದ ಬಹುತೇಕ ಶ್ರೇಷ್ಠ ಬರಹಗಾರರು ಮತ್ತು ಶ್ರೇಷ್ಠ ಸಂಸ್ಥೆಗಳೊಡನೆ ನಿಟ್ಟೂರು ಶ್ರೀನಿವಾಸರಾಯರ  ಒಡನಾಟ ನಿರಂತರವಾಗಿತ್ತು.  ಯಾವುದೇ ಹಿರಿತನದ ಜವಾಬ್ಧಾರಿಯ ವಿಚಾರ ಬಂದಾಗ ಅದಕ್ಕೆ ಎಲ್ಲ ರೀತಿಯಲ್ಲೂ ತಕ್ಕವರಾಗಿ ನಿಟ್ಟೂರು ಶ್ರೀನಿವಾಸರಾಯರ ಹೆಸರು ಮುಂಚೂಣಿಯಲ್ಲಿರುತ್ತಿತ್ತು.  ಬಿ.ಎಂ.ಶ್ರೀ ಪ್ರತಿಷ್ಠಾನ, ಡಿ.ವಿ.ಜಿ.ಅವರ  ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅರಬಿಂದೋ ಸೊಸೈಟಿ, ಕರ್ನಾಟಕ ಪ್ರಕೃತಿ ಚಿಕಿತ್ಸಾ ಪರಿಷತ್ ಮುಂತಾದುವುಗಳ ಅಧ್ಯಕ್ಷತೆಯ  ಜವಾಬ್ದಾರಿಯನ್ನು ನಿಟ್ಟೂರು ಶ್ರೀನಿವಾಸರಾಯರು ನಿರ್ವಹಿಸಿದರು.

ನಿಟ್ಟೂರು ಶ್ರೀನಿವಾಸರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ವಸಂತೋತ್ಸವನ್ನು ನಡೆಸುತ್ತಿದ್ದರು.  ಅವರು ಆ ಸಮಿತಿಯ ಅಧ್ಯಕ್ಷರೂ ಆಗಿದ್ದರು.  ಅವರಲ್ಲಿ ಒಂದು ಕಾರಿತ್ತು.  ಅದರಲ್ಲಿ ಸಾಹಿತಿಗಳನ್ನೆಲ್ಲಾ ಕೂಡಿಸಿಕೊಂಡು ಒಂದಷ್ಟು ಪುಸ್ತಕಗಳನ್ನು ತುಂಬಿಕೊಂಡು ಹಲವಾರು ಊರುಗಳಿಗೆ ಹೋಗುತ್ತಿದ್ದರು.  ಬೆಂಗಳೂರಿನ ಯಾವುದೇ ಸಾಹಿತ್ಯಕ ಕಾರ್ಯಕ್ರಮ ಅದು ಪುಸ್ತಕ ಬಿಡುಗಡೆ, ಸನ್ಮಾನ, ಯಾವುದೇ ಆಗಿರಲಿ ಆ ಸಭೆಯ ಅಧ್ಯಕ್ಷತೆಯೋ, ಉದ್ಘಾಟನೆಯೋ ಅಥವಾ ಸಭೆಯ ಮಧ್ಯದಲ್ಲಿ ಪ್ರೇಕ್ಷಕರಾಗಿಯೋ ಶ್ರೀನಿವಾಸರಾಯರು ಭಾಗವಹಿಸುವುದನ್ನು ನೋಡುವುದು ಸರ್ವೇಸಾಧಾರಣವಿತ್ತು.

ಶ್ರೀನಿವಾಸರಾಯರಿಗೆ ಐದು ಬಾರಿ ತೀವ್ರ ಅಪಘಾತಗಳಾಗಿದ್ದವು.  ಯಾವುದೋ ಸಮಯದಲ್ಲಿ ಸಮಾರಂಭಕ್ಕೆ ಹೋಗುತ್ತಿದ್ದಾಗ ಗೇಟ್ ಬಳಿಯಲ್ಲಿಯೇ ಯಾವನೋ ಒಬ್ಬ ಮೋಟಾರ್ ಬೈಕ್ ಸವಾರ ಬಂದು ಹೊಡೆದುಬಿಟ್ಟಿದ್ದ.  ಯಾವುದಕ್ಕೂ ಯಾರನ್ನೂ ಅವರು ಎಂದೂ ದೂಷಿಸಿದವರಲ್ಲ.  ಪಾಪ ಏನೋ ಅವರಿಗೆ ತಿಳಿಯದೆ ಹೀಗೆ ಆಗಿ ಹೋಯಿತು ಎನ್ನುವ ಸ್ವಭಾವ ಅವರದ್ದು.    ತಮ್ಮ ಜೀವನದಲ್ಲಿ ಹಾದು ಹೋದ ವ್ಯಕ್ತಿಗಳು ಎಷ್ಟೇ ಚಿಕ್ಕವರಿರಲಿ, ಯಾರೇ ಇರಲಿ ಅವರನ್ನು ತುಂಬು ಹೃದಯದಿಂದ ಆತ್ಮೀಯವಾಗಿ ನೆನೆಯುವುದು ಶ್ರೀನಿವಾಸರಾಯರು ಬದುಕಿನುದ್ದಕ್ಕೂ ನಡೆದುಕೊಂಡ ರೀತಿ.” -   ಶ್ರೀನಿವಾಸರಾಯರ  ಕುರಿತು ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾದೀತೆಕೃತಿಯಲ್ಲಿನ ಈ ಮಾತುಗಳು ಈ ಶ್ರೇಷ್ಠತೆಯ ಹಿಂದಿನ ಬೆಳಕನ್ನು ಸಾರುವಂತಿದೆ:   ಶ್ರೀನಿವಾಸರಾಯರು ತಮ್ಮ ಕಷ್ಟ, ನೋವುಗಳನ್ನು ಮರೆತು ಬೇರೆ ಸ್ನೇಹಿತರನ್ನು ನೋಡುವ ಬಗೆ, ಅವರಿಂದ ವಿಷಯಗಳನ್ನು ತಿಳಿಯಲು ತೋರುವ ಉತ್ಸಾಹ ಇವೆಲ್ಲವೂ ಒಂದು ಆಧ್ಯಾತ್ಮಿಕ ಸಾಧನೆಯೆಂದೇ ತೋರುತ್ತದೆ.  ಯಾಕೆಂದರೆ ಅವರನ್ನು ಬಹಳ ಕಾಲದಿಂದ, ಹತ್ತಿರದಿಂದ ನೋಡಿದ್ದೇನೆ.  ಪಾದುಕೆಗಳನ್ನು ಹಾಕಿಕೊಂಡು ಓಡಾಡಿದ್ದು, ಕೈಯಲ್ಲಿ ಜಪಸರ ಹಿಡಿದುಕೊಂಡದ್ದು, ಧ್ಯಾನಾಸಕ್ತರಾಗಿ ಕುಳಿತಿದ್ದು ನೋಡಿದ್ದೇನೆ.  ಹೀಗಾಗಿ ಇವೆಲ್ಲವೂ ಅವರ ಆಧ್ಯಾತ್ಮಿಕ ಸಾಧನೆಗಾಗಿ, ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು ಎನಿಸುತ್ತದೆ.  ಬಂದ ಕಷ್ಟಗಳನ್ನೆಲ್ಲಾ ದೂರಕ್ಕೆ ತಳ್ಳಿ ಸ್ಥಿತಪ್ರಜ್ಞತೆಯನ್ನು ಸಾಧಿಸಿರುವಂಥದಾಗಿರಬಹುದು, ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಾಗಬಹುದು ಹೀಗೆ ಯಾವುದೇ ಆಗಲಿ ಅವೆಲ್ಲವೂ ಅವರ ಆಧ್ಯಾತ್ಮಿಕ ಸಾಧನೆಯ ಗುರುತುಗಳು.

ದಕ್ಷಿಣ ಭಾರತ ಹಿಂದಿ ಪ್ರಚಾರ ಪರಿಷತ್, ಮಹಿಳಾ ಹಿಂದಿ ಪರಿಷತ್‌ನಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು  ಗೌರವ ಪ್ರಶಸ್ತಿಗಳು ನಿಟ್ಟೂರು ಶ್ರೀನಿವಾಸರಾಯರಿಗೆ ಸಂದವು.  ಬೆಂಗಳೂರಿನ ಪ್ರಮುಖ ರಸ್ತೆ ಮತ್ತು ವೃತ್ತಕ್ಕೆ ನಿಟ್ಟೂರು ಶ್ರೀನಿವಾಸರಾಯರ ಹೆಸರನ್ನಿರಿಸಲಾಗಿದೆ

ಸತ್ಯ, ಧರ್ಮ, ನ್ಯಾಯ, ನಿಷ್ಠೆ, ಸಂಸ್ಕೃತಿ, ಸಜ್ಜನತೆಗಳ ಮೂರ್ತಿವೆತ್ತಂತೆ ತಮ್ಮ ಇಡೀ ಜೀವನವನ್ನು ನಿರ್ವಹಿಸಿದ   ನಿಟ್ಟೂರು ಶ್ರೀನಿವಾಸರಾಯರು ನೂರಾ ಒಂದು ವರ್ಷಗಳ ಕಾಲದ  ಸುದೀರ್ಘ ಅವಧಿಯನ್ನು ಸಾರ್ಥಕವಾಗಿ ಬಾಳಿ ಆಗಸ್ಟ್ 12, 2004ರಂದು ಈ ಲೋಕವನ್ನಗಲಿದರು.  ಅವರು ತಮ್ಮ ನೂರನೆಯ ವಯಸ್ಸಿನಲ್ಲೂ ನಾವು ನಡೆಸಿದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನಮ್ಮೊಡನೆ ಕಳೆದ ಅಪೂರ್ವ ಕ್ಷಣಗಳು, ಮತ್ತು ಅಲ್ಲಿ ಬಂದಾಗ ನಮ್ಮಂತಹ ಪ್ರತಿಯೋರ್ವ ಕಾರ್ಯಕರ್ತರನ್ನೂ ಹೆಸರು ಹಿಡಿದು ಪ್ರೀತಿಯಿಂದ ತಮ್ಮ ಮಾತುಗಳಲ್ಲಿ ಮೆಚ್ಚುಗೆ ಸೂಚಿಸಿದ ಅವರ ದೊಡ್ಡತನ ನನ್ನ   ಮನಸ್ಸಿನಲ್ಲಿ ನಿರಂತರವಾಗಿ ಜೊತೆಗಿದೆ.  ಅವರನ್ನು ನೆನೆದಾಗಲೆಲ್ಲಾ ಅಂತಹ ಹಿರಿಯರು ಇಂದು ಕಡಿಮೆಯಾಗುತ್ತಿದ್ದಾರಲ್ಲ; ಹಾಗೆ ನಮಗೂ ಆಗಲು ಸಾಧ್ಯವಾಗುವುದು ಹೇಗೆ ಇತ್ಯಾದಿ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಹರಿದಾಡುತ್ತವೆ.  ಇದಕ್ಕೆಲ್ಲಾ ಇಂಥಹ ಮಹನೀಯರ ಆಶೀರ್ವಾದ ಕೃಪೆಯೊಂದೇ ನಮಗಿರುವ ಆಶಯ.  ಈ ಪ್ರಾರ್ಥನೆಯೊಂದಿಗೆ ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Nyayamurthy Nittor Srinivasa Rao, Nittur Srinivasarao, 

ಕಾಮೆಂಟ್‌ಗಳಿಲ್ಲ: