ಜಂಬಣ್ಣ ಅಮರಚಿಂತ
ಜಂಬಣ್ಣ ಅಮರಚಿಂತ
‘‘ಜೀವಂತವಿರುವವರೆಗೆ ಜಗವೆಲ್ಲ ನಮ್ಮದೆನ್ನೋಣ
ಸಾಯುವಾಗ ನಮ್ಮದೇನಿಲ್ಲವೆಂಬಂತೆ ಸಾಯೋಣ’’
ಇದು ಪ್ರಖ್ಯಾತ ಕವಿ ಜಂಬಣ್ಣ ಅಮರಚಿಂತ ಅವರ ಚಿಂತನೆ.
ಜಂಬಣ್ಣ ಅಮರಚಿಂತ ಅವರು 1945ರ ಏಪ್ರಿಲ್ 7ರಂದು ಜನಿಸಿದರು. ಅಮರಚಿಂತರು ರಾಯಚೂರಿನಲ್ಲಿ ಹುಟ್ಟಿ ಬೆಳೆದವರು. ರಾಯಚೂರಿನ ಹಮದರ್ದ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ ನಂತರ ಎಲ್‌ವಿಡಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು. ಮಹಾರಾಷ್ಟ್ರದ ಕೊಲ್ಹಾಪುರ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ವ್ಯಾಸಂಗ ಮಾಡಿದರು. ಆರೋಗ್ಯ ಇಲಾಖೆಯಲ್ಲಿ ಗೆಜೆಟೆಡ್ ಅಸಿಸ್ಟಂಟ್ ಆಗಿ ಸೇವೆಗೆ ಸೇರಿದರು. 35 ವರ್ಷಗಳವರೆಗೆ ನಾನಾ ಹುದ್ದೆ ನಿರ್ವಹಿಸಿ, ಆರೋಗ್ಯ ನಿರೀಕ್ಷಕರಾಗಿ ನಿವೃತ್ತರಾದರು.
ಎಪ್ಪತ್ತರದ ದಶಕದಲ್ಲಿ ಬಂಡಾಯ-ದಲಿತ ಸಾಹಿತ್ಯ ಚಳವಳಿ ಆರಂಭವಾದಾಗ ಅಮರಚಿಂತರು ಆ ಅಲೆಯ ಪ್ರಮುಖ ಬರಹಗಾರರಾಗಿ ಮೂಡಿದರು. ರಾಯಚೂರು ಸೀಮೆಯ ಬದುಕು ಪ್ರಭುತ್ವಗಳಿಂದ ಮತ್ತು ಭೂಮಾಲೀಕರಿಂದ ಕೆಳವರ್ಗದ ಸಮುದಾಯಗಳು ನಿತ್ಯ ಬೆವರಿಳಿಸಿ ನಿಟ್ಟುಸಿರು ಬಿಡುತ್ತಿದ್ದ ನೆಲವಾಗಿತ್ತು. ಈ ಬದುಕನ್ನು ಕಾವ್ಯದ ಮೂಲಕ ತೆರೆದಿಟ್ಟವರು ಜಂಬಣ್ಣ ಅಮರಚಿಂತರು.
‘‘ನಾನು ಸದಾ ಬೇಟೆಯ ಜೊತೆಗಿದ್ದೇನೆ. ಬೇಟೆಗಾರನ ಜೊತೆಯಲ್ಲ” ಎಂಬುದು ಅಮರಚಿಂತರ ಕಾವ್ಯದ ಧೋರಣೆಯಾಗಿತ್ತು. ಶೋಷಿಸುವ ಶೋಷಣೆಗೆ ಈಡಾಗುವ ಎರಡು ಬಾಳ್ವೆಗಳನ್ನು ಮುಖಾಮುಖಿಯಾಗಿಸಿ ಕಾವ್ಯ ಹೆಣೆಯುವ ಕಣ್ಣು ಅಮರಚಿಂತರದು. ಬೇಟೆಗಾರನ ಕ್ರೌರ್ಯವನ್ನು, ಬೇಟೆಯ ಆರ್ಥನಾದವನ್ನು ಅವರ ಕಾವ್ಯ ಧ್ವನಿಸಿತು. ಬಂಡಾಯ-ದಲಿತ ಚಳವಳಿ ಸಂದರ್ಭದಲ್ಲಿ ಹಸಿದವನ ಸ್ಥಿತಿಯನ್ನು ಕಾವ್ಯದಲ್ಲಿ ಹಿಡಿಯುವ ಪರಿಗೆ ಅಮರಚಿಂತರಿಗೆ ಅಮರಚಿಂತರೇ ಸಾಟಿ ಎನಿಸಿದ್ದರು.
ಅಮರಚಿಂತರು ತೆಲುಗಿನ ಪ್ರತಿಭಟನಾ ಕಾವ್ಯವನ್ನು ಓದಿಕೊಂಡರು. ತಮ್ಮ ಕಾವ್ಯದ ರೂಪಗಳನ್ನು ಬದಲಿಸಿಕೊಳ್ಳುತ್ತ ಭಿನ್ನವಾಗುತ್ತ ಸಾಗಿಬಂದರು. ಉರ್ದು ಕಾವ್ಯದ ಪ್ರೇರಣೆಯಿಂದ ಗಜಲ್‌ಗಳನ್ನು ರಚಿಸಿದರು. ಮಧುರ ರಮ್ಯ ಕೇಂದ್ರಿತವಾಗಿದ್ದ ಗಜಲ್ ರೂಪವನ್ನು ಬಳಸಿ ಪ್ರತಿಭಟನಾ ಕಾವ್ಯವನ್ನು ಅಭಿವ್ಯಕ್ತಿಸಿದರು. ನಾಲ್ಕು ಸಾಲುಗಳ ಪದ್ಯ, ಎರಡು ಸಾಲುಗಳ ಪದ್ಯಗಳನ್ನು ಬರೆದರು. ಈ ಎಲ್ಲಾ ಕಾವ್ಯದಲ್ಲಿ ಬದುಕಿನ ತತ್ವವನ್ನು ಸಾತ್ವಿಕ ಧ್ವನಿಯಲ್ಲಿ ಹೇಳತೊಡಗಿದರು. ಮೃಗತ್ವವನ್ನು ಮನುಷ್ಯ ಮರೆತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ನೆಲೆಯಲ್ಲಿ ಕಾವ್ಯವನ್ನು ರಚಿಸಿದರು. ಕಾವ್ಯ ಹಿಡಿಯಲಾರದ ಬದುಕನ್ನು ಚಿತ್ರಿಸಲು ಕಾದಂಬರಿ ಪ್ರಕಾರವನ್ನು ಬಳಸಿದರು.
ಅಮರಚಿಂತರು ಕೇಳುತ್ತಿದ್ದ ಮತ್ತೊಂದು ಪ್ರಶ್ನೆ ಹೀಗಿದೆ:
"ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ,
ಯಾರೆಂದು ಮತ್ತೆ ಕೇಳುವಿರಿ.
ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ,
ಬೆಳೆಯಾಕೆ ಬರಲಿಲ್ಲೆಂದು ಮತ್ತೆ ಕೇಳುವಿರಿ” ವಿರೋಧಿಯನ್ನು ಪ್ರಶ್ನಿಸುವ ಈ ನೆಲೆ ಜಂಬಣ್ಣ ಅವರ ಚಿಂತನೆಗೆ ಮಾತ್ರ ಸಾಧ್ಯವಿತ್ತು.
ಹಸಿವಿನ ಸ್ಥಿತಿಯನ್ನು ಅಮರಚಿಂತರು ಕೇವಲ ಎಂಟು ಪದಗಳಲ್ಲಿ ಹಿಡಿದಿದ್ದಾರೆ.
“ರೊಟ್ಟಿ ವಿಸ್ತಾರದಲ್ಲಿ ಭೂಮಿಗಿಂತ ಮಿಗಿಲು. ಇದರ ಎತ್ತರ ಎವರೆಸ್ಟಿಗೂ ದಿಗಿಲು”
ಹೀಗೆ ಅಮರಚಿಂತರ ಲೋಕವನ್ನು ನೋಡುವ ಗ್ರಹಿಕೆ ವಿಶಿಷ್ಟವಾದದ್ದು.
ಸ್ಥೂಲ ಶರೀರದ ಅಮರಚಿಂತರ ಆರೋಗ್ಯ ಕೊನೆಯ ವರ್ಷಗಳಲ್ಲಿ ಅಷ್ಟು ಸರಿಯಿರುತ್ತಿರಲಿಲ್ಲ. ಅದಕ್ಕೆ ಅವರೇನೂ ಚಿಂತಿತರಾಗಿರಲಿಲ್ಲ. ಅವರಿಗಿದ್ದ ಒಂದೇ ಚಿಂತೆ ಕಾವ್ಯ ರಚನೆಯದ್ದು. ನಿಜಾಮರ ಪ್ರಾಂತ್ಯದಲ್ಲಿ ಹುಟ್ಟಿ ಬೆಳೆದಿದ್ದರಿಂದ, ಹೈದರಾಬಾದ್ ಸಂಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿದ್ದ ಉರ್ದು ಮತ್ತು ತೆಲುಗು ಭಾಷೆಗಳಲ್ಲಿನ ಕಾವ್ಯ ಪ್ರಕಾರಗಳನ್ನು ಓದಿಕೊಂಡು ಅದನ್ನು ಕನ್ನಡದಲ್ಲಿ ಪ್ರಯೋಗ ಮಾಡತೊಡಗಿದರು.
ಗಜಲ್, ರುಬಾಯಿ, ಖಿತಾ ಮುಂತಾದ ಕಾವ್ಯ ಪ್ರಕಾರಗಳಲ್ಲಿ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಿಸಿದರು. ಈ ಕಾವ್ಯ ಪ್ರಕಾರಗಳು ಮೂಲದಲ್ಲಿ ಯಾವ ವಸ್ತುವಿನ ಅಭಿವ್ಯಕ್ತಿಗಾಗಿ ಹುಟ್ಟಿದವು, ಯಾವ ಕಾರಣಗಳಿಗೆ ರಚನೆಗೊಂಡವು ಎಂಬುದನ್ನು ತಿಳಿದೂ, ಅದನ್ನು ಬದಿಗಿಟ್ಟು ತಮ್ಮ ಸಂವೇದನೆಗೆ ಅದನ್ನು ಬಳಸಿದರು. ಅದಕ್ಕೆ ಬೇಕಾದ ವ್ಯಾಕರಣ ಅಧ್ಯಯನ ಮಾಡಿದರು. ಓದುವ ಕಾವ್ಯವನ್ನೇ ಬರೆದರು. ನಿಶ್ಯಬ್ದದೊಳಗೇ ಸದ್ದು ಕೇಳಿಸುವಂತೆ ಬರೆಯುತ್ತಿದ್ದ ಅಮರಚಿಂತರು ಈ ಹೊಸ ಕಾವ್ಯ ಪ್ರಕಾರಗಳಲ್ಲಿ ಕಲ್ಯಾಣದ ಕಾರುಣ್ಯವನ್ನೇ ಅಭಿವ್ಯಕ್ತಿಸಿದರು.
ಒಳ್ಳೆಯ ಕವಿತಾ ಗುಣವಿರುವ ಯಾರನ್ನೂ ಮಾತಾಡಿಸಿ, ಅವರ ಸ್ನೇಹ ಬಯಸಿ ಕಾವ್ಯಸಂವಾದ ನಡೆಸಲು ಹಂಬಲಿಸುವ ಅವರ ಗುಣವನ್ನು ಎಲ್ಲರೂ ಜಂಬಣ್ಣನವರಲ್ಲಿ ಕಂಡಿದ್ದರು. ಅವರ ಆರೋಗ್ಯವನ್ನು ವಿಚಾರಿಸಲು ಹೋದವರ ಜೊತೆ ತಮ್ಮ ದೇಹಸ್ಥಿತಿಯನ್ನು ಕುರಿತು ಒಂದೂ ಮಾತಾಡುತ್ತಿರಲಿಲ್ಲ. ಬದಲಾಗಿ ಈಗ ಕನ್ನಡದಲ್ಲಿ ಯಾರು ಚೆನ್ನಾಗಿ ಬರೆಯುತ್ತಿದ್ದಾರೆ. ಅವರ ಕಾವ್ಯವನ್ನು ನಾನು ಓದಬೇಕು ಎಂದು ಹಂಬಲಿಸುತ್ತಿದ್ದರು. ಕೊನೆವರೆಗೂ ಕಾವ್ಯದ ಗುಂಗಿನಲ್ಲಿಯೇ ಉಳಿದು ಕೊನೆಯುಸಿರೆಳೆದರು.
'ಕುರುಮಯ್ಯ ಮತ್ತು ಅಂಕುಶದೊಡ್ಡಿ’ ಹಾಗೂ ‘ಬೂಟುಗಾಲಿನ ಸದ್ದು’ ಜಂಬಣ್ಣ ಅಮರಚಿಂತ ಅವರ ಕಾದಂಬರಿಗಳು. ‘ಮುಂಜಾವಿನ ಕೊರಳು’, ‘ಅಧೋಜಗತ್ತಿನ ಆ ಕಾವ್ಯ’, ‘ಮಣ್ಣಲ್ಲಿ ಬಿರಿದ ಅಕ್ಷರ’, ‘ಅಮರಚಿಂತ ಕಾವ್ಯ’, ‘ಪದಗಳು ನಡೆದಾಡುತ್ತಿವೆ ಪಾದಗಳಾಗಿ’, ‘ಹರಿಯುವ ನದಿಗೆ ಮೈಯೆಲ್ಲಾ ಕಾಲು’ ಅವರ ಕವನ ಸಂಕಲನಗಳು. ‘ಮುಳ್ಳಿನ ಬಾಯಲ್ಲಿ ಹೂ ನಾಲಿಗೆ’ ಹಾಗೂ ‘ಬಾಧೆಯ ವೃಕ್ಷದಲ್ಲಿ ಬೋಧಿಯ ಪರಿಮಳ’ ಎಂಬವು ಅವರ ಗಜಲ್ ಸಂಕಲನಗಳು.
ಜಂಬಣ್ಣ ಅಮರಚಿಂತ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಜಂಬಣ್ಣ ಅಮರಚಿಂತ ಅವರು 2017ರ ಫೆಬ್ರವರಿ 14ರಂದು ಈ ಲೋಕವನ್ನಗಲಿದರು.
On the birth anniversary of writer Jambanna Amarachinta
Nice person jambanna amarachinta
ಪ್ರತ್ಯುತ್ತರಅಳಿಸಿ