ಬುಧವಾರ, ಆಗಸ್ಟ್ 28, 2013

ಎಚ್. ವಿ. ಪ್ರಕಾಶ್

ಈ ಪ್ರಕಾಶ ಇನ್ನಿಲ್ಲ

ಕಿರುತೆರೆ ಹಾಗೂ ಸಿನಿಮಾ ಕಲಾವಿದ ಎಚ್.ವಿ. ಪ್ರಕಾಶ್  (53) ಅವರು ಭಾನುವಾರ ನಿಧನ ಹೊಂದಿದ್ದಾರೆ ಎಂದು ತಿಳಿದು ದುಃಖವಾಯಿತು.

ಕಳೆದ ಜೂನ್ 23ರಂದು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಮೊನ್ನೆ ಭಾನುವಾರ ಮಧ್ಯಾಹ್ನ ತಮ್ಮ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.  ಮೂಲತಃ ಹಾಸನದವರಾದ ಪ್ರಕಾಶ್ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದರು.

ಬಾಲನಟನಾಗಿ ಕಲಾಜೀವನ ಆರಂಭಿಸಿದ ಪ್ರಕಾಶ್ ಅನೇಕ ಸಾಮಾಜಿಕ, ಪೌರಾಣಿಕ ಹಾಗೂ ರೇಡಿಯೊ ನಾಟಕಗಳಲ್ಲಿ ಮತ್ತು 'ತೂಗುವೆ ಕೃಷ್ಣನ', 'ಮತ್ಸರ', 'ಒಂದು ಸಿನಿಮಾ ಕಥೆ',  'ಅಜಗಜಾಂತರ', 'ಕೆರಳಿದ ಕೇಸರಿ', 'ಶ್ವೇತಾಗ್ನಿ' ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.

'ಸಿಹಿಕಹಿ', 'ಪಾಪ ಪಾಂಡು', 'ಸಿಲ್ಲಿ ಲಲ್ಲಿ' ಸೇರಿದಂತೆ ಹಲವು  ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ 25ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.

ಇನ್ನೂ ಬದುಕುವ ವಯಸ್ಸಿನ ಈ ಕಲಾವಿದ ನಿಧನರಾಗಿರುವುದು ಅವರ ಕುಟುಂಬಕ್ಕೆ ಮತ್ತು ಕಲಾರಸಿಕರಿಗೆ ನೋವುಂಟುಮಾಡಿರುವ ವಿಷಯ.  ಮೃತರ ಆತ್ಮಕ್ಕೆ ಶಾಂತಿಕೋರುತ್ತಾ ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.

Tag: H. V. Prakash

ಕಾಮೆಂಟ್‌ಗಳಿಲ್ಲ: