ಶರದ್ ದ್ರಾವಿಡ್
ಕ್ರಿಕೆಟ್ ಪ್ರೇಮಿ ಶರದ್ ದ್ರಾವಿಡ್ ಇನ್ನಿಲ್ಲ
ರಾಹುಲ್ ದ್ರಾವಿಡ್ ಅವರ ತಂದೆ ಶರದ್ ದ್ರಾವಿಡ್ ಅವರು ಬುಧವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೆಲಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ಅವರು ತಮ್ಮ ಪತ್ನಿ ಪುಷ್ಪ ಹಾಗೂ ಪುತ್ರರಾದ ರಾಹುಲ್ ದ್ರಾವಿಡ್, ವಿಜಯ್ ದ್ರಾವಿಡ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ತಮ್ಮ ಮಗ ರಾಹುಲ್ ದ್ರಾವಿಡ್ ಅವರಲ್ಲಿ ಕ್ರಿಕೆಟ್ ಬಗೆಗೆ ಪ್ರೀತಿಯನ್ನು ತುಂಬಿ, ಅವರಲ್ಲಿ ಈ ಆಟದ ಕುರಿತು ತುಂಬಿದ್ದ ಆಸಕ್ತಿಯನ್ನು ಚಿಕ್ಕಂದಿನಿಂದ ಪೋಷಿಸಿದ ಶರದ್ ದ್ರಾವಿಡ್ ಅವರು ತಮ್ಮ ಮಗನನ್ನು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಎಲ್ಲಾ ತರಹದ ಪ್ರಮುಖ ಕ್ರಿಕೆಟ್ ಪಂದ್ಯಗಳಿಗೂ ಕರೆದೊಯ್ಯುತ್ತಿದ್ದರು. ಕ್ರಿಕೆಟ್ ಕ್ರೀಡೆಯಲ್ಲಿ ಸಜ್ಜನನೆಂದು ಪ್ರಖ್ಯಾತರಾಗಿರುವ ತಮ್ಮ ಪುತ್ರನಲ್ಲಿ ಶ್ರೇಷ್ಠಯುತವಾದ ಮೌಲ್ಯಗಳು ನೆಲೆಯೂರಲು ಪ್ರೇರಕರಾದ ಶರದ್ ದ್ರಾವಿಡ್ ಅವರು ತಮ್ಮ ಮಗನ ಈ ಸುದೀರ್ಘ ಅವಧಿಯ ವೈವಿಧ್ಯಪೂರ್ಣ ಸಾಧನಾ ಬದುಕಿನಲ್ಲಿ ಮತ್ತು ಕ್ಲಿಷ್ಟ ಗಳಿಗೆಗಳಲ್ಲಿ ನಿರಂತರವಾಗಿ ಜೊತೆನಿಂತವರು. ಸ್ವಯಂ ಶರದ್ ಅವರು ಎಪ್ಪತ್ತರ ದಶಕದ ಲೀಗ್ ಕ್ರಿಕೆಟ್ಟಿನಲ್ಲಿ ಆಡುತ್ತಿದ್ದರು.
ರಾಹುಲ್ ಶಾಲೆಯ ದಿನಗಳಲ್ಲಿ ತನ್ನ ಕ್ರಿಕೆಟ್ ಆಟದಿಂದ ಪತ್ರಿಕೆಗಳನ್ನು ಆಕರ್ಷಿಸುತ್ತಿದ ದಿನಗಳಲ್ಲಿ ಆತನ ಹೆಸರು ಡೇವಿಡ್ ಅಲ್ಲ, ಡ್ರಾವಿಡ್ ಅಲ್ಲ, ದ್ರಾವಿಡ್ ಎಂದು ಆಗಾಗ ಪತ್ರಕರ್ತರನ್ನು ತಿದ್ದುತಿದ್ದುದೂ ಉಂಟು.
ಕಿಸಾನ್ ಜಾಮ್ ಸಂಸ್ಥೆಯಲ್ಲಿ ಮಾಜಿ ಉದ್ಯೋಗಿಯಾಗಿದ್ದ 79 ವರ್ಷ ವಯಸ್ಸಿನ ಶರದ್ ದ್ರಾವಿಡ್ ಅವರು ಸೌಮ್ಯ ಸ್ವಭಾವದ ಸರಳ ಸಜ್ಜನ ವ್ಯಕ್ತಿಯಾಗಿದ್ದರು. ದ್ರಾವಿಡ್ ಗೆ 'ಜ್ಯಾಮಿ' ಎಂಬ ಅಡ್ಡಹೆಸರು ಬಂದಿದ್ದು ಶರದ್ ಅವರ ಜಾಮ್ ಕಂಪನಿ ಕಡೆಯಿಂದ.
ಮಹಾರಾಷ್ಟ್ರ ಮೂಲದ ದೇಶಸ್ಥ ಬ್ರಾಹ್ಮಣ ಕುಟುಂಬದಿಂದ ಬಂದ ಶರದ್ ಅವರು ಇಂದೋರಿನಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದರು. ಶರದ್ ಅವರ ಪತ್ನಿ ಪುಷ್ಪಾ ಅವರು ಯುವಿಸಿಇನಲ್ಲಿ ಆರ್ಕಿಟೆಕ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. “ರಾಹುಲ್ ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ವಿಪರೀತ ಒಲವು ಇರಿಸಿಕೊಂಡಿದ್ದ. ದೇಶಕ್ಕಾಗಿ ಆಡುವುದು ಅವನ ಅಪೇಕ್ಷೆಯಾಗಿತ್ತು. ಅವನ ಕನಸು ನನಸಾದುದಕ್ಕೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ” ಎಂದು ಶರದ್ ದ್ರಾವಿಡ್ ಅವರು ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್ಟಿಗೆ ವಿದಾಯ ಹೇಳಿದಾಗ ಪ್ರತಿಕ್ರಿಯೆ ನೀಡಿದ್ದರು. “ಮಗನ ಭವಿಷ್ಯದ ಬಗ್ಗೆ ಎಲ್ಲಾ ತಂದೆಗಳಂತೆ ನನಗೂ ಭಯ ಕಾಡಿತ್ತು. ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ರಾಹುಲ್ ಓದುವಾಗ ಆತನ ಭವಿಷ್ಯದ ಬಗ್ಗೆ ಯೋಚನೆ ಶುರುವಾಗಿತ್ತು. ಕ್ರಿಕೆಟ್ಟಿನಲ್ಲಿ ಅವಕಾಶ ದೊರೆಯದೇ ಹೋದರೆ ಏನು ಮಾಡುವುದು ಎಂದು ಚಿಂತಿಸಿದ್ದೆ. ಆದರೆ, ರಾಹುಲ್ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ” ಎಂದು ಶರದ್ ಅವರು ಹೇಳಿದ್ದರು.
ಸರಳ ಸಜ್ಜನಿಕೆಗಳಿಗೆ ಹೆಸರಾದ ಶರದ್ ದ್ರಾವಿಡ್ ಅವರು ಯಾವಾಗಲೂ ನಗುಮೊಗದಿಂದ ಎಲ್ಲರೊಂದಿಗೆ ಉತ್ತಮವಾಗಿ ಸಂಭಾಷಿಸುತ್ತಾ ಸ್ನೇಹಜೀವಿಯಾಗಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಬಹುತೇಕ ಪಂದ್ಯಗಳ ಪ್ರತ್ಯಕ್ಷದರ್ಶಿಗಳಾಗಿದ್ದ ಈ ಶರದ್ ದ್ರಾವಿಡ್ ಎಂಬ ಕ್ರಿಕೆಟ್ ಪ್ರೇಮಿ ಮತ್ತು ಕ್ರಿಕೆಟ್ ಶ್ರೇಷ್ಠ ಶಿಲ್ಪಿಯನ್ನು ನಾಡು ಕಳೆದುಕೊಂಡು ಬಡವಾಗಿದೆ.
ಶರದ್ ದ್ರಾವಿಡ್ ಎಂಬ ಈ ಮಹಾನ್ ಚೇತನಕ್ಕೆ ನಮ್ಮ ಹೃದಯಪೂರ್ವಕ ನಮನಗಳು. ಅವರ ಕುಟುಂಬಕ್ಕೆ ಈ ಹಿರಿಯರ ಅಗಲಿಕೆಯನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸೋಣ.
Tag: Sharad Dravid
ಕಾಮೆಂಟ್‌ಗಳು