ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಿತಿಕಾ ಪದ್ಮನಾಭ್

ನನ್ನ ಕಥೆ : ರಿತಿಕಾ ಪದ್ಮನಾಭ್
ನಿರೂಪಣೆ: ಎಂ. ಎಸ್.  ಅಮಿತ್

ಅನೇಕ ಸಿನಿಮಾಗಳಲ್ಲಿ ಹಾಡಿದ್ದರೂ ಶಾಸ್ತ್ರೀಯ ಸಂಗೀತದತ್ತಲೇ ಒಲವು. ಶಾಸ್ತ್ರೀಯ ಸಂಗೀತ ಮನೋಧರ್ಮಕ್ಕೆ ಹತ್ತಿರವಾದದ್ದು. ಇಲ್ಲಿ ಆಯ್ಕೆಗೆ ಅವಕಾಶ ವಿಪುಲ. ನಮ್ಮದೇ ಶೈಲಿಯ ರಾಗಕ್ಕೆ ಜೀವ ನೀಡಬಹುದು. ಚಿಕ್ಕವಳಿದ್ದಾಗಲೇ ಭಾವಗೀತೆ ಮತ್ತು ಸಿನಿಮಾ ಸಂಗೀತವನ್ನು ಹೊಕ್ಕಿದ್ದು ಲಾಭವೇ ಆಯಿತು. ಏಕೆಂದರೆ ಕೇವಲ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದರೆ ಸಂಗೀತದ ವೈವಿಧ್ಯ ತಿಳಿಯುತ್ತಿರಲಿಲ್ಲ. ಈಗ ಶಾಸ್ತ್ರೀಯ, ಪಾಶ್ಚಿಮಾತ್ಯ, ಲಘು ಸಂಗೀತ ಎಲ್ಲವೂ ಒಲಿದಿದೆ.

ವಾಯ್ಸ ಆಫ್ ಇಂಡಿಯಾದಲ್ಲಿ ಭಾಗವಹಿಸಿದ್ದಾಗಲೂ ಅದನ್ನೇ ಹೇಳಿದ್ದರು. ಎಲ್ಲಾ ಪ್ರಾಕಾರಗಳಿಗೂ ನೀವು ಹೊಂದಿಕೊಳ್ಳುತ್ತೀರಿ ಎಂದು. ನಾನು ಸಂಗೀತ ರಿಯಾಲಿಟಿ ಶೋಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವಳಲ್ಲ. ಆಗ ತಾನೆ 12ನೇ ತರಗತಿ ಮುಗಿದಿತ್ತು. ಎಂಜಿನಿಯರಿಂಗ್ ತರಗತಿ ಶುರುವಾಗಲು ಸಮಯವಿತ್ತು. ಸುಮ್ಮನೆ ಪ್ರಯತ್ನಿಸೋಣ ಎಂದು ಆಡಿಷನ್‌ನಲ್ಲಿ ಭಾಗವಹಿಸಿದ್ದವಳಿಗೆ ಆಯ್ಕೆಯಾಗುವ ನಿರೀಕ್ಷೆಯಿರಲಿಲ್ಲ. ಟಾಪ್ 12ರ ಸ್ಥಾನದೊಳಗೆ ಪ್ರವೇಶ ಪಡೆದೆ.

ಹೀಗೆ ಸ್ಟಾರ್ ಪ್ಲಸ್ ವಾಹಿನಿಯ `ವಾಯ್ಸ ಆಫ್ ಇಂಡಿಯಾ'ದೊಳಗೆ ಕಾಲಿರಿಸಿದ್ದು. ಅದರಿಂದ ಲಾಭವೂ ಆಯಿತು, ನಷ್ಟವೂ ಆಯಿತು. ಸುರತ್ಕಲ್‌ನಲ್ಲಿ ಸಿಗಬೇಕಿದ್ದ ಎಂಜಿನಿಯರಿಂಗ್ ಸೀಟು ಕೈತಪ್ಪಿತು. ದಕ್ಷಿಣ ಭಾರತೀಯ ಹಾಡುಗಾರರಿಗೆ ಹೆಚ್ಚು ಓಟ್ ಬೀಳುವುದಿಲ್ಲ. ಮುಂದೆ ಹೋಗುವುದೂ ಇಲ್ಲ ಎಂದು ಭಾವಿಸಿದ್ದೆ. ಅಚ್ಚರಿಯೆಂಬಂತೆ ಕರ್ನಾಟಕ ಮಾತ್ರವಲ್ಲ, ದೇಶದ ಮೂಲೆ ಮೂಲೆಯ ಜನ ನನ್ನ ದನಿಯನ್ನು ಇಷ್ಟಪಟ್ಟರು. ಸುಖ್ವಿಂದರ್ ಸಿಂಗ್, ಸೋನು ನಿಗಮ್, ಮಾಂಟಿ ಶರ್ಮಾ, ಇಸ್ಮಾಯಿಲ್ ದರ್ಬಾರ್‌ರಂಥ ಶ್ರೇಷ್ಠರ ಜೊತೆ ಸಮಾಲೋಚನೆ ನಡೆಸುವ ಅಪೂರ್ವ ಅವಕಾಶ ಅಲ್ಲಿ ಸಿಕ್ಕಿತು. `ನಿಮ್ಮ ಧ್ವನಿ ರೆಕಾರ್ಡಿಂಗ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ' ಎಂದು ಸೋನು ನಿಗಮ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನನಗೆ ಅಮ್ಮನೇ ಮೊದಲ ಗುರು. ಮನೆಯಲ್ಲಿ ವೃತ್ತಿಪರ ಸಂಗೀತಗಾರರು ಇಲ್ಲದಿದ್ದರೂ ಸಂಗೀತದ ವಾತಾವರಣ. ಅಮ್ಮ ಭಾವಗೀತೆಗಳ ಹಾಡುಗಾರ್ತಿ. ಅಜ್ಜಿ ವಯಲಿನ್ ನುಡಿಸುತ್ತಿದ್ದರು. ಅಕ್ಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತವಳು. ಹಾಡಲು ಪ್ರಾರಂಭಿಸಿದ್ದು ಎರಡನೇ ವಯಸ್ಸಿನಲ್ಲಿ. ಅಮ್ಮ ವಿವಿಧ ಸ್ಪರ್ಧೆಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಸ್ಪರ್ಧೆಯೊಂದಕ್ಕೆ ತೀರ್ಪುಗಾರರಾಗಿ ಬಂದಿದ್ದ ಮಾಲತಿ ಶರ್ಮಾ ಅಮ್ಮನ ಬಳಿ, `ನಿಮ್ಮ ಮಗಳು ಚೆನ್ನಾಗಿ ಹಾಡುತ್ತಾಳೆ, ಸಂಗೀತ ಕಲಿಸಿ' ಎಂದರು.

ಮಾಲತಿ ಶರ್ಮಾ ಅವರ ಬಳಿಯೇ ನನ್ನ ಸಂಗೀತ ಕಲಿಕೆ ಶುರುವಾಯಿತು. ಅವರು ಕಲಿಸುತ್ತಿದ್ದ್ದ್ದದು ಭಾವಗೀತೆಗಳನ್ನು. ಆಗ ನನಗೆ ನಾಲ್ಕು ವರ್ಷ. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆ ಪ್ರಾರಂಭಿಸಿದೆ. ಹಿಂದೂಸ್ತಾನಿ ಕಲಿಯಬೇಕು ಎಂದು ನನ್ನಲ್ಲಿ ಅದರತ್ತ ಒಲವು ಮೂಡಿಸಿದ್ದು ಸಹ ಮಾಲತಿ ಶರ್ಮಾ. ಏಳು ವರ್ಷದವಳಿದ್ದಾಗ ಒಮ್ಮೆ ಪಂ. ವಿನಾಯಕ ತೊರವಿ ಅವರ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಗೀತಾ ಹೆಗಡೆ ಅವರ ಪರಿಚಯವಾಯಿತು. ಕರ್ನಾಟಕ ಶಾಸ್ತ್ರೀಯದಿಂದ ಹಿಂದೂಸ್ತಾನಿಯತ್ತ ಮನಸ್ಸು ವಾಲಿತು. ಆಗಿನಿಂದ ಈಗಲೂ ಗೀತಾ ಹೆಗಡೆ ಅವರ ಬಳಿ ನನ್ನ ಕಲಿಕೆ ಸಾಗಿದೆ. ಅವರು ನನ್ನ ಎರಡನೇ ಅಮ್ಮನಂತೆ. ಹೀಗೆ ಬುದ್ಧಿ ತಿಳಿಯುವ ಮುನ್ನವೇ ಸಂಗೀತದ ಒಳಹೊಕ್ಕಿದ್ದೆ. ಈಗ ಸಂಗೀತವಿಲ್ಲದ ನನ್ನ ಬದುಕನ್ನು ಊಹಿಸಿಕೊಳ್ಳಲೂ ಅಸಾಧ್ಯ.

ಒಮ್ಮೆ ಜಗನ್ಮೋಹನ ಪ್ಯಾಲೇಸ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ರತ್ನಮಾಲಾ ಪ್ರಕಾಶ್ ಅವರಿಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ರಾಜು ಅನಂತಸ್ವಾಮಿ ಫೋನ್ ಮಾಡಿ, `ರಿತಿಶಾ ಬರಲಿಕ್ಕಾಗತ್ತಾ?' ಎಂದು ಕೇಳಿದ್ದರು. ನನಗೆ ಅವಕಾಶಗಳು ಸಿಕ್ಕಿದ್ದೇ ಹೀಗೆ. ಐದು ವರ್ಷದವಳಿದ್ದಾಗ ಸಿ. ಅಶ್ವತ್ಥ್ ಸ್ವರಸಂಯೋಜನೆಯಲ್ಲಿ ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತು. ಸಿ. ಅಶ್ವತ್ಥ್ ಅವರು ಅನೇಕ ಧ್ವನಿಸುರುಳಿ, ಕಾರ್ಯಕ್ರಮಗಳಲ್ಲಿ ಹಾಡಿಸಿದರು. ಬಾಲಿ, ಉಪಾಸನಾ ಮೋಹನ್, ರತ್ನಮಾಲಾ ಪ್ರಕಾಶ್ ಮುಂತಾದ ಅನೇಕರು ನನ್ನ ಸಂಗೀತ ಪಯಣಕ್ಕೆ ದಾರಿ ತೋರಿದವರು. ಬಾಲ್ಯದಲ್ಲಿ ಚಿತ್ರಕಲೆಯ ಪ್ರೀತಿಯೂ ಇತ್ತು. ಸಂಗೀತಕ್ಕಾಗಿ ಅದರಿಂದ ದೂರಸರಿಯಬೇಕಾಯಿತು.

ನಾನು ಮೊದಲು ಸಿನಿಮಾಕ್ಕೆ ಹಾಡಿದ್ದು ಏಳು ವರ್ಷದವಳಿದ್ದಾಗ. `ಸೂರ್ಯವಂಶ' ಚಿತ್ರದಲ್ಲಿ ವಿ. ಮನೋಹರ್ `ಒಂದೇ ಒಂದು ಕ್ವೆಶ್ಚನ್ ಕೇಳ್ತೀನಿ...' ಹಾಡನ್ನು ಹಾಡಿಸಿದರು. ಗುರುಕಿರಣ್, ಹಂಸಲೇಖ, ಎಲ್.ಎನ್.ಶಾಸ್ತ್ರಿ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಬಾಲ ಗಾಯಕಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಬಾಲ್ಯದಲ್ಲಿ ಭಾವಗೀತೆ ಮತ್ತು ಸಿನಿಮಾ ಎರಡರಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತಿತ್ತು. ಅಷ್ಟು ಅದೃಷ್ಟವಂತೆ ನಾನು. ಒಂದು ರೀತಿಯಲ್ಲಿ ಬಾಲ್ಯ ಸಂಗೀತದಲ್ಲೇ ಮುಳುಗಿಹೋಗಿತ್ತು. ಆಟದ ಜಾಗವನ್ನೂ ಆವರಿಸಿತ್ತು.

ಸಂಗೀತದಲ್ಲೇ ತಲ್ಲೆನಳಾಗಿರುತ್ತಿದ್ದೆ. ಒಂಬತ್ತನೇ ತರಗತಿಯಲ್ಲಿದ್ದಾಗ ಹಂಸಲೇಖ ಸರ್ `ನಿನ್ನ ದನಿ ಇನ್ನೂ ಮೆಚ್ಯೂರ್ ಆಗಿಲ್ಲ. ಪುಟ್ಟ ಹುಡುಗಿಯ ಹಾಗೆಯೇ ಕೇಳಿಸುತ್ತದೆ' ಎಂದಿದ್ದರು. ಅಲ್ಲಿಂದ ಮುಂದೆ ಸಿನಿಮಾಕ್ಕೆ ಹಾಡಿರಲಿಲ್ಲ. ಓದು ಮತ್ತು ಸಂಗೀತ ಎರಡನ್ನೂ ನಿಭಾಯಿಸುವುದು ಕಷ್ಟವೆನಿಸಲಿಲ್ಲ. ಎಷ್ಟೋ ಬಾರಿ ಪರೀಕ್ಷೆ ಹಿಂದಿನ ದಿನ ಕಾರ್ಯಕ್ರಮವಿರುತ್ತಿತ್ತು. ಕಲಿಕೆಯಂತೂ ನಿರಂತರ. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿಯಿಡೀ ಓದುವುದು. ಮಾಡಬೇಕು ಎಂಬ ಛಲವಿದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು. ನನ್ನ ಪ್ರತಿ ಹೆಜ್ಜೆಗೂ ಗುರುಗಳಾದ ಗೀತಾ ಹೆಗಡೆ ಅವರಿಂದ ಪ್ರೋತ್ಸಾಹ ಸಿಗುತ್ತದೆ. ಗುರುಗಳ ಮಗ ಧನಂಜಯ ಹೆಗಡೆ ಕೂಡ ನನ್ನ ಸಂಗೀತದ ಸ್ಫೂರ್ತಿ.

ರಿಯಾಲಿಟಿ ಶೋಗಳಲ್ಲಿ ಹಾಡುವಾಗ ಬಾಲಿವುಡ್ ಸಂಗೀತಕ್ಕೆ ಹೋಗಬೇಕೆಂಬ ಕ್ರೇಜ್ ಸಹಜ. ಅದಕ್ಕೆ ಅವಕಾಶವೂ ಸಿಕ್ಕಿತ್ತು. ವಾಯ್ಸ ಆಫ್ ಇಂಡಿಯಾದಿಂದ ಹೊರಬರುವಾಗ ಸುಖ್ವಿಂದರ್ ಸಿಂಗ್, `ನನ್ನ ಮುಂದಿನ ಸಂಗೀತ ಸಂಯೋಜನೆಯಲ್ಲಿ ಹಾಡುವುದು ರಿತಿಶಾ' ಎಂದು ಘೋಷಿಸಿದ್ದರು. ಆದರೆ ನನಗೆ ಓದು ಮುಖ್ಯವಾಗಿತ್ತು. 12ನೇ ತರಗತಿಯಷ್ಟೇ ಮುಗಿಸಿದ್ದವಳಿಗೆ ಎಂಜಿನಿಯರಿಂಗ್ ಮಾಡುವ ಹಂಬಲ. ಶಾಸ್ತ್ರೀಯ ಸಂಗೀತ ಬಿಟ್ಟು ಸಿನಿಮಾದಲ್ಲಿ ಮುಳುಗುವುದು ನನ್ನ ಆಯ್ಕೆಯಾಗಿರಲಿಲ್ಲ.

ಬಾಲಿವುಡ್‌ನಲ್ಲಿ ಹಾಡಬೇಕೆಂದರೆ ಮುಂಬೈನಲ್ಲಿ ನೆಲೆಯೂರಬೇಕು. ನನ್ನ ಜೊತೆ ವಾಯ್ಸ ಆಫ್ ಇಂಡಿಯಾದಲ್ಲಿ ಹಾಡಿದ್ದ ಅನೇಕರು ಮುಂಬೈನಲ್ಲಿ ನೆಲೆಕಂಡಿದ್ದರು. ಕರೆದಾಗ ಬೆಂಗಳೂರಿನಿಂದ ಅಲ್ಲಿಗೆ ಹೋಗಿ ಹಾಡಿ ಬರುವುದು ಕಷ್ಟ. ಓದು ಬಿಟ್ಟು ಅವಕಾಶಕ್ಕಾಗಿ ಮುಂಬೈನಲ್ಲಿ ಹೆಣಗಾಡುವುದು ಅಗತ್ಯವಾಗಿರಲಿಲ್ಲ. ಓದು ಮುಗಿಯಲಿ ಮುಂದೆ ನೋಡೋಣ ಎಂದು ಹಿಂದಿರುಗಿದೆ.

ವಾಯ್ಸ ಆಫ್ ಇಂಡಿಯಾ ಮುಗಿಯುವವರೆಗೂ ಸಿನಿಮಾದಲ್ಲಿ ಹಾಡಿರಲಿಲ್ಲ. ಆಗ ಮೊದಲು  `ಜನ್ಮ' ಚಿತ್ರದಲ್ಲಿ ಅವಕಾಶವಿತ್ತದ್ದು ಅನೂಪ್ ಸೀಳಿನ್. ಅವರ ಮತ್ತೊಂದು ಚಿತ್ರದಲ್ಲಿ ಒಂದು ತುಣುಕು ಹಾಡು ಹಾಡಿದ್ದೆ. ಅದನ್ನು ಕೇಳಿದ್ದ ಮನೋಮೂರ್ತಿ `ಗೋಕುಲ' ಚಿತ್ರದಲ್ಲಿ ಅವಕಾಶವಿತ್ತರು. ಆ ಚಿತ್ರದ `ಬರುವೆ ಓಡಿ ಓಡಿ... ಹಾಡಿಗೆ `ಯುನಿನಾರ್ ಮಿರ್ಚಿ ಸೌತ್ ಮ್ಯೂಸಿಕ್ ಅವಾರ್ಡ್' ಲಭಿಸಿತು. ಈಗ ಹಾಡಿರುವ ಚಿತ್ರಗಳ ಸಂಖ್ಯೆ ಅರ್ಧಶತಕ ದಾಟಿದೆ. ಕ್ರಿಯೇಟಿವ್ ಪರ್ಫಾರ್ಮೆನ್ಸ್‌ಗಾಗಿ ನೀಡುವ ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪಡೆದ ಸಂದರ್ಭವದು. ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಶ್ಲೋಕಗಳು ಬರುತ್ತವೆಯೇ ಎಂದು ಕೇಳಿದ್ದರು. ಆರನೇ ತರಗತಿಯಲ್ಲಿದ್ದಾಗ ಕಲಾಮ್ ಅವರಿಂದ ಪ್ರಶಸ್ತಿ ಸ್ವೀಕರಿಸುವುದರ ಜೊತೆಗೆ ಅವರ ಆಸೆಯಂತೆ ಮೂರು ಶ್ಲೋಕಗಳನ್ನು ಹಾಡಿದ ಗಳಿಗೆಯನ್ನೆಂದೂ ಮರೆಯಲು ಸಾಧ್ಯವಿಲ್ಲ.

ದೆಹಲಿ, ಪಾಂಡಿಚೇರಿ, ಮುಂಬೈಗಳಲ್ಲಿ ಸಂಗೀತ ಪ್ರದರ್ಶನ ನೀಡಿದ್ದೇನೆ. ವಾಯ್ಸ ಆಫ್ ಇಂಡಿಯಾದಲ್ಲಿದ್ದಾಗ ಅಹಮದಾಬಾದ್, ಪುಣೆ, ಲಖನೌಗಳಲ್ಲಿ ಹಾಡುವ ಅವಕಾಶ ಲಭಿಸಿತ್ತು. ಇತ್ತೀಚೆಗೆ ಕುವೈತ್‌ನಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಗಾನ ಗಂಗಾ ಪ್ರಶಸ್ತಿ, ಲಿಯೊನಾರ್ಡೊ ಡಾ ವಿಂಚಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಉತ್ಸಾಹ ಹೆಚ್ಚಿಸಿವೆ.

ಅಕಮಾಯ್ ಟೆಕ್ನಾಲಜೀಸ್‌ನ ಉದ್ಯೋಗಿ ನಾನು. ಕೆಲಸದೊತ್ತಡದ ನಡುವೆ ಸಂಗೀತವನ್ನು ಕೊಂಡೊಯ್ಯುವುದು ಸುಲಭವಲ್ಲ. ಸಿಗುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವುದರಿಂದ ರಿಯಾಜ್ ಚೆನ್ನಾಗಿ ನಡೆಯುತ್ತಿದೆ. ಸಂಗೀತ ನನ್ನೊಳಗೆ ಬೆಳೆಯಬೇಕು. ನನ್ನನ್ನು ನಾನು ಸುಧಾರಿಸಿಕೊಳ್ಳುತ್ತಲೇ ಅದನ್ನು ಜನರಿಗೆ ತಲುಪಿಸಬೇಕು. ಸಿನಿಮಾ ಸಂಗೀತದೊಂದಿಗಿನ ಒಡನಾಟ, ಶಾಸ್ತ್ರೀಯ ಸಂಗೀತವನ್ನು ಜನರಿಗೆ ತಲುಪಿಸುವುದಕ್ಕೆ ಕೊಂಡಿಯಾಗುತ್ತದೆ ಎನ್ನುವುದು ನನ್ನ ನಂಬಿಕೆ. ಸಿನಿಮಾ ಹಾಡುಗಳನ್ನು ಕೇಳಿದವರು, ಸಹೋದ್ಯೋಗಿಗಳು ನನ್ನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೂ ಬರುತ್ತಿದ್ದಾರೆ. ಅವರಲ್ಲಿಯೂ ಸಂಗೀತದ ಅಭಿರುಚಿ ಬೆಳೆಯುತ್ತಿದೆ.

ಇತ್ತೀಚಿನ ಸಿನಿಮಾ ಹಾಡುಗಳಲ್ಲಿ ಮನರಂಜನೆ ಮತ್ತು ಮಾಧುರ್ಯ ಎರಡೂ ಇದೆ. ಶಾಸ್ತ್ರೀಯ ಸಂಗೀತಕ್ಕೆ ಆದ್ಯತೆಯಾದರೂ ಎಲ್ಲಾ ಪ್ರಕಾರಕ್ಕೂ ತೆರೆದುಕೊಳ್ಳಬೇಕು. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕರೆ ಖಂಡಿತಾ ಹಾಡುತ್ತೇನೆ. ಸ್ವರ ಸಂಯೋಜನೆಗೆ ಅವಕಾಶ ಸಿಕ್ಕರೆ ಅದಕ್ಕೂ ಹಿಂದೇಟು ಹಾಕುವುದಿಲ್ಲ.

ಕೃಪೆ: ಪ್ರಜಾವಾಣಿ

Tag: Ritika Padmanabh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ