ಬುಧವಾರ, ಸೆಪ್ಟೆಂಬರ್ 25, 2013

ಮತ್ತೊಬ್ಬರ ಕುರಿತು ಮಾತನಾಡುವುದಕ್ಕೆ ಮೊದಲು ......

ಮತ್ತೊಬ್ಬರ ಕುರಿತು ಮಾತನಾಡುವುದಕ್ಕೆ ಮೊದಲು ......

ನಾವೆಲ್ಲಾ ಗ್ರೀಸ್ ದೇಶದ ಮಹಾನ್ ದಾರ್ಶನಿಕರಾದ ಸಾಕ್ರೆಟಿಸರ ಬಗ್ಗೆ ಕೇಳಿದ್ದೇವೆ.  ಒಮ್ಮೆ ಸಾಕ್ರೆಟೀಸರನ್ನು ಬಲ್ಲ  ಆಗಂತುಕನೊಬ್ಬ ಓಡೋಡಿ ಬಂದ.  ಹೀಗೆ ಓಡೋಡಿ ಬಂದವನಿಗೆ ತಾನು ಕೇಳಿದ ಗಾಳಿ ಸುದ್ಧಿಯೊಂದನ್ನು  ಸಾಕ್ರೆಟೀಸರಿಗೆ ಹೇಳಿ, ಭೇಷ್ ಎನಿಸಿಕೊಳ್ಳುವ ಚಪಲ!   ಬಂದವನೇ ಏದುಸಿರಿನಲ್ಲೇ ಹೇಳತೊಡಗಿದ.  ಸಾಕ್ರೆಟಿಸರೆ,  “ನಿಮ್ಮ ಗೆಳೆಯನ ಬಗ್ಗೆ ಒಂದು ವಿಚಾರ ತಿಳಿಯಿತು.   ಅದನ್ನ ಹೇಳೋಣವೆಂದು, ಓಡೋಡಿ ಬಂದೆ”.

ಕುಳಿತುಕೋ ತಮ್ಮಾ”,  ಪ್ರಶಾಂತರಾಗಿ ನುಡಿದ ಸಾಕ್ರೆಟೀಸರು, ಆ ವ್ಯಕ್ತಿ ಆಸೀನನಾದಂತೆ ಶಾಂತರಾಗಿ ನುಡಿದರು   ಬೇರೆಯವರ ವಿಚಾರವನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ನಾನು ಮೂರು ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಇಚ್ಚಿಸುತ್ತೇನೆ!”.

ಬಂದ ಅತಿಥಿ ಸ್ವಲ್ಪ ವಿಚಲಿತನಾದ.    ಆದರೆ, ಸಾಕ್ರೆಟಿಸರಂತಹ ಪ್ರಶಾಂತತೆಯ ಮುಂದೆ ಆತನ ಮಾತು ಕಟ್ಟಿ ಹೋಗಿತ್ತು.  

ಸಾಕ್ರೆಟಿಸರೇ ಮೌನ ಮುರಿದರು.   ತಮ್ಮಾ, ಈಗ ನೀನು ನನ್ನ ಗೆಳೆಯನ ಬಗ್ಗೆ ಹೇಳಬೇಕೆಂದಿರುವ ಮಾತು ಸತ್ಯವಾದದ್ದು ಎಂದು ನಿನಗೆ ಮನವರಿಕೆಯಾಗಿದೆಯೇ?”.

ಸಾಕ್ರೆಟೀಸರ ಮಾತಿನಲ್ಲಿದ್ದ ತೇಜಸ್ಸಿನ ಮುಂದೆ ಆಗಂತುಕ ಸುಳ್ಳು ಹೇಳದಾದ.  ಇಲ್ಲ ಪೂಜ್ಯರೇ, ಈಗ ನಾನು ನಿಮಗೆ ಹೇಳಬೇಕೆಂದಿರುವ ವಿಚಾರ ನಾನು ಇತರರಿಂದ ಕೇಳಿದ್ದು....

ಚಿಂತೆಯಿಲ್ಲ ತಮ್ಮಾ, ಹಾಗಾಗುವುದು ಸಹಜ!”  ಬಂದವನನ್ನು ತೀವ್ರ ನೋಯಿಸದಂತೆ ಎಚ್ಚರ ವಹಿಸಿದ ಸಾಕ್ರೆಟೀಸ್ ಮುಂದುವರೆಸಿದರು.   ತಮ್ಮಾ, ನೀನು ನನ್ನ ಗೆಳೆಯನ ಬಗ್ಗೆ ಹೇಳಬೇಕೆಂದಿರುವ ಮಾತು,  ಆತನ ಕುರಿತ ಶುಭಸಮಾಚಾರವೇನು?”

ಸಾಕ್ರೆಟಿಸರ ತೇಜಃಪೂರ್ಣ ಮಾತುಗಳಲ್ಲಿ  ತೋಯುತ್ತಿರುವ ಅನುಭಾವದಲ್ಲಿ  ಬಂದವ ನುಡಿದ, “ಇಲ್ಲ ಪೂಜ್ಯರೇ, ನಾನು ಕೇಳಿರುವ ಮಾತುಗಳು ಶುಭಕರವಾದುದಲ್ಲ”.

ಅಂದರೆ, ನೀನು ನನ್ನ ಗೆಳೆಯನ ಬಗ್ಗೆ ಹೇಳಬೇಕೆಂದಿರುವ ವಿಷಯ ಕೆಡುಕಿನದ್ದು ಎಂದಾಯಿತು.  ಹೋಗಲಿ ಬಿಡು ತಮ್ಮಾನನ್ನ ಗೆಳೆಯನ ಬಗ್ಗೆ ನೀನು ಹೇಳುವ ಮಾತುಗಳಿಂದ ನನಗಾಗಲೀ, ನಿನಗಾಗಲೀ ಏನಾದರೂ ಪ್ರಯೋಜನವಿದೆಯೇ?” 

ಇಲ್ಲ ಪೂಜ್ಯರೇ, ಇಂತಹ ವಿಚಾರದಿಂದ ಯಾರಿಗೂ ಪ್ರಯೋಜನವಿಲ್ಲ!ಸಾಕ್ರೆಟಿಸರ ಎದುರಲ್ಲಿ ಬಂದ ಅತಿಥಿ ವಿನೀತನಾದ. 

ಸಾಕ್ರೆಟಿಸರು ಪ್ರೀತಿಯಿಂದ ನುಡಿದರು: ಈಗ ಹೇಳು ತಮ್ಮಾ, ಯಾವುದು ಸತ್ಯವಲ್ಲವೋ, ಯಾವುದು ಒಳಿತಿನ ಸುದ್ಧಿಯಲ್ಲವೋ, ಯಾವುದರಿಂದ ನಮಗೆ ಕಿಂಚಿತ್ತೂ  ಉಪಯೋಗವಿಲ್ಲವೋ ಅಂತಹ ಮಾತುಗಳು  ನಮಗೆ ಬೇಕೆ?”.


ನೀವು ಹೇಳಿದ ವಿಷಯದಿಂದ ನನ್ನ ಕಣ್ತೆರೆಸಿದಿರಿ, ನನ್ನನ್ನು ಕೃಪೆ ಮಾಡಿ ಕ್ಷಮಿಸಿ ಮಹಾನುಭಾವ”, ಭಾವುಕನಾಗಿ ಕಣ್ತುಂಬಿ ಭಕ್ತನಂತೆ ನಿಂತ ಆ ಆಗಂತುಕ.

Tag: Mattobbara bagge maatanaaduvudakke munche,  Before talking about others

ಕಾಮೆಂಟ್‌ಗಳಿಲ್ಲ: