ಮಂಗಳವಾರ, ಸೆಪ್ಟೆಂಬರ್ 3, 2013

ಬೆಳ್ಳಿ ಹೆಜ್ಜೆಯಲ್ಲಿ ಎಂ. ಎಸ್. ಉಮೇಶ್

ಬೆಳ್ಳಿ ಹೆಜ್ಜೆಯಲ್ಲಿ  ಎಂ. ಎಸ್. ಉಮೇಶ್

`ನನ್ನ ಮನೆಯಲ್ಲಿ ಶಾಲು, ಸ್ಮರಣಿಕೆಗಳೇ ತುಂಬಿವೆ. ನಿಮಗೊಂದು ಸತ್ಯ ಹೇಳ್ತೇನೆ. ಅದನ್ನು ಯಾರಿಗೂ ಹೇಳಬೇಡಿ. ನಾ ಇಂದು ತೊಟ್ಟಿರುವ ಪ್ಯಾಂಟು ಶರ್ಟುಗಳೆರಡನ್ನೂ ಅಭಿಮಾನಿಗಳು ಸನ್ಮಾನಿಸಿ ಹೊದಿಸಿದ್ದ ಶಾಲುಗಳಿಂದಲೇ ಹೊಲಿಸಿದ್ದೇನೆ` ಎಂದು ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಳ್ಳಿ ಹೆಜ್ಜೆ` ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂದಿನಂತೆ ತೆರೆಯ ಮೇಲಿನ ಹಾಸ್ಯಧಾಟಿಯಲ್ಲೇ ತಮ್ಮ ನೋವು- ನಲಿವುಗಳನ್ನು ಹಂಚಿಕೊಂಡರು.

ನಾ ಓದಿದ್ದು ಕೇವಲ 2ನೇ ತರಗತಿ. ಆದರೆ, ನನ್ನ ಭಾಷೆಯನ್ನು ಸ್ಫುಟಗೊಳಿಸಿದ್ದು, ನಟನೆ ತಿಳಿಸಿಕೊಟ್ಟಿದ್ದು ರಂಗಭೂಮಿ`.

`ಮನೆ ಮಂದಿಯೆಲ್ಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರಿಂದ ನಟನಾಗಬೇಕೆಂಬ ಯಾವ ಕನಸನ್ನು ಹೊತ್ತುಕೊಳ್ಳದೇ ಸಹಜವಾಗಿ ನಟನಾದೆ. ತಂದೆ ಗುಬ್ಬಿ ಕಂಪೆನಿಯಲ್ಲಿ ನಟನಾಗಿದ್ದರಿಂದ `ತೊಟ್ಟಿಲು ಮಕ್ಕಳ`ಪಾತ್ರದಿಂದ ನಟನಾ ವೃತ್ತಿ ಆರಂಭಿಸಿದೆ. ಗುಬ್ಬಿ ವೀರಣ್ಣ, ಕೆ. ಹಿರಣ್ಣಯ್ಯ ಅವರೊಂದಿಗೆ ನಟಿಸಿದ್ದೇನೆ. ಇಡೀ ರಂಗಭೂಮಿಯೇ ನನ್ನನ್ನು ಮಗನಂತೆ ಆದರಿಸಿದೆ` ಎಂದು ಹೇಳಿದರು.

`ರಂಗಭೂಮಿಯಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದೆ. ಆದರೆ, ಪುಟ್ಟಣ್ಣ ಕಣಗಾಲ್ ಅವರ `ಮಕ್ಕಳ ರಾಜ್ಯ` ಸಿನಿಮಾಕ್ಕೆ ಆಯ್ಕೆಯಾಗುವ ಮೂಲಕ ಸಿನಿಮಾ ಲೋಕಕ್ಕೆ ಪದಾರ್ಪಣೆಗೊಂಡೆ. ಆಗೆಲ್ಲ ಸಿನಿಮಾಗಳಿಗೆ ಆಯ್ಕೆಯಾಗುವ ಮಾನದಂಡವೇ ಬಹಳ ಕಠಿಣವಾಗಿತ್ತು. ಹಲವು ಪರೀಕ್ಷೆಗಳನ್ನು ಎದುರಿಸಿ ಬಿ.ಆರ್.ಪಂತುಲು ಮತ್ತು ಪುಟ್ಟಣ್ಣ ಕಣಗಾಲ್ ಅವರಿಂದ ಸೈ ಅನಿಸಿಕೊಂಡೆ` ಎಂದು ತಿಳಿಸಿದರು.

`ಶೂಟಿಂಗ್ ನಂತರ ಬಿಡುವಿನ ವೇಳೆಯಲ್ಲಿ ಪತ್ತೆದಾರಿ ಪುರುಷೋತ್ತಮ, ಬೀಚಿ, ಎನ್.ವಿ.ನರಸಿಂಹಯ್ಯ, ಶಿವರಾಮಕಾರಂತ ಅವರ ಕತೆಗಳನ್ನು ಓದುತ್ತಿದ್ದರಿಂದ ಬರವಣಿಗೆಯೂ ಕರಗತವಾಯಿತು. ವಿವಿಧ ನಿಯತಕಾಲಿಕೆಗಳಲ್ಲಿ ಹಾಸ್ಯ ನಟರ ಸಂದರ್ಶನವನ್ನು ಬರೆದೆ. ಧಾರವಾಹಿಗಳಿಗಾಗಿ ಈವರೆಗೆ ಸುಮಾರು 40 ಕತೆಗಳನ್ನು ರಚಿಸಿದ್ದೇನೆ` ಎಂದು ತಿಳಿಸಿದರು.

`1976 ರಲ್ಲಿ ಕಣಗಾಲ್ ಅವರ `ಕಥಾ ಸಂಗಮ` ನನಗೆ ವಿಶೇಷ ಮಾನ್ಯತೆಯನ್ನು ತಂದುಕೊಟ್ಟಿತು. ಕಣಗಾಲ್ ಅವರಿಂದ  ಸಿನಿಮಾರಂಗಕ್ಕೆ ಪ್ರವೇಶ ಪಡೆದರೆ, ಡಾ.ರಾಜ್‌ಕುಮಾರ್ ಅವರು ತಮ್ಮ ಚಿತ್ರಗಳಲ್ಲಿ ನೀಡಿದ ಪಾತ್ರಗಳಿಂದ ಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು. ಈ ಎರಡು ಚೇತನಗಳು ತೋರಿಸಿದ ಪ್ರೀತಿಯಿಂದಲೇ ಉಮೇಶ್ ಎಂಬ ನಟ ರೂಪುಗೊಳ್ಳಲು ಸಾಧ್ಯವಾಯಿತು.

52 ವರ್ಷದ ವೃತ್ತಿ ಜೀವನ ನನಗೆ ತೃಪ್ತಿ ನೀಡಿದೆ. ಆಗಾಗ್ಗೆ ದೊರೆತ ಒಳ್ಳೆಯ ಪಾತ್ರಗಳಿಂದ ವೈಯಕ್ತಿಕ ನೋವು ಮರೆಯಾಗಿದೆ. ಪ್ರತಿಯೊಂದು ಅರ್ಹತೆಯೂ ವರ, ಸಿಗದೇ ಇದ್ದರೆ ಶಾಪ. ಸಿಗದೇ ಇರುವುದಕ್ಕೆ ಪರಿಸರ ಮತ್ತು ಪರಿಸ್ಥಿತಿ ಎರಡೂ ಕಾರಣವಾಗಿರುತ್ತದೆ. ಇದಕ್ಕೆ ವಿಷಾದವಿಲ್ಲ` ಎಂದು ಸ್ಪಷ್ಟಪಡಿಸಿದರು.

`ಯೌವ್ವನದ ದಿನಗಳಲ್ಲಿ ಅನೇಕ ಹುಡುಗಿಯರು ನನ್ನಿಂದ ಆಕರ್ಷಿತರಾಗಿದ್ದರು. ಆದರೆ, ಅವರೊಂದಿಗೆ ಸ್ನೇಹವಿತ್ತು, ಅದಕ್ಕೂ ಕಷ್ಟವಾಗಿತ್ತು. ಹೀಗಾಗಿ ಅವರ ಕಾಟದಿಂದ ತಪ್ಪಿಸಿಕೊಳ್ಳಲು ಮದುವೆಯಾದೆ`.

`ನನ್ನ ಹೆಂಡತಿ ಕೂಡ ಅದ್ಭುತವಾಗಿ ಹಾಡುತ್ತಿದ್ದಳು. ನಾಟಕಗಳಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಳು. ಅವಳ ಹಾಡಿನ ಮೋಡಿಗೆ ಮರುಳಾದೆ. ಜಾತಿ, ಜಾತಕವನ್ನು ನೋಡದೇ ಪರಮ ಬ್ರಹ್ಮಚಾರಿಯಾದ ಆಂಜನೇಯ ದೇವಸ್ಥಾನದಲ್ಲಿ ಸರಳವಾಗಿ ಹಾರ ಬದಲಾಯಿಸಿಕೊಂಡೆವು` ಎಂದು ನೆನಪಿಸಿಕೊಂಡರು.

`ವೈಯಕ್ತಿಕ ಜೀವನದಲ್ಲಿ ಬಹಳ ನೊಂದಿದ್ದೇನೆ. ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸೇರಿದಂತೆ ಎಲ್ಲ ಆರೋಗ್ಯ ಸಮಸ್ಯೆಗಳನ್ನು ಇಟ್ಟುಕೊಂಡು ವೈದ್ಯರನ್ನು ಸಾಕುತ್ತಿದ್ದೇನೆ. ಕಳೆದ ವರ್ಷ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಒಂದು ಲಕ್ಷ ರೂಪಾಯಿಯನ್ನು ಇದಕ್ಕೆ ವ್ಯಯಿಸಿದ್ದೇನೆ. ಈ ನಡುವೆ ಅಪಘಾತದಲ್ಲಿ ನನ್ನ ಮಗನನ್ನು ಕಳೆದುಕೊಂಡೆ. ನಾ ಹುಟ್ಟಿದು ಆದಿತ್ಯವಾರ, ನನ್ನ ಮಗ ಸತ್ತಿದ್ದು ಆದಿತ್ಯವಾರ. ಅಪ್ಪ ದಶರಥ ಸಾಯುವಾಗ, ಮಗ ರಾಮ ಇರಲಿಲ್ಲ. ಹಾಗೇ ನನ್ನ ಮಗ ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ನಾನಿರಲಿಲ್ಲ.

ಶೂಟಿಂಗ್‌ನಲ್ಲಿದ್ದೆ. ಮಗನ ಶವವನ್ನು ಹೊತ್ತು ತಂದ ಆಟೊದವರಿಗೆ ನೂರು ರೂಪಾಯಿ ನೀಡಲು ನನ್ನಲ್ಲಿ ಹಣವಿರಲಿಲ್ಲ. ಅಪಘಾತ ಪ್ರಕರಣವಾಗಿದ್ದರಿಂದ ಸ್ಮಶಾನದಲ್ಲಿ ಶವಕ್ಕೆ ಪ್ರವೇಶ ನೀಡಲಿಲ್ಲ. ಅಭಿಮಾನಿಗಳು ಸಹಕಾರದಿಂದಲೇ ಮಗನನ್ನ ದಫನ್ ಮಾಡಿದೆ` ಎಂದು ಭಾವುಕರಾದರು.

`ಕೋಟಿಗಟ್ಟಲೆ ಹಣ ಖರ್ಚು ಮಾಡಿ ನಿರ್ಮಾಪಕರು, ನಿರ್ದೇಶಕರು ಸಿನಿಮಾ ತಯಾರಿಸುತ್ತಾರೆ. ಪೋಷಕರ ಕಲಾವಿದರಿಗೆ ಬೇರೆ ಯಾವ ವೃತ್ತಿಯಲ್ಲೂ ನೆಲೆಗೊಳ್ಳಲು ಸಾಧ್ಯವಿಲ್ಲ. ಸುಖಾಸುಮ್ಮನೆ ಧನಸಹಾಯ ಬೇಡ. ಹಿರಿಯ ನಟರಿಗೆ ಪೋಷಕ ಪಾತ್ರ ನೀಡಿ ಅವರ ಜೀವನಕ್ಕೆ ಆಸರೆಯಾಗಿ` ಎಂದು ಅವರು ಮನವಿಮಾಡಿದರು.

ಕೃಪೆ: ಪ್ರಜಾವಾಣಿ

ಉಮೇಶ್ ಅವರ ಕನ್ನಡ ಸಂಪದದ ಲೇಖನ  ಇಲ್ಲಿದೆ: http://www.facebook.com/photo.php?fbid=340717395990589&set=a.104098429652488.6057.101548536574144&type=3&theaterhttp://www.facebook.com/photo.php?fbid=340717395990589&set=a.104098429652488.6057.101548536574144&type=3&theater

Tag: M. S. Umesh

ಕಾಮೆಂಟ್‌ಗಳಿಲ್ಲ: