ಸಂಕ್ರಾಂತಿ
ಸಂಕ್ರಾಂತಿ
ಹಗಲಿನ ಹಬ್ಬದ ಜಾತ್ರೆಯು ಮುಗಿಯಿತು
ರವಿ ಸಂದನು ಪಡುವಣ ಗುಡಿಗೆ
ಕತ್ತಲ ಕಣಿವೆಯೊಳುರುಳುತ ನರಳುವ
ಬೆಳಕಿನ ತೊರೆಯೊಲು ಸಂಜೆಯಿರೆ
ಭೀತಿಯ ಭೂತವು ಜಡೆಯ ಬಿಚ್ಚಿದೊಲು
ಹಿರಿಯಾಲದ ಮರ ನಿಂತಿರಲು
ಕೊಂಬೆ ಕೊಂಬೆಯಲಿ ದುರ್ಮಂತ್ರದವೊಲು
ಎನಿತೋ ಬಾವಲಿ ಜೋತಿರಲು
ಮನ ಬೆದರಿತು ಆ ನೋಟವ ನೋಡಿ
ಜಗವನೆ ಮುಸುಕಿರೆ ಕತ್ತಲ ಮೋಡಿ !
ಚಣ ಯುಗವಾಯಿತು, ಮನ ಹಾರೈಸಿತು
ಬೆಳಕಿನ ಕುಡಿಯೊಂದನು ಬಯಸಿ
ನಿರಾಶೆಯಾಗಸದಾಸೆಯ ಕಿಡಿಗಳೊ
ಎಂಬೊಲು ತಾರೆಗೆ ಕಣ್ ಸುಳಿಸಿ
ಮಿನುಗಲು, ಕತ್ತಲ ಕೊಳದಿಂದರಳಿತೊ
ಬೆಳಕಿನ ಹೂವೊಂದೆಂಬವೊಲು,
ತಿಂಗಳು ಮೂಡಿತು ಬೆಳಕನು ಸುರಿಸಿತು
ಜಗವೇ ಅಚ್ಚರಿಗೊಂಬವೊಲು
ಕತ್ತಲು ಕರಗಿತು ಬೆಳಕಿನೊಳಿಳಿದು
ಬೆಳಕೊಂದೇ ಹಬ್ಬಿತು ಬೆಳೆ ಬೆಳೆದು.
ಬೆಳಕಿನ ಹೂವಿನ ಬಂಡನು ಆಶಿಸಿ
ಹೊರಟವೊ ಕತ್ತಲ ದುಂಬಿಗಳು
ತೇಲುವ ಅಮೃತದ ಕುಂಭದ ಬಯಕೆಗೆ
ದಾನವರೆಸೆದಾ ಬಾಣಗಳೊ
ಎಂಬೊಲು, ಒಂದೊಂದೇ ಬಾವಲಿಗಳು
ಮರದಿಂದಾ ಚಂದ್ರನ ಕಡೆಗೆ
ಹಾರುತ ಹಾರುತ ಕಡೆಗೊಂದಾದುವು
ತಿಂಗಳ ಬೆಳಕಿನ ಕೃಪೆಯೊಳಗೆ
ಬೆರಗಾದುದು ಮನ ದೃಶ್ಯದ ಪರಿಗೆ
ಅನಿರೀಕ್ಷಿತ ಸಂಕ್ರಾಂತಿಯ ಕೃಪೆಗೆ !
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Tag: Sankranthi, Sankranti
ಕಾಮೆಂಟ್‌ಗಳು