ಶತದಿನೋತ್ಸವ ಕಂಡ ‘ಭಾಗೀರಥಿ’
ಶತದಿನೋತ್ಸವ ಕಂಡ ‘ಭಾಗೀರಥಿ’
ಅತ್ತ ಕಾವೇರಿ ನೀರಿನ ಕದನ, ಇತ್ತ ಭಾಗೀರತಿಯ ಒಡಲು ತುಂಬಿದ ಸಂಭ್ರಮದ ಕ್ಷಣ- ಆ ದಿನವನ್ನು ಕೆಲವರು ಬಣ್ಣಿಸಿದ್ದು ಹೀಗೆ. ಕಮರ್ಷಿಯಲ್ ಸಿನಿಮಾ ಕೂಡ ನೂರು ದಿನ ಪ್ರದರ್ಶನ ಪೂರೈಸುವುದು ಕಷ್ಟವಾಗಿರುವ ಇಂದಿನ ದಿನದಲ್ಲಿ ಕಲಾತ್ಮಕ ಚಿತ್ರವೊಂದು ಶತದಿನೋತ್ಸವ ಆಚರಿಸುವುದು ವಿಶೇಷ.
ಈ ಸಂಭ್ರಮವನ್ನು ಸ್ಮರಣೀಯವಾಗಿಸುವುದು ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಉದ್ದೇಶವಾಗಿತ್ತು. ಅದನ್ನು ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರನ್ನೂ ವೇದಿಕೆ ಮೇಲೆ ಕರೆಯಿಸಿ ಗೌರವಿಸುವ ಮೂಲಕ ಹಂಚಿಕೊಂಡರು. ಸ್ನೇಹಿತರೊಬ್ಬರ ನೆರವಿನಿಂದ ಅನ್ಯರಾಷ್ಟ್ರಗಳಲ್ಲಿಯೂ ಭಾಗೀರತಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಗೆಲುವಿನ ಶ್ರೇಯಸ್ಸನ್ನು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಇಡೀ ಚಿತ್ರತಂಡಕ್ಕೆ ಅರ್ಪಿಸಿದರು. `ಕಲಾತ್ಮಕ ಚಿತ್ರವೊಂದು ಗೆದ್ದಿದ್ದು ಚಿತ್ರರಂಗ ಬದಲಾಗಿದೆ ಎನ್ನುವುದರ ದ್ಯೋತಕವಲ್ಲ. ಹಾಗೆಂದುಕೊಂಡರೆ ಅದು ಭ್ರಮೆಯಾದೀತು. ಸದಭಿರುಚಿ ಚಿತ್ರದ ಖಾಲಿ ಜಾಗ ತುಂಬುವ ಪ್ರಯತ್ನವಿದು. ಸಂಘಟಿತ ಶ್ರಮದ ಫಲ ಈ ಯಶಸ್ಸು` ಎಂದರು.ಜನರು ಬಯಸುವ ಚಿತ್ರ ಕೊಡುತ್ತಿದ್ದೇವೆ ಎಂದು ಚಿತ್ರರಂಗದ ಹಲವು ಹೇಳುತ್ತಿದ್ದಾರೆ. ವಾಸ್ತವವಾಗಿ ಇಂಥದ್ದೇ ಚಿತ್ರ ಕೊಡಿ ಎಂದು ಜನರೇನೂ ಬೀದಿಗೆ ಬಂದು ಕೇಳುತ್ತಿಲ್ಲ. ಆದರೂ ವಿಕೃತಿಯನ್ನು ವಿಜೃಂಭಿಸುವ ಚಿತ್ರಗಳೇ ಬರುತ್ತಿವೆ. ಲಿರಿಕ್ಸ್ ಹೆಸರಿನಲ್ಲಿ `ಕಿರಿಕ್ಸ್` ಮಾಡುವ ಕಾಲವಿದು. ಇದು ಬದಲಾಗಬೇಕಾಗದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
`ಚಿತ್ರ ಪ್ರಾರಂಭಿಸುವಾಗಲೇ ಇದು ಕಲಾತ್ಮಕ ಚಿತ್ರವೆಂದು ಬಿಂಬಿಸುವುದು ಸರಿಯಲ್ಲ. ಪರಂಪರೆ ಇಂದಿಗೂ ಜೀವಂತವಿದೆ ಎನ್ನುವುದನ್ನು `ಭಾಗೀರತಿ` ಸಾಬೀತುಪಡಿಸಿದೆ` ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಪ್ರಶಂಸೆ ವ್ಯಕ್ತಪಡಿಸಿದರು. ನಟ ಶ್ರೀನಾಥ್, ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಂತಿ, ನಿರ್ಮಾಪಕ ಸಾ.ರಾ. ಗೋವಿಂದು, ನಟ ಕುಮಾರ್ ಗೋವಿಂದ್, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ನಟ ಅಶೋಕ್ ಅತಿಥಿಗಳಾಗಿ ಆಗಮಿಸಿದ್ದರು.
ಉತ್ತಮ ಪ್ರಯತ್ನವೊಂದನ್ನು ನಡೆಸಿ ಯಶಸ್ಸು ಕಂಡ ‘ಭಾಗೀರಥಿ’ ಚಿತ್ರದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತು ನಿರ್ಮಾಣ ತಂಡವನ್ನು ಅಭಿನಂದಿಸೋಣ.
ಲೇಖನ ಕೃಪೆ: ಪ್ರಜಾವಾಣಿ
Tag: Bhagirathi
ಕಾಮೆಂಟ್‌ಗಳು