ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುರುವಿನ ಗುಲಾಮನಾಗುವ ತನಕ



ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರು ಪುರಾಣವ ಮುಗಿಸಿದರಿಲ್ಲ
ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ
ಧೀರನಾಗಿ ತಾ ಪೇಳಿದರಿಲ್ಲ

ಕೊರಳೊಳು ಮಾಲೆ ಧರಿಸಿದರಿಲ್ಲ,
ಬೆರಳೊಳು ಜಪಮಣಿ ಜಪಿಸಿದರಿಲ್ಲ
ಮರುಳನಾಗಿ ಶರೀರಕೆ ಬೂದಿ
ಒರೆಸಿಕೊಂಡು ತಾ ತಿರುಗಿದರಿಲ್ಲ

ನಾರಿಯ ಭೋಗ ಅಳಿಸಿದರಿಲ್ಲ
ಶಾರೀರಿಕ ಸುಖವ ಬಿಡಿಸಿದರಿಲ್ಲ
ನಾರದವರದ ಪುರಂದರ ವಿಠ್ಠಲನ
ಸೇರಿಕೊಂಡು ತಾ ಪಡೆಯುವ ತನಕ

ಸಾಹಿತ್ಯ: ಪುರಂದರದಾಸರು

ಮತ್ತೊಂದು  ರೀತಿ  ಸಾಹಿತ್ಯ


ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು
ವ್ಯರ್ಥವಾಯ್ತು ಭಕುತಿ

ಆರು ಶಾಸ್ತ್ರವ ಓದಿದರಿಲ್ಲ
ಮೂರಾರು  ಪುರಾಣ ಮುಗಿಸಿದರೇನು
ಸಾರಿ ಸಜ್ಜನರ  ಸಂಘವ  ಮಾಡದೆ
ಧೀರನೆಂದು  ತಾ ತಿರುಗಿದರೇನು

ಕೊರಳೊಳು ಮಾಲೆಯ ಧರಿಸಿದರೇನು,
ಬೆರಳೊಳು ಜಪಮಣಿ ತಿರುಗಿದರೇನು
ಮರಳಿ ಮರಳಿ ತಾ ಹೊರಳಿ ಬೂದಿಯೊಳು
ಮರುಳನಂದದಿ  ತಿರುಗಿದರೇನು

ದಾರುಣಿಯೆಲ್ಲಾ ಆಳಿದರೇನು
ಶರೀರ  ಸುಖವನು ಬಿಡಿಸಿದರೇನು
ಮಾರಜನಕ ಸಿರಿ  ಪುರಂದರ ವಿಠ್ಠಲನ
ಸಾರ ಮಹಿಮೆಯೆಲ್ಲ ತೋರಬಲ್ಲ
ಸದ್ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ


ಸಾಹಿತ್ಯ: ಪುರಂದರದಾಸರು
ಗಾಯನ:  ಎಂ. ಎಸ್.  ಸುಬ್ಬುಲಕ್ಷ್ಮಿ
https://www.youtube.com/watch?v=9pfDWoP-PRU


ಭಾವಾರ್ಥ:

ಆರು ಶಾಸ್ತ್ರಗಳೆಂದರೆ ಷಡ್ಜರ್ಶನಗಳು. ಅವು : ಸಾಂಖ್ಯ-ಯೋಗ, ನ್ಯಾಯ-ವೈಶೇಷಿಕ ಮತ್ತು ಮೀಮಾಂಸೆ-ವೇದಾಂತಗಳು. ಮೂರಾರು ಪುರಾಣಗಳು ಯಾವುವೆಂದರೆ 3×6=18 ಹದಿನೆಂಟು ಪುರಾಣಗಳು. ಇವು : ಬ್ರಾಹ್ಮ, ಪಾದ್ಮ, ವೈಷ್ಣವ, ಶೈವ, ಲೈಂಗ, ಗಾರುಡ, ನಾರದೀಯ, ಭಾಗವತ, ಆಗ್ನೇಯ, ಸ್ಕಾಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮಾತ್ಸ್ಯ, ಕೌರ್ಮ, ಬ್ರಹ್ಮಾಂಡಗಳೆಂದು ಭಾಗವತವು ಹೇಳಿದೆ (೧೨, ೭, ೨೩). —ಇವನ್ನೆಲ್ಲ ಓದಿ ಕರಗತ ಮಾಡಿಕೊಂಡರೂ ಸಾಲದು. ತಾನೇನೋ ಬಲ್ಲವನಂತೆ ಧೀರನಾಗಿ, ಸಭೆಯ ಮುಂದೆ ಪ್ರವಚನಮಾಡಿದರೆ ಸಾಲದು, ಸಜ್ಜನರ ಸಂಗವ ಮಾಡಬೇಕು, ಗುರುವಿನ ಅಧೀನರಾಗಿರಬೇಕು. ಆಗ ಮಾತ್ರ ಮುಕ್ತಿಯು ದೊರಕುತ್ತದೆ. 

ಕೊರಳಲ್ಲಿ ಜಪ ಮಾಲೆಯನ್ನು ಧರಿಸಿ, ಬೆರಳಲ್ಲಿಯೂ ಜಪಮಣಿಯಲ್ಲಿ ಮಂತ್ರಗಳನ್ನು ಎಣಿಸುತ್ತಿದ್ದರೆ ಏನು ಫಲ? ಮರುಳನಂತೆ ಶರೀರಕೆ ಬೂದಿಯ  ಒರಸಿಕೊಂಡು ತಾ ತಿರುಗುತ್ತ ತಿರುಗುತ್ತ ತಾನೇ ಅವಧೂತನೆಂದುಕೊಂಡು ವರ್ತಿಸಿದರೆ ಮೋಕ್ಷವು ದೊರಕುವುದೇ? ಗುರುವಿನ ಸೇವೆಯನ್ನು ಮಾಡಬೇಕು. ಗುರುವಿನಿಂದಲೇ ಉಪದೇಶವನ್ನು ಪಡೆದು ಗುರುವಿಗೆ ಅಧೀನರಾಗಿದ್ದರೆ ಮಾತ್ರ ಮೋಕ್ಷವನ್ನು ಗಳಿಸಬಹುದಷ್ಟೆ. 

ನಾರಿಯ ಭೋಗಕ್ಕೆ ಕಿಂಚಿತ್ತೂ ಅಪೇಕ್ಷಿಸದೆ ನೈಷ್ಠಿಕ ಬ್ರಹ್ಮಚರ್ಯವರ್ತವನ್ನೋ ಸಂನ್ಯಾಸಾಶ್ರಮವನ್ನೋ ಕೈಗೊಂಡು ಕಠಿಣವಾದ ವ್ರತಗಳನ್ನು ಆಚರಿಸಿದರೂ ಸಾಲದು, ಶರೀರವು ಅಪೇಕ್ಷಿಸುವ ಸುಖದ ಭಾಗ್ಯಗಳನ್ನು ಬಿಟ್ಟರೂ ಸಾಲದು, ಮಾತ್ರವಲ್ಲ, ಶರೀರವು ಮಾಡಿದ ಪಾಪಕರ್ಮಗಳಿಗಾಗಿ ಆಚರಿಸುವಂತಹ -_ ಕೃಚ್ಛ, ಚಾಂದ್ರಾಯಣ ಮೊದಲಾದ ವ್ರತಗಳನ್ನೂ ತಪಸ್ಸನ್ನೂ, ಉಪವಾಸಗಳನ್ನು ಮಾಡಿ ಶರೀರವನ್ನು ಕಷ್ಟಕ್ಕೀಡು ಮಾಡಿ ತನ್ಮೂಲಕ ಮೋಕ್ಷವನ್ನು ಸಾಧಿಸುತ್ತೇನೆ ಎಂದು ಭಾವಿಸಿದರೆ, ಅದರಿಂದಲೂ ಮೋಕ್ಷಗಳಿಕೆಯಿಲ್ಲ. 

ದೇವರ್ಷಿಯಾದ ನಾರದನು ಗಾನಗಂಧರ್ವ. ಸದಾ ಕಾಲವೂ ತನ್ನ ಮಹತಿಯೆಂಬ ವೀಣೆಯೊಂದಿಗೆ ಗಾಯನ ಮಾಡುತ್ತ ಭಗವಂತನನ್ನು ಸ್ತುತಿಸುತ್ತಿರುವ ಭಾಗವತೋತ್ತಮ. ಆತನು ನಾರಾಯಣನಿಂದ ಶ್ವೇತದ್ವೀಪದಲ್ಲಿ ಭಾಗವತಧರ್ಮವನ್ನು ಉಪದೇಶವನ್ನು ಪಡೆದ ಋಷಿ. ಈ ನಾರದನಂತೆ ಸದಾ ಭಕ್ತಿಯಿಂದ ಭಗವಂತನನ್ನು ಭಜಿಸುತ್ತ, ಗಾಯನ ಮಾಡುತ್ತಿದ್ದರೆ ಮಾತ್ರ ನಾರಾಯಣನಲ್ಲಿ ಒಂದಾಗಲು ಸಾಧ್ಯ, ಅದೇ ಮುಕ್ತಿ - ಎಂದು ಪುರಂದರದಾಸರು ಮುಕ್ತಿಯ ಸುಲಭ ಹಾದಿಯನ್ನು ತೋರಿಕೊಡುತ್ತಿದ್ದಾರೆ.

ಕೃಪೆ: Rohini Subbarathnam





Tag: Guruvina Gulamanaguva tanaka

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ