ಭಾನುವಾರ, ಸೆಪ್ಟೆಂಬರ್ 1, 2013

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

ಮತ್ತೊಮ್ಮೆ ಹುಟ್ಟಿಬಾ ಗುರುದೇವ
-ಪ್ರೊ. ದೊಡ್ಡರಂಗೇಗೌಡ

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ 71ನೇ ಪೀಠಾಧಿಪತಿಯಾಗಿ, ಕ್ಷೇತ್ರದ ಪ್ರವರ್ಧಮಾನಕ್ಕೆ ಕಟಿಬದ್ಧರಾಗಿ, ಜಗದ್ಗುರುವಾಗಿ, ಗದ್ದುಗೆ ಏರಿದ ಕ್ಷಣದಿಂದ ಕೊನೆಯ ಕ್ಷಣದವರೆಗೆ ತಮ್ಮ ಇಡೀ ಬದುಕನ್ನೇ ಅದರ ಅಭಿವೃದ್ಧಿಗಾಗಿ ಮೀಸಲಿಟ್ಟವರು. ಅಹರ್ನಿಸಿ ನಿರಂತರವಾಗಿ ಧರ್ಮದ ಏಳ್ಗೆಗೆ ಶ್ರಮಿಸಿದವರು. ತಮ್ಮ ಬಾಳನ್ನೇ ಚಂದನದಂತೆತೇಯ್ದ ಮಹಾಮಹಿಮರು.

ಸ್ವಾಮೀಜಿಯವರು ಮೊದಲ ಆದ್ಯತೆ ನೀಡಿದ್ದು ಶಿಕ್ಷಣ ಕ್ಷೇತ್ರಕ್ಕೆ. ಹಳ್ಳಿಗರ ಉದ್ಧಾರ ಆಗಬೇಕಾದರೆ ನಮ್ಮ ಗ್ರಾಮೀಣ ಮಹಾಜನತೆ ಮೊದಲು ಅಕ್ಷರಸ್ಥರಾಗಬೇಕೆಂದು ಅವರು ಸಂಕಲ್ಪ ತೊಟ್ಟಿದ್ದರು. ಅದಕ್ಕಾಗಿ ದೀನ-ದಲಿತರು ಮತ್ತು ಹಿಂದುಳಿದ ವರ್ಗದ ಬಡವರಿಗಾಗಿ ಶಾಲೆಗಳನ್ನು, ಮಹಾವಿದ್ಯಾಲಯಗಳನ್ನು, ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುತ್ತಾ ಬಂದರು.
ಈ ಕೈಂಕರ್ಯದಲ್ಲಿ ಗೌರಿಶಂಕರದ ಎತ್ತರಕ್ಕೆ ಬೆಳೆದ ಅವರು, ಅಖಂಡ ವಿಶ್ವವಿದ್ಯಾಲಯವಾಗಿ ತಲೆ ಎತ್ತಿ ನಿಂತರು. ಅವರ ದೂರದೃಷ್ಟಿಯ ಫಲ ಈ ಕ್ಷಣದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಾದ್ಯಂತ *50 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. 47,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಉಚಿತ ದಾಸೋಹ: ಹಸಿದು ಬಂದವರಿಗೆ ಅನ್ನ ನೀಡಬೇಕು ಎನ್ನುವ ಕಾರಣಕ್ಕಾಗಿ ಶ್ರೀಕ್ಷೇತ್ರ ಆದಿ ಚುಂಚನಗಿರಿಯಲ್ಲಿ ಉಚಿತ ದಾಸೋಹ ಪದ್ಧತಿ  ಅಳವಡಿಸಿಕೊಂಡು ಶ್ರದ್ಧಾ ಭಕ್ತಿಗಳಿಂದ ಅಂತಹ ಕೈಂಕರ್ಯ ಮಾಡುತ್ತಾ ಬಂದವರು. ಈಗ ಪ್ರತಿದಿನ ಕನಿಷ್ಠ ಏಳು ಪಂಕ್ತಿಗಳಷ್ಟು (ಪ್ರತಿ ಪಂಕ್ತಿಯಲ್ಲಿ ಮೂರು ಸಾವಿರ ಜನ) ಮಂದಿ ಉಚಿತವಾಗಿ ಪ್ರಸಾದ ತೆಗೆದುಕೊಳ್ಳುತ್ತಾರೆ.

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ: ಕಡು ಬಡವರಿಗೆ ದೊಡ್ಡ-ದೊಡ್ಡ ಆಸ್ಪತ್ರೆಗೆ ಹೋಗಲು ಕಷ್ಟಸಾಧ್ಯ ಎಂದು ಅರಿತ ಸ್ವಾಮೀಜಿ, ಜವರಹಳ್ಳಿ ಎಂಬ ಕುಗ್ರಾಮ ಆರಿಸಿಕೊಂಡು ಬೃಹತ್ ಆಸ್ಪತ್ರೆ ತಾವೇ ಕಟ್ಟಿ ಬೆಂಗಳೂರಿನ ಹೈಟೆಕ್ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ದೊರೆಯುವಂತೆ ಮಾಡಿದವರು. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ಅನುಭವಿಸುತ್ತಿದ್ದ ನೋವು ಅರಿತು, ಅದಕ್ಕಾಗಿ ಬೆಳ್ಳೂರು ಕ್ರಾಸ್ ಬಳಿ ವಿಶೇಷ ಘಟಕ ತೆರೆದು ನಿರಂತರವಾಗಿ ನಡೆಸುತ್ತಾ ಬಂದವರು.

ಅನ್ನ, ಆರೋಗ್ಯ ಮತ್ತು ಶಿಕ್ಷಣ ದಾಸೋಹಗಳಿಗೆ ಆದ್ಯತೆ ನೀಡಿದ ಬಾಲಗಂಗಾಧರನಾಥ ಸ್ವಾಮೀಜಿ, ಒಬ್ಬ ಯುಗ ಯೋಗಿಯಾಗಿ, ದಾರ್ಶನಿಕರಾಗಿ, ಸೇವಾ ಧುರೀಣರಾಗಿ, ಪರಿವ್ರಾಜಕರಾಗಿ, ಶ್ರೀ ಗುರುವಾಗಿ ನಿಷ್ಠೆಯಿಂದ ಯಾವ ಲಾಭಾಕಾಂಕ್ಷೆಯೂ ಇಲ್ಲದೆ ನಿರಂತರ ಸೇವೆಯಲ್ಲಿ ತೊಡಗಿಕೊಂಡವರು.

ತಮ್ಮ ಜೋಳಿಗೆ ಹಿಡಿದು ಒಂಬತ್ತು ಬಾರಿ ವಿಶ್ವ ಪರ್ಯಟನ ಮಾಡಿ ಶ್ರೀಮಠದಲ್ಲಿ ಓದಿ, ಮುಂದೆ ದೊಡ್ಡವರಾಗಿ ವಿದೇಶಗಳಲ್ಲಿ ನೆಲೆಸಿ, ವೈದ್ಯರಾಗಿಯೋ, ಎಂಜಿನಿಯರರಾಗಿಯೋ ಕಾರ್ಯ ನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯರಿಂದ ಹಣ ತಂದು, ಅದರಿಂದ ಕ್ಷೇತ್ರವನ್ನು ಸಂವರ್ಧನೆಗೆ ತಂದವರು. ಶೈಕ್ಷಣಿಕ ಕ್ಷೇತ್ರದ ಮಹಾನ್ ರೂವಾರಿ ಆದವರು. ಅವರ ದೂರದೃಷ್ಟಿ ಫಲ ಈ ಹೊತ್ತು ಕರ್ನಾಟಕದಲ್ಲಿ ಶ್ರೀ ಆದಿಚುಂಚನಗಿರಿ ಟ್ರಸ್ಟ್ ಹೆಸರಿನಲ್ಲಿ ನೂರಾರು ವಿದ್ಯಾಸಂಸ್ಥೆಗಳು ಜ್ಞಾನಸೇವೆ ಮಾಡುತ್ತಿವೆ.

ನಾನು ಸ್ವಾಮೀಜಿ ಅವರನ್ನು ತೀರ ಹತ್ತಿರದಿಂದ ಬಲ್ಲೆ. ನಾನು ಮತ್ತು ನನ್ನ ಕುಟುಂಬದವರು 1972 ಲಾಗಾಯ್ತಿನಿಂದಲೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡವರು.ಶ್ರೀಮಠದ ಜೊತೆ ನಾಲ್ಕು ದಶಕಗಳ ಒಡನಾಟ ನಮ್ಮದು. ಬಿಂದುವಾಗಿದ್ದ ಶ್ರೀ ಕ್ಷೇತ್ರ ಇಂದು ಮಹಾನ್ ಸಿಂಧುವಾಗಿ ಕರ್ನಾಟಕದ ಧಾರ್ಮಿಕ ಚರಿತ್ರೆಯಲ್ಲಿ ಸುವರ್ಣ ಅಧ್ಯಾಯವನ್ನು ಕಂಡುಕೊಂಡಿದೆ.

ಕರ್ಮಯೋಗಿ: ಅವರಿಗೆ ಶ್ರೀ ಕಾಲಭೈರವೇಶ್ವರನಲ್ಲಿ ಮಹಾನ್ ನಂಬಿಕೆ ಇತ್ತು. ತಾಯಿ ಶ್ರೀ ಚೌಡೇಶ್ವರಿಯನ್ನು ಜಗನ್ಮಾತೆಯಂದೇ ನಂಬಿದ್ದರು. ಯಾವ ಕ್ಷಣವೂ ಅವರು ರಾಹುಕಾಲ, ಗುಳಿಕಾಲ ನೋಡಿದವರಲ್ಲ. ಎಲ್ಲ ಕಾಲವೂ ಒಳ್ಳೆಯ ಕಾಲ ಎಂದು ಭಾವಿಸಿದವರು ಅವರು. ಎಲ್ಲ ಗಳಿಗೆ ಒಳ್ಳೆಯ ಗಳಿಗೆ ಎಂದು ಹೇಳಿದವರು ಅವರು. ಎಲ್ಲ ದಿನವೂ ಒಳ್ಳೆಯ ದಿನವೆಂದು ಪರಿಭಾವಿಸಿದ ಮಹನೀಯರು ಅವರು. ಆಯಾಸ ಲೆಕ್ಕಿಸದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದರು. ಲಾಭಾಪೇಕ್ಷೆ ಬಯಸದ ಅವರೊಬ್ಬ ಕರ್ಮಯೋಗಿ.

ಅಬಲೆಯರು ಸಬಲೆಯರಾಗಲು ಶ್ರೀ ಕ್ಷೇತ್ರದಲ್ಲಿ ಶ್ರೀ ಮಠದ ವತಿಯಿಂದ ಅನೇಕ ಕಾರ್ಯಕ್ರಮ ನಿಯೋಜಿಸಿದ್ದಾರೆ. ಅವೆಲ್ಲ ಸಾಂಗೋಪಾಂಗವಾಗಿ ನಡೆಯುತ್ತಿವೆ. ಅಂಧರಿಗಾಗಿ ರಾಮನಗರದ ಅರ್ಚಕರಹಳ್ಳಿ ಬಳಿ ಅಂಧ ಮಕ್ಕಳ ಶಾಲೆ ತೆರೆದು, ಅವರ ಸಮಗ್ರ ಅಭಿವೃದ್ಧಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಿ, ಆಶ್ರಯ, ಅನ್ನ, ಬಟ್ಟೆ, ಪುಸ್ತಕ, ವಿದ್ಯೆ ಒದಗಿಸಿದ ಪುಣ್ಯಾತ್ಮರು. ಕೇವಲ ಓದಿದರೆ ಸಾಲದು ಅವರ ಕರಕುಶಲ ಕಲೆಗಳು ಅಭಿವೃದ್ಧಿ ಆಗಬೇಕು, ಕಲಾಭಿವ್ಯಕ್ತಿ ಬೆಳಗಿ ಬದುಕಿನಲ್ಲಿ ಬೆಳಗಬೇಕು ಎನ್ನುವ ಕಾರಣದಿಂದ ಬಗೆ-ಬಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತಂದವರು.

ಜಾನಪದ ಕಲೆಗಳ ಅಭಿವೃದ್ಧಿಗಾಗಿ ಶ್ರಮಿಸಿದವರು ನಮ್ಮ ಸ್ವಾಮೀಜಿ. ಕ್ಷೇತ್ರದಲ್ಲಿ ವರ್ಷಕ್ಕೆ ಮೂರು ಬಾರಿ ಜಾತ್ರೆ ನಡೆಸುತ್ತಾ, ರಾಜ್ಯದ ಮೂಲೆ-ಮೂಲೆಗಳಿಂದ ಬರುವ ಕಲಾ ತಂಡದ ಕಲಾವಿದರಿಗೆ ಆಶ್ರಯಕೊಟ್ಟು, ಪ್ರತಿಭೆ ಬೆಳಗಿಸಿ, ಮರಳಿ ಊರಿಗೆ ಕಳುಹಿಸುವಾಗ ಪ್ರತಿಯೊಬ್ಬರಿಗೆ ಪಂಚೆ, ವಲ್ಲಿ, ಅಂಗಿ, ಸೀರೆ-ಖಣ, ಮಂಗಳ ದ್ರವ್ಯ ಕೊಟ್ಟು, ಬಸ್ ಚಾರ್ಜ್ ವ್ಯವಸ್ಥೆ ಮಾಡಿ, ಸತ್ಕರಿಸಿ ಕಳುಹಿಸುತ್ತಿದ್ದರು. ಅಂತಹ ಜಾನಪದ ಕಲಾಪ್ರೇಮಿ ನಮ್ಮ ನಲ್ಮೆಯ ಸ್ವಾಮೀಜಿ. ರಾಮನಗರದ ಬಳಿ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಎಚ್.ಎಲ್. ನಾಗೇಗೌಡರಿಗೆ ಎಲ್ಲ ರೀತಿಯ ಸಹಕಾರ ಕೊಟ್ಟು, ಅದರ ರೂಪ ಕಂಡು ಖುಷಿಪಟ್ಟವರು ಅವರು.

ವನಸಂವರ್ಧನ: ಮಳೆಗಾಲದ ಸಂದರ್ಭದಲ್ಲಿ ಹಳ್ಳಿ-ಹಳ್ಳಿಗಳಲ್ಲಿ, ರಸ್ತೆ-ರಸ್ತೆಗಳಲ್ಲಿ ಐದು ಕೋಟಿ ಸಸಿ ನೆಡುವ ಕಾರ್ಯಕ್ರಮ ಹಾಕಿಕೊಂಡು ಯಶಸ್ವಿಯಾದವರು. ನಾನು ಮತ್ತು ನನ್ನ ಕುಟುಂಬದವರು ಅವರ ಈ ವನ ಸಂವರ್ಧನ ಕಾರ್ಯಕ್ರಮದಲ್ಲಿ ನಿಷ್ಠೆಯಿಂದ ಪಾಲ್ಗೊಂಡಿದ್ದೇವೆ. ಸ್ವಾಮೀಜಿ ಸ್ವತಃ ಒಬ್ಬ ರೈತನ ಹಾಗೆ ಸಸಿ ನೆಟ್ಟು, ನೀರು ಎರೆಯುತ್ತಿದ್ದುದನ್ನು ಕಂಡು ಸಂತೋಷಗೊಂಡು ಸ್ಫೂರ್ತಿ ಪಡೆದು, ಇನ್ನಷ್ಟು ಕೆಲಸ ಮಾಡಿದ್ದೇವೆ.
ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಇಂದಿನ ದಿನಗಳಲ್ಲಿ ಆಧುನಿಕ ಜೀವನ ನಿಭಾಯಿಸುವ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎನ್ನುವ ಕಾರಣ 20 ವರ್ಷಗಳ ಹಿಂದೆ ಮಹಿಳಾ ಶಿಬಿರ ಆಯೋಜಿಸಿದ ಮಹಾತ್ಮ ಅವರು. (ಅವರ ಆದೇಶದಂತೆ ನಾನು ಹಾಗೂ ನನ್ನ ಹೆಂಡತಿ ಡಾ. ಕೆ.ರಾಜೇಶ್ವರಿ ಗೌಡ ಮಹಿಳಾ ಶಿಬಿರಕ್ಕೆಂದೇ ಪ್ರತ್ಯೇಕವಾಗಿ `ಜ್ಞಾನ ಬಾಗಿನ' ಎಂಬ ಪಠ್ಯಕ್ರಮ ರಚಿಸಿಕೊಟ್ಟಿದ್ದೆವು). ನನ್ನ ಹೆಂಡತಿ ಮಹಿಳಾ ಶಿಬಿರದ ಮೊದಲ ನಿರ್ದೇಶಕಿಯಾಗಿ ಸ್ವಾಮೀಜಿಯವರ ಕೈಂಕರ್ಯಕ್ಕೆ ತನ್ನ ಸೇವೆ ಸಲ್ಲಿಸಿದಳು. ಆ ಹೆಮ್ಮೆ ನಮ್ಮದಾಗಿದೆ.

ಸರ್ವಧರ್ಮ ಸಮ್ಮೇಳನ, ಕವಿಗೋಷ್ಠಿ, ಸಂಸ್ಕೃತ ಸಮ್ಮೇಳನ, ನಾಟಕೋತ್ಸವ, ಸಂಸ್ಕೃತ, ನೈತಿಕ ಶಿಬಿರಗಳು, ಅರ್ಚಕರ ಸಮಾವೇಶ ನಡೆಸುತ್ತಾ ಜ್ಞಾನ ಪ್ರಸಾರಕ್ಕೆ ಕ್ಷೇತ್ರ ಮೀಸಲಿಟ್ಟವರು. ಮಕ್ಕಳು ಪ್ರತಿದಿನವೂ ಯೋಗಾಭ್ಯಾಸ ನಡೆಸಬೇಕು ಎಂದು ಆಶಿಸಿ, ಉಚಿತ ಶಿಬಿರ, ಆಯುರ್‌ಸಂವರ್ಧನ ಕಾರ್ಯಾಗಾರ ನಡೆಸಿಕೊಂಡು ಬಂದವರು.

ಜಾನಪದ ಸಂಗ್ರಹ, ಸಾಹಿತ್ಯ ಶಿಬಿರ, ವೈಜ್ಞಾನಿಕ ವಿಚಾರ ಸಂಕಿರಣ ಎಲ್ಲವನ್ನೂ ಮಠದಲ್ಲಿ ನಡೆಸುತ್ತಾ ಗ್ರಾಮೀಣ ರೈತರಿಗೆ ಅದೆಲ್ಲದರ ಸೌಲಭ್ಯ ದೊರಕುವಂತೆ ಮಾಡಿ, ಜ್ಞಾನದ ಪರಿಧಿ ವಿಸ್ತರಿಸಿದವರು. ರೈತರು ಸಂಕಷ್ಟದಲ್ಲಿದ್ದಾಗ 1992ರಲ್ಲಿ ರ್ಯಾಂಲಿಗೆ ಕರೆಕೊಟ್ಟು ರೈತ ಸಮುದಾಯವನ್ನು ಸಂಘಟಿಸಿದ ಮಹಾನ್ ದಾರ್ಶನಿಕರು.

ಇಂತಹ ಯುಗಯೋಗಿ ನಮಗೆಲ್ಲ ಗುರುವಾಗಿ ಮತ್ತೊಮ್ಮೆ ಮೂಡಿಬರಲಿ ಎಂದು ಕಾಲ ಭೈರವೇಶ್ವರನಲ್ಲಿ ಪ್ರಾರ್ಥಿಸುತ್ತೇನೆ.

(ಕೃಪೆ: ಪ್ರಜಾವಾಣಿ)

Tag: Bala Gangadharanatha Swamiji

ಕಾಮೆಂಟ್‌ಗಳಿಲ್ಲ: