ಮಂಗಳವಾರ, ಸೆಪ್ಟೆಂಬರ್ 3, 2013

ಗೋವಿನ ಬಾಳು

ಗೋವಿನ ಬಾಳು

ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲೆ ಕೆನೆಗಡೆದರೆ ಬೆಣ್ಣೆಯಾದೆ
ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ

ಉಳುವೆ ನಾ ಭೂಮಿಯನು ಹೊರವೆ ನಾ ಹೇರನ್ನು
ತುಳಿದು ಕಡ್ಡಿಯ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ

ಹಾಯೆ ಹರಿಗೋಲಾದೆ ರಾಯಭೇರಿಗೆಯಾದೆ
ರಾಯರಾ ಕಾಲಿಗೆ ಮುಳ್ಳೊತ್ತುವಾದೆ 
ಆಯವರಿತು ಹೊಡೆಯೆ ಮಧುರಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ

ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ
ಮೇದು ಮನೆಗೈದಿ ನಾನಮೃತವೀವೆ
ಅದನುಂಡು ನನಗೆರಡ ಬಗೆವ ಮಾನವ ಹೇಳು
ನೀನಾರಿಗಾದೆಯೋ ಎಲೆ ಮಾನವಾ

ಸಾಹಿತ್ಯ: ಎಸ್ ಜಿ. ನರಸಿಂಹಾಚಾರ್


ಚಿತ್ರ: ಎಮ್ಮೆ ತಮ್ಮಣ್ಣ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಬಿ. ಶೀನಿವಾಸ್ ಮತ್ತು ಬೆಂಗಳೂರು ಲತಾTag: Neenarigaadeyo ele maanava

ಕಾಮೆಂಟ್‌ಗಳಿಲ್ಲ: