ಶುಕ್ರವಾರ, ನವೆಂಬರ್ 29, 2013

ದೇವರೆಲ್ಲಿದ್ದಾನೆ? ಹೇಗಿದ್ದಾನೆ?

ದೇವರೆಲ್ಲಿದ್ದಾನೆ?  ಹೇಗಿದ್ದಾನೆ?

ನಮ್ಮೆಲ್ಲರನ್ನೂ ಬದುಕಿನಲ್ಲಿ ಒಂದಲ್ಲ ಒಂದು ಸಾರಿ ಕಾಡಿರುವ ಪ್ರಶ್ನೆಗಳಿವು!  ‘ದೇವರಿದ್ದಾನೆಯೇ?  ದೇವರೆಲ್ಲಿದ್ದಾನೆ?  ಹೇಗಿದ್ದಾನೆ?  ಹೇಗೆ ಅವನನ್ನು ಕಾಣುವುದು?’  ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡ ಪುಟ್ಟ ಬಾಲಕನ ಅನುಭವಗಳ ಬಗ್ಗೆ ಹಲವಾರು ಕತೆಗಳನ್ನು ಅನೇಕ ಪುಣ್ಯಾತ್ಮರು ಬರೆದಿದ್ದಾರೆ.  ಅವರೆಲ್ಲರಿಗೂ ವಂದಿಸೋಣ.  ಈಗೊಂದು ಕತೆಯನ್ನು ನೋಡೋಣ.

ಒಂದು ರಾತ್ರಿ ಬಾಲಕನೊಬ್ಬ ತಾಯಿಯನ್ನು ‘ಅಮ್ಮಾ! ನನಗೆ ದೇವರನ್ನು ನೋಡಬೇಕೆನಿಸುತ್ತೆ.  ದೇವರೆಲ್ಲಿದ್ದಾನೆ?’ ಎಂದು ಮುಗ್ಧವಾಗಿ ಕೇಳಿದ.  ಬುದ್ಧಿವಂತ ತಾಯಿ ‘ಮಗು! ದೇವರು ತುಂಬಾ ದೂರದಲ್ಲಿದ್ದಾನೆ.  ಅವನನ್ನು ಕಾಣಲು ತುಂಬಾ ನಡೆಯಬೇಕು’ ಎಂದು ಹೇಳಿ ಮಾತು ಮರೆಯಿಸಿ ಮಗನನ್ನು ಮಲಗಿಸಿದರು.  ಆದರೆ ಬೆಳಗಿನ ಜಾವದಲ್ಲಿ ಬಾಲಕ ಎದ್ದ.  ತಾಯಿ ಇನ್ನೂ ಮಲಗಿದ್ದರು.  ಆತ ಒಂದು ಬಿಸ್ಕತ್ ಪೊಟ್ಟಣ ಮತ್ತು ಒಂದು ಬಾಟಲಿ ನೀರನ್ನು ಚೀಲಕ್ಕೆ ತುರುಕಿಕೊಂಡು ಮನೆಯಿಂದ ಹೊರಟ.  ನಡೆಯುತ್ತಲೇ ಹೋದ.  ಮಧ್ಯಾಹ್ನದ ಹೊತ್ತಿಗೆ ತುಂಬಾ ಬಳಲಿಕೆಯಾಗಿತ್ತು.  ಹೊಟ್ಟೆಯೂ ಹಸಿಯುತ್ತಿತ್ತು.  ಒಂದು ಪಾರ್ಕ್ ಕಂಡಿತು.  ಒಳಗೆ ಹೋಗಿ ಮರದ ಕೆಳಗೆ ಕುಳಿತ.  ಹತ್ತಿರದಲ್ಲಿಯೇ ಒಬ್ಬ ಮುದುಕರು ಕುಳಿತಿದ್ದರು.  ತುಂಬಾ ಬಳಲಿದಂತೆ ಕಾಣುತ್ತಿದ್ದರು.  ಇವನನ್ನು ನೋಡಿ ಮುಗುಳ್ನಕ್ಕರು.  ಅವನೂ ಮುಗುಳ್ನಕ್ಕ.  ತನ್ನ ಕೈಯಲ್ಲಿದ್ದ ಪೊಟ್ಟಣದಿಂದ ಒಂದು ಬಿಸ್ಕತ್ ತೆಗೆದು ಅವರಿಗೆ ಕೊಟ್ಟ.  ಇಬ್ಬರೂ ತಿಂದರು.  ನೀರು ಕುಡಿದರು.  ಧನ್ಯವಾದ ಹೇಳುವಂತೆ ಅವನನ್ನು ನೋಡಿ ಮುಗುಳ್ನಕ್ಕರು.  ನಡೆದು ಬಳಲಿದ್ದ ಬಾಲಕ ಮುದುಕನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ.  ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಯಲ್ಲಿದ್ದ.  ಎಚ್ಚರವಾದಾಗ ಸಂಜೆಯಾಗಿತ್ತು.  ಎದ್ದು ಕುಳಿತು ಮಿಕ್ಕಿದ್ದ ಬಿಸ್ಕತ್ತುಗಳನ್ನು ಇಬ್ಬರೂ ತಿಂದರು.  ಉಳಿದಿದ್ದ ನೀರನ್ನೂ ಕುಡಿದರು.  ಇಬ್ಬರಲ್ಲೂ ಮಾತಿಲ್ಲ, ಕತೆಯಿಲ್ಲ.  ಬರೀ ಮುಗುಳ್ನಗೆಗಳು.  ಅಷ್ಟರಲ್ಲಿ ಅವನಿಗೆ ತಾಯಿಯ ನೆನಪಾಯಿತು.  ಅವರಿಗೆ ಹೇಳದೆ ಬಂದಿದ್ದೇನಲ್ಲ.  ಅವರು ಗಾಬರಿಯಾಗಿರುತ್ತಾರೇನೋ ಎನಿಸಿತು.  ಎದ್ದು ಚೀಲವನ್ನು ಬೆನ್ನಿಗೇರಿಸಿಕೊಂಡ.  ಮುದುಕನ ಕೆನ್ನೆಗೊಂದು ಮುತ್ತನ್ನಿತ್ತು, ಟಾಟಾ ಸಂಜ್ಞೆ ಮಾಡಿ ಮನೆಗೆ ಹೊರಟ.  ಮುದುಕ ಮತ್ತೆ ಮುಗುಳ್ನಕ್ಕರು.

ಬಾಲಕ ಮನೆ ಮುಟ್ಟುವ ಹೊತ್ತಿಗೆ ಕತ್ತಲಾಗಿತ್ತು.  ಮನೆಯಲ್ಲಿ ತಾಯಿ ಅಳುತ್ತಾ ಕುಳಿತಿದ್ದರು.  ಇವನನ್ನು ನೋಡಿ ಬಾಚಿ ತಬ್ಬಿ ‘ಮಗೂ! ಬೆಳಗಿನಿಂದ ಎಲ್ಲಿ ಹೋಗಿದ್ದೆ? ಎಲ್ಲಾ ಕಡೆಯೂ ನಿನ್ನ ಹುಡುಕಿದೆವು.  ನಮಗೆ ತುಂಬಾ ಗಾಬರಿಯಾಗಿತ್ತು’ ಎಂದು ಅಳುತ್ತಳುತ್ತಲೇ ಹೇಳಿದರು.  ಆ ಬಾಲಕ ‘ಅಮ್ಮಾ! ನಾನು ದೇವರನ್ನು ಹುಡುಕಿಕೊಂಡು ಹೋಗಿದ್ದೆ.  ದೇವರು ನನಗೆ ಪಾರ್ಕಿನಲ್ಲಿ ಕಂಡ.  ಪಾಪ!  ದೇವರಿಗೆ ತುಂಬ ವಯಸ್ಸಾಗಿದೆ.  ಬಳಲಿದ್ದಾನೆ.  ಆದರೆ ಸದಾ ನಗುನಗುತ್ತಾ ಇರುತ್ತಾನೆ!’ ಎಂದ.  ತಾಯಿ ಅವನನ್ನು ಮತ್ತೊಮ್ಮೆ ತಬ್ಬಿ ಸಮಾಧಾನದ ನಿಟ್ಟುಸಿರು ಬಿಟ್ಟರು.

ಈ ಕಡೆ ಮುದುಕಪ್ಪ ತನ್ನ ಮನೆಗೆ ನಿಧಾನವಾಗಿ ನಡೆದು ಹೋದರು.  ಅವರ ಮಗ ಸೊಸೆ ಇವರನ್ನು ‘ಬೆಳಗಿನಿಂದ ಎಲ್ಲಿ ಹೋಗಿದ್ದಿರಿ? ಮಧ್ಯಾಹ್ನ ಊಟಕ್ಕೂ ಬಂದಿರಲಿಲ್ಲ’ ಎಂದು ಪ್ರಶ್ನಿಸಿದರು.  ಮುದುಕಪ್ಪ ನಿಧಾನವಾಗಿ ‘ಇಂದು ಮಧ್ಯಾಹ್ನ ದೇವರೊಟ್ಟಿಗೆ ಊಟದ ಬದಲು ಬಿಸ್ಕತ್ ತಿಂದೆ.  ದೇವರಿಗಿನೂ ಚಿಕ್ಕ ವಯಸ್ಸು.  ಎಷ್ಟು ಚೆನ್ನಾಗಿ ನಗುತ್ತಾನೆ!  ಎಷ್ಟು ಪ್ರೀತಿಸುತ್ತಾನೆ!  ಅದನ್ನು ನೋಡಿಯೇ ಅನುಭವಿಸಬೇಕು’ ಎಂದರು. 

ನಮಗೂ ದೇವರು ಬಾಲಕನಾಗಿಯೋ, ಮುದುಕನಾಗಿಯೋ ಕಾಣಬಹುದು.  ನಮಗೆ ನೋಡುವ ಕಣ್ಣೀರಬೇಕು.  ನಾವು ನೋಡಲು ಸಿದ್ಧರಾಗಿರಬೇಕು.


ನಿರೂಪಣೆ: ಎಸ್. ಷಡಕ್ಷರಿ, ಕೃಪೆ: ‘ಕ್ಷಣ ಹೊತ್ತು ಆಣಿ ಮುತ್ತು’.

ಕಾಮೆಂಟ್‌ಗಳಿಲ್ಲ: