ಸೋಮವಾರ, ಡಿಸೆಂಬರ್ 2, 2013

ತಲಕಾಡಿನಲ್ಲಿ ಪಂಚಲಿಂಗ ದರ್ಶನ

ತಲಕಾಡಿನಲ್ಲಿ ಪಂಚಲಿಂಗ ದರ್ಶನ
ಹಸಿರುಟ್ಟ ಭೂರಮೆ, ಮೈದುಂಬಿದ ಕಾವೇರಿ ನದಿ ಸುತ್ತುವರಿದಿರುವ ತಿರುಮಕೂಡಲು ನರಸೀಪುರ ತಾಲ್ಲೂಕಿನ ಪರ್ಯಾಯ ದ್ವೀಪಗ್ರಾಮ ತಲಕಾಡಿನಲ್ಲಿ ಡಿಸೆಂಬರ್ 2ರ ದಿನವಾದ ಇಂದು  ಬೆಳಿಗ್ಗೆ 7.30ಕ್ಕೆ ಪಂಚಲಿಂಗ ದರ್ಶನ ಮಹೋತ್ಸವದ ಮಹಾಭಿಷೇಕ ಪೂಜೆ ಆರಂಭಗೊಂಡಿದೆ. ನಸುಕಿನ 5 ಗಂಟೆಗೆ ಅರ್ಚಕರು ಗೋಕರ್ಣ ಸರೋವರದಲ್ಲಿ ಮಜ್ಜನ ಮಾಡಿ ನಂತರ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಪವಿತ್ರ ಗಂಗಾಜಲವನ್ನು ವೈದ್ಯನಾಥೇಶ್ವರ ಪ್ರಧಾನ ದೇಗುಲಕ್ಕೆ ಒಯ್ದು ಮಹಾ­ಮಂಗಳಾರತಿ ನೆರವೇರಿಸಲಾಗುತ್ತಿದೆ.  ದೇಗುಲಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಈ ಅವಧಿಯಲ್ಲಿ ಸಾರ್ವ­ಜನಿಕ­ರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸ­ಲಾಗಿದೆ. ದೇಗುಲಗಳ ದರ್ಶನಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ ತಲಕಾಡಿನ ಮುಖ್ಯ­ರಸ್ತೆ­ಯಿಂದ ದೇಗುಲದವರೆಗಿನ ಸುಮಾರು 1.5 ಕಿಲೋ ಮೀಟರ್‌ ಮಾರ್ಗ­ವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸ­ಲಾಗಿದೆ.

ವೈದ್ಯನಾಥೇಶ್ವರ ಪ್ರಧಾನ ದೇಗುಲದಲ್ಲಿ ದೇವರ ದರ್ಶನ ಪಡೆದ ನಂತರ ಪಾತಾಳೇಶ್ವರ ಮತ್ತು ಮರಳೇಶ್ವರ, ಚೌಡೇಶ್ವರಿ ದೇಗುಲಗಳಿಗೆ ಮರಳಿನ ದಂಡೆ ಮೇಲೆ ವ್ಯವಸ್ಥಿತ ಮಾರ್ಗ ರೂಪಿಸಿ, ಮಾರ್ಗದುದ್ದಕ್ಕೂ ಛಾವಣಿ ಅಳವಡಿಸಲಾಗಿದೆಯಲ್ಲದೆ ಯಾತ್ರಿಕರಿಗೆ ಅಗತ್ಯವಾದ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಪಂಚಬ್ರಹ್ಮಮಯನಾದ ಪರಮೇಶ್ವರನ ಐದು ಮುಖಗಳಾದ (ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ) ಪ್ರತೀಕವಾಗಿ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನೇಶ್ವರ ಲಿಂಗಗಳು ಇಲ್ಲಿ ಆವಿರ್ಭವಿಸಿವೆ. ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಈ ಲಿಂಗಗಳ ದರ್ಶನ ಮಾಡಿದರೆ ಜನ್ಮಜನ್ಮಾಂತರ ಪಾಪಗಳು ನಶಿಸುತ್ತವೆ, ಭವಿಷ್ಯದಲ್ಲಿ ಉತ್ತಮ ಫಲಗಳನ್ನು ಪಡೆಯಬಹುದು ಎಂಬುದು ಭಕ್ತಾದಿಗಳ ನಂಬಿಕೆಯಾಗಿದೆ.

ನವೆಂಬರ್  28ರಿಂದಲೇ ಇಲ್ಲಿ ಹಬ್ಬದ ವಿಧಿಗಳು ಆರಂಭವಾಗಿದ್ದು  ಡಿಸೆಂಬರ್  2ರ ದಿನವಾದ ಇಂದು  ಪ್ರಮುಖ ದಿನವಾಗಿದ್ದು, 7ನೇ ತಾರೀಖಿನವರೆಗೂ ವಿವಿಧ ಉತ್ಸವಗಳು ನೆರವೇರಲಿವೆ. ಇಂದು ಸುಮಾರು ಎರಡು ಲಕ್ಷ ಭಕ್ತರು ಮತ್ತು ಎಲ್ಲ ದಿನಗಳೂ  ಸೇರಿ ಒಟ್ಟಾರೆ 25 ಲಕ್ಷ ಮಂದಿ ಪಂಚಲಿಂಗ ದರ್ಶನ ಮಹೋತ್ಸವದಲ್ಲಿ ಪಾಲ್ಗೊಳ್ಳುವರು ಎಂಬ ಅಂದಾಜಿದೆ.

ಮಾಹಿತಿಕೃಪೆ: ಪ್ರಜಾವಾಣಿ
ಚಿತ್ರಕೃಪೆ: http://highwayonlyway.files.wordpress.com


ಕಾಮೆಂಟ್‌ಗಳಿಲ್ಲ: