ವಿ. ವಿ. ಗಿರಿ
ವಿ. ವಿ. ಗಿರಿ
ಭಾರತದ ರಾಷ್ಟ್ರಪತಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಬೃಹತ್ ಕಾರ್ಮಿಕ ಸಂಘಟನೆಯ ನಾಯಕರಾಗಿ ವಿವಿಧ ರೀತಿಯಲ್ಲಿ ಹೆಸರಾಗಿದ್ದವರು ವರಾಹಗಿರಿ ವೆಂಕಟ ಗಿರಿ ಅವರು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷ ನಿಯಮಿಸಿದ ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ವಿ. ವಿ. ಗಿರಿ ಅವರನ್ನು ಬೆಂಬಲಿಸಿ ರಾಷ್ಟ್ರಪತಿಯಾಗಿಸಿದ್ದು ಭಾರತದ ರಾಜಕೀಯದ ಒಂದು ವಿಭಿನ್ನ ತಿರುವು.
ವಿ. ವಿ. ಗಿರಿ ಅವರು 1894ರ ಆಗಸ್ಟ್ 10ರಂದು ಈಗಿನ ಒರಿಸ್ಸಾದ ಭಾಗವಾದ ಬರ್ಹಾಂಪುರದಲ್ಲಿ ಜನ್ಮತಾಳಿದರು. ಏಳು ಗಂಡು ಐದು ಹೆಣ್ಣುಮಕ್ಕಳ ಸಂಸಾರದಲ್ಲಿ ಇವರು ಎರಡನೆಯ ಮಗ. ತಂದೆ ವಿ ವಿ ಜೋಗಯ್ಯ ಪಂತಲು, ವಕೀಲರು; ರಾಜಕಾರಣದಲ್ಲೂ ಅವರಿಗೆ ಆಸಕ್ತಿಯಿತ್ತು. ರಾಷ್ಟ್ರೀಯ ಚಳವಳಿಯಲ್ಲಿ ಆಸಕ್ತಿ; 20ರ ದಶಕಗಳಲ್ಲಿ ಪಂಡಿತ್ ಮೋತಿಲಾಲ ನೆಹರೂ ಹಾಗೂ ಚಿತ್ತರಂಜನ್‍ದಾಸರ ಸ್ವರಾಜ್ಯ ಪಾರ್ಟಿಯಲ್ಲಿ ಸಕ್ರಿಯರಾಗಿದ್ದರು. ಇದು ಎಳೆಯ ವಿ ವಿ ಗಿರಿಯ ಮೇಲೆ ಸಹಜವಾಗಿ ಪ್ರಭಾವ ಬೀರಿತು. ಗಿರಿಯವರ ಒಬ್ಬ ಚಿಕ್ಕಪ್ಪ ಹನುಮಂತರಾವ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಇನ್ನೊಬ್ಬ ಚಿಕ್ಕಪ್ಪ ವಿಶ್ವನಾಥರಾವ್ ಸ್ಥಾಪಿಸಿದ್ದ ತರುಣ ಸಂಘಕ್ಕೆ ಗಿರಿಯವರು ಬಾಲ್ಯದಲ್ಲೇ ಸದಸ್ಯರಾಗಿದ್ದರು. ಆ ಸಂಘದ ಗ್ರಂಥಾಲಯಕ್ಕೆ ದಾನವಾಗಿ ಶೇಖರಿಸಲಾಗಿದ್ದ ಸುಮಾರು 2,000 ಗ್ರಂಥಗಳಲ್ಲಿ ರಾಜಕೀಯ ನಾಯಕರ ಚರಿತ್ರೆಗಳೇ ಹೆಚ್ಚಾಗಿದ್ದವು. ಆ ಸಂಘ ಬಡವರಿಗೆ ಅನ್ನದಾನಕ್ಕಾಗಿ ಮಧುಕರಿ ವ್ಯವಸ್ಥೆಯನ್ನೂ ತಿಲಕರ ಪೈಸಾ ನಿಧಿಗಾಗಿ ಧನ ಸಂಗ್ರಹದ ವ್ಯವಸ್ಥೆಯನ್ನೂ ಮಾಡಿತ್ತು. ಬಾಲ್ಯದಲ್ಲಿ ಗಿರಿಯವರಿಗೆ ಮಾರ್ಗದರ್ಶನ ನೀಡಿದವರು ಶಿಕ್ಷಕ ರಾಮಲಿಂಗಂ. ಆಗಿನ ಇವರ ಚಟುವಟಿಕೆಗಳ ಗಾಂಧಿಯವರ ಸತ್ಯಾಗ್ರಹವೇ ಮುಂತಾದ ಅನಂತರದ ಚಳುವಳಿಗಳಲ್ಲಿ ಭಾಗವಹಿಸಲು ಗಿರಿಯವರಿಗೆ ಪೂರ್ವಭಾವಿ ಸಿದ್ಧತೆಯನ್ನೊದಗಿಸಿದವು.
ಗಿರಿಯವರು ತಮ್ಮಂತೆಯೇ ವಕೀಲರಾಗಬೇಕೆಂದು ಅವರ ತಂದೆಯವರ ಬಯಕೆಯಾಗಿತ್ತು. ಮದ್ರಾಸಿನಲ್ಲಿ ಕೇಂಬ್ರಿಜ್ ಸೀನಿಯರ್ ಪರೀಕ್ಷೆ ಮಾಡಿ ಐರ್ಲೆಂಡಿನ ಡಬ್ಲಿನ್ ರಾಷ್ಟ್ರೀಯ ವಿದ್ಯಾಲಯವನ್ನು ಸೇರಿ ಕಿಂಗ್ಸ್ ಇನ್‍ನಲ್ಲಿ ಬ್ಯಾರಿಸ್ಟರ್ ಆದರು. ಸಂಪ್ರದಾಯಸ್ಥ ಬ್ರಾಹ್ಮಣ ಮನೆತನಕ್ಕೆ ಸೇರಿದ ಗಿರಿಯವರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಶಾಕಾಹಾರಿಗಳಾಗಿಯೇ ಅಲ್ಲಿ ಕೆಲಕಾಲ ಕಳೆದರು. ಐರ್ಲೆಂಡು ಇಂಗ್ಲೆಂಡಿನಿಂದ ಸ್ವತಂತ್ರವಾಗಲು ಹೋರಾಟದ ಹವಣಿಕೆಯಲ್ಲಿದ್ದದ್ದನ್ನು ಕಂಡಾಗ ಗಿರಿಯವರಿಗೆ ಭಾರತ ಐರ್ಲೆಂಡ್‍ಗಳ ಆಶೋತ್ತರಗಳಲ್ಲಿದ್ದ ಸಾಮ್ಯ ಗೋಚರವಾಯಿತು. ಐರ್ಲೆಂಡಿನವರು ಇಂಗ್ಲೆಂಡಿನವರಿಗಿಂತ ಹೆಚ್ಚಾಗಿ ಭಾರತೀಯರನ್ನು ಗೌರವಿಸುತ್ತಿದ್ದದ್ದನ್ನು ಗಮನಿಸಿದರು. ಐರ್ಲೆಂಡಿನ ನಾಯಕ ಡವಲೇರ ಅವರನ್ನು ಗಿರಿಯವರು ಸಂದರ್ಶಿಸಿದರು.
ಗಿರಿ ಅವರು ಬಿ.ಎ. ಪದವಿಗೆ ಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಂವಿಧಾನ, ನ್ಯಾಯ, ಅಂತರಾಷ್ಟ್ರೀಯ ಕಾನೂನುಗಳನ್ನು ಆರಿಸಿಕೊಂಡಿದ್ದರು. ಅಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸೇರಿ ಕ್ರಾಂತಿಕಾರಿ ಸಂಘವನ್ನು ಸ್ಥಾಪಿಸಿಕೊಂಡರು. ರಾಷ್ಟ್ರಪ್ರೇಮವನ್ನು ತೋರಿಸಲು ವಿದೇಶಿ ಅರಿವೆಗಳನ್ನು ಸುಟ್ಟುಹಾಕಿದರು.
ಗಿರಿಯವರು 1914ರಲ್ಲಿ ಗಾಂಧಿಯವರನ್ನು ಲಂಡನ್ನಿನಲ್ಲಿ ಸಂದರ್ಶಿಸಿದರು. ಅವರ ಎಲ್ಲಾ ವಿಚಾರಧಾರೆಗಳನ್ನೂ, ಉದಾಹರಣೆಗೆ ಅಹಿಂಸೆಯನ್ನು, ಆಗ ಗಿರಿ ಒಪ್ಪಲಿಲ್ಲವಾದರೂ ಗಾಂಧಿಯವರಿಂದ ಬಹಳಮಟ್ಟಿಗೆ ಪ್ರಭಾವಿತರಾದರು. ಯುದ್ಧದಲ್ಲಿ ಬ್ರಿಟಿಷರಿಗೆ ನೆರವಾಗಲು ಗಾಂಧಿಯವರ ಮಾತಿನಂತೆ ಗಿರಿಯವರು ರೆಡ್ ಕ್ರಾಸ್ ಸಂಸ್ಥೆಯನ್ನು ಸೇರಿದ್ದರೂ ಅನಂತರ ವಿಚಾರಮಾಡಿದಾಗ ತಾವು ಅದಕ್ಕೆ ಸೇರಿದ್ದು ತಪ್ಪೆನಿಸಿ ಕೂಡಲೇ ಗಾಂಧಿಯವರಿಗೆ ಪತ್ರ ಬರೆದು ಆ ಸಂಸ್ಥೆಯಿಂದ ಬಿಡುಗಡೆ ಹೊಂದಿದರು. ಅವರ ಈ ಕ್ರಮ ಆಗ ಕಾನೂನು ವಿರೋಧವಾಗಿತ್ತಾದರೂ ಗಿರಿಯವರು ಹೆದರಲಿಲ್ಲ.
1916ರಲ್ಲಿ ಜರುಗಿದ ಈಸ್ಟರ್ ದಂಗೆಯ ಅನಂತರ ಸಂಭವಿಸಿದ ದುರ್ಘಟನೆಗಳ ವಿಶೇಷ ಪರಿಣಾಮ ಗಿರಿಯವರ ಮೇಲಾಯಿತು. ಬಂದರು, ಗಣಿ ಮತ್ತು ರೈಲ್ವೆಗಳ ಸುಸಂಘಟಿತ ಕಾರ್ಮಿಕರು ಮುಷ್ಕರದ ಮೂಲಕ ಏನು ಮಾಡಬಲ್ಲರೆಂಬುದು ಗಿರಿಯವರಿಗೆ ಮನವರಿಕೆಯಾಯಿತು. ಅವರು ಭಾರತಕ್ಕೆ ಮರಳಿದ ಮೇಲೆ ಇದೇ ರೀತಿ ಕಾರ್ಮಿಕ ಶಕ್ತಿಯನ್ನು ಸಂಘಟಿಸಿ ಅದನ್ನು ರಾಜಕೀಯ ಹೋರಾಟದಲ್ಲಿ ಬಳಸಿಕೊಳ್ಳಬೇಕೆಂದು ನಿರ್ಧರಿಸಿದರು. ಆ ವೇಳೇಗಾಗಲೇ ಬ್ರಿಟಿಷ್ ಸರ್ಕಾರಕ್ಕೆ ಇವರ ಮೇಲೆ ಸಂಶಯ ಬಂದಿತ್ತು. ಆಗಿನ ಸೆಕ್ರೆಟರಿ ಆಫ್ ಸ್ಟೇಟ್ಸ್ ಚೇಂಬರ್ಲಿನ್, ಕಾಮನ್ಸ್ ಸಭೆಯಲ್ಲಿ ಹೇಳಿಕೆ ಕೊಡುತ್ತ, ಗಿರಿಯವರಿಗೂ ಐರಿಷ್ ನಾಯಕರಿಗೂ ಸಂಪರ್ಕವಿದೆಯೆಂದು ಘೋಷಿಸಿದ. ಇದರ ಪರಿಣಾಮವಾಗಿ ಗಿರಿಯವರಿಗೆ ಅಮೆರಿಕಾಕ್ಕೆ ಹೋಗಲು ರಹದಾರಿ ಸಿಗಲಿಲ್ಲ. ಇವರು ಸ್ವದೇಶಕ್ಕೆ ಮರಳಿದರು. 1917ರಲ್ಲಿ ಸರಸ್ವತಿಬಾಯಿಯವರೊಡನೆ ಗಿರಿಯವರ ಮದುವೆಯಾಯಿತು.
ಕಾರ್ಮಿಕ ಕ್ಷೇತ್ರವೆಂದರೇನೆಂಬುದು ಇನ್ನೂ ತಿಳಿಯದಿದ್ದ ಆ ಸಮಯದಲ್ಲಿ ಗಿರಿಯವರು ಆ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿದರು. 1915ರಲ್ಲಿಯೇ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಸದಸ್ಯರಾಗಿ ಸೇರಿದ್ದ ಗಿರಿಯವರು ಮಹಾತ್ಮಗಾಂಧಿಯವರ ಸಾಬರ್‍ಮತಿ ಆಶ್ರಮದಲ್ಲೂ ಕೆಲವು ದಿನ ಇದ್ದರು. ಗಿರಿಯವರು ಭಾರತಕ್ಕೆ ಮರಳಿದ ಮೇಲೆ ಆಗ ಸುಪ್ರಸಿದ್ಧ ಬ್ಯಾರಿಸ್ಟರರೂ ರಾಜಕಾರಣಿಯೂ ಆಗಿದ್ದ ಟಿ. ಪ್ರಕಾಶಂ ಅವರನ್ನು ವೃತ್ತಿಸಂಬಂಧವಾಗಿ ಭೇಟಿಮಾಡಿದರು. ಗಿರಿಯವರು ವಕೀಲಿವೃತ್ತಿಯಲ್ಲಿ ಐದುವರ್ಷ ಕಳೆಯುವುದರೊಳಗಾಗಿ ಸ್ವಾತಂತ್ರ್ಯ ಹೋರಾಟ ಇವರನ್ನು ಸೆಳೆಯಿತು. 1916ರಲ್ಲಿ ಇವರು ಲಖನೌದಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದರು. 1921ರಲ್ಲಿ ಸತ್ಯಾಗ್ರಹ ಚಳವಳಿಯಲ್ಲಿ 350 ಜನರೊಂದಿಗೆ ಇವರು ಗಂಜಾಮಿನಲ್ಲಿ ಸತ್ಯಾಗ್ರಹ ಹೂಡಿ ಬಂಧಿತರಾದರು. 1922ರಲ್ಲಿ ಇವರು ಜೈಲಿನಲ್ಲಿದ್ದಾಗ ರಾಜಕೀಯ ಸ್ನೇಹಿತರನ್ನು ಗಳಿಸಿಕೊಳ್ಳುವ ಅವಕಾಶ ಸಿಕ್ಕಿತು. ಕಾರಾಗೃಹದ ಸುಧಾರಣೆಗಾಗಿ ಅದರ ಒಳಗೆ ಸಂಘಟನೆ ಆಂದೋಲನಗಳನ್ನು ಪ್ರಾರಂಭಿಸಿದರು. 1922ರ ವೇಳೆಗೆ ವಿ ವಿ ಗಿರಿ ಅವರ ಶ್ರಮಜೀವಿವರ್ಗದ ಜತೆ ಸಂಬಂಧ ನಿಕಟಗೊಂಡು, ಎನ್ ಎಮ್ ಜೋಶಿಯವರ ಬಲಗೈ ಭಂಟರಾದರು. ಅಲ್ಲಿಂದ ಮುಂದಕ್ಕೆ ಅವರ ಬಹುಮುಖ್ಯ ಕಾರ್ಯಕ್ಷೇತ್ರ ಕಾರ್ಮಿಕರಂಗವಾಯಿತು.
ಮೂರು ತಿಂಗಳುಗಳ ಅನಂತರ ಕಾರಾಗೃಹದಿಂದ ಹೊರಬಂದ ಕೂಡಲೇ ಖರಗ್‍ಪುರದ ರೈಲ್ವೆ ಕಾರ್ಮಿಕ ನಿಯೋಗವೊಂದು ಸೆರಮನೆಯ ಹೆಬ್ಬಾಗಿಲಿನಲ್ಲೆ ಗಿರಿಯವರನ್ನು ಸಂದರ್ಶಿಸಿ ತಮ್ಮ ಸಂಘವನ್ನು ಸಂಘಟಿಸಬೇಕೆಂದು ಕೋರಿತು. ಕೂಡಲೇ ಗಿರಿಯವರು ಒಪ್ಪಿಕೊಂಡು ಬಂಗಾಳ, ನಾಗಪುರ ರೈಲ್ವೆ ಸಂಘವನ್ನು ಸ್ಥಾಪಿಸಿದರು. ಒಂದೇ ದಶಕದಲ್ಲಿ ಈ ಸಂಘ ದೊಡ್ಡದಾಗಿ ಬೆಳೆಯಿತು. ಈ ರೈಲ್ವೆಯಲ್ಲಿ ಗಿರಿ ಅವರು ಅತ್ಯಂತ ಯಶಸ್ವಿಯಾದ ಮುಷ್ಕರವನ್ನು ಸಹ ಸಂಘಟಿಸಿದರು. ಇವರು ಅಖಿಲ ಭಾರತ ರೈಲ್ವೆ ಫೆಡರೇಷನ್ನಿನ ಅಧ್ಯಕ್ಷರಾಗಿದ್ದರು. ಎರಡು ಬಾರಿ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಅಧ್ಯಕ್ಷರಾಗಿಯೂ ಇದ್ದರು. 1927ರಲ್ಲಿ ಜಿನೀವದಲ್ಲಿ ಸೇರಿದ್ದ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಇವರು ಭಾರತದ ಕಾರ್ಮಿಕ ನಿಯೋಗಿಯಾಗಿ ಭಾಗವಹಿಸಿದರು.
1927-1930ರ ಅವಧಿಯಲ್ಲಿ ಹಲವು ಮುಷ್ಕರಗಳನ್ನು ಸಂಘಟಿಸಿದರಾದರೂ ಗಿರಿಯವರು ಮುಷ್ಕರಗಳನ್ನು ಎಂದೂ ಸ್ವಾಗತಿಸುತ್ತಿರಲಿಲ್ಲ. ಕಾರ್ಮಿಕರು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ, ಮಾಲಿಕರಿಗೆ ಮುನ್ಸೂಚನೆಯನ್ನು ಕೊಟ್ಟು, ಸಂವಿಧಾನದ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ, ಮುಷ್ಕರ ಹೂಡಬೇಕೆಂಬುದು ಅವರ ಮತ.
ಬಂಗಾಳ, ನಾಗಪುರ ರೈಲ್ವೆ ಮುಷ್ಕರದಲ್ಲಿ ಸು. 60,000 ಕಾರ್ಮಿಕರು ಒಂದು ತಿಂಗಳ ಕಾಲ ಕೆಲಸಕ್ಕೆ ಹಾಜರಾಗದಿದ್ದಾಗ ಅವರ ಕುಟುಂಬಗಳ ರಕ್ಷಣೆ, ಪೋಷಣೆಗಳ ವ್ಯವಸ್ಥೆಯ ಪ್ರತಿಯೊಂದು ವಿವರವನ್ನೂ ಗಿರಿಯವರು ಪ್ರತ್ಯಕ್ಷ ಪ್ರವಾಸ ಭೇಟಿಗಳಿಂದ ನಿಯಂತ್ರಿಸಿದರು. ಇಂಥ ಬೃಹತ್ ಮುಷ್ಕರವನ್ನು ಗೌರವಯುತವಾಗಿ ನಿರ್ವಹಿಸಿ ಕಾರ್ಮಿಕ ಸಂಘಟನೆಯ ಸಾಮರ್ಥ್ಯ ಆಡಳಿತಕ್ಕೆ ಗೊತ್ತಾಗುವಂತೆ ಮಾಡಿದರು. ಆ ಸಂಘವನ್ನು ಸರ್ಕಾರ ಮನ್ನಿಸಬೇಕಾಯಿತು. ಕಾರ್ಯಕ್ಷೇತ್ರದಲ್ಲಿ ಗಿರಿಯವರಿಗೆ ಎಂ. ಎನ್. ಜೋಷಿಯವರು ಮಾರ್ಗದರ್ಶಕರಾಗಿದ್ದರು.
1934ರಲ್ಲಿ ಗಿರಿ ಅವರು ತಮ್ಮ ಸ್ನೇಹಿತರಾದ ರಾಜು ಅವರನ್ನು ಸೋಲಿಸಿ ಕೇಂದ್ರ ವಿಧಾನಸಭೆಗೆ ಚುನಾಯಿತರಾದರು (1934-37). ಆಗ ಅವರು ಕಾರ್ಮಿಕ ಸಮಸ್ಯೆಗಳತ್ತ ಸರ್ಕಾರದ ಗಮನಸೆಳೆಯಲು ಯತ್ನಿಸಿದರು. ಭಾರತದಲ್ಲೇ ರೈಲ್ವೆ ಎಂಜಿನ್‍ಗಳನ್ನು ತಯಾರಿಸುವುದು ಉಳಿತಾಯದ ಮಾರ್ಗವೆಂದು ಆಗಲೇ ಸೂಚಿಸಿದ್ದರು. ಸತ್ಯಮೂರ್ತಿ, ಭುಲಾಬಾಯಿ ದೇಸಾಯಿ, ಜಿನ್ನಾ, ಗೋವಿಂದವಲ್ಲಭಪಂತ್, ಮದನಮೋಹನ ಮಾಳವೀಯ, ಅಸಫ್ ಆಲಿ ಮುಂತಾದ ದಿಗ್ಗಜರಿಂದ ಕೇಂದ್ರೀಯ ವಿಧಾನಸಭೆಯಲ್ಲಿ ವಿ ವಿ ಗಿರಿ ಕಾರ್ಮಿಕ ಪ್ರಶ್ನೆಗಳನ್ನು ಪ್ರಬಲವಾಗಿ ಪ್ರತಿಪಾದಿಸಿ, ಎಲ್ಲರ ಗಮನ ಸೆಳೆದರು.
ಭಾರತದಲ್ಲಿ ಆರ್ಥಿಕ ಯೋಜನೆಗಳ ಮಾತು ಹೊಸದಾಗಿದ್ದ ಆ ಕಾಲದಲ್ಲಿ ಗ್ರಾಮೀಣ ಪ್ರಗತಿಗಾಗಿ ಆರ್ಥಿಕ ಯೋಜನೆಯೊಂದನ್ನು ರೂಪಿಸಿ ಕೇಂದ್ರ ವಿಧಾನ ಮಂಡಲದ ಮುಂದೆ ಗಿರಿಯವರು ಮಂಡಿಸಿದ್ದರು. ಕೈಗಾರಿಕೆಗಳ ವ್ಯಾಜ್ಯಗಳಲ್ಲಿ ಸಂಧಾನದ ಸಾಧನಗಳಾಗಿ ಮಂಡಳಿಗಳು ಇರಬೇಕೆಂದು ಆಗ ವಾದಿಸಿದ ಪರಿಣಾಮವಾಗಿ ಇಂದು ಆ ಬಗ್ಗೆ ಅನೇಕ ಕಾನೂನುಗಳಾಗಿ ಕೈಗಾರಿಕಾ ಸಂಸ್ಥೆಗಳು ವಿಫುಲ ಸೌಲಭ್ಯ ಪಡೆದಿವೆ. ಆದರೆ ಆಗ ಗಿರಿ ಅವರ ಈ ಮಾತುಗಳು ಹೊಸದಾಗಿ ಕಾಣುತ್ತಿದ್ದುವು.
1937ರಲ್ಲಿ ಪ್ರಾಂತೀಯ ವಿಧಾನ ಸಭೆಗಳಿಗೆ ಚುನಾವಣೆಗಳು ನಡೆದಾಗ, ಬ್ರಿಟಿಷ್ ಸರ್ಕಾರದ ಬೆಂಬಲವನ್ನೂ ಶ್ರೀಮಂತಿಕೆ, ಜಾತೀಯತೆ, ಹಾಗೂ ಅಧಿಕಾರ ಬಲವನ್ನೂ ಪಡೆದಿದ್ದ ಬೊಬ್ಬಿಲಿ ರಾಜರ ವಿರುದ್ಧವಾಗಿ ಗಿರಿಯವರು ಕಾಂಗ್ರೆಸ್ ಸ್ಪರ್ಧಿಯಾಗಿ ನಿಂತು ಗೆದ್ದು ನೆಹರೂ ಅವರ ಪ್ರಶಂಸೆಗೆ ಪಾತ್ರರಾದರು.
1937-39 ಮದ್ರಾಸಿನಲ್ಲಿ ಸಿ ರಾಜಗೋಪಾಲಾಚಾರಿ ಅವರು ರಚಿಸಿದ ಕಾಂಗ್ರೆಸ್ ಮಂತ್ರಿಮಂಡಲದಲ್ಲಿ ಕಾರ್ಮಿಕ, ಕೈಗಾರಿಕೆ, ಮತ್ತು ಸಹಕಾರ ಮಂತ್ರಿಯಾಗಿದ್ದ ಗಿರಿಯವರು ಕಾರ್ಮಿಕ ನೀತಿಯನ್ನು ಸೃಷ್ಟೀಕರಿಸುತ್ತ ಮಾಲಿಕರ, ಕಾರ್ಮಿಕರ ಮತ್ತು ಸರ್ಕಾರದ ತ್ರಿಪಕ್ಷ ಸಮ್ಮೇಳನವನ್ನು ಕರೆದರು. ಆಗ ಆ ಪ್ರಾಂತ್ಯದ ಮುಖ್ಯ ಮಂತ್ರಿಯಾಗಿದ್ದ ರಾಜಗೋಪಾಲಾಚಾರಿಯವರು ಇದನ್ನು ಗಿರಿಯವರ ದರ್ಬಾರ್ ಎಂದು ನಗೆಯಾಡಿದರು. ಆಗಿನ ರಾಜ್ಯಪಾಲರೂ ಇದರ ಬಗ್ಗೆ ತಾತ್ಸಾರ ಭಾವ ತಳೆದರು. ಭಾರತೀಯ ವಲಸೆಗಾರರ ಸಮಸ್ಯೆಯನ್ನು ಗಿರಿಯವರು ಆಗ ಕೈಗೆತ್ತಿಕೊಂಡರು. 1938ರಲ್ಲಿ ಕಾಂಗ್ರೆಸ್ ರಚಿಸಿದ ರಾಷ್ಟ್ರೀಯ ಯೋಜನಾ ಆಯೋಗಕ್ಕೆ ಗಿರಿಯವರು ಸಂಚಾಲಕರಾದರು. ಭಾರತದ ಪಂಚವಾರ್ಷಿಕ ಯೋಜನೆಗಳ ಭಾವನೆ ರೂಪುಗೊಂಡದ್ದು ಆಗ.
ಪ್ರಕಾಶಂ ಅವರು ಮದ್ರಾಸಿನಲ್ಲಿ ರಚಿಸಿದ ಸರ್ಕಾರದಲ್ಲೂ ಗಿರಿಯವರು ಮಂತ್ರಿಯಾಗಿದ್ದರು (1946-1947). 1952ರ ಮೇ ತಿಂಗಳಿಂದ 1954ರ ಸೆಪ್ಟೆಂಬರ್‍ವರೆಗೆ ಇವರು ಕೇಂದ್ರ ಸರ್ಕಾರದ ಕಾರ್ಮಿಕ ಮಂತ್ರಿಯಾಗಿದ್ದರು. ಕಾರ್ಮಿಕ ನೀತಿಯ ವಿಚಾರವಾಗಿ ಭಿನ್ನಾಭಿಪ್ರಾಯ ಬಂದುದರಿಂದ ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 1952ರಿಂದ 1957ರವರಗೆ ಇವರು ಲೋಕಸಭಾ ಸದಸ್ಯರಾಗಿದ್ದರು. 1958ರಲ್ಲಿ ಇವರು ಸಾಮಾಜಿಕ ಕಾರ್ಯದ ಭಾರತೀಯ ಸಮ್ಮೇಳನದ ಚುನಾಯಿತ ಅಧ್ಯಕ್ಷರಾಗಿದ್ದರು. ಇವರು ಕಾರ್ಮಿಕ ಅರ್ಥಶಾಸ್ತ್ರದ ಭಾರತೀಯ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಭಾರತೀಯ ಕಾರ್ಮಿಕ ಸಂಘ ಚಳವಳಿ, ಕಾರ್ಮಿಕ ಅರ್ಥಶಾಸ್ತ್ರ ಇವುಗಳ ಬೆಳವಣಿಗೆಯಲ್ಲಿ ಗಿರಿಯವರ ಮಹತ್ವದ ಪಾತ್ರವಿದೆ.
ಗಿರಿಯವರು 1957-1960ರಲ್ಲಿ ಉತ್ತರ ಪ್ರದೇಶಕ್ಕೂ 1960-1965ರಲ್ಲಿ ಕೇರಳಕ್ಕೂ 1965-1967ರಲ್ಲಿ ಮೈಸೂರಿಗೂ ರಾಜ್ಯಪಾಲರಾಗಿದ್ದರು. 1967ರ ಮೇ 13ರಿಂದ 1969ರ ಮೇ 3ರವರೆಗೆ ಅವರು ಭಾರತದ ಮೂರನೆ ಉಪರಾಷ್ಟ್ರಪತಿಯಾಗಿಯೂ ರಾಜ್ಯಸಭೆಯ ಅಧ್ಯಕ್ಷರಾಗಿಯೂ ಇದ್ದರು. ಭಾರತದ ರಾಷ್ಟ್ರಪತಿಯಾಗಿದ್ದ ಜಾಕಿರ್ ಹುಸೇನ್ 1969ರ ಮೇ 3ರಂದು ನಿಧನರಾದಾಗ ಹಂಗಾಮಿ ರಾಷ್ಟ್ರಪತಿಯಾದರು. ನಂತರ ಸ್ಪರ್ಧಿಸಿ ಜಯಶೀಲರಾಗಿ 1969ರ ಆಗಸ್ಟ್ 24ರಂದು ರಾಷ್ಟ್ರಪತಿಯಾದರು.
ಗಿರಿಯವರ ಪತ್ನಿ ಸರಸ್ವತಿಬಾಯಿ ಗಿರಿಯವರು ಬಳ್ಳಾರಿ ಜಿಲ್ಲೆಯವರು. ಗಿರಿದಂಪತಿಗಳಿಗೆ ಹದಿನಾರು ಮಕ್ಕಳೂ ನಲವತ್ತು ಮೊಮ್ಮಕ್ಕಳೂ ಹದಿಮೂರು ಮರಿಮಕ್ಕಳೂ ಇದ್ದರು.
ಗಿರಿಯವರು ಒಳ್ಳೆಯ ಲೇಖಕ, ವಾಗ್ಮಿ. ಇಂಡಸ್ಟ್ರಿಯಲ್ ರಿಲೇಷನ್ಸ್, ಲೇಬರ್ ಪ್ರಾಬ್ಲೆಮ್ಸ್ ಇನ್ ಇಂಡಿಯನ್ ಇಂಡಸ್ಟ್ರಿ ಮುಂತಾದ ಅನೇಕ ಗ್ರಂಥಗಳನ್ನು ಬರೆದಿದ್ದರು. ಇವರಿಗೆ 1975ರಲ್ಲಿ ಭಾರತ ಸರ್ಕಾರ 'ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಿತು.
ವಿ.ವಿ. ಗಿರಿ ಅವರು 1980ರ ಜೂನ್ 24ರಂದು ನಿಧನರಾದರು.
On the birth anniversary of Fourth President of India V. V. Giri
ಕಾಮೆಂಟ್‌ಗಳು