ಬುಧವಾರ, ಜನವರಿ 8, 2014

ಹರ ಗೋವಿಂದ ಖೊರಾನ

ಹರ ಗೋವಿಂದ ಖೊರಾನ

ಭಾರತೀಯ ಮೂಲಸ್ಥ ಅಮೆರಿಕದ ಪ್ರಜೆಯಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿ ಹರ ಗೋವಿಂದ ಖೊರಾನ.   ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಮಹತ್ವದ  ಸಂಶೋಧನೆಗಳ ಮೂಲಕ ಜಗತ್ಪ್ರಸಿದ್ಧರಾದ ಖೊರಾನ ಅವರು  ಜನವರಿ 9, 1922ರ ವರ್ಷದಲ್ಲಿ ಈಗಿನ ಪಾಕಿಸ್ತಾನದ ಭಾಗವಾಗಿರುವ  ರಾಯಪುರದಲ್ಲಿ ಜನಿಸಿದರು.   

ಹರ ಗೋವಿಂದ ಖೊರಾನ ಅವರ ತಂದೆ ಪಟ್ವಾರಿ ಎಂದು ಸಂಭೋದಿಸಲ್ಪಡುವ ಹಳ್ಳಿಯ ತೆರಿಗೆ ಅಧಿಕಾರ ಹೊಂದಿದ್ದು, ಖೊರಾನ ಅವರ ಹೈಸ್ಕೂಲುವರೆಗಿನ ಓದು ಮನೆಯಿಂದಲೇ ನಡೆಯುತ್ತಿತ್ತು.   ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದಿಂದ 1943ರಲ್ಲಿ ಬಿ.ಎಸ್.ಸಿ ಮತ್ತು 1945ರಲ್ಲಿ ಎಂ.ಎಸ್.ಸಿ ಪದವಿ ಪಡೆದ ಖೊರಾನ ಅವರು 1945ರ ವರ್ಷದಲ್ಲಿ ಬ್ರಿಟನ್ನಿನಲ್ಲಿರುವ ಲಿವರ್ಪೂಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು.  ಅಲ್ಲಿ 1948ರ ವರ್ಷದಲ್ಲಿ ಜೈವಿಕ ರಸಾಯನ ಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ಗಳಿಸಿದ ಅವರು ಮುಂದೆ ಎರಡು ವರ್ಷಗಳ ಕಾಲ ಜ್ಯೂರಿಚ್ನಲ್ಲೂ. ಮತ್ತೆರಡು ವರ್ಷಗಳ ಕಾಲ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೂ ಹೆಚ್ಚಿನ ಅಧ್ಯಯನದಲ್ಲಿ ನಿರತರಾದರು.    ಮುಂದೆ ಅವರು ಬ್ರಿಟಿಷ್ ಕೊಲಂಬಿಯಾ, ವಿಸ್ಕಾನ್ಸಿನ್ ಮ್ಯಾಡಿಸನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ 1970ರ ವರ್ಷದಿಂದ 2007ರವರೆಗಿನ ಸುದೀರ್ಘ ಅವಧಿಯವರೆವಿಗೆ  ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಪ್ರಾಧ್ಯಾಪಕರಾಗಿ ದುಡಿದರು.  

ಕೊ‌ಎಂಸೈಮ್ ಎಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ರಸಾಯನಶಾಸ್ತ್ರದಲ್ಲಿನ ಹರಗೋವಿಂದ ಖೊರಾನ ಅವರ ಒಂದು ದೊಡ್ಡ ಸಂಶೋಧನೆ. ಮಾನವ ಶರೀರದಲ್ಲಿ ಕೆಲವು ಕ್ರಿಯೆಗಳಿಗೆ ಅಗತ್ಯವಾದ ಈ ರಾಸಾಯನಿಕ ವಸ್ತುವನ್ನು ಅವರು ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿದ್ದಾಗ ತಯಾರಿಸಿದರು. 

ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯವಾದ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಪ್ರಯೋಗಾಲಯದಲ್ಲಿ  ತಯಾರು ಮಾಡಿ ಇಡೀ ಜಗತ್ತಿನ ಶ್ಲಾಘನೆಗೆ ಪಾತ್ರರಾದರು. ಇಂಥ ವಂಶವಾಹಿ ವಸ್ತು ಮನುಷ್ಯರ ಮತ್ತು ಪ್ರಾಣಿಗಳ ಕರುಳಿನಲ್ಲಿ ಇರುತ್ತದೆ. ಅವರು ಕೃತಕ ವಂಶವಾಹಿಯನ್ನು ಕರುಳಿನಲ್ಲಿರುವ ಎಶ್ಚೆರೀಚಿಯ ಕೋಲಿಎಂಬ ಬ್ಯಾಕ್ಟೀರಿಯಕ್ಕೆ ಸೇರಿಸಿದರು. ಅದು ಸಹಜವಾದ ವಂಶವಾಹಿಯಂತೇಯೇ ಕಾರ್ಯ ಮಾಡಿತು.  ಅವರ ಕ್ಲೋನಿಂಗ್ ತಂತ್ರಜ್ಞಾನ ಇಂದು ಸಸ್ಯ ಮತ್ತು ಪ್ರಾಣಿಶಾಸ್ತ್ರಗಳಲ್ಲಿ ಪ್ರಖ್ಯಾತಿ ಪಡೆದಿವೆ.

ಹರ ಗೋವಿಂದ ಖೊರಾನ  ಅವರು ವಿಜ್ಞಾನ ಕ್ಷೇತ್ರದಲ್ಲಿನ ತಮ್ಮ ಮಹತ್ವದ ಸಾಧನೆಗಳಿಗಾಗಿ 1968ರ ವರ್ಷದಲ್ಲಿ ಮಾರ್ಷಲ್ ಡಬ್ಲ್ಯೂ. ನಿರೆನ್‌ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ. ಹಾಲಿ ಅವರುಗಳ ಜತೆ ಔಷಧ ವಿಜ್ಞಾನ ಕ್ಷೇತ್ರದಲ್ಲಿನ  ನೊಬೆಲ್  ಪುರಸ್ಕಾರವನ್ನು ಸ್ವೀಕರಿಸಿದರು.

ಹರ ಗೋವಿಂದ ಖೊರಾನ ಅವರು ನವೆಂಬರ್ 9, 2011 ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ವಿಕಿಪೀಡಿಯಾ ಮತ್ತು ಕಣಜ

Tag: Har Gobind Khorana

ಕಾಮೆಂಟ್‌ಗಳಿಲ್ಲ: