ಶನಿವಾರ, ಡಿಸೆಂಬರ್ 10, 2016

ಸಿ. ಕೆ. ವೆಂಕಟರಾಮಯ್ಯ

s

ಸಿ. ಕೆ. ವೆಂಕಟರಾಮಯ್ಯ

ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ ೧0-೧೨-೧೮೯೬ರಲ್ಲಿ ಜನಿಸಿದರು. ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು.  ಮುಂಬೈಗೆ ಹೋಗಿ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು.

ಶ್ರೀರಂಗಪಟ್ಟಣದಲ್ಲಿ ವಕೀಲಿ ನಡೆಸಿದರು. ೧೯೨೪ರಲ್ಲಿ ಮೈಸೂರು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಸೇರಿ ೩0 ವರ್ಷಗಳ ಕಾಲ ನಿಸ್ಪೃಹಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ಮಾತಿನಲ್ಲಿ ಮೋಡಿ ಮಾಡಬಲ್ಲ ವಾಗ್ಮಿಗಳಾಗಿದ್ದರು. ಬರಹದಲ್ಲಿ ಸರಳವಾಗಿ ಜನಮೆಚ್ಚುಗೆ ಪಡೆಯುವ ಗ್ರಂಥಗಳನ್ನು  ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಿಕೆವೆಂ ೧೯೩೬-೧೯೩೭ ಮತ್ತು ೧೯೩೮-೧೯೪0ರ ಅವಧಿಗಳಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು. ೫ ವರ್ಷಗಳ ಕಾಲ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು.

ಇವರ ನಿಸ್ಪೃಹ ಸೇವೆಯನ್ನು ಗೌರವಿಸಿ ಮೈಸೂರು ಮಹಾರಾಜರು ರಾಜ ಸೇವಾ ಪ್ರಸಕ್ತ ಬಿರುದನ್ನು ಇತ್ತಿದ್ದರು. ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ರಾಜ್ಯ ಸಾಹಿತ್ಯ ಅಕಾಡೆಮಿ ೧೯೭0ರಲ್ಲಿ ಇವರಿಗೆ ಗೌರವ ಪ್ರಶಸ್ತಿ ಸಲ್ಲಿಸಿತು. ೧೯೪೭ರಲ್ಲಿ ಹರಪನಹಳ್ಳಿಯಲ್ಲಿ ೩0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೭೧ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು.

ಭಾಷಣಗಳಿಂದ ಪ್ರಖ್ಯಾತರಾದ ಸಿ. ಕೆ. ವೆಂಕಟರಾಮಯ್ಯನವರು ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ನಾಟಕ, ಸಣ್ಣಕತೆ, ಜೀವನಚರಿತ್ರೆಗಳಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕೃತಿಗಳು ಹೀಗಿವೆ:

ಹಳ್ಳಿಯ ಕಥೆಗಳು, ಮಂಡೋದರಿ (ನಾಟಕ)

ತುರಾಯಿ (ಕಥೆಗಳು), ನಚಿಕೇತ (ನಾಟಕ)

ಬುದ್ಧ (ಜೀವನಚರಿತ್ರೆ), ಆಳಿದ ಮಹಾಸ್ವಾಮಿಯವರು (ಜೀವನ ಚರಿತ್ರೆ), ಪೈಗಂಬರ್ (ಜೀವನ ಚರಿತ್ರೆ), ಹರ್ಷವರ್ಧನ (ಜೀವನಚರಿತ್ರೆ) ಇತ್ಯಾದಿ,

ವಿಶ್ವಖ್ಯಾತಿಯ ವಿಜ್ಞಾನಿ ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಸಿ. ಕೆ. ವೆಂಕಟರಾಮಯ್ಯನವರ ಪುತ್ರ

ಜನಪ್ರಿಯ ಸಾಹಿತಿಗಳೂ ವಿದ್ವಾಂಸರೂ ಆಗಿದ್ದ  ಸಿ. ಕೆ. ವೆಂಕಟರಾಮಯ್ಯನವರು ೩-೪-೧೯೭೩ರಲ್ಲಿ ನಿಧನರಾದರು.


Tag: C.K. Venkataramaiah

ಕಾಮೆಂಟ್‌ಗಳಿಲ್ಲ: