ಬುಧವಾರ, ಆಗಸ್ಟ್ 21, 2019

ದೀಪಾದೀಪಾ

ದೀಪಾ ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಪ್ರಸಕ್ತ ಧಾರಾವಾಹಿ 'ಮಗಳು ಜಾನಕಿ'ಯಲ್ಲಿನ ಪಾತ್ರದಿಂದ ಅವರು ಎಲ್ಲರ ಮನೆ ಮಾತಾಗಿದ್ದಾರೆ. ಜೊತೆಗೆ, ಅವರು ಕಿರುವಯಸ್ಸಿನಿಂದಲೇ ರಂಗಭೂಮಿಗೆ ಬಂದು ಸುಮಾರು ಎರಡೂವರೆ ದಶಕಗಳಿಗೆ ಸಮೀಪದ ಕಲಾಕೈಂಕರ್ಯದಲ್ಲಿ ತೊಡಗಿದವರು ಎಂಬುದು ಕೂಡಾ ಅಚ್ಚರಿ ಮೆಚ್ಚುಗೆಗಳೆರಡನ್ನೂ ತರುವಂತಹ ವಿಷಯವಾಗಿದೆ.

ಸಂಪ್ರದಾಯಸ್ತ ಕುಟುಂಬದ ಹಿನ್ನೆಲೆಯ ನಾಗರಾಜ ಶಾಸ್ತ್ರೀ ಮತ್ತು ಅನ್ನಪೂರ್ಣ ದಂಪತಿಗಳ ಪುತ್ರಿಯಾದ ದೀಪಾ ತಮ್ಮ 14 ನೇ ವಯಸ್ಸಿನಲ್ಲಿಯೇ ಸಂಗೀತ ಮತ್ತು ಭರತ ನಾಟ್ಯದ ಪರೀಕ್ಷೆಗಳನ್ನು ಮುಗಿಸಿ ಅಶೋಕ್ ನಿಟ್ಟೂರು ಅವರು ನಡೆಸುತ್ತಿದ್ದ ಬೇಸಿಗೆ ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟವರು.

ಪ್ರಾರಂಭದಲ್ಲೇ ದೀಪಾ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಜನನಿ" ಧಾರಾವಾಹಿಯಲ್ಲಿ ಮೇರು ನಟಿ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಿ ಗಮನ ಸೆಳೆದವರು.
ಮುಂದೆ ದೂರದರ್ಶನದಲ್ಲಿ ದೀಪಾ ಅವರು ನಡೆಸಿಕೊಡುತ್ತಿದ್ದ "ಆಚಾರ ವಿಚಾರ" ಎಂಬ ಕಾರ್ಯಕ್ರಮ ನೂರಾರು ಸಂಚಿಕೆಗಳನ್ನು ಪೂರೈಸಿತ್ತು.

ರಂಗಭೂಮಿ ಮತ್ತು ಕಿರುತೆರೆಗಳಲ್ಲಿ ತಮ್ಮ ನಿರಂತರ ಸಕ್ರಿಯ ಆಸಕ್ತಿ ಮತ್ತು ನಂಟನ್ನು ಉಳಿಸಿಕೊಂಡ ದೀಪಾ ಅವರ ಮತ್ತೊಂದು ಪ್ರಮುಖ ಸಾಧನೆಯೆಂದರೆ, ಅವರು ಬೆಂಗಳೂರಿನ ಕೆಂಗೇರಿಯಲ್ಲಿ ತಮ್ಮದೇ ಸಂಸ್ಥೆ "ನವರಂಗ" ದಲ್ಲಿ ಮಕ್ಕಳಿಗೆ ಭರತನಾಟ್ಯ ಮತ್ತು ಸಂಗೀತದ ತರಬೇತಿ ನೀಡುತ್ತಿರುವುದು.

ಕಲಾತ್ಮಕ ಚಿತ್ರಗಳಲ್ಲಿ ವಸ್ತ್ರವಿನ್ಯಾಸ, ಕೆಲವು ಚಿತ್ರಗಳಲ್ಲಿ ಅಭಿನಯ ಮುಂತಾದವು ದೀಪಾ ಅವರ ಕುರಿತು ನಾವು ಅಲ್ಲಲ್ಲಿ ಓದಿರುವ ಇನ್ನಿತರ ವಿಚಾರಗಳು.

ಸದಾ ಕ್ರಿಯಾಶೀಲರಾಗಿ ನಮ್ರ ಹಸನ್ಮುಖದೊಂದಿಗೆ ಬೆರೆಯುವ ದೀಪಾ ಅವರ ಪರಿಚಯ ದೊರೆತದ್ದು ನನ್ನ ಸೌಭಾಗ್ಯದಲ್ಲಿ ಕೂಡಾ ಸೇರಿದೆ. ಈ ನಿರಂತರ ನಗೆಮೊಗದ ಕಾಂತಿಯುಕ್ತ ದೀಪ ಅನುದಿನ ಪ್ರಕಾಶಿಸುತ್ತಿರಲಿ ಎಂಬುದು ನಮ್ಮೆಲ್ಲರ ಆತ್ಮೀಯ ಹಾರೈಕೆ.

Tag: Deepa K.N., K.N. Deepa

ಕಾಮೆಂಟ್‌ಗಳಿಲ್ಲ: