ಸೋಮವಾರ, ಆಗಸ್ಟ್ 26, 2019

ಟಿ. ವಿ. ವೆಂಕಟಾಚಲಶಾಸ್ತ್ರಿಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರಿ

ಇಂದು ಮಹಾನ್ ವಿದ್ವಾಂಸರಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಜನ್ಮದಿನ.  ಶಾಸ್ತ್ರಿಗಳು ನಮ್ಮ ನಾಡು ನುಡಿಗಳ  ಹಿರಿಮೆ ಗರಿಮೆಗಳ ಪ್ರವರ್ತಕರಾಗಿ ನಿರತ ಕಂಗೊಳಿಸುತ್ತಾ ಬಂದವರು.   ಛಂದಸ್ಸು, ವ್ಯಾಕರಣ, ಕಾವ್ಯಮೀಮಾಂಸೆ, ನಿಘಂಟು, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ನಾಟಕ, ಪಬಂಧ, ಇವೇ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ನೂರಾರು ಮಹತ್ವದ ಗ್ರಂಥಗಳನ್ನು ಕೊಡುಗೆ ನೀಡುವುದರ ಮೂಲಕ ಶಾಸ್ತ್ರಿಗಳು, ನಮ್ಮ ಭಾಷಾ ಶ್ರೀಮಂತಿಕೆಯನ್ನು   ವಿಪುಲವಾಗಿ ತೆರೆದಿಟ್ಟಿದ್ದಾರೆ. ವಿದ್ವತ್ತತೆಯ ಶ್ರೇಷ್ಟತೆಯ ನಿಟ್ಟಿನಲ್ಲಂತೂ  ವೆಂಕಟಾಚಲ ಶಾಸ್ತ್ರಿಗಳು, ಆರ್. ನರಸಿಂಹಾಚಾರ್, ಡಿ. ಎಲ್. ನರಸಿಂಹಾಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯ ಮೊದಲಾದ ವಿದ್ವತ್ ಪರಂಪರೆಯ ಪ್ರತಿನಿಧಿಗಳೆಂದೇ ಗುರುತಿಸಲ್ಪಟ್ಟವರಾಗಿದ್ದಾರೆ.

ತೋಗೆರೆ ವೆಂಕಟಸುಬ್ಬಾಶಾಸ್ತ್ರಿ ವೆಂಕಟಾಚಲ ಶಾಸ್ತ್ರಿಗಳು 26 ಆಗಸ್ಟ್, 1933 ವರ್ಷದಲ್ಲಿ ಬೆಂಗಳೂರು  ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು  ತಾಯಿ ಸುಬ್ಬಮ್ಮನವರು.  ಶಾಸ್ತ್ರಿಗಳ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವ್ಯಾಸಂಗಗಳು ಕನಕಪುರದಲ್ಲೇ ಜರುಗಿದವು.  ಮುಂದೆ  ಕಾಲೇಜಿನ ಮೆಟ್ಟಿಲು ಹತ್ತಲು ಮೈಸೂರಿಗೆ ಬಂದ ಶಾಸ್ತ್ರಿಗಳು, ಯುವರಾಜಾ ಮತ್ತು ಮಹಾರಾಜಾ ಕಾಲೇಜುಗಳಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದಿ, ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರು. 

ತಮ್ಮ ಹುಟ್ಟೂರು ಕನಕಪುರದ ಗ್ರಾಮಾಂತರ ಕಾಲೇಜಿನ ಉಪನ್ಯಾಸಕರಾಗಿ ಶಾಸ್ತ್ರಿಗಳು ತಮ್ಮ  ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಕೆಲಕಾಲ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು, ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದ ನಂತರ 1968 ವರ್ಷದಿಂದ ಮೊದಲುಗೊಂಡಂತೆ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅವರ ಸೇವೆ ಆರಂಭಗೊಂಡಿತು.  ಈ ಮಧ್ಯೆ ಪ್ರೊ. ಡಿ.ಎಲ್.ಎನ್. ಮತ್ತು ಹಾಮಾನಾ ಅವರ ಮಾರ್ಗದರ್ಶನದಲ್ಲಿ ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿಯನ್ನು ಗಳಿಸಿದರು. 

ಕುವೆಂಪು, ಡಿ.ಎಲ್.ಎನ್, ಕ.ವೆಂ. ರಾಘವಾಚಾರ್, ಎಸ್. ಶ್ರೀಕಂಠಶಾಸ್ತ್ರಿ, ಎಸ್. ವಿ. ಪರಮೇಶ್ವರ ಭಟ್ಟ  ಅವರಂಥ ಮಹಾನ್ ಉಪಾಧ್ಯಾಯರುಗಳಿಂದ ಸ್ಫೂರ್ತಿ ಪಡೆದ ವೆಂಕಟಾಚಲಶಾಸ್ತ್ರಿಗಳಿಗೆ ಅಧ್ಯಾಪನ ಮತ್ತು ಸಂಶೋಧನಾ ಪ್ರೀತಿಗಳು ಸಹಜವಾಗೆಂಬಂತೆ ಆಪ್ತ ಸಂಗಾತಿಗಳಾದವು.  ಛಂದಸ್ಸು, ವ್ಯಾಕರಣ ಮತ್ತು ನಿಘಂಟು, ಗ್ರಂಥ ಸಂಪಾದನೆಗಳು ಅವರ ಸಂಶೋಧನಾ ಪ್ರವೃತ್ತಿ ಮತ್ತು ವಿದ್ವತ್ತುಗಳನ್ನು ಬೆಳಕಿಗೆ ತಂದ ಪ್ರಮುಖ ಕ್ಷೇತ್ರಗಳಾದವು.

ಛಂದಃಶಾಸ್ತ್ರದಲ್ಲಿ ವೆಂಕಟಾಚಲ ಶಾಸ್ತ್ರಿಗಳದು ಮಹತ್ವದ ಸಾಧನೆ.  ತೀನಂಶ್ರೀ, ಬಿಎಂಶ್ರೀ, ಸೇಡಿಯಾಪು ಕೃಷ್ಣಭಟ್ಟರು ಮುಂತಾದ ಮಹನೀಯರು  ಛಂದಶಾಸ್ತ್ರಗಳ ಕುರಿತು ಬರೆದ  ಬಿಡಿ ಲೇಖನಗಳಷ್ಟೇ ಓದು ಅಧ್ಯಯನಗಳಿಗೆ ಆಕರ ಸಾಮಗ್ರಿಗಳಾಗಿದ್ದ ಕಾಲವದು.  ಇಂತಹ ಸಮಯದಲ್ಲಿ  ಶಾಸ್ತ್ರಿಗಳು ಕನ್ನಡ ಛಂದಸ್ಸಿನ ಸ್ವರೂಪದ ಕುರಿತು ಅಧ್ಯಯನಶೀಲರಾಗಿ ಸಂಶೋಧನೆ ನಡೆಸಿದರು.  ಶಾಸ್ತ್ರಿಗಳು   ಕುವೆಂಪು ಅವರ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ಚಿತ್ರಾಂಗದ’ ಕಾವ್ಯಗಳ ಛಂದೋವಿಲಾಸವನ್ನು ವಿಶ್ಲೇಷಿಸಿದರು.  ಡಾ. ಡಿ.ಎಸ್. ಕರ್ಕಿಯವರ ‘ಛಂದೋವಿಕಾಸ’ ಬಿಟ್ಟರೆ ಬೇರೊಂದು ಅಧ್ಯಯನ ಗ್ರಂಥವಿಲ್ಲದಿದ್ದಂತಹ ಪರಿಸ್ಥಿತಿಯಲ್ಲಿ ‘ಕನ್ನಡ ಛಂದಸ್ಸು’ (1970), ‘ಕನ್ನಡ ಛಂದಃಸ್ವರೂಪ’ (1978), ‘ಕನ್ನಡ ಛಂದೋವಿಹಾರ’ ಗ್ರಂಥಗಳನ್ನು ರಚಿಸಿ ಕನ್ನಡಕ್ಕೆ  ಶ್ರೀಮಂತಿಕೆಯನ್ನು ತಂದುಕೊಟ್ಟರು.

ಕನ್ನಡ ಛಂದಸ್ಸಿನ ಚರಿತ್ರೆಯಲ್ಲೊಂದು ಮೈಲಿಗಲ್ಲು ಎಂಬ ಪ್ರಶಂಸೆಗೆ ಪಾತ್ರವಾಗಿರುವ ‘ಕನ್ನಡ ಛಂದಃಸ್ವರೂಪ’, ಸಂಸ್ಕೃತ, ಪ್ರಾಕೃತ, ತೆಲುಗು, ಕನ್ನಡ ಮುಂತಾದ ಭಾಷೆಗಳಲ್ಲಿ ಛಂದಸ್ಸನ್ನು ಕುರಿತು ನಡೆದಿರುವ ಕೆಲಸಗಳ ತೌಲನಿಕ ಅಧ್ಯಯನ ಮತ್ತು ಮೌಲ್ಯಮಾಪನವುಳ್ಳ ಘನವಾದ ಕೃತಿ.  ‘ಛಂದಸ್ಸಿನ ಸಂಜ್ಞೆಗಳು, ಮೂಲತತ್ವಗಳು ಮತ್ತು ಆಕರಗಳು’, ‘ವೈದಿಕ ಛಂದಸ್ಸು’, ‘ಲೌಕಿಕ ಛಂದಸ್ಸು’, ‘ಮಾತ್ರಾ ಛಂದಸ್ಸು’, ‘ಅಂಶ ಛಂದಸ್ಸು’, ಮತ್ತು ‘ಹೊಸಗನ್ನಡ ಛಂದಸ್ಸು’ ಎಂದು ವರ್ಗೀಕರಿಸಿ ಆರು ಅಧ್ಯಾಯಗಳಲ್ಲಿ ತಲಸ್ಪರ್ಶಿ ಅಧ್ಯಯನ ಮಾಡಿರುವುದು ಈ ಕೃತಿಯ ವಿಶೇಷ.  ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಕನ್ನಡ ಛಂದಸ್ಸಿನ ಚರಿತ್ರೆ’, ಕನ್ನಡ ಛಂದಸ್ಸಿನ ಸ್ವರೂಪದ ವಿಸ್ತೃತ ವಿವೇಚನೆಯೇ ಆಗಿದೆ ಎಂಬುದು ವಿಮರ್ಶಕರ ಅಭಿಮತ.

ಕೇಶೀರಾಜನ ‘ಶಬ್ದಮಣಿ ದರ್ಪಣ’ದ ಕುರಿತ ಮೂರು ಗ್ರಂಥಗಳು ವೆಂಕಟಾಚಲ ಶಾಸ್ತ್ರಿಗಳಿಗೆ ವ್ಯಾಕರಣದ ಬಗ್ಗೆ ಇರುವ ಗಾಢವಾದ ಒಲವನ್ನು ಸಾರಿಹೇಳುತ್ತವೆ.  ಕೇಶೀರಾಜ ವಿರಚಿತ ‘ಶಬ್ದಮಣಿದರ್ಪಣಂ’ (1994), ‘ದರ್ಪಣ ವಿವರಣ’ (1997) ಕೃತಿಗಳು ಬಹುಪ್ರಶಂಸೆಗೆ ಪಾತ್ರವಾಗಿವೆ.  ‘ಕೇಶೀರಾಜ ವಿರಚಿತ ಶಬ್ದಮಣಿ ದರ್ಪಣಂ’ ಕೃತಿಯಲ್ಲಿ ಶಾಸ್ತ್ರಿಗಳು ಹಿಂದಿನ ಆವೃತ್ತಿಗಳೆಲ್ಲವನ್ನೂ ಆಮೂಲಾಗ್ರವಾಗಿ ಪರಾಮರ್ಶಿಸಿ, ಪರಿಶೋಧಿಸಿ ಅವುಗಳಲ್ಲಿ ಉಳಿದಿದ್ದ ಅರೆಕೊರೆಗಳನ್ನು ಪರಿಷ್ಕರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎಂದು ವಿದ್ವಾಂಸರು ಮೆಚ್ಚಿಕೊಂಡಿರುವುದು ಅವರ ಪಾಂಡಿತ್ಯ, ಪ್ರತಿಭೆ ಮತ್ತು ಪರಿಶ್ರಮಗಳಿಗೆ ದೊರೆತಿರುವ ಗೌರವಗಳಾಗಿವೆ.

ಗ್ರಂಥ ಸಂಪಾದನೆಯ ಕಾರ್ಯದಲ್ಲೂ ಶಾಸ್ತ್ರಿಗಳ ಕೊಡುಗೆ ಅದ್ವಿತೀಯವಾದುದು.  ‘ಶ್ರೀವತ್ಸ ನಿಘಂಟು’, ‘ಕನ್ನಡ ರತ್ನಕೋಶ’, ‘ಗಜಶಬ್ದ ಕೋಶ’, ‘ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು’ ಮತ್ತು ‘ಕನ್ನಡ ಚೆನ್ನುಡಿ’ ಕೃತಿಗಳು ಸರ್ವಕಾಲಕ್ಕೂ ಸಲ್ಲಬಹುದಾದಂಥ ಕೃತಿಗಳು.  ಗುಣಮಟ್ಟದಲ್ಲಿ, ವಸ್ತುವಿನ ವಿವೇಚನೆ-ವಿಶ್ಲೇಷಣೆಗಳಲ್ಲಿ ಮಹತ್ವಪೂರ್ಣವೆನಿಸುವ ಕನ್ನಡ ಸಾಹಿತ್ಯ ಚರಿತ್ರೆಯ ಎಲ್ಲಾ ಸಂಪುಟಗಳಲ್ಲೂ ಏಕಸೂತ್ರತೆಯನ್ನು ಕಾಪಾಡಿಕೊಂಡಿರುವುದು ಹಾಗೂ ಸಾಮಾನ್ಯ ಸಹಜ ನಿರೂಪಣೆ ಮತ್ತು ನಿರ್ದಿಷ್ಟ ಚೌಕಟ್ಟಿಗೆ ಹೊಂದಿಕೊಂಡಂತೆ ಇರುವುದು ಸಂಪಾದಕರಾಗಿ ವೆಂಕಟಾಚಲ ಶಾಸ್ತಿಗಳ ಪರಿಣತಿಗೆ ತೋರುಬೆರಳಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಾರ್ಯದಲ್ಲೂ ಶಾಸ್ತ್ರಿಗಳ ಬೃಹತ್ ಕೊಡುಗೆ ಸಂದಿದೆ.

ಶಿಕ್ಷಣ, ರಾಜನೀತಿ, ಧರ್ಮ-ಅಧರ್ಮ, ಸಾಮಾನ್ಯ ನೀತಿ ಹೀಗೆ ವಿಷಯಾನುಸಾರವಾಗಿ ಹದಿನಾಲ್ಕು ವಿಭಾಗಗಳಲ್ಲಿ ವರ್ಗೀಕರನಗೊಂಡಿರುವ ಕನ್ನಡ ಸುಭಾಷಿತಗಳ ಬೃಹತ್ ಸಂಪುಟ ಶಾಸ್ತ್ರಿಗಳ ಓದು, ಅಧ್ಯಯನ, ವಿವೇಚನಾ ವಿವೇಕ ಮತ್ತು ಅರ್ಥ ವ್ಯಾಖ್ಯಾನ ಸಾಮರ್ಥ್ಯಗಳಿಗೆ ಉತ್ತಮ ನಿದರ್ಶನವಾಗಿದೆ.  ಎಲ್ಲ ವರ್ಗದ ಜನರಿಗೂ ಸುಲಭವಾಗಿ ಅರ್ಥವಾಗುವಂತ ಸರಳವಾದ ತಾತ್ಪರ್ಯವನ್ನು ನೀಡಿರುವುದು ಗ್ರಂಥದ ಮೌಲ್ಯವನ್ನು ಹೆಚ್ಚಿಸಿದೆ.

‘ಕನ್ನಡ ಚಿತ್ರಕಾವ್ಯ’ ಮತ್ತು ‘ಮುದ್ರಾ ಮಂಜೂಷವು’, ವೆಂಕಟಾಚಲ ಶಾಸ್ತ್ರಿಗಳ ಇನ್ನೆರಡು ಮಹತ್ವದ ಕೊಡುಗೆಗಳು.  ಚಿತ್ರಕಾವ್ಯವು ಸಂಸ್ಕೃತದಲ್ಲಿ ಸಮೃದ್ಧವಾದ ಪ್ರಯೋಗಗಳನ್ನು ಕಂಡಿರುವ ಒಂದು ಕಾವ್ಯ ಪ್ರಕಾರ. ಶಾಸ್ತ್ರಿಗಳ ಶೋಧನ ಪ್ರತಿಭೆ, ಯೋಜನಾ ಪ್ರತಿಭೆ ಮತ್ತು ವಿಶ್ಲೇಷಣಾ ಪ್ರತಿಭೆಗಳು ಈ  ಕೃತಿಯನ್ನು ಮಹತ್ವಪೂರ್ಣವಾಗಿಸಿದೆ.

ಕಾದಂಬರಿ ಬರವಣಿಗೆಗೆ ಕನ್ನಡ ಗದ್ಯವನ್ನು ಹದಗೊಳಿಸಿದ ಕೃತಿ ಎಂದು ಕೀರ್ತಿನಾಥ ಕುರ್ತಕೋಟಿಯವರು ಗುರುತಿಸಿರುವ ಕೆಂಪುನಾರಾಯಣನ ‘ಮುದ್ರಾ ಮಂಜೂಷ’ವು ಹೊಸಗನ್ನಡದ ಪ್ರಥಮ ಸ್ವತಂತ್ರ ಐತಿಹಾಸಿಕ ಕಾದಂಬರಿ.  ನವನಂದರ ಮೇಲೆ ಚಾಣಕ್ಯ-ಚಂದ್ರಗುಪ್ತ ಮೌರ್ಯರು ಸಾಧಿಸುವ ವಿಜಯಗಾಥೆಯನ್ನು ನಿರೂಪಿಸುವ ಈ ಕಥಾನಕವನ್ನು ಶಾಸ್ತ್ರಿಯವರು ಲಭ್ಯವಿದ್ದ ಎಲ್ಲ ಹಸ್ತಪ್ರತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಪರಾಮರ್ಶಿಸಿ ಆ ಕೃತಿಯ ಹೊಸ ಆವೃತ್ತಿಯನ್ನು ಸಂಪಾದಿಸಿಕೊಟ್ಟಿದ್ದಾರೆ.  ಈ ಕೃತಿಯಲ್ಲಿ  ಶಾಸ್ತ್ರಿಗಳು ಬರೆದಿರುವ ಸುಮಾರು ನೂರು ಪುಟಗಳಷ್ಟು ಸುದೀರ್ಘವಾದ ಪೀಠಿಕೆ ಒಂದು ಕಾಲಘಟ್ಟದ ಕನ್ನಡ ನಾಡಿನ ಚರಿತ್ರೆಯೂ ಹೌದು ಹಾಗೂ ಆಗಿನ ವ್ಯವಸ್ಥೆಯ ವಿಮರ್ಶೆಯೂ ಹೌದು ಎಂಬುದು ವಿದ್ವಾಂಸರ ನಿಲುವಾಗಿದೆ.

ಪ್ರೊ. ಶಾಸ್ತ್ರಿಗಳ ಇನ್ನಿತರ ಮಹತ್ವದ  ಸಂಶೋಧನಾ ಕೃತಿಗಳಲ್ಲಿ ‘ಕನ್ನಡ ನೇಮಿನಾಥ ಪುರಾಣ, ತೌಲನಿಕ ಅಧ್ಯಯನ’,ಜೈನ ಸಾಹಿತ್ಯ, ಜೈನ ಭಾಗವತ ಭಾರತಗಳು-ಒಂದು ಸಮೀಕ್ಷೆ’, ‘ಹರಿವಂಶ ಪುರಾಣ ಸಾರ’, ‘ಕರ್ಣ ಪಾರ‍್ಯ’, ‘ನೇಮಿನಾಥ ಪುರಾಣ ಕಥಾಸಾರ’, ‘ಅರ್ಧ ನೇಮಿನಾಥ ಪುರಾಣ ಕಥಾಸಾರ ವಸ್ತು ವಿಮರ್ಶೆ’, ‘ಕನ್ನಡ ಜೈನ ಪುರಾಣಗಳಲ್ಲಿ ಸಿದ್ಧಾಂತ ವಿಷಯ’, ‘ಜೈನ ಭಾರತ ಕಥೆ ಮತ್ತು ಸ್ವರೂಪ ಜೈನ ಧರ್ಮ ಮತ್ತು ಕನ್ನಡ ಸಾಹಿತ್ಯ’ : ‘ಕಾವ್ಯ ಮೀಮಾಂಸೆ’, ‘ಕನ್ನಡ ಚಿತ್ರ ಕಾವ್ಯ', ‘ಶಾಸ್ತ್ರೀಯ : ೨ ಸಂಪುಟಗಳು’, ‘ಮಹಾಕಾವ್ಯ ಲಕ್ಷಣ’ ಮುಂತಾದವು ಸೇರಿವೆ.

ಅವರ ಇತರ ಗ್ರಂಥ ಸಂಪಾದನೆಗಳಲ್ಲಿ ‘ಆದಿಪುರಾಣ’, ‘ಗೊಮ್ಮಟ ಜಿನಸ್ತುತಿ’, ‘ಪಂಪ ಸಂಪುಟ’, ‘ಸಮಯ ಪರೀಕ್ಷೆ’ ಮುಂತಾದ ಬೃಹತ್ ಕೃತಿಗಳು ಸೇರಿವೆ.  ಇದಲ್ಲದೆ ಗ್ರಂಥ ಸಂಪಾದನೆಯ ಪಾರಿಭಾಷಿಕ ಕೋಶವನ್ನೂ ಅವರು ಸೃಜಿಸಿದ್ದಾರೆ.

ಶಾಸ್ತ್ರಿಗಳು ರಚಿಸಿರುವ ಜೀವನ ಚರಿತ್ರೆಗಳಲ್ಲಿ ‘ಶ್ರೀ ಸಹಜಾನಂದ ಭಾರತಿ ಸ್ವಾಮಿಗಳು’ ಮತ್ತು ‘ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು’  ಮುಂತಾದ ಕೃತಿಗಳು ಸೇರಿವೆ.

ಮೆಲುಗಾಳಿಯ ಮಾತುಗಳು’ ಎಂಬುದು ಶಾಸ್ತ್ರಿಗಳ ಪ್ರಬಂಧ ಸಂಗ್ರಹ.

ಈ ಮೇಲ್ಕಂಡ ಕೃತಿಗಳೇ ಅಲ್ಲದೆ ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ಮುಂತಾದ ಅನೇಕ ಪ್ರಸಿದ್ಧ ಕೃತಿಗಳನ್ನೂ ಅವರು ರಚಿಸಿದ್ದಾರೆ.

ಪ್ರೊ. ವೆಂಕಟಾಚಲಶಾಸ್ತ್ರಿಗಳಿಗೆ ಅನೇಕ ಪ್ರಶಸ್ತಿಗಳು ಸಂದಿವೆ.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ತೀನಂಶ್ರೀ ಸ್ಮಾರಕ ಬಹುಮಾನ, ಶಂಭಾ ಜೋಶಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ, ಸಂಸ್ಕೃತ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಮುಂತಾದ ಅನೇಕ ಗೌರವಗಳು ವೆಂಕಟಾಚಲ ಶಾಸ್ತ್ರಿಗಳನ್ನು ತಲುಪಿರುವ  ಮೂಲಕ ಹೆಚ್ಚಿನ ಮೆರುಗನ್ನು ಪಡೆದುಕೊಂಡಿವೆ.

ಪ್ರೊ. ವೆಂಕಟಾಚಲ ಶಾಸ್ತ್ರಿಗಳ ಸಾಧನೆ ಎಂದರೆ ಅದೊಂದು ‘ವೆಂಕಟಾಚಲ’ದಂತೆ ಮೇರುಸದೃಶ ಎಂಬುದು ವಿದ್ವತ್ ಲೋಕದಲ್ಲಿ ಪಚಲಿತದಲ್ಲಿರುವ ಮಾತು.  ಈ ಬೆಳಕು ಕನ್ನಡ ನಾಡನ್ನು ಬಹುಕಾಲ ಬೆಳಗುತ್ತಿರಬೇಕು ಎಂಬುದು ನಮ್ಮೆಲ್ಲರ ಆಶಯ.  ಜೊತೆಗೆ ಇಂತಹ ಶ್ರೇಷ್ಠತೆಯ ಬೆಳಕನ್ನು ಮುಂದಿನ ಬಹು ಬಹು ತಲೆಮಾರುಗಳ ಕಡೆಗೆ ಒಯ್ಯುವಂತಹ ಶ್ರೇಷ್ಠ ವಿದ್ವತ್ ಪರಂಪರೆ ನಿರಂತರ ಉದಿಸುತ್ತಲೇ ಇರಬೇಕು ಎಂಬುದು ಕೂಡಾ ಅಂತದ್ದೇ ಬಹು ದೊಡ್ಡ ಆಶಯ.  ಈ ಆಶಯ ಕೈಗೂಡಲಿ ಎಂದು ಆಶಿಸುತ್ತಾ ಈ ಮಹಾನ್ ಚೇತನಕ್ಕೆ ಕೃತಜ್ಞತಾ ಪೂರ್ವಕವಾಗಿ, ಶುಭಾಶಯ ಪೂರ್ವಕವಾಗಿ ಮತ್ತು ಭಕ್ತಿಪೂರ್ವಕವಾಗಿ ತಲೆಬಾಗಿ ವಂದಿಸೋಣ.  

Tag: Prof. T.V. Venkatachala Shastri


1 ಕಾಮೆಂಟ್‌:

Manjularaghavan ಹೇಳಿದರು...

I am a student of Prof. T.V. Venkatachala Shastry. I read the article in your blog about him and felt very happy to know many things about my great teacher. Through your blog I want to send him my belated birthday wishes & pray Lord to let him live longer happily with good health and wealth.
Thank you sir for the article.