ಶನಿವಾರ, ಸೆಪ್ಟೆಂಬರ್ 21, 2019

ಜಾನ್ ಬಿ ಹಿಗ್ಗಿನ್ಸ್ ಭಾಗವತರ್ಜಾನ್ ಬಿ ಹಿಗ್ಗಿನ್ಸ್ ಭಾಗವತರ್

ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರದ್ಲ್ಲಿ ಉತ್ತುಂಗಕ್ಕೆ ಏರಿದವರು  ಜಾನ್ ಬಿ ಹಿಗ್ಗಿನ್ಸ್ ಅವರು.  ಹೀಗೆ ಸಾಧನೆ ಮಾಡಿದ ಅವರು  ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರುಗಳಿಂದಳೆ ಹಿಗ್ಗಿನ್ಸ್ ಭಾಗವತರ್ ಎಂಬ ಸಂಬೋಧನೆಗೆ ಪಾತ್ರರಾದವರು.

ಜಾನ್ ಬೋರ್ತ್ವಿಕ್  ಹಿಗ್ಗಿನ್ಸ್  ಅವರು 1939 ವರ್ಷದ ಸೆಪ್ಟೆಂಬರ್ 18ರಂದು ಅಮೆರಿಕದ ಮೆಸಾಚುಸೆಟ್ಸ್‌ ಪ್ರದೇಶದ ಆ್ಯಾಂಡೋವರ್ ಎಂಬಲ್ಲಿ ಜನಿಸಿದರು..   ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಅದೇ ಊರಿನ ಫಿಲಿಪ್ಸ್ ಅಕಾಡೆಮಿಯಲ್ಲಿ ನೆರವೇರಿತು.  ಆದೆ ಶಾಲೆಯಲ್ಲಿ ಅವರ ತಂದೆ ಇಂಗ್ಲಿಷ್ ಅಧ್ಯಾಪಕರಾಗಿದ್ದರೆ, ತಾಯಿ ಸಂಗೀತದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು.  ಮುಂದೆ ಹಿಗ್ಗಿನ್ಸ್ ವೆಸ್ಲಿಯನ್ ವಿಶ್ವವಿದ್ಯಾಲಯಲ್ಲಿ ಸಂಗೀತ ಮತ್ತು ಚರಿತ್ರೆಯಲ್ಲಿ ಬಿ.ಎ. ಪದವಿಯನ್ನೂ, 1964ರಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.  ಮುಂದೆ ಸ್ವಲ್ಪ ಕಾಲ ಮಿನೆಸೋಟಾದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮಾಡಿದರು. 

ಜಾನ್ ಹಿಗ್ಗಿನ್ಸ್ ಅವರು  ತಮ್ಮ ಊರಿನ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಭೋಧಿಸುತ್ತಿದ್ದ ಸಂದರ್ಭದಲ್ಲಿ ವಿಶ್ವದ ವಿವಿಧ ಸಂಸ್ಕೃತಿಗಳ ಸಂಗೀತದಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡಿದರು.   ಈ ಸಂದರ್ಭದಲ್ಲಿ ಅವರು  ಭಾರತೀಯ ಸಂಗೀತವನ್ನೂ ಅಧ್ಯಯನ ಮಾಡಿದರು.  ಆ ವಿಷಯದಲ್ಲಿ ಅವರಿಗೆ ಮಾರ್ಗದರ್ಶನ ನೀಡಿದವರು ರಾಬರ್ಟ್ ಬ್ರೌನ್ ಮತ್ತು ಟಿ. ರಂಗನಾಥನ್ ಅವರುಗಳು.  ಈ ಹಂತದಲ್ಲಿ ಅರಿತುಕೊಂಡರು.  ಅಂದಿನ ದಿನಗಳಲ್ಲಿಯೂ ಭಾರತೀಯ ಸಂಗೀತದ ಕುರಿತಾಗಿ ಅಧ್ಯಯನ ಕೈಗೊಳ್ಳುತ್ತಿದ್ದ ಅನೇಕ ಅಮೆರಿಕದ ವಿದ್ಯಾರ್ಥಿಗಳು ಇದ್ದರಾದರೂ ಅವರಲ್ಲಿ ಬಹುತೇಕರು ಅಧ್ಯಯನಕ್ಕಾಗಿ ಅಧ್ಯಯನಕೈಗೊಳ್ಳುತ್ತಿದ್ದವರು.  ಜಾನ್ ಹಿಗ್ಗಿನ್ಸ್ ಅವರಿಗೆ ಅಂತಹ ಸೀಮಿತ ಜ್ಞಾನ ರುಚಿಸಲಿಲ್ಲ. ಅವರು ಫುಲ್ಬ್ರೈಟ್ ಫೆಲೋಶಿಪ್ ಪಡೆದುಕೊಂಡು ಸಂಗೀತ ಕಲಿಯಲಿಕ್ಕೆ ಭಾರತಕ್ಕೇ ಬಂದರು.


ಕರ್ನಾಟಕ ಸಂಗೀತಕ್ಕೆ ನಿರಂತರವಾಗಿ ಹೆಚ್ಚು ಪೋಷಣೆ ನೀಡುತ್ತಾ ಬಂದಿರುವ ಚೆನ್ನೈಗೆ ಬಂದಿಳಿದ  ಜಾನ್ ಹಿಗ್ಗಿನ್ಸ್ ಅವರು ಮಹಾನ್ ಸಂಗೀತ ವಿದ್ವಾಂಸರಾದ ಟಿ. ವಿಶ್ವನಾಥನ್ ಅವರಿಂದ ಶಾಸ್ತ್ರೋಕ್ತವಾಗಿ ಶಿಷ್ಯವೃತ್ತಿ ಸ್ವೀಕರಿಸಿದರು.  ಅವರ ಸಂಗೀತ ತಪಸ್ಸಿನ ಶ್ರದ್ಧೆ ಎಷ್ಟರಮಟ್ಟಿಗೆ ಇತ್ತೆಂದರೆ, 1966ರ ವೇಳೆಗೆ ಚೆನ್ನೈನಲ್ಲಿ  ತ್ಯಾಗರಾಜ ಆರಾಧನೆಯ ವೇದಿಕೆಯನ್ನು ಏರಿದ್ದರು. 

ಆ ಕಾಲದಲ್ಲಿ ನಡೆದ ಜಾನ್ ಅವರ ಒಂದು ಕಾರ್ಯಕ್ರಮದ ವರದಿ ಮಾಡಲು ಬಂದಿದ್ದ ವಿಮರ್ಶಕರು ಬರೆದದ್ದು ಹೀಗೆ:  “ಮದ್ರಾಸಿನಲ್ಲಿ ನಡೆವ ಉಳಿದೆಲ್ಲ ಸಂಗೀತ ಕಛೇರಿಗಳಂತೆ ಈ ಕಾರ್ಯಕ್ರಮವೂ ಇದೂ ಅರ್ಧ ಗಂಟೆ ತಡವಾಗಿ ಪ್ರಾರಂಭಗೊಂಡಿತು.  ಈ ಪರಂಗಿ ತೊಗಲಿನ ಈ ಕನೆಕ್ಟಿಕಟ್ ಯಾಂಕೀಯನ್ನು ನೋಡಲು ಜನಸಾಗರವೇ ಹರಿದುಬಂದಿತ್ತು.  ಯಾವ ಭಾರತೀಯ ಸಂಗೀತಗಾರನಿಗೂ ಕಮ್ಮಿಯಿಲ್ಲದಂತೆ ಜಾನ್ ಅತ್ಯಂತ ಪರಿಶುದ್ಧವಾದ ಬಿಳಿ ಅಂಗಿ ಮತ್ತು ಧೋತಿಗಳಲ್ಲಿ ಶೋಭಿಸುತ್ತಾ ವೇದಿಕೆ ಹತ್ತಿದ.  ಆತನ ಗುರುಗಳಾದ ವಿಶ್ವನಾಥನ್ ಅವರೋ ಅಮೆರಿಕದ ಹುಡುಗನಂತೆ ವೇಷಭೂಷಣ ಪ್ರೇಕ್ಷಕರ ಸಾಲಿನಲ್ಲಿ ಆಸೀನರಾಗಿದ್ದರು.  ಅಪ್ಪಟ ಭಾರತೀಯ ಸಂಗೀತಗಾರನಂತೆ ಈ ಬಿಳಿಯ, ನಡುನಡುವೆ ಪಿಟೀಲು ಮತ್ತು ಮೃದಂಗ ವಾದಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕೊಡುತ್ತಿದ್ದಾನೆ. ಭಲೇ!, ‘ಶಹಭಾಷ್!!ಇತ್ಯಾದಿ ಸಂದರ್ಭೋಚಿತ ಮೆಚ್ಚುಗೆಗಳನ್ನು ಭಾವಾಭಿನಯ ಸಹಿತವಾಗಿ ಅವರಿಗೆ ವರ್ಗಾಯಿಸುತ್ತಿದ್ದ. ಬಿಳಿಯನಾದರೂ ಪೂರ್ವಜನ್ಮ ಭಾರತದಲ್ಲೇ ನಡೆದಿರಬೇಕೆಂಬ ಶಂಕೆ ಬಲವಾಗುವಂತಿತ್ತು ಆತನ ಸಂಗೀತ! ಈ ದೇಶದ ಮಣ್ಣಲ್ಲಿ-ಅದರಲ್ಲೂ ಕಾವೇರಿಯ ತಪ್ಪಲಲ್ಲಿ ಹುಟ್ಟಿ ಬೆಳೆಯದ ಪ್ರತಿಭೆಯೊಂದು ಕರ್ನಾಟಕ ಸಂಗೀತದ ವಿಷಯದಲ್ಲಿ ಇಷ್ಟು ಪ್ರಾವೀಣ್ಯ ಪಡೆಯುವುದು ಅಪರೂಪದ ವಿದ್ಯಮಾನ!’’


‘ಎಂದರೋ ಮಹಾನುಭಾವುಲು’, ‘ಕೃಷ್ಣ ನೀ ಬೇಗನೆ ಬಾರೋ’, ‘ವಾ ವಾ, ಕಂಡಾ ವಾ ವಾ, ಯೆನ್ನೈ, ಕಾವ ವೇಲಾ ವಾ’, ‘ಗೋವರ್ಧನ ಗಿರಿ ಧಾರಾ’ ಹೀಗೆ ಎಲ್ಲ ಭಾಷೆಗಳ ಗೀತೆಗಳನ್ನು ಹಿಗ್ಗಿನ್ಸ್  ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳು ಮತ್ತು ಸಂಗೀತ ಪಂಡಿತರುಗಳ ಮನ ಗೆದ್ದು ‘ಜಾನ್ ಬಿ. ಹಿಗ್ಗಿನ್ಸ್ ಭಾಗವತರ್’ ಎಂದು ಪ್ರಖ್ಯಾತರಾದರು.   

ಹೀಗೆ ಶ್ರದ್ಧೆಯಿಂದ ಸಂಗೀತ ಕಲಿತದ್ದಕ್ಕೆ ಮತ್ತು ಕಛೇರಿ ನೀಡುವುದಕ್ಕೆ ತಮ್ಮ ಪ್ರತಿಭೆಯನ್ನು ಮೀಸಲುಗೊಳಿಸದ ಹಿಗ್ಗಿನ್ಸ್ ಭಾಗವತರು, ಇನ್ನೂ ತಮ್ಮ  32ನೆಯ ವಯಸ್ಸಿನಲ್ಲೇ, 1971ರಲ್ಲಿ  ಟೊರಾಂಟೊ ನಗರದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಗೀತಾಧ್ಯಯನಕ್ಕೆ ಮೀಸಲಾದ ವಿಭಾಗ ತೆರೆದು ಅಲ್ಲಿನ ಪ್ರಸಿದ್ಧ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಮನಗೆದ್ದರು.  ತಮ್ಮ ಗುರುಗಳಾದ ಟಿ. ವಿಶ್ವನಾಥನ್ ಅವರ ಸಹೋದರಿ ಖ್ಯಾತ ನೃತ್ಯಗಾರ್ತಿ ಬಾಲಸರಸ್ವತಿ ಅವರಿಂದ ಹಿಗಿನ್ಸ್ ಅವರು ನೃತ್ಯ ಸಂಗೀತವನ್ನೂ ಅಧ್ಯಯನ ಮಾಡಿ ರಸೋತ್ಪತ್ತಿಯ ಬಗ್ಗೆ ಆಳವಾದ ಜ್ಞಾನ ಗಳಿಸಿದ್ದರು.  1973ವರ್ಷದಲ್ಲಿ ಅವರು ಹಿಂದೆ ತಾವು ಕೈಗೊಂಡಿದ್ದ  ವಿಶ್ವದ ವಿವಿಧ ಸಂಗೀತಗಳ ಕುರಿತಾದ ಅಧ್ಯಯನಕ್ಕೆ ತಪಸ್ಸೂ ಜೊತೆಗೂಡಿದ ನಂತರದಲ್ಲಿ ಆ ಕುರಿತಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಯನ್ನು ಅರ್ಹವಾಗಿ ಸಂಪಾದಿಸಿದರು.  ಕೇವಲ ಓದಿನಿಂದ ಗಳಿಸಿದ ಜ್ಞಾನದಿಂದ  ಈ ಪದವಿಯನ್ನು ಪಡೆಯಲು ಯತ್ನಿಸದೆ ಆಳವಾದ ಪರಿಶ್ರಮದಿಂದ  ಪಡೆದದ್ದು ಅವರ ಶ್ರೇಷ್ಠ ಗುಣಕ್ಕೆ ಸಾಕ್ಷಿ.

1984 ವರ್ಷದಲ್ಲಿ ಪ್ರೊ. ಜಾನ್ ಭಾಗವತರ್ ಅವರು ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ಸಂಗೀತ ಸಮ್ಮೇಳನವನ್ನು ಆಯೋಜಿಸಿದ್ದರು.   ಈ ಕಾರ್ಯಕ್ಕೆ ಇಂಡಿಯನ್ ಅಕಾಡೆಮಿ ಆಫ್ ಸೌತ್ ಆಫ್ರಿಕಾ ಸಂಘಟನೆಯ ಸಹಕಾರವನ್ನೂ ಪಡೆದಿದ್ದ ಅವರು ಅಲ್ಲಿದ್ದ ಭಾರತೀಯರನ್ನು ರಂಜಿಸುವಂತೆ ಹಾಡಲು ಶಾಸ್ತ್ರೀಯವಾಗಿ ಅನೇಕ ತಯಾರಿಗಳನ್ನೂ ನಡೆಸಿದ್ದರು.  ಆದರೆ ದುರದೃಷ್ಟವಶಾತ್ ಕಾರ್ಯಕ್ರಮಕ್ಕೆ ಕೇವಲ ಹತ್ತು ದಿನಗಳು ಇದ್ದ ಸಂದರ್ಭದಲ್ಲಿ ಡಿಸೆಂಬರ್ 7, 1984ರ ದಿನ ತಮ್ಮ ಮನೆಯ ಸಮೀಪದಲ್ಲಿ ತಮ್ಮ ನಾಯಿಯೊಡನೆ ವಾಯುವಿಹಾರದಲ್ಲಿದ್ದ ಸಂದರ್ಭದಲ್ಲಿಚಲಾಯಿಸ್, ಕಾರುಚಲಾಯಿಸುತ್ತಿದ್ದ  ಕುಡುಕನೊಬ್ಬ ಮಾಡಿದ ಅಪಘಾತದಲ್ಲಿ ಅಸುನೀಗಿದರು.

ಜೀವನದಲ್ಲಿ ಅತಿಬೇಗನೆ ಹೆಚ್ಚು ಸಾಧನೆ ಮಾಡಿದವರೆಲ್ಲ ಬಹುಬೇಗ ಈ ಲೋಕವನ್ನು ತೊರೆಯುತ್ತಾರೆ ಎಂಬ ವಿಷಯ ಇಲ್ಲೂ ನಿಜವಾಯಿತು ಎನ್ನುವುದು ವಿಶ್ವ ಭಾರತೀಯ ಸಂಗೀತಲೋಕಕ್ಕೆ ಒದಗಿದ ಭರಿಸಲಾಗದ ನಷ್ಟ.  ಯಾವ ತಾಯಿಯು ಹಡೆದ ಮಗನಾದರೇನು, ಸಂಗೀತ ಸರಸ್ವತಿಯ ಮಡಿಲಲ್ಲಿ ತನ್ನನ್ನು ಸಮರ್ಪಿಸಿಕೊಂಡ ಆ ಜೀವದ ನೆನಪು ಸಂಗೀತ ಪ್ರೇಮಿಗಳ ಹೃದಯದಲ್ಲಿ ನಿರಂತರ ಝೇಂಕರಿಸುತ್ತಲೇ ಇದೆ. 

Tag: Jhon B. Higgins Bhagavatarಕಾಮೆಂಟ್‌ಗಳಿಲ್ಲ: