ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಕ್ಷಿತಾ

ರಕ್ಷಿತಾ

ನಮ್ಮ ಕನ್ನಡದ ಹುಡುಗಿ - ಕನ್ನಡವನ್ನು ಇಗ್ಲೀಷಿನಲ್ಲಿ ಮಾತಾಡುವವರೂ ಕನ್ನಡಿಗರೇ ತಾನೇ -  ರಕ್ಷಿತಾ ಅವರ ಹುಟ್ಟು ಹಬ್ಬ.  ಹುಟ್ಟಿದ್ದು 31-3-1984.  ಅಪರೂಪಕ್ಕೆ ನಟಿಯರು ಹುಟ್ಟಿದ ದಿನದ ವಿವರ ಕೂಡಾ ಸಿಗುತ್ತೆ, ಅವರು ನಿವೃತ್ತಿ ಹೊಂದಿದ ಮೇಲೆ!  ಅಥವಾ ಅದಕ್ಕಿಂತ ಹೆಚ್ಚು ಸೂಕ್ತವಾಗಿ ಹೇಳುವುದಾದರೆ ಅವರು ರಾಜಕೀಯಕ್ಕೆ ಸೇರಿದ ಮೇಲೆ.  ರಕ್ಷಿತಾ  ಕನ್ನಡದ ಶ್ರೇಷ್ಠ ಛಾಯಾಗ್ರಾಹಕ ದಿವಂಗತ ಬಿ.ಸಿ. ಗೌರೀಶಂಕರ್ ಮತ್ತು ನಟಿ ಮಮತಾ ರಾವ್ ಅವರ ಮಗಳು.  ಬೆಳೆದದ್ದು ಹೆಚ್ಚು ಮುಂಬೈನಲ್ಲಿ. 

ಈಗಿನ ಕಾಲದ ಸಿನಿಮಾ ಹೆಸರು ಮತ್ತು ನಟ ನಟಿಯರ ಹೆಸರು ಸ್ವಲ್ಪ ನೆನಪಲ್ಲಿ ಉಳಿಯೋದು ಕಷ್ಟ. ಅಂದು ಒಬ್ಬೊಬ್ಬನಾಯಕ  ನಟ, ನಟಿಯರು  ನೂರು, ಇನ್ನೂರು ಚಿತ್ರದಲ್ಲಿ ಮಿಂಚ್ತಾ ಇದ್ರು.  ಇಂದು ಎರಡನೇ ಚಿತ್ರ ನಟಿಸುವವರೂ ಕಡಿಮೆ ಆಗ್ತಾ ಇದ್ದಾರೆ!   ಅಂದು ಬಂಗಾರದ ಮನುಷ್ಯ, ನಾಗರಹಾವು, ಬೆಳ್ಳಿಮೋಡ, ಹೊಂಬಿಸಲು ಇತ್ಯಾದಿ ಮುದ ನೀಡುವ ಹೆಸರು  ಇರ್ತಾ ಇತ್ತು.  ಇಂದು ಅಪ್ಪು, ಡೆಡ್ಲಿ ಸೋಮ, ಕಳಾಸಿಪಾಳ್ಯ, ಗೋಕರ್ಣ, ಲವ್ವು, ಪ್ರೇಮ ಪ್ರೀತಿ ಪ್ರಣಯ, ಅಯ್ಯಾ, ಮಂಡ್ಯ, ಸುಂಟರಗಾಳಿ   ಇತ್ಯಾದಿ ಹೆಸರು ಸಿನಿಮಾಗೆ ಇರುತ್ತೆ.  ಅಂದ ಹಾಗೆ ಇವು ರಕ್ಷಿತಾ  ಅವರು ನಟಿಸಿದ ಹಲವು ಚಿತ್ರಗಳು.  ಅಪ್ಪು ಚಿತ್ರದಲ್ಲಿ ರಾಜ್ ಅವರ ಮಗ ಪುನೀತ್ ಜೊತೆ ಬಂದ ರಕ್ಷಿತಾ ಮುಂದೆ ಹಲವಾರು ನಾಯಕ ನಟರಾದ ದರ್ಶನ್, ಸುದೀಪ್, ಉಪೇಂದ್ರ, ನಾಗಾರ್ಜುನ, ಶಿವರಾಜ್ ಕುಮಾರ್ ಮುಂತಾದವರ ಜೊತೆ ಅಭಿನಯಿಸಿದರು.  ನಾಗಾರ್ಜುನ ಇತ್ಯಾದಿ ಅಂದ್ರೆ ಕನ್ನಡದ ಗಡಿ ಆಚೆ ತಮಿಳು, ತೆಲುಗು ಇತ್ಯಾದಿ ಭಾಷೆಗೂ ಹೋಗಿದ್ರು ಅಂತ ಅಲ್ವ. ಜೋಗಿ ಚಿತ್ರದ ನಿರ್ದೇಶನದ ಮೂಲಕ ಜನಪ್ರಿಯರಾದ ಪ್ರೇಮ್ ಜೊತೆ ವಿವಾಹವಾದರು.  ಮುಂದೆ   ತಾಯಿಯಾದರು.  ವೃತ್ತಿಯಲ್ಲಿ ನಿರ್ಮಾಪಕಿಯಾಗಿದ್ದಾರೆ.  ಅವರು ನಿರ್ಮಿಸಿ ಅವರ ಯಜಮಾನರು ನಿರ್ದೇಶಿಸಿದ ಜೋಗಯ್ಯ ಅಂತಹ ಯಶಸ್ಸು ಕಾಣಲಿಲ್ಲ. 

ಅಂದ ಹಾಗೆ ಈಗ ಅಭಿನಯಿಸೋಲ್ವ.  ಇದಕ್ಕೊಂದು ತುಂಟ ಉತ್ತರ.  ಕನ್ನಡ ಚಿತ್ರರಂಗಕ್ಕೆ 'ಭಾರ ತಡೆಯೋದು ಕಷ್ಟ!'.

ಬಂದಾಗ ಮುದ್ದು ಮುಖದ ಹುಡುಗಿ ಆಗಿದ್ದರು.  ತಮ್ಮ ರಾಶಿ  ಕ್ಯಾನ್ಸರ್ರು ಅನ್ನೋದನ್ನ ಸಾಧು ಕೋಕಿಲಾಗೆ ಕ್ಯಾನ್ಸರ್ ಅಂತ ಕೇಳಿಸಿ  ದುಃಖ ಹುಟ್ಟಿಸಿ, ನಾಗವಲ್ಲಿ ತರಹ ಹೆದರಿಸಿದ್ದರು, ಮಾಡರ್ನ್ ರೀತಿಯಲ್ಲಿ ಇನ್ನು ಯಾಕ ಬರಲಿಲ್ಲ ಹುಬ್ಬಳ್ಳಿಯವ ಅಂತ ಅಭಿನಯಿಸಿದ್ರು, ಈ ಟಚ್ಚಲಿ ಏನೋ ಇದೆ ಎಂದು ಬೋಲ್ಡ್ ಆಗಿದ್ರು  ಇಷ್ಟು ಹೇಳ್ಬಹುದು. 

ಇಂದಿನ ದಿನಗಳಲ್ಲಿ ಎರಡು ವಿಚಾರಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಅದರಲ್ಲೂ ಸಿನಿಮಾ ವ್ಯಕ್ತಿಗಳ ಬದುಕು ಡೋಲಾಯಮನ.  ಒಂದು ಅವರ ಸಂಸಾರ ಸಾಂಗತ್ಯದ  ವಿಚಾರದಲ್ಲಿ ಮತ್ತೊಂದು ಅವರ ರಾಜಕೀಯ ಸಾಂಗತ್ಯದ ವಿಚಾರದಲ್ಲಿ!

ಅಂದಿನ ಕಾಲದಲ್ಲಿ ಪ್ರಸಿದ್ಧರಾದ ರಾಜ್ ಕುಮಾರ್ ರಾಜಕೀಯದಿಂದ ದೂರವಿದ್ದರು.  ಅವರಿಗೇ ಇಲ್ಲದ ಮೇಲೆ ನನಗೇಕೆ ಎಂದು ವಿಷ್ಣುವರ್ಧನ್ ಇನ್ನಷ್ಟು ದೂರ ಹೋದರು.   ಅನಂತನಾಗ್ ಸಾಕಾಯ್ತು ಅಂದ್ರು. ಅಂಬರೀಶ್ ಸ್ವಲ್ಪ ಸುಸ್ತು ಎನ್ನುತ್ತಾರೆ.    ಆದ್ರೆ ನಮ್ಮ ನಟಿಯರು ಮಾತ್ರ ದಿನೇ ದಿನೇ ರಾಜಕೀಯಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ.  ಆ ನಟಿ ಮಾಜಿ ಮುಖ್ಯಮಂತ್ರಿ ಮನೆಯಲ್ಲಿದ್ದಾಳೆ, ಮತ್ತೊಬ್ಬಳು ಕಾಂಗ್ರೆಸ್ ಹೊರೆ ಹೊತ್ತಿದ್ದಾಳೆ, ಮತ್ತೊಬ್ಬಳು ಮಾಜಿ ಪ್ರಧಾನಿಗಳ ಜೊತೆ ಸ್ವಲ್ಪ ದಿನ ಹುಲ್ಲು ಹೊರೆ ಹೊತ್ತು  ಈಗ ದಿನಕ್ಕೊಂದು ಪಕ್ಷದಲ್ಲಿ ಓಡಾಡುತ್ತಿದ್ದಾರೆಇನ್ನು ಕೆಲವು ಸೀನಿಯರ್ ನಟಿಯರು  ಹಿಂದೆ ಆಳಿದ ಪಕ್ಷಕ್ಕೂ ಇಂದು ಆಳುತ್ತಿರುವ ಪಕ್ಷಕ್ಕೂ ಮಧ್ಯೆ ಇದ್ದಾರೆ.   ರಕ್ಷಿತಾ ಚಿಕ್ಕ ಪಕ್ಷದಿಂದ ಹಿಡಿದು ರಾಷ್ಟ್ರೀಯ ಪಕ್ಷಗಳವರೆಗೆ ಎಲ್ಲಾ ಪಕ್ಷಗಳಲ್ಲಿ ಗಿರಕಿ ಹೊಡೆಯುತ್ತಾ ಸಾಗಿದ್ದಾರೆ.  


ರಕ್ಷಿತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ  ಹೇಳೋಣ.  ಕನ್ನಡ ಸಿನಿಮಾ ನಿರ್ಮಾಣ ಮಾಡಿ ಹಣ ಕಳೆದುಕೊಳ್ಳುವವರು ಜಾಸ್ತಿ.  ಇವರಿಗೆ  ಯಶಸ್ಸು ಸಿಗಲಿ ಅಂತ ಹಾರೈಸೋಣ.  ಬಣ್ಣದ ಬದುಕಿನ ಕಷ್ಟಪಡುವ ಹೆಣ್ಣು ಮಕ್ಕಳು ಹೆಚ್ಚು.  ಇದಕ್ಕೆ ಅಪವಾದವಾಗಿ ಇವರು ಸಂತಸದಲ್ಲಿ ಬದುಕಲಿ ಎಂದು ಹರಸೋಣ.

Tag: Rakshita

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ