ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಡಿದ ಒಂದು ಸಣ್ಣ ಸಹಾಯ!

ಮಾಡಿದ ಒಂದು ಸಣ್ಣ ಸಹಾಯ!
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

ಜಿ.ಟಿ.ನಾರಾಯಣ ರಾಯರು ಪ್ರಸಿದ್ಧ ಸಂಗೀತ ವಿಮರ್ಶಕರಾಗಿದ್ದರು. ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು. ಅವರು ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿ ಅನೇಕ ಉತ್ತಮ ಶಿಷ್ಯರನ್ನು ಪಡೆದಿದ್ದರು. ಅಲ್ಲದೆ ಸುಮಾರು 30 ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣನೊಬ್ಬ ಅವರನ್ನು ಕಾಣಲು ಬಂದ. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ ವಿದ್ವಾಂಸ ಮೈಸೂರು ನಾರಾಯಣ ಅಯ್ಯಂಗಾರ್ಯರ ಪುತ್ರನೆಂದೂ ಪರಿಚಯ ಮಾಡಿಕೊಂಡ. ತನ್ನ ತಂದೆ ಅವರನ್ನು ಭೇಟಿಮಾಡಲು ಇಚ್ಛಿಸಿರುವುದಾಗಿಯೂ, ಈಗ ಸಧ್ಯಕ್ಕೆ ಛತ್ರದಲ್ಲಿದ್ದಾರೆಂದೂ, ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ಒದಗಿದೆಯೆಂದು ಹೇಳಿದಾಗ, 'ಇಂಥ ದೊಡ್ಡ ವಿದ್ವಾಂಸರ ಸ್ಥಿತಿ ಹೀಗಾಯಿತೆ?' ಎಂದು ದುಃಖವಾಗಿ ಅವರಿದ್ದಲ್ಲಿಗೆ ಹೋದರು. ಹರಕು ಚಾಪೆಯ ಮೇಲೆ ಕುಳಿತಿದ್ದ ಗೋಟುವಾದ್ಯ ಭೀಷ್ಮರನ್ನು ನೋಡಿ ವೇದನೆಯಾಯಿತು. ಅವರಿಂದ ಒಂದು ಕಚೇರಿ ನಡೆಸಿ ಸಾಕಷ್ಟು ಹಣ ಸಂಗ್ರಹಿಸಿಡುವ ನಿರ್ಧಾರ ಮಾಡಿದರು. ಆದರೆ ಮಂಗಳೂರಿನಲ್ಲಿ ಕರ್ನಾಟಕ ಸಂಗೀತದ ಅಭಿಮಾನಿಗಳು ಕಡಿಮೆ. ಆದರೂ ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಅಂತೂ ಒಂದು ಗೋಟುವಾದ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಯ್ತು. ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರವನ್ನೂ ಮಾಡಲಾಯ್ತು. ಅಂತೂ ಸುಮಾರು ಮುನ್ನೂರು ರುಪಾಯಿಯಷ್ಟು ಹಣ ಸಂಗ್ರಹವೂ ಆಯಿತು.

ಮೂರುಗಂಟೆಗಳ ಕಾಲ ಅಪೂರ್ವವಾದ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು. ನಂತರ ಅವರಿಗೆ ಶ್ರೀಮಂತರೊಬ್ಬರು ಗೌರವಧನ ನೀಡಿ ಮದ್ರಾಸಿಗೆ ಕಳುಹಿಸಿಕೊಡುವ ಏರ್ಪಾಟೂ ಆಯಿತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಎನ್.ರವಿಕಿರಣ್ ಎಂಬ ಬಾಲಪ್ರತಿಭೆ ಗೋಟುವಾದ್ಯದಲ್ಲಿ ಅಪ್ರತಿಮ ಸಾಧನೆ ಮಾಡಿದ ವಿಷಯ ಎಲ್ಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿ ಆತನ ಸಭಾ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ಸೇರುತ್ತಿತ್ತು. ಅಂತಹ ಒಂದು ಕಾರ್ಯಕ್ರಮ ಮೈಸೂರಿನಲ್ಲಿಯೂ ಏರ್ಪಾಟಾಗಿತ್ತು. ಅಲ್ಲಿ ಜಿಟಿಎನ್ ಅವರೂ ಶ್ರೋತೃಗಳಾಗಿದ್ದರು. ಬೈಠಕ್ಕು ಮುಗಿದಮೇಲೆ ಅಪರಿಚಿತರೊಬ್ಬರು ಜಿಟಿಎನ್ ಅವರ ಬಳಿ ಬಂದು ತಾನು ನರಸಿಂಹನ್ ಎಂದೂ, ಈಗ ಕಚೇರಿ ನಡೆಸಿದ ಬಾಲಕ ತನ್ನ ಮಗನೆಂದೂ ಇಪ್ಪತ್ತು ವರ್ಷಗಳ ಹಿಂದೆ ತಾನು ಮಂಗಳೂರಿಗೆ ಬಂದಿದ್ದೂ, ಆಗ ಜಿಟಿಎನ್ ಅವರು ಮಾಡಿದ ಸಹಾಯ ಎಲ್ಲವನ್ನೂ ಬಿಚ್ಚಿಟ್ಟಾಗ ಆ ಪುಟ್ಟ ಬಾಲಮಾಂತ್ರಿಕ ನಾರಾಯಣ ಅಯ್ಯಂಗಾರ್ಯರ ಮೊಮ್ಮಗನೆಂದೂ ತಿಳಿದು ಬಂತು. ತಮ್ಮ ತಂದೆಯೇ ರವಿಕಿರಣನಲ್ಲಿ ಮರುಹುಟ್ಟು ಪಡೆದಿರುವಂತೆ ತೋರುತ್ತದೆ ಎಂದಾಗ ಜಿಟಿಎನ್ ಪುಳಕಿತಗೊಂಡರು.

ಕೃಪೆ: ಕನ್ನಡಪ್ರಭ

Tag: Madida Ondu sanna sahaaya, G. T. Narayana Rao, 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ