ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫ್ಲಾರೆನ್ಸ್ ನೈಟಿಂಗೇಲ್

ಫ್ಲಾರೆನ್ಸ್ ನೈಟಿಂಗೇಲ್

ಅದೊಂದು ಬೃಹದಾಕಾರದ ಮಿಲಿಟರಿ ಆಸ್ಪತ್ರೆ.  ಕಟ್ಟಡವು ದೊಡ್ಡದಾಗಿತ್ತು.  ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ.  ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರು.  ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು.  ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ.  ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ.  ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ.  ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ.  ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ 'ಅವಳೊಬ್ಬ ದೇವತೆ' ಎನಿಸಿದ್ದರೆ ಆಶ್ಚರ್ಯವಿಲ್ಲ.  ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು 'ದೀಪಧಾರಿಣಿ' ಎಂದೇ ಕರೆಯುತ್ತಿದ್ದರು.

ಈಕೆ ಹುಟ್ಟಿದ ದಿನ ಮೇ 12, 1820.  ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈಕೆ ಐಷಾರಾಮದ ಜೀವನ ನಡೆಸಬಹುದಾಗಿತ್ತು, ಸುಖವಾಗಿರಬಹುದಿತ್ತು.  ಆದರೆ ಈಕೆ ತನ್ನ ತನುಮನಧನವನ್ನು ಒಂದು ಧ್ಯೇಯಕ್ಕಾಗಿ - ರೋಗಿಗಳ ಆರೈಕೆ ಮಾಡುವ ದಾದಿಯ ಕೆಲಸಕ್ಕಾಗಿ - ಸಮರ್ಪಿಸಿಕೊಂಡಳು.  ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು.  ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು.  ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ.  ಈ 'ದೀಪ ಧಾರಿಣಿ' ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಹುಟ್ಟಿದ ಪ್ಲಾರೆನ್ಸ್ ನೈಟಿಂಗೇಲ್.

ಅಂದಿನ ಅಧಿಕಾರಷಾಹಿಗಳಿಗೆ ಯುದ್ಧದಲ್ಲಿ ಮತ್ತೊಂದು ಸಾಮ್ರ್ಯಾಜ್ಯವನ್ನು ಕಸಿದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಗುಣವಿತ್ತೇ ವಿನಃ ತಮಗಾಗಿ ಯುದ್ಧ  ಮಾಡುವವನಿಗೆ ಏನಾಗಿದೆ ಆತನಿಗೆ ಪೆಟ್ಟು ಬಿದ್ದಾಗ ಏನು ಮಾಡಬೇಕೆಂಬುದರ ಖಾಳಜಿ ಇರಲಿಲ್ಲ.  ರೋಗಿಗಳಲ್ಲಿ ತುಂಬಾ ಗಂಭೀರರಾದವರನ್ನು ಸಮುದ್ರದಲ್ಲಿ ಎಸೆದರೆ, ಸ್ವಲ್ಪ ತ್ರಾಣವಿರುವವರನ್ನು ತಿಂಗಳಾನುಗಟ್ಟಲೆ ಹಡಗಿನ ಪ್ರಯಾಣದಲ್ಲಿ ಸಾಗಿಸಿ ಪ್ರಾಣಿಗಳಿಗೂ ಸಹ್ಯವೆನಿಸದ ಅಮಾನುಷ ಸ್ಥಳಗಳಲ್ಲಿ ಯಾವುದೇ ಶುಶ್ರೂಷಾ ವ್ಯವಸ್ಥೆಯಿಲ್ಲದ ಸ್ಥಳಗಳಿಗೆ ದಬ್ಬುತ್ತಿದ್ದರು.  ಸಾವಿರಾರು ಜನರಿಗೆ ಒಬ್ಬನೋ ಇಬ್ಬರೋ ವೈದ್ಯರಿದ್ದರೆ ಉಂಟು ಇಲ್ಲದಿದ್ದರಿಲ್ಲ.

ಅಂಥಹ ಒಂದು ಯುದ್ಧದಲ್ಲಿ ಸ್ಕುಟಾರ್ ಎಂಬ ಸ್ಥಳದಲ್ಲಿ ಯುದ್ಧ ಗಾಯಾಳುಗಳನ್ನು ತುಂಬಿದ್ದ ಕೊಟ್ಟಿಗೆಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಶ್ ಮಂತ್ರಿಮಂಡಲದ ಅಧಿಕಾರಿಯ ಮನವಿಯ ಮೇರೆಗೆ ಆಗಮಿಸಿದ ಫ್ಲಾರೆನ್ಸ್ ಮಾಡಿದ ಸುಧಾರಣೆ ಮನೋಜ್ಞ ಸೇವೆ ಚರಿತ್ರಾರ್ಹವಾದದ್ದು.  ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು.

ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಈಕೆ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು.  ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.

Tag: Florence Nightingale

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ