ನನ್ನ ಅವತಾರ
ನನ್ನ ಅವತಾರ
ರಾಮನ ಬಳಿ ಇದ್ದೆ ನಾನು; ಕಂಡೆ
ಕೋದಂಡದೋರ್ದಂಡ ಬಲ
ನನ್ನ ಕಣ್ಣ ಮುಂದೆಯೇ ಮೊಳೆತು ಬೆಳೆದ ರೀತಿಯ.
ನನ್ನ ಹಾಗೆ ಅವನು ಉಣ್ಣುತ್ತಿದ್ದ, ತಿನ್ನುತ್ತಿದ್ದ,
ಚಂದ್ರನನ್ನು ತಾ ಎಂದು ತಾರುಮಾರು ತೊದಲುತ್ತಿದ್ದ;
ಹೀಗೆ ಇರಲು ದೇವತ್ವದ ತರಿಸಲೀಟಿತುದಿಯನೇರಿ ಅವನ ಮನ
ಮುಗಿಲ ಚುಚ್ಚಿ ಮುಂದುವರಿದ ಆ ಮಹಾಪ್ರತೀತಿಯ
ಕಣ್ಣಾರೆ ಕಂಡೆನಯ್ಯ; ಹೊಗಳಲೆನಲು ಆಡಲಿಲ್ಲ
ಈ ನನ್ನ ನಾಲಗೆ.
ಉಳಿದೆ ನಾನು ಆಗಲೂ ಈಗ ಇಲ್ಲಿ ಕೊಳೆವೊಲು.
ಕೃಷ್ಣನೊಡನೆ ಗೋಕುಲದಲಿ ನಾನು ಕೂಡ ಬೆಣ್ಣೆ ಕದ್ದು
ಗೋಪಿಕೆಯರ ಸೆರಗ ಹಿಡಿದು ಕಾಡುತ್ತಿದ್ದೆ ನಿತ್ಯವೂ-
ಆದರೊಳೇನೊ ನಾನೆ ಅವನಿಗಿಂತ ಮೇಲು, ಸತ್ಯವು!
ಅವನೊ ಯೋಗರಾಜನಾದ, ದೊಂಬ ಸುರಿದ
ನೀರಿನಿಂದ
ಮಾವಿನೋಟೆ ಚಿಗಿಯುವಂತೆ ಚಿಗಿತ,
ಅಬ್ಬ ಏನಚ್ಚರಿ! ಮುಗಿಲಿಗೊಂದೆ ನೆಗೆತ!
ತಿಳಿಯದೆ ಮನ ತುಯ್ಯುತಿರೆ, ಇಲ್ಲಿ
ಕಾಲು, ಅಲ್ಲಿ ತಲೆ,
ಅದಕೂ ಆಚೆ ನೋಟ;
ಆಹಾ ಅದೆಂಥ ಆಟ!
ನಾನೊ ಸಣ್ಣ ಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ
ಪಾಚಿ ಕಟ್ಟಿ ಕಾಯುತ್ತಿದ್ದೆ, ಭೋಗರಾಜ,
ರೋಗರಾಜ – ಈಗಿನಂತೆ ಆಗಲೂ.
ಬುದ್ಧನ ಖಾಸಾ ಯಾರೆಂಬಿರಿ, ನಾನೆ
ನಾನು!
‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ
ಶರಣಂ ಗಚ್ಛಾಮಿ’,
ಎಂದು ವರಲಿ ನಡೆದರಲ್ಲ ಅವನ ಮುಂದಾಳೆ ನಾನು;
ಹುಟ್ಟಿಗಿಂತ ಮುನ್ನವೇ ರಾಜತ್ವವ ಬಿಟ್ಟವನು,
ಬೋಧಿವೃಕ್ಷದಡಿಯೆ ಒಮ್ಮೆ ಮೂಗು ಮುಚ್ಚಿ ನೆಟ್ಟವನು,
ನಾನು ಕೂಡ ಹೆಂಡತಿ ಮಕ್ಕಳನು ಬಿಟ್ಟುಕೊಟ್ಟವನು,
ಅವನ ಹಾಗೆ-
ಅವನೊ ಬುದ್ಧ ಸಿದ್ಧ ಜಗತ್ಪ್ರಸಿದ್ಧನಾಗಿ ಎದ್ದಿದ್ದ;
ಅವನ ಮುಖದ ಕಾಂತಿಯೇನು, ಉಗುವ ಆ
ಪ್ರಶಾಂತಿಯೇನು!
ಕೆಂಡದ ಬಳಿ ಇದ್ದು ಕೂಡ ಈ ಇದ್ದಲು ಇತ್ತು ಹಾಗೆ-
ಆಗ ಈಗಿನಂತೆಯೇ ಹೊತ್ತದೇ ಉರಿಯದೆ.
ಗಾಂಧಿ ಬಂದ. ಅವನ ಹಿಂದೆ ಮೊದಲು ಬಂದ ಭೂಪನು
ನಾನೆ. ಅವನ ಕೊರಳಿಗೇರಿದಂಥ ಮೊದಲ ಹಾರವು
ನನ್ನದೇ. ಖಾದಿಯುಡಿರಿ ಎಂದನೋ ಇಲ್ಲವೋ
ಖಾದಿ ತೊಟ್ಟ ಧೀರ ನಾನು! ರಾಟೆ ಹಿಡಿದು ನೂತೆನಯ್ಯ,
ಅದರೊಳಿಲ್ಲ ಸಂಶಯ. ಹಾಗು ಹೀಗು ಜೈಲಿಗೂ
ನುಸುಳಿ ಹೋದೆ ನಿಶ್ಚಯ. ‘ಗಾಂಧಿಗೆ
ಜೈ, ಗಾಂಧಿಗೆ ಜೈ’
ಕೊರಳು ಬಿರಿವತನಕವೂ ಕಿರಲಿದೆ ನಾ ಇಷ್ಟು ದಿನ;
ಈಗ ಹೋದನವನು. ನಾನು ಮಾಡಲೇನೋ ತಿಳಿಯದು!
ಅವನು ಒಂದು ಸಲವೊ ಏನೊ ಮಾಂಸ ತಿಂದು ಅತ್ತನು;
ದಿನದಿನವೂ ಅದನೆ ತಿಂದು ಅನುಗಾಲವು ಅಳುವೆ ನಾನು!
ಒಂದು ಸಲವೊ ಏನೊ ಅವನು ಸುಳ್ಳು ಹೇಳಿ ಅಳಲಿದ;
ನನಗೊ ದಿನಾ ಅದೇ ಕೆಲಸ, ಅದೇ ಅಳಲು
ಪ್ರತಿದಿನ.
ಅವನೋ ಮಹಾತ್ಮನಾದ; ಅರಳಲಿಲ್ಲ ನನ್ನ ಮನ.
ನಾನು ಅವನು ಒಂದೆ ಲೋಹ,
ಕಬ್ಬಿಣ-ಕರಿ-ಕಬ್ಬಿಣ.
ಯಾವ ರಸವು ಸೋಂಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ!
ನಾನು ಮಾತ್ರ ಆಗ ಹೇಗೋ ಹಾಗೆಯೇ ಈಗಲೂ;
ಆರೆಂದರೆ ಹಿಗ್ಗಲಿಲ್ಲ, ಮೂರೆಂದರೆ
ಕುಗ್ಗಲಿಲ್ಲ;
ನಾನಚ್ಯುತ, ನಾ ನಿರ್ಜರ ನಾನೆ ಅದ್ವಿತೀಯ;
ಒಂದೇ ರೀತಿ, ಒಂದೇ ನೀತಿ, ಒಂದೇ ಸಮ, ನೆಲಮಟ್ಟ-
ಅರಿತಿರೇನು ನೀವು ನನ್ನ ಹೆಬ್ಬಾಳಿನ ಗುಟ್ಟ!
ಸಾಹಿತ್ಯ: ಎಂ ಗೋಪಾಲಕೃಷ್ಣ ಅಡಿಗ
Tag: Nanna avatara
ಕಾಮೆಂಟ್‌ಗಳು