ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಗ್ಯಾದ ಬಳೆಗಾರ


ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರೀಗೆ
ಇನ್ನೆಲ್ಲಿ ನೋಡಲಿಂಥ ಬಳೆಗಾರ ಸೆಟ್ಟಿ
ನಮ್ಮ ನಾಡಲ್ಲಿ ಬಳೆಯಿಲ್ಲ, ಬಳೆಗಾರ
ಹೋಗಿ ಬಾರಯ್ಯ ನನ್ನ ತವರೀಗೆ

ನಿನ್ನ ತವರೂರ ನಾನೇನು ಬಲ್ಲೇನು
ಗೊತ್ತಿಲ್ಲ ಎನಗೆ ಗುರಿಯಿಲ್ಲ, ಎಲೆ ಬಾಲೆ
ತೋರಿಸು ಬಾರೆ ತವರೂರ

ಬಾಳೆ ಬಲಕ್ಕೆ ಬಿಡು ಸೀಬೆ ಎಡಕ್ಕೆ ಬಿಡು
ನಟ್ಟ ನಡುವೇನೆ ನೀ ಹೋಗು, ಬಳೆಗಾರ
ಅಲ್ಲಿಹುದೆನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಹಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ನಿಂತಾವು ಎರಡು ಗಿಳಿಕಾಣೋ, ಬಳೆಗಾರ
ಅಲ್ಲಿಹುದೆನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ

ಆಲೆ ಅಡುತ್ತಾವೆ ಗಾಣಾ ತಿರುಗುತ್ತಾವೆ
ನವಿಲು ಸಾರಂಗ ನಲಿದಾವೆ, ಬಳೆಗಾರ
ಅಲ್ಲಿಹುದೆನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರಹಾಕಿ
ನಟ್ಟ ನಡುವೇನೆ ಪಗಡೆಯ, ಆಡುತಾಳೆ
ಅವ್ಳೆ ಕಣೊ ನನ್ನ ಹಡೆದವ್ವ

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ

ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ನನ್ನ ಹಡೆದವ್ಗೆ ಬಲು ಆಸೆ, ಬಳೆಗಾರ
ಕೊಂಡ್ಹೋಗೊ ಎನ್ನ ತವರೀಗೆ

ಭಾಗ್ಯಾದ ಬಳೆಗಾರ ಹೋಗಿ ಬಾ ನನ್ ತವರೀಗೆ

ನಿನ್ನ ತವರೂರ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ ಗುರಿಯಾಯ್ತು, ಎಲೆ ಹೆಣ್ಣೆ
ಹೋಗಿ ಬರುತೀನಿ ತವರೀಗೆ
  
ಸಾಹಿತ್ಯಮೂಲ: ಜಾನಪದ 

ಅನಿಸಿಕೆ:  ಇದು ಕೇವಲ ಒಂದು ಪದ್ಯಮಾತ್ರವಾಗಿರದೆ ಒಂದು ಕಾಲದಲ್ಲಿದ್ದ  ಗ್ರಾಮ ಸೌಂಧರ್ಯವನ್ನೂ, ಗ್ರಾಮೀಣ ಬದುಕಿನ ಸೊಗಡನ್ನೂ, ಅಂದಿನ ಮನಸ್ಸುಗಳ ಆಂತರ್ಯ ಸೌಂಧರ್ಯವನ್ನೂ  ಹೇಳುವಂತಿದೆ.

Photo courtesy: http://www.flickr.com/photos/ashokmandy/2395676873/

Tag: Bhaagyaada balegaara hogi baa nan tavarige, Bhagyada Balegara Hogi ba nan tavarige

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ