ಕೆ. ಶಿವರಾಮನ್
ಉಮೈಯಾಳಪುರಂ ಕೆ. ಶಿವರಾಮನ್
ಉಮೈಯಾಳಪುರಂ ಕಾಶಿವಿಶ್ವನಾಥ ಶಿವರಾಮನ್ ಅವರು ಸಂಗೀತಲೋಕದ ಮಹಾನ್ ಪ್ರತಿಭೆ. ಪದ್ಮವಿಭೂಷಣದವರೆಗಿನ ಗೌರವಾನ್ವಿತ ಹಿರಿಯರಾದ ಶಿವರಾಮನ್ ಅವರ ಕೈಬೆರಳುಗಳು ಮೃದಂಗದ ಮೇಲೆ ಹೊರಹೊಮ್ಮಿಸುವ ಸುನಾದ, ಅವರಿರುವ ವಿಶಾಲ ಆವರಣದಲ್ಲಿ ಒಂದು ರೀತಿಯ ಮಂತ್ರಮುಗ್ಧತೆ ಸೃಷ್ಟಿಸುತ್ತದೆ.
ಉಮೈಯಾಳಪುರಂ ಎಂಬ ಊರು ಕೆ. ಶಿವರಾಮನ್ ಅವರ ಹೆಸರಿನೊಂದಿಗೆ ಬೆಸೆದಿದೆ. ಊರುಗಳ ಹೆಸರುಗಳು ವಿವಿಧ ಭಾಷಿಗರ ನಾಲಿಗೆಯ ತಿರುಚಿನ ಜನಪದದಲ್ಲಿ ಎಲ್ಲಿಗೋ ಬಂದು ನಿಲ್ಲುತ್ತದೆ. ಹಲವು ವಿದ್ವಾಂಸರ ಅಭಿಮತದಂತೆ ಇದು ಉಮಾಲಯಪುರಂ ಇದ್ದಿರಬಹುದು. ತಮಿಳಿನಲ್ಲಿ ಉಮೈ ಆಲಯಪುರಂ ಅಂದರೆ ಉಮೆಯ ಆಲಯವಿರುವ ಪುರ.
ಶಿವರಾಮನ್ ಅವರು 1935ರ ಡಿಸೆಂಬರ್ 17ರಂದು ತಮಿಳುನಾಡಿನ ಉಮೈಯಾಲಯಾಪುರಂನಲ್ಲಿ ಜನಿಸಿದರು. ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದ ಕಾಶಿ ವಿಶ್ವನಾಥ ಅಯ್ಯರ್. ತಾಯಿ ಕಮಲಾಬಾಯಿ. ಗುರುಕುಲ ಮಾದರಿಯಲ್ಲಿ ಹದಿನೈದು ವರ್ಷಗಳ ಸಂಗೀತ ಸಾಧನೆಗೈದರೂ ಶಿವರಾಮನ್ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿ. ಎಲ್. ಪದವಿಗಳನ್ನು ಪಡೆಯಲು ಹಿಂದೆ ಬೀಳಲಿಲ್ಲ.
ಹೀಗೆ ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿದ ಶಿವರಾಮನ್ ಅಂದಿನ ಕಾಲದಲ್ಲಿ ದೊಡ್ಡ ಅಧಿಕಾರಿಯಾಗಬಹುದಿತ್ತು. ಆದರೆ ಸಂಗೀತ ಕ್ಷೇತ್ರದಲ್ಲಿದ್ದ ಮಗನ ಆಸಕ್ತಿಗೆ ತಂದೆ ನೀರೆರದು ಪೋಷಿಸಿದರು. ಕಲಾ ಬದುಕಿಗೆ ಧುಮುಕಲು ಸಂಪೂರ್ಣ ಸಹಕಾರ ನೀಡಿದರು. ತಮ್ಮ ಚುರುಕಿನ ಕೈ ಬೆರಳುಗಳ ಸಂಚಾರದಲ್ಲಿ ದೇಶಾದ್ಯಂತ ಅಪಾರ ಸಂಗೀತ ಪ್ರೇಮಿಗಳನ್ನು ರಂಜಿಸಿರುವ ಶಿವರಾಮನ್, 85ರ ಹಿರಿಯ ವಯಸ್ಸಿನಲ್ಲೂ ಉತ್ಸಾಹಿಯಾಗಿ ಮೃದಂಗವನ್ನು ಹಿತವಾಗಿ ನುಡಿಸುತ್ತಾರೆ.
ಶಿವರಾಮನ್ ಅವರು ಮೃದಂಗವಾದನದಲ್ಲಿ ದಿಗ್ಗಜರಾದ ಆರುಪತಿ ನಟೇಶ ಐಯ್ಯರ್, ತಂಜಾವೂರು ವೈದ್ಯನಾಥ ಅಯ್ಯರ್, ಪಾಲ್ಘಾಟ್ ಮಣಿ ಅಯ್ಯರ್ ಮತ್ತು ಕುಂಭಕೋಣಂ ರಂಗ ಅಯ್ಯಂಗಾರ್ ಮುಂತಾದವರಿಂದ ಮೃದಂಗ ವಾದನವನ್ನು ಕಲಿಯುತ್ತ, ಅದರ ಸೂಕ್ಷ್ಮಾತಿಸೂಕ್ಷ್ಮಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತ, ಪರಿಣತಿ ಗಳಿಸಿಕೊಳ್ಳುತ್ತಾ ಸಾಗಿದರು.
ಕೆ. ಶಿವರಾಮನ್ ಅವರು ಮಹಾನ್ ಸಂಗೀತ ಕಲಾವಿದರುಗಳಾದ ಅರಿಯಾಕುಡಿ ರಾಮಾನುಜ ಐಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಪಲ್ಲಾದಮ್ ಸಂಜೀವ ರಾವ್, ಮೈಸೂರು ಚೌಡಯ್ಯ, ರಾಜಮಾಣಿಕ್ಯಂ ಪಿಳೈ, ಪಾಪ ವೆಂಕಟರಮಣಯ್ಯ, ದ್ವಾರಂ ವೆಂಕಟಸ್ವಾಮಿ ನಾಯ್ಡು , ಮುಡಿಕೊಂಡನ್ ವೆಂಕಟರಮಣ ನಾಯ್ಡು, ಜಿ.ಎನ್.ಬಾಲಸುಬ್ರಹ್ಮಣ್ಯಂ , ಮಧುರೈ ಮಣಿ ಅಯ್ಯರ್, ಮಹಾರಾಜಾಪುರ ವಿಶ್ವನಾಥ ಅಯ್ಯರ್, ಅಲತ್ತೂರು ಸಹೋದರರು, ಚೆಂಬೈ ವೈದ್ಯನಾಥ ಭಾಗವತರ್, ಡಾ.ಸೆಮ್ಮನ್‌ಗುಂಡಿ ಶ್ರೀನಿವಾಸ ಅಯ್ಯರ್, ಡಾ.ಎಂ. ಬಾಲಮುರಳಿಕೃಷ್ಣ , ನೆಡುನೂರಿ ಕೃಷ್ಣಮೂರ್ತಿ, ಎಸ್.ಬಾಲಚಂದರ್, ಟಿ.ಆರ್.ಮಹಾಲಿಂಗಂ ಅಂತಹವರೊಂದಿಗೆ ಪಕವಾದ್ಯದಲ್ಲಿ ಜೊತೆಗೂಡಿ ಖ್ಯಾತಿಯ ಉತ್ತುಂಗಕ್ಕೇರಿದವರು. ಇಂದಿನ ಅನೇಕ ಪ್ರತಿಭಾನ್ವಿತ ಯುವಕಲಾವಿದರಿಗೆ ಮತ್ತು ಹಿಂದೂಸ್ಥಾನಿ ಸಂಗೀತಗಾರರಿಗೆ, ಉಭಯ ಗಾನಗೋಷ್ಠಿಗಳಿಗೆ ಸಹಾ ಅವರ ಪಕ್ಕವಾದ್ಯ ಸಹಯೋಗ ಸಲ್ಲುತ್ತಿದೆ.
ಶಿವರಾಮನ್ ಚುರುಕಿನ ಗತಿಯ ತಮ್ಮದೇ ಆದ ಹೊಸ ವಿಶಿಷ್ಟ ಕೊಡುಗೆಗಳ ಮೂಲಕವೂ ಗಮನ ಸೆಳೆದವರು. ಹಲವು ಖ್ಯಾತ ತಬಲಾ ವಾದಕರು, ಘಟವಾದಕರೊಂದಿಗೆ ಇವರು ನಡೆಸಿಕೊಟ್ಟಿರುವ ಜುಗಲ್ ಬಂದಿ ಅಪಾರ ಜನರನ್ನು ನಲಿಯುವಂತೆ ಮಾಡಿದೆ.
ಕೆ. ಶಿವರಾಮನ್ ಅವರಿಗೆ 1988ರಲ್ಲಿ ಪದ್ಮಶ್ರೀ, 2003ರಲ್ಲಿ ಪದ್ಮಭೂಷಣ, 2010ರಲ್ಲಿ ಪದ್ಮವಿಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕಲೈಮಾಮಣಿ ಬಿರುದು, ಕಂಚಿ ಶಂಕರ ಮಠದ ಆಸ್ಥಾನ ವಿದ್ವಾನ್ ಬಿರುದು, ಶೃಂಗೇರಿ ಮಠದಿಂದ ಮೃದಂಗ ಕಲಾನಿಧಿ , ಲಯ ಜ್ಯೋತಿ, ಲಯ ಜ್ಞಾನಭಾಸ್ಕರ , ಸಂಗೀತ ಕಲಾ ಶಿಖಾಮಣಿ, ಮೃದಂಗ ನಾದಮಣಿ ಮೊದಲಾದ ಬಿರುದುಗಳು, ಕೇರಳ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಅಲ್ಲದೆ ಅಸಂಖ್ಯಾತ ಸನ್ಮಾನಗಳು ಸಂದಿವೆ.
ದೇಶ ವಿದೇಶಗಳಲ್ಲಿನ ಸಹಸ್ರಾರು ಕಾಯಕ್ರಮಗಳ ಮೂಲಕ ಕೋಟ್ಯಂತರ ಜನರನ್ನು ಮಂತ್ರ ಮುಗ್ಧಗೊಳಿಸಿರುವ ಕೆ. ಶಿವರಾಮನ್ ನೂರಾರು ವಿದ್ಯಾರ್ಥಿಗಳಿಗೆ ಶಿಷ್ಯತ್ವ ಮಾರ್ಗದರ್ಶನವನ್ನೂ ನೀಡುತ್ತಾ ಬಂದಿದ್ದಾರೆ.
ಈ ಮಹಾನ್ ಸಂಗೀತ ತಪಸ್ವಿಗಳಿಗೆ ನಮಿಸುತ್ತಾ ಅವರ ಹಿರಿಯತನದ ಬದುಕು ಸುಖ, ಸೌಖ್ಯ, ಸಂತಸ, ಸಂಪದಗಳಿಂದ ಕೂಡಿರಲಿ ಎಂದು ಆಶಿಸೋಣ. ನಮಸ್ಕಾರ.
On the birthday of great Mridanga Vidwan Umayalpuram K. Sivaraman
ಕಾಮೆಂಟ್‌ಗಳು