ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಂಟೋಬಿಲ್ಲೆ

ಕುಂಟೋಬಿಲ್ಲೆ


ಇದು ಚದುರಂಗ 
ಅಲ್ಲ, ಮನೆಹಿಂದಿನ ಸಂದಿ
ಯ ಕುಂಟೋಬಿಲ್ಲೆ.

ಎರಡು ಕಾಲಿನ ಇಡೀದೇಹ
ಮನೆಯಿಂದ ಮನೆಗೆ ಚಾಪುಹಾಕಿ
ಅದನ್ನರಸಿ ಕುಂಟುತ್ತ ಒದ್ದು

ಆಚೆದಡ ಮುಟ್ಟಿ ಒಂದು ಗಳಿಗೆ ಮಾತ್ರ
ಎರಡೂ ಕಾಲು ಊರಿ ವಿರಾಮ ಕಂಡು
ಥಟ್ಟಂತ ತಿರುಗಿ ಒಂಟಿಕಾಲಿನಲ್ಲಿ

ಹೊರಟಲ್ಲಿಗೇ ಮತ್ತೆ ತವರಿಗೆ
ಬಂದು ಸೇರುವ - ಗಂಡಸ್ತನ
ಬಲಿಯುವ ಮೊದಲು ಗಂಡು

ಮಕ್ಕಳು ಕೂಡ ಮೈಮರೆತು
ಆಡುವ - ಹೆಣ್ಣುಮಕ್ಕಳ
ಮೈನೆರೆಯುವಾಟ
ನಮ್ಮ ಮನೆ

ಸಂದಿಯ ಈ ಆಟವನ್ನೇ
ಆಫ್ರಿಕದಲ್ಲಿ ಜರ್ಮನಿಯಲ್ಲಿ ಕಂಡು
ಆಶ್ಚರ್ಯವಾದರೂ ಬಾಂಬು ಪೋಲಿಯೋ
ಇತ್ಯಾದಿ ವಕ್ರಿಸದ ಕಾಲಿದ್ದರೆ
ಕಪ್ಪು ಬಿಳಿ ಹಳದಿ ಮೈ ಎಲ್ಲ
ಆಡುವುದು ಎಲ್ಲೆಲ್ಲೂ ಕುಂಟೋಬಿಲ್ಲೆ

ಆಟವೇ ಅಂತ ಅನಿಸಿ
ಪಕ್ಕದ ಮನೆಯಲ್ಲಿ ಆಫ್ರಿಕ
ಎದುರು ಮನೆಯಲ್ಲಿ ಜರ್ಮನಿ

ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವ
ರೂಪ ಕಂಡಹಾಗಾಗಿ ಒಂದು ನಿಮಿಷ
ತಬ್ಬಿಬ್ಬಾಯಿತು.

ಸಾಹಿತ್ಯ: ಎ. ಕೆ. ರಾಮಾನುಜನ್

ಚಿತ್ರಕೃಪೆ:  ಎಸ್ ಜಿ ವಾಸುದೇವ್

Tag: Kuntobille

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ