ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾರು?


ಯಾರವರು ಯಾರವರು
ಯಾರವರು ಯಾರೋ?
ಬಾಗಿಲಲಿ ಬಂದವರು
ನಿಂದವರು ಯಾರೋ !

ಒಳಗೆಲ್ಲ ಬೆಳಕನ್ನು
ಚೆಲ್ಲಿದವರಾರೋ?
ತುಂಬಿದ್ದ ಕತ್ತಲನು
ಕಳೆದವರು ಯಾರೋ?

ಬಾಳ ನಂದನದಲ್ಲಿ
ಮಂದಾರ ಗಂಧವನು
ತಂದು ಬೀಸುತ ಚೆಲುವ
ತೆರೆದವರು ಯಾರೋ!

ಮಾಗಿ ತುಂಬಿದ ಬನಕೆ
ಮಕರಂದ ಪಾತ್ರಗಳ
ತುಂಬಿ ನಿಲಿಸಿದ ಕುಸುಮ
ಸುಂದರನು ಯಾರೋ !

ಅಲ್ಲು ಇಲ್ಲೂ ಎಲ್ಲು
ರಸದ ಉಸಿರೊಳು ತನ್ನ
ಹೆಸರ ಸಂಪುಟಗಳನು
ಬರೆದವರು ಯಾರೋ !

ಚಣ ಚಣಕು ಚೋದ್ಯವನು
ಚಿಗುರಿಸುವ ಚದುರಿನಲಿ
ಒಳಗು ಹೊರಗೂ ತುಂಬಿ
ತುಳುಕುವರು ಯಾರೋ !

ಯಾರವರು ಯಾರವರು
ಯಾರವರು ಯಾರೋ?
ಬಾಗಿಲಲಿ ಬಂದಿಂತು
ನಿಂದವರು ಯಾರೊ?

ಕವಿತೆ: ಯಾರು?


ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ


Tag: Yaravaru Yaravaru Yaravaru Yaro

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ