ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಳಯ್ಯ ಬೆಳಗಾಯಿತು


ಏಳಯ್ಯ ಬೆಳಗಾಯಿತು ....|

ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ
ಸುಳಿವು ದೊರೆಯೆ ನಿಮ್ಮ ಹಾರಯ್ಸಿ ನಿಂದಾರೆ
ತಡವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ
ಸೆಳೆಮಂಚದಿಂದ ಏಳೊ 

ವೇದವನು ತರಲೇಳು ಮಂದರವ ಪೊರಲೇಳು
ಭೇದಿಸುತ ಅಸುರರನು ದಾಡೆಯಿಂ ತರಲೇಳು
ಕಾದಿ ಹಿರಣ್ಯಕನ ಕರುಳು ಕೊರಳೊಳಗೆ ಧರಿಸೇಳು
ಕಾಯ್ದು ಬಲಿ ಬಾಗಿಲದೊಳು 

ಭೇದಿಸಿ ಭೂಮಿ ತ್ರಿಪಾದದಿಂದಳೆಬೇಕು
ಛೇದಿಸಿ ಕ್ಷತ್ರಿಯರ ಕೊದಲಿಂದ ಕಡಿಯೇಳು
ಸಾಧಿಸಿ ಶರಧಿಯಲಿ ಸೇತುವೆಯ ಕಟ್ಟೇಳು
ನಂದಗೋಪನ ಉದರದಿ 

ಪುರಮೂರು ಗೆಲ್ಲಬೇಕು ಅರಿವೆಯನೆ ಕಳೆಯೇಳು
ದುರುಳನ ಕೊಲ್ಲಬೇಕು ತುರಗವಾಹನನಾಗು
ಪರಿಪರಿಯ ಕೆಲಸಗಳನು ಮಾಡಲುದ್ಯೋಗಿಸಿ
ಮರೆತು ನಿದ್ರೆಯ ಗೆಯ್ವರೆ 

ಆಲದೆಲೆಯಿಂದೇಳು ಮಹಲಕುಮಿ ಬಂದಾಳೆ
ಹಾಲನದಿಯಿಂದೇಳು ಶ್ರೀದೇವಿ ಬಂದಾಳೆ
ಕಾಲನದಿಯಿಂದೇಳು ಭೂದೇವಿ ಬಂದಾಳೆ
ಸಾಲಮಂಚಗಳಿಂದಲಿ 

ನಾಭಿಕಮಲದಿ ಜನಿಸಿದ ಬ್ರಹ್ಮ ಬಂದಾನೆ
ಗಂಭೀರಗಾಯನದ ನಾರದ ಬಂದಾನೆ
ರಂಭೆ ಮೇನಕೆ ಮೊದಲು ನರ್ತನದಿ ಐದಾರೆ
ಶಂಬರಾರಿಪಿತನೆ ಏಳೊ 

ರಾಜಸೂಯವ ಕೇಳೆ ವಾಯುಸುತ ಬಂದಾನೆ
ಅರ್ಜುನನು ರಥ ಹೂಡಬೇಕೆಂದು ನಿಂದಾನೆ
ಸಾಜ ಧರ್ಮಜ ಅಗ್ರಪೂಜೆಯ ಮಾಡುವೆನೆಂದು
ಮೂಜಿಯನೆ ಪಿಡಿದುಕೊಂಡು

ಉರಿಹಸ್ತನಟ್ಟಿದರೆ ಹರ ಓಡಿ ಬಂದಾನೆ
ಗಿರಿಜೆ ವರವನು ಬೇಡೆ ಬಂದು ಇದ್ದಾಳೆ
ಪಾರಿಜಾತವ ಕೊಂಡು ಸುರರಾಜ ಬಂದಾನೆ
ಗರುಡವಾಹನಕಾಗಿ 

ಸತ್ಯನಾಥ ನೀನೇಳು ಸತ್ಯಭಾಮೆ ಬಂದಾಳೆ
ಮತಿವಂತ ನೀನೇಳು ಜಾಂಬವತಿ ಬಂದಾಳೆ
ಗತಿವಂತ ನೀನೇಳು ಶ್ರೀತುಲಸಿ ಬಂದಾಳೆ
ಕಾಂತಸೇವೆಯ ಮಾಡಲು 

ದೇವ ನಿನ್ನಂಘ್ರಿಪೂಜೆಯ ಮಾಡಬೇಕೆಂದು
ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಾಪಹಾರಿ
ಸಾವಧಾನದಿ ಯಮುನೆ ತುಂಗೆ ಸರಸ್ವತಿ
ಭೀಮರಥಿಯು ನೇತ್ರಾವತಿಯು 

ದುರಿತ ಕಲಿ ಕರ್ಮವನು ತ್ವರಿತದಲಿ ಕೆಡಿಸುವನು
ದುರಿತಾರಿ ಮೇಲುಗಿರಿ ಶಿಖರದಲಿ ನಿಂತಿಹನು
ಪುರಂದರವಿಠಲರಾಯ ನೀ
ಬೆಳಗಾಯಿತೇಳಯ್ಯ

ಸಾಹಿತ್ಯ: ಪುರಂದರದಾಸರು


Tag: Elayya Belagayitu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ