ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೈಖೇಲ್ ಜೋರ್ಡಾನ್

ಮೈಖೇಲ್ ಜೋರ್ಡಾನ್

ಕ್ರೀಡಾಂಗಣದಲ್ಲಿ ಮೈಖೇಲ್ ಜೋರ್ಡಾನ್ ಒಂದು ದಂತ ಕತೆ ಇದ್ದಂತೆ.  ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಅವರು ಮಾಂತ್ರಿಕರೆಂದೇ ಖ್ಯಾತಿ ಗಳಿಸಿದವರು.  ಮೈಖೇಲ್ ಜೋರ್ಡಾನ್ ಫೆಬ್ರುವರಿ 17, 1963ರಂದು ನ್ಯೂ ಯಾರ್ಕ್ ನಗರದಲ್ಲಿ ಜನಿಸಿದರು.

 ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಚರಿತ್ರೆಯನ್ನೇ ನಿರ್ಮಿಸಿದ ಮೈಖೇಲ್ ಜೋರ್ಡಾನ್ ತಾವು ಆಡುತ್ತಿದ್ದ ವಾರ್ಸಿಟಿ ತಂಡದಿಂದ ಎತ್ತರ ಕಡಿಮೆ ಎಂಬ ಕಾರಣದಿಂದ ತಿರಸ್ಕರಿಸಲ್ಪಟ್ಟರು.  ಆಗ ಅವರ ಎತ್ತರ 5 ಅಡಿ 11 ಅಂಗುಲ.  ಆ ಎತ್ತರ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಅತೀ ಕಡಿಮೆ ಎನಿಸಿತ್ತು.  ಆತನ ಛಲ ಎಷ್ಟರ ಮಟ್ಟಿಗಿತ್ತೆಂದರೆ ಎಡಬಿಡದೆ ನಿರಂತರವಾಗಿ ಶ್ರಮಿಸಿ ಮುಂಬರುವ ಬೇಸಗೆಯ ವೇಳೆಗೆ ತನ್ನ ಎತ್ತರವನ್ನು ನಾಲ್ಕು ಇಂಚುಗಳಷ್ಟು  ಹೆಚ್ಚಿಸಿಕೊಂಡು ವಾರ್ಸಿಟಿ ರೋಸ್ಟರಿನಲ್ಲಿ ಸ್ಥಾನ ಗಿಟ್ಟಿಸಿಕೊಂಡೇಬಿಟ್ಟರು.

1984-85ರ ವರ್ಷದಲ್ಲಿ ತಾನು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಕಿರಿಯನಾಗಿ ಪಾದಾರ್ಪಣ ಮಾಡಿದ ವರ್ಷದಲ್ಲೇ ‘NBA Rookie of the Year Award’ ಪ್ರಶಸ್ತಿ ಗಳಿಸಿ ಪ್ರಖ್ಯಾತರಾದ ಮೈಖೇಲ್ ಜೋರ್ಡಾನ್ ಎರಡನೇ ವರ್ಷದಲ್ಲಿ  ಪಾದಕ್ಕೆ ಗಾಯದಿಂದ 64 ಪಂದ್ಯಗಳಿಂದ ಹೊರಗುಳಿದರೂ ತಾನು ವರ್ಷಾವಧಿಯಲ್ಲಿ ಹಿಂದಿರುಗಿ ಬಂದ ಪ್ರಥಮ ಪಂದ್ಯದಲ್ಲೇ ದಾಖಲೆ ಎನಿಸಿರುವ 63 ಪಾಯಿಂಟುಗಳನ್ನು ಗಳಿಸಿದರು.  ಅಲ್ಲಿಂದ ವರ್ಷಾನುವರ್ಷ ಶ್ರೇಷ್ಠ ಆಟಗಾರನಾಗಿಯೇ ಬ್ಯಾಸ್ಕೆಟ್ ಪಂದ್ಯದ ಚರಿತ್ರೆಯಲ್ಲಿ ವಿಜ್ರಂಭಿಸಿದ ಮೈಖೇಲ್ ಜೋರ್ಡಾನ್ ತಾವು ನಾಯಕನಾಗಿ  ಆಡುತ್ತಿದ್ದ ಚಿಕಾಗೋ ಬುಲ್ಸ್ ತಂಡಕ್ಕೆ 1991, 1992, 1993, 1996,1997, 1998 ವರ್ಷಗಳಲ್ಲಿ ‘NBA Championships’ ಗೌರವವನ್ನು ಗಳಿಸಿಕೊಟ್ಟರು.  ಈ ಪ್ರತೀ ಪ್ರಶಸ್ತಿ ವಿಜಯದ ಸಂದರ್ಭದಲ್ಲೂ ಪಂದ್ಯ ಪುರುಷೋತ್ತಮರಾದವರು ಅವರೇ ಎಂಬುದು  ಕ್ರೀಡಾಪಟುವಾಗಿ ಅವರು ಎಷ್ಟು ಶ್ರೇಷ್ಟರು ಎಂಬುದನ್ನು ಮನದಟ್ಟು ಮಾಡಿಕೊಡುತ್ತದೆ.   ಬ್ಯಾಸ್ಕೆಟ್ ಬಾಲ್ ಕ್ರೀಡೆಯ ಶ್ರೇಷ್ಠತೆಯ ಪ್ರತೀಕವಾದ ಎನ್ ಬಿ ಎ ಶ್ರೇಷ್ಠರ ಪಟ್ಟಿಯಲ್ಲಿ ಹತ್ತು ಬಾರಿ ಅವರ ಹೆಸರು ದಾಖಲಾಗಿತ್ತು.

ಬ್ಯಾಸ್ಕೆಟ್ ಬಾಲ್ ಪಂದ್ಯಗಳಲ್ಲಿ ಅಮೋಘ ದಾಖಲೆಗಳನ್ನು ಬರೆದ ಮೈಖೇಲ್ ಜೋರ್ಡಾನ್ ಮುಂದೆ ಹಲವಾರು ಕ್ರೀಡಾಳಿತದ ಜವಾಬ್ಧಾರಿ ಮತ್ತು ಕ್ರೀಡಾ ಸಂಬಂಧಿತ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Tag: Michael Jordan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ