ತಾತಾ ಯಾರೋ ಬಂದಿದ್ದಾರೆ
ತಾತಾ ಯಾರೋ ಬಂದಿದ್ದಾರೆ ನೋಡಿ
ಅನ್ನುವಾಗ ಮೊಮ್ಮಗಳು
ಎಂದಿನಂತಿರಲಿಲ್ಲ ಅವಳ ಧ್ವನಿ, ಬೆರಗು,
ದಿಗಿಲು, ಲಘು
ಕಂಪದೊಡಮುರಿ ದನಿಯಲ್ಲಿ ನುಡಿದಾಗ ಯಾರೋ
ಬಂದಿದ್ದಾ
ರೆಂದು ಬರಬಾರದಿತ್ತೆಂಬ
ಧ್ವನಿಯಿತ್ತು. ಕೌತುಕದಿಂದ ಲಗು
ಬಗೆಯಿಂದ, ಹೊರಗೆ ಬಂದು ನೋಡುತ್ತೇನೆ:
ನಿಂತಿದ್ದಾರೆ ಬಾಗಿ
ಲುದ್ದಕ್ಕೂನು ಪುತಿನ. ಸರ್! ನೀವಿಲ್ಲಿ? – ಎಂದೆ ಬೆಬ್ಬೆರಗಲ್ಲಿ.
ಬರಬಾರದಿತ್ತೆ ಎಂದರು ಕವಿವರ್ಯರು
ನಗುತ್ತ. ನಿಂತಲ್ಲೇ
ನಸು ಬಾಗಿ ಬನ್ನಿ ಬನ್ನಿ ಒಳಕ್ಕೆ
ಎಂದೆ. ಅಮ್ಮಾ ನೋಡಿಲ್ಲಿ
ಯಾರು ಬಂದಿದ್ದಾರೆ ಎಂದು ಹೇಳಿದೆ
ಸೊಸೆಗೆ ಕೂಗಿ. ಹಾಲಾದೀತು
ಕಾಫಿ ಬೇಡ ಎಂದರು. ಒಳಕೋಣೆಯ ಜೋಲಿಯಲಿ ಕೂತು
ತುದಿಗಾಲಲ್ಲಿ ಮೀಟಿದರು ಮೆಲ್ಲಗೆ
ನೆಲವ. ಶುರುವಾಯಿತು ಜೀಕು
ಜೀಕು ಸದ್ದು. ನಿಧಾನಕ್ಕೆ ತೂಗುಮಂಚ ಆಡುತ್ತಿತ್ತು
ಹಿಂದಕ್ಕೆ ಮುಂದಕ್ಕೆ. ಏನಯ್ಯ ತೂಗು ಮಂಚದಲ್ಲಿ ಕೂತಾಗ ತೂಗೋದು
ಮಂಚವಲ್ಲ; ಪ್ರಪಂಚವೇ ಅನ್ನಿಸುತ್ತೆ
ನನಗೆ ಎಂದು
ನಕ್ಕರು ಖೊಳ್ಳೆಂದು. ಎಲ್ಲಿ, ಓದು ಒಂದು ಕವನ ಎಂದರು ಬೂತುಗಾಜಲ್ಲಿ
ಇಷ್ಟಗಲ ಕಣ್ತೆರೆದು. ವೈದೇಹಿ ಓದಿದಾಗ ಬೇಷೆಂದು
ಕಣ್ಮುಚ್ಚಿ ಮುಳುಗಿದರು ತಮ್ಮಲ್ಲೆ
ತಾವು. ಸರ್ ಈಗ ನಿಮ್ಮ ಪದ್ಯವೊಂದ
ಓದಿ ಎಂದೆ. ಒಳಗೆ ಸೆಳೆಯುವ ಕಾವ್ಯ; ಇಲ್ಲ ಬಾಹ್ಯದರಿವು.
ಬೈಠಕ್ಕುಯಾವಾಗ ಮುಗಿಯಿತೋ
ಅರಿವಿಲ್ಲ. ಜೀರ್ ಜೀರ್ ಎಂದು ತೂಗುಮಂಚ
ತೂಗುತ್ತಲೇ ಉಂಟು. ಕವಿತೆ ಇದೆ.
ಇದೆ ಕವಿತೆ. ಎಲ್ಲಿ ನಾವು?
ಸಾಹಿತ್ಯ: ಎಚ್.
ಎಸ್. ವೆಂಕಟೇಶಮೂರ್ತಿ
Tag: Thaata Yaro Bandidaare
ಕಾಮೆಂಟ್‌ಗಳು