ಮುಂಬೈ ಜಾತಕ
ಮುಂಬೈ ಜಾತಕ
ಹುಟ್ಟಿದ್ದು : ಆಸ್ಪತ್ರೆಯಲ್ಲಿ;
ಬೆಳೆದಿದ್ದು : ಬಸ್ಸು, ಟ್ರಾಮ್, ಕಾರು, ಟ್ಯಾಕ್ಸಿ, ಟ್ರೈನುಗಳಲ್ಲಿ
ಕುಡಿದದ್ದು :
ಕಾಣದೆಮ್ಮೆಯ ಕೆಚ್ಚಲು, ಕರೆದು ಕಳುಹಿಸಿದ
ಬಾಟಲಿಯ ಹಾಲು, ಗ್ರೈಪ್ ಸಿರಪ್, ಹಾರ್ಲಿಕ್ಸ್ ಇತ್ಯಾದಿ.
ಕಂಡದ್ದು :
ಕ್ಯೂ ನಿಲ್ಲು; ಫುಟ್ ಪಾತಿನಲ್ಲೇ ಸಂಚರಿಸು;
ರಸ್ತೆದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ
ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು;
ಎಲ್ಲಾದರೂ ಸರಿಯೆ, ಬೇರೂರು, ಹೀರು.
ತಾಯಿ :
ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಂಚಿನಲ್ಲೇ
ಕೈ ಹಿಡಿದು ನಡೆಸಿದವಳು. ಇರುವ ಒಂದಿಂಚು
ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ
ಎಚ್ಚರಿಕೆ ಕೊಟ್ಟವಳು.
ತಂದೆ :
ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ
ಒಮ್ಮೊಮ್ಮೆ ರಜಾದಿನದಲ್ಲಿ ಕಣ್ಣಿಗೆ ಕಂಡು
ಕುಳಿತು ಕೆಮ್ಮುವ ಪ್ರಾಣಿ.
ವಿದ್ಯೆ :
ಶಾಲೆ ಕಾಲೇಜುಗಳು ಕಲಿಸಿದ್ದು; ದಾರಿ ಬದಿ
ನೂರಾರು ಜಾಹಿರಾತುಗಳು ತಲೆಗೆ ತುರುಕಿದ್ದು;
ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸು
ಮಾಡಿದ್ದು.
ನೀನಾಗಿ ಕಲಿತಿದ್ದು ಬಲು ಕಡಿಮೆ. ಬಸ್ ಸ್ಟಾಪಿನಲಿ ನಿಂತ
ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು.
ಜೀವನ :
ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು
ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ
ಮುಂದುವರೆಯುವುದು. ಏಳುವುದು, ಬಟ್ಟೆಯಲಿ
ಮೈ ತುರುಕಿ ಓಡುವುದು; ರೈಲನೋ ಬಸ್ಸನೋ
ಹಿಡಿಯುವುದು; ಸಾಯಂಕಾಲ ಸೋತು ಸುಸ್ತಾಗಿ
ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನು ಹೊತ್ತು
ಹನ್ನೊಂದು ಘಂಟೆ ಹೊಡೆದಾಗ ಮನೆಯಲ್ಲಿ
ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು
ಎಚ್ಚರಿಸುವುದು; ತಣ್ಣಗೆ ಕೊರೆವ ಕೂಳುಂಡು
ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ
ಸಾವಿರ ಗಾಲಿಯುಜ್ಜುವ ಕನಸು ಬಂಡಿಯ ಕೆಳಗೆ
ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Tag: mumbai jataka, mumbai jaataka
ಕಾಮೆಂಟ್‌ಗಳು