ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಕ್ಕಿ ಆರಿಸುವಾಗ



ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ
ಶೃಂಗಾರಕಾಣದಾ ಹೆರಳು
ಬಂಗಾರವಿಲ್ಲದಾ ಬೆರಳು

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು

ಕಲ್ಲಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನ್ನುವಾ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣುಬಿದ್ದು ಬಂಗಾರವಿಲ್ಲದ ಬೆರಳು

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೇ ಇವಳು
ಚಿತ್ರದಲಿ ತಂದಂತೆ ಇಹಳು
ಬೇಸರಿಯ ಕಿರಿಮುತ್ತು ನುಚ್ಚಿನಲಿ ನುಚ್ಚಿರಲು
ಹುಡುಕುತಿವೆ ಆ ಹತ್ತು ಬೆರಳು
ಬಂಗಾರವಿಲ್ಲದಾ ಬೆರಳು

ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ

Photo Courtesy: http:\\www.webneel.com

Tag: Akki aarisuvaaga

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ