ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆತ್ಮ ನಿವೇದನ


'ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೇ ಬೇಗ, ಸಖಿ!'
'ಬೃಂದಾವನದಿ ಹಾಲನು ಕೊಳ್ಳುವರ್
ಆರಿಹರೇ ಹೇಳಿಂದುಮುಖಿ?'

'ಗೋವನು ಕಾಯುವ ಗೋವಿಂದನಿಹನೇ
ಹಾಲನು ಕೊಳ್ಳುವ, ಕೇಳೆ ಸಖಿ!
ಚಿನ್ನವ ಕೊಡನೇ, ರನ್ನವ ಕೊಡನೇ,
ತನ್ನನೆ ಕೊಡುವನು ಬಾರೆ, ಸಖಿ!

ಕಣ್ಣನು ಮೋಹಿಪ ಪೀತಾಂಬರವನು,
ಬಣ್ಣದ ಬಳೆಗಳ ಧರಿಸು, ಸಖಿ;
ಚಿನ್ನವ ಮೋಹಿಸುವೆದೆಯನು ಹಾರವು
ಸಿಂಗರಿಸಲಿ, ಹೇ ನಳಿನಮುಖಿ!

ಝಣಝಣವೆನ್ನಲಿ ನೂಪುರ, ಗೋಪಿ,
ಹಣೆಯೊಳು ಚಂದನ ರಂಜಿಸಲಿ!
ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ!

ಯಮುನಾತೀರದೊಳಲೆಯುವ ಬಾರೇ
ಹಾಲುಬೇಕೆ ಹಾಲೆಂದು, ಸಖಿ;
ಹಾಲನು ಮಾರುವ ನೆವದಿಂದ ಹರಿಯ
ಮೋಹಿಸಿ ಕರೆಯುವ ಬಾರೆ, ಸಖಿ!'

'ಹಾಲ ನಿವೇದಿಸಿ ಆತ್ಮವನರ್ಪಿಸಿ
ಮುಕ್ತಿಯ ಹೊಂದುವ, ಸೌಮ್ಯಮುಖಿ!
ಹಾಲನು ಮಾರಿ ಹರಿಯನು ಕೊಳ್ಳುವ
ನಾವೇ ಧನ್ಯರು, ಕಮಲಮುಖಿ!

ನಮ್ಮೀ ಲಾಭವ ಮೀರುವ ಲಾಭವು
ಬೇರಿನ್ನಿಹುದೇ, ಇಂದುಮುಖಿ?
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೇ ಬೇಗ, ಸಖಿ!

ಸಾಹಿತ್ಯ: ಕುವೆಂಪು ಅವರ 'ಆತ್ಮನಿವೇದನದಿಂದ'
(ಈ ಗೀತೆ ಶ್ರೀ ಮಜುಂದಾರರ ಒಂದು ಚಿತ್ರದಿಂದ ಪ್ರೇರಿತವಾದದ್ದು.)


Tag: Aatma Nivedana, Brundavanake haalanu maaralu, Brindavanake halanu maralu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ