ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ,
ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರತೇವು ಮರವ,
ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?
-ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು
ಕನ್ನಡದ ದೀಪ.
ಕರುನಾಡಿನರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು,
ಕನ್ನಡರ ಬಲವು ಕನ್ನಡದ ಒಲವು - ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ
ಹಚ್ಚೇವು ಕನ್ನಡದ ದೀಪ.
ನಮ್ಮವರು ಗಳಿಸಿದಾ ಹೆಸರ ಉಳಿಸ-
ಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ,
ಕಡೆದೇವು ಇರುಳ ಪಡೆದೇವು ತಿರುಳ - ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಹಚ್ಚೇವು ಕನ್ನಡದ ದೀಪ.
ಸಾಹಿತ್ಯ: ಡಿ.ಎಸ್. ಕರ್ಕಿ
ಕಾಮೆಂಟ್ಗಳು