ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ರಾಜೇಂದ್ರ ಬಾಬು ಇನ್ನಿಲ್ಲ

ಡಿ. ರಾಜೇಂದ್ರ ಬಾಬು

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಭಾನುವಾರ, ನವೆಂಬರ್ 3ರಂದು ತಮ್ಮ 62ರ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪ್ರತಿಭಾವಂತರಾಗಿದ್ದ ರಾಜೇಂದ್ರ ಬಾಬು   ಕನ್ನಡ, ತೆಲುಗು, ಮಲಯಾಳಂ, ಹಿಂದೀ ಬಾಷೆಗಳ ಐವತ್ತಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಡಿ. ರಾಜೇಂದ್ರಬಾಬು ಪ್ರಾರಂಭದಲ್ಲಿ  ನಿರ್ದೇಶಕರಾದ ಕೆ.ಎಸ್.ಆರ್. ದಾಸ್, ವಿ. ಸೋಮಶೇಖರ್, ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರೊಂದಿಗೆ ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಂತರದಲ್ಲಿ  ಪ್ರಭಾಕರ್ ಅಭಿನಯದ 'ಜಿದ್ದು' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು.

ಮುಂದೆ ನಾನು ನನ್ನ ಹೆಂಡ್ತಿ, ಸ್ವಾಭಿಮಾನ, ಸಂಸಾರನೌಕೆ, ಅಸಂಭವ, ಯುಗಪುರುಷ, ಒಲವಿನ ಉಡುಗೊರೆ, ಹಾಲುಂಡ ತವರು, ರಾಮಾಚಾರಿ, ಅಣ್ಣಯ್ಯ, ಅಪ್ಪಾಜಿ, ಜೀವನದಿ, ಜೋಡಿ ಹಕ್ಕಿ, ಕುರುಬನ ರಾಣಿ, ಪ್ರೀತ್ಸೆ, ಯಾರೇ ನೀನು ಚೆಲುವೆ, ದಿಗ್ಗಜರು, ಹಬ್ಬ, ನಂದಿ, ಸ್ವಾತಿಮುತ್ತು, ಉಪ್ಪಿದಾದ ಎಂಬಿಬಿಎಸ್, ಬೊಂಬಾಟ್, ಬಿಂದಾಸ್, ಮುಂತಾದ ಪ್ರಖ್ಯಾತ  ಚಿತ್ರಗಳನ್ನು ಕೊಟ್ಟಿದ್ದ ರಾಜೇಂದ್ರ ಬಾಬು ಅವರು ಪ್ರಸಕ್ತದಲ್ಲಿ  ಶಿವರಾಜಕುಮಾರ್ ಮತ್ತು ರಮ್ಯಾ ಅಭಿನಯದ ಆರ್ಯನ್ ಚಿತ್ರದಲ್ಲಿ ನಿರತರಾಗಿದ್ದರು. ಶನಿವಾರ ಸಂಜೆ ಅನೇಕ ಗೆಳೆಯರಿಗೆ ಕರೆಮಾಡಿ ದೀಪಾವಳಿಯ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದ ರಾಜೇಂದ್ರಬಾಬು ಅವರು ಭಾನುವಾರ ಬೆಳಿಗ್ಗೆ ನಿಧನರಾದ ಸುದ್ದಿ ಚಿತ್ರರಂಗದಲ್ಲಿ ದಿಗ್ಭ್ರಾಂತಿ ಮೂಡಿಸಿದೆ.

ಡಿ. ರಾಜೇಂದ್ರ ಬಾಬು ಅವರು ದಕ್ಷಿಣ ಭಾರತದ  ಪ್ರಖ್ಯಾತ ಅಭಿನೇತ್ರಿ ಪತ್ನಿ ಸುಮಿತ್ರಾ, ಹಾಗೂ ಮಕ್ಕಳಾದ  ನಕ್ಷತ್ರ, ಉಮಾಶಂಕರಿ ಅವರನ್ನು ಅಗಲಿದ್ದಾರೆ.  ಮೃತರ ಆತ್ಮಕ್ಕೆ ಶಾಂತಿ ಕೋರುತ್ತ ಅವರ ಕುಟುಂಬವರ್ಗದವರಿಗೆ ಈ ದುಃಖವನ್ನು ಸಹಿಸಲು ಶಕ್ತಿ ದೊರಕಲೆಂದು ಪ್ರಾರ್ಥಿಸುತ್ತೇವೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ