ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಬ್ಬಾಶಾಸ್ತ್ರಿ ಚಿತ್ರದ ಗೀತೆಗಳು

ಕನ್ನಡದ ಸುಂದರ ಶಾಸ್ತ್ರೀಯ ಸಂಗೀತ ಹಿನ್ನೆಲೆಯುಳ್ಳ ಚಿತ್ರಗಳಲ್ಲಿ ಪ್ರಸಿದ್ಧವಾದ (ಡಾ. ಎ. ಎನ್. ಮೂರ್ತಿರಾಯರ ‘ಆಷಾಢಭೂತಿ’ ಆಧಾರಿತ) ಸುಬ್ಬಾಶಾಸ್ತ್ರಿ ಚಿತ್ರದಲ್ಲಿ ಡಾ. ಎಂ. ಬಾಲಮುರಳೀ ಕೃಷ್ಣ ಅವರು ಹಾಡಿ, ಡಾ. ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರು ಸಂಗೀತ ನೀಡಿರುವ ಬಸವಣ್ಣನವರು, ಕನಕದಾಸರು, ಪುರಂದರದಾಸರು ಮತ್ತು ವ್ಯಾಸರಾಜರ ಸುಂದರ ರಚನೆಗಳ ಸುಶ್ರಾವ್ಯ ಗೀತೆಗಳು ಇಲ್ಲಿವೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ

ಸಾಹಿತ್ಯ: ಬಸವಣ್ಣನವರು

ಲೋಕಾನ್ ಉದಯನ್ ಶೃತೀರ್ಮುಖರನ್
ಕ್ಷೋಣೀರುಹಾನ್ ಹರ್ಷಯನ್
ಶೈಲಾನ್ ವಿದ್ರವಯನ್ ಮೃಗಾನ್ ವಿವಶಯನ್
ಗೋಬೃಂದಮಾನಂದಯನ್
ಗೋಪಾನ್ ಸಂಭ್ರಮಯನ್ ಮುನೀನ್ ಮುಕುಲಯನ್
ಸಪ್ತಸ್ವರಾನ್ ಜೃಂಬಯನ್
ಓಂಕಾರಾರ್ಥಂ ಉದೀರಯನ್ ವಿಜಯತೇ
ವಂಶೀ ನಿನಾದಃ ಶಿಶೋಃ

ತನು ನಿನ್ನದು ಜೀವನ ನಿನ್ನವು ರಂಗ
ಅನುದಿನದಲಿ ಬಾಹೋ ಸುಖದು:ಖ ನಿನ್ನದಯ್ಯ

ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ

ಮಾಯಾಪಾಶದ ಬಲೆಯೊಳಗೆ ಸಿಲುಕಿರುವಂತ
ಕಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ

ಸಾಹಿತ್ಯ: ಕನಕದಾಸರು

ಅರುಣೋದಯಲೆದ್ದು ಅತಿ ಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ
ಹರಿ ನಿನ್ನ ಕರುಣಾಕಟಾಕ್ಷವಾಗದನಕ

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ


ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೇನೆಂದು ಕಾಯ ದಂಡಿಸಿದೆನೋ
ರತಿಪತಿಪಿತ ನಿನ್ನ ದಯವಾಗದನಕ

ಧ್ಯಾನವನು ಮಾಡಿದೆನು ಮೌನವನು ತಾಳಿದೇ
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ

ಸಾಹಿತ್ಯ: ಪುರಂದರದಾಸರು

ಕೊಳಲನೂದುವ ಚದುರ ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು

ನಾದದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನು ಈಗಲೆ
ಸಾಧ್ಯವೇ ನೀ ಬೃಂದಾವನದೊಳು

ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನೆ
ಆವು ಕಾವುತಲಿ ಗೋವಳರೆಲ್ಲರ
ಹಾವಭಾವದಲಿ ಬೃಂದಾವನದೊಳು

ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು
ಸಾರಿ ಸಾರಿ ಶ್ರೀಕೃಷ್ಣನು ಈಗಲು
ತುರುಗಳ ತಾ ಕಾಯ್ದ ಕದಂಬವನದೊಳು

ಸಾಹಿತ್ಯ: ವ್ಯಾಸರಾಯರು



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ